₹449 ಕೋಟಿ ಆದಾಯದ ಐತಿಹಾಸಿಕ ಮೈಲಿಗಲ್ಲು; ಮೈಸೂರು ರೈಲ್ವೆ ವಿಭಾಗದ ಭರ್ಜರಿ ದಾಖಲ
ಮೈಸೂರು: ಮೈಸೂರು ರೈಲ್ವೆ ವಿಭಾಗ ತನ್ನ ಇತಿಹಾಸದಲ್ಲೇ ಮೊದಲ ಬಾರಿಗೆ ₹449.13 ಕೋಟಿ ಪ್ರಯಾಣಿಕ ಆದಾಯ ಗಳಿಸಿ ಹೊಸ ದಾಖಲೆ ನಿರ್ಮಿಸಿದೆ. ಹಿಂದಿನ ₹419.89 ಕೋಟಿ ದಾಖಲೆಯನ್ನು ಧೂಳಿಪಟ ಮಾಡಿರುವ ವಿಭಾಗ, 2025-26 ಹಣಕಾಸು ವರ್ಷದಲ್ಲಿ ಹಲವು ವಲಯಗಳಲ್ಲಿ ಅಪೂರ್ವ ಸಾಧನೆ ಮೆರೆದಿದೆ.
ಪ್ರಯಾಣಿಕರಿಂದ ಮಾತ್ರವಲ್ಲದೆ ಟಿಕೆಟ್ ಪರಿಶೀಲನೆ ಕಾರ್ಯಾಚರಣೆಗಳಿಂದಲೇ ₹9.75 ಕೋಟಿ ದಂಡ ಮತ್ತು ಆದಾಯ ಸಂಗ್ರಹವಾಗಿದ್ದು, ಇದು ವಾರ್ಷಿಕ ಗುರಿಯನ್ನೂ ಮೀರಿದ ಸಾಧನೆ ಎನ್ನಲಾಗಿದೆ.
ಇನ್ನೊಂದೆಡೆ ನಾನ್-ಫೇರ್ ಆದಾಯ ವಲಯದಲ್ಲೂ ಮೈಸೂರು ವಿಭಾಗ ಭರ್ಜರಿ ಪ್ರದರ್ಶನ ನೀಡಿದೆ.
ಜಾಹೀರಾತುಗಳಿಂದ ₹3.17 ಕೋಟಿ, ಪಾರ್ಕಿಂಗ್ನಿಂದ ₹4.02 ಕೋಟಿ, ಆಹಾರ ಪೂರೈಕೆಯಿಂದ ₹2.61 ಕೋಟಿ ಆದಾಯ ಹರಿದು ಬಂದಿದೆ.
ಸರಕು ಸಾಗಣೆ ವಿಭಾಗದಲ್ಲಿ ₹900.19 ಕೋಟಿ ಆದಾಯ ದಾಖಲಾಗಿದ್ದು, ಇದು ವಿಭಾಗದ ಎರಡನೇ ಅತಿ ದೊಡ್ಡ ಸಾಧನೆ. ಜೊತೆಗೆ 8.665 ಮಿಲಿಯನ್ ಟನ್ ಕಬ್ಬಿಣದ ಅದಿರು ಲೋಡಿಂಗ್ ಮೂಲಕ ಮತ್ತೊಂದು ಮಹತ್ವದ ಮೈಲಿಗಲ್ಲು ತಲುಪಿದೆ.
ಪಾರ್ಸೆಲ್ ವಿಭಾಗದಲ್ಲೂ ಉತ್ತಮ ಬೆಳವಣಿಗೆ ಕಂಡುಬಂದಿದ್ದು, ಒಟ್ಟು ₹11.81 ಕೋಟಿ ಆದಾಯ ಗಳಿಸಲಾಗಿದೆ. ಸೀಟಿಂಗ್-ಕಮ್-ಲಗೇಜ್ ರೇಕ್ ಮತ್ತು ಹೈ ಕ್ಯಾಪಾಸಿಟಿ ಪಾರ್ಸೆಲ್ ವ್ಯಾನ್ ಲೀಸಿಂಗ್ ಮೂಲಕವೇ ₹5.85 ಕೋಟಿ ಗಳಿಕೆ ಸಾಧಿಸಲಾಗಿದೆ.
ಪ್ರಯಾಣಿಕ ಸೇವಾ ವಲಯದಲ್ಲಿ ಮೈಸೂರಿನ ಕುವೆಂಪು ನಗರದಲ್ಲಿರುವ ನಾನ್-ರೈಲು ಹೆಡ್ ಕಾಯ್ದಿರಿಸುವ ಕೇಂದ್ರ ಭಾರತೀಯ ರೈಲ್ವೆಯಲ್ಲೇ ಮೊದಲ ಬಾರಿಗೆ ಡಿಜಿಟಲ್ ಹಾಗೂ ಕ್ಯಾಶ್ಲೆಸ್ ಮುಂಗಡ ಟಿಕೆಟ್ ಬುಕ್ಕಿಂಗ್ ವ್ಯವಸ್ಥೆ ಹೊಂದಿದ ಕೇಂದ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ಭದ್ರತಾ ಕ್ರಮಗಳ ಭಾಗವಾಗಿ ವಿವಿಧ ನಿಲ್ದಾಣಗಳು, ಪಾರ್ಸೆಲ್ ಕಚೇರಿಗಳು ಮತ್ತು ಪ್ಯಾಂಟ್ರಿ ಕಾರುಗಳಲ್ಲಿ ವಿಶೇಷ ತಪಾಸಣೆ ನಡೆಸಲಾಗಿದ್ದು, ಯಾವುದೇ ನಿಷೇಧಿತ ವಸ್ತುಗಳು ಪತ್ತೆಯಾಗಿಲ್ಲ.
ವಿಭಾಗೀಯ ವಾಣಿಜ್ಯ ವ್ಯವಸ್ಥಾಪಕ ಹಾಗೂ ಸಾರ್ವಜನಿಕ ಸಂಪರ್ಕಾಧಿಕಾರಿ ಗಿರೀಶ ಧರ್ಮರಾಜ ಕಲಗೊಂಡ ಪ್ರಕಟಣೆಯಲ್ಲಿ, ಆದಾಯ ವೃದ್ಧಿ, ಪ್ರಯಾಣಿಕ ಸೇವೆ ಮತ್ತು ಭದ್ರತೆಯಲ್ಲಿ ಮೈಸೂರು ವಿಭಾಗ ಮತ್ತೊಮ್ಮೆ ತನ್ನ ಸಾಮರ್ಥ್ಯವನ್ನು ಸಾಬೀತುಪಡಿಸಿದೆ ಎಂದು ತಿಳಿಸಿದ್ದಾರೆ.
