ಕನ್ನಡದ ಮಾಸ್ ನಟ ಧ್ರುವ ಸರ್ಜಾ ಅವರ ವಿರುದ್ಧ ಮುಂಬೈನಲ್ಲಿ ಬಹುಕೋಟಿ ವಂಚನೆ ಪ್ರಕರಣ ದಾಖಲಾಗಿತ್ತು. ನಿರ್ಮಾಪಕ ರಾಘವೇಂದ್ರ ಹೆಗಡೆ ಎಂಬುವರು ಮುಂಬೈನಲ್ಲಿ ನಟ ಧ್ರುವ ಸರ್ಜಾ ವಿರುದ್ಧ ದೂರು ದಾಖಲಿಸಿದ್ದರು. ಪೊಲೀಸರು ಧ್ರುವ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಿಕೊಂಡಿದ್ದರು. ಆದರೆ ಇದೀಗ ನ್ಯಾಯಾಲಯದ ಆದೇಶವು ಪ್ರಕರಣದಲ್ಲಿ ಧ್ರುವ ಸರ್ಜಾ ಅವರಿಗೆ ತಾತ್ಕಾಲಿಕ ರಿಲೀಫ್ ನೀಡಿದೆ.ಧ್ರುವ ಸರ್ಜಾ ಅವರು, ಸಿನಿಮಾ ಮಾಡಿಕೊಡುವುದಾಗಿ ಹೇಳಿ 3.10 ಕೋಟಿ ರೂಪಾಯಿ ಹಣ ಪಡೆದು, ಸಿನಿಮಾ ಮಾಡಲು ಡೇಟ್ಸ್ ನೀಡದೆ ವಂಚನೆ ಮಾಡಿದ್ದಾರೆ ಎಂದು ರಾಘವೇಂದ್ರ ಹೆಗಡೆ ಎಂಬುವರು ಮುಂಬೈನ ಅಂಬೋಲಿ ಪೊಲೀಸ್ ಠಾಣೆಯಲ್ಲಿ ಆಗಸ್ಟ್ ತಿಂಗಳ ಆರಂಭದಲ್ಲಿ ದೂರು ದಾಖಲಿಸಿದ್ದರು. ದೂರಿನ ಆಧಾರದಲ್ಲಿ ಪೊಲೀಸರು ಧ್ರುವ ಸರ್ಜಾ ವಿರುದ್ಧ ಎಫ್ಐಆರ್ ದಾಖಲು ಮಾಡಿದ್ದರು.ಪ್ರಕರಣದ ಸಂಬಂಧ ಧ್ರುವ ಸರ್ಜಾ ಪರ ವಕೀಲರು ಬಾಂಬೆ ಹೈಕೋರ್ಟ್ ಮೊರೆ ಹೋಗಿದ್ದರು. ವಿಚಾರಣೆ ನಡೆಸಿರುವ ನ್ಯಾಯಾಲಯ ಧ್ರುವ ಸರ್ಜಾ ವಿರುದ್ಧ ಆರೋಪ ಪಟ್ಟಿ ಸಲ್ಲಿಸದಂತೆ ಪೊಲೀಸರಿಗೆ ಸೂಚನೆ ನೀಡಿದೆ. ಅಲ್ಲದೆ, ಇದೊಂದು ಸಿವಿಲ್ ಮೊಕದ್ದಮೆ ಆಗಿದ್ದು ಪೊಲೀಸರು ಕ್ರಿಮಿನಲ್ ಪ್ರಕರಣ ದಾಖಲಿಸಿದ್ದಾರೆ ಎಂದು ಸಹ ಅಭಿಪ್ರಾಯ ವ್ಯಕ್ತಪಡಿಸಿದೆ. ಆ ಮೂಲಕ ಧ್ರುವ ಸರ್ಜಾ ಅವರು ಮುಂಬೈ ಪೊಲೀಸರ ವಿಚಾರಣೆಯಿಂದ ತಪ್ಪಿಸಿಕೊಂಡಂತಾಗಿದೆ. ಆದರೆ ನ್ಯಾಯಾಲಯವು, ಮುಂದಿನ ವಿಚಾರಣೆ ವರೆಗೆ ಮಾತ್ರವೇ ಆರೋಪ ಪಟ್ಟಿ ಸಲ್ಲಿಸದಂತೆ ಪೊಲೀಸರಿಗೆ ಸೂಚಿಸಿದೆ.ರಾಘವೇಂದ್ರ ಹೆಗಡೆ ಎಂಬುವರು ನೀಡಿರುವ ದೂರಿನ ಅನ್ವಯ, 2018 ರಲ್ಲಿ ಧ್ರುವ ಸರ್ಜಾ ಅವರು ‘ಸೋಲ್ಜರ್’ ಹೆಸರಿನ ಸಿನಿಮಾ ಮಾಡಲು ಮುಂಗಡವಾಗಿ 3 ಕೋಟಿ ರೂಪಾಯಿ ಹಣ ಪಡೆದಿದ್ದರಂತೆ. ರಾಘವೇಂದ್ರ ಅವರು ಅದನ್ನು ವಿವಿಧೆಡೆ ಸಾಲ ಮಾಡಿ ಧ್ರುವ ಅವರಿಗೆ ನೀಡಿದ್ದರಂತೆ. ಆ ಬಳಿಕ ಸಿನಿಮಾದ ಚಿತ್ರಕತೆ ಬರೆಯುವವರಿಗೆ ಮತ್ತು ಪ್ರಚಾರಕ್ಕೆಂದು 28 ಲಕ್ಷ ರೂಪಾಯಿ ಪಡೆದರಂತೆ. ಆರಂಭದಲ್ಲಿ ಚಿತ್ರಕತೆ ಮಾತುಕತೆ ವಿಚಾರವಾಗಿ ಸಂಪರ್ಕದಲ್ಲಿದ್ದ ಧ್ರುವ ಸರ್ಜಾ ಆ ಬಳಿಕ ರಾಘವೇಂದ್ರ ಅವರ ಸಂಪರ್ಕಕ್ಕೆ ಸಿಗಲಿಲ್ಲವಂತೆ. ಸಿನಿಮಾ ಡೇಟ್ಸ್ ಸಹ ನೀಡಲಿಲ್ಲವಂತೆ. ಇದೇ ಕಾರಣಕ್ಕೆ ರಾಘವೇಂದ್ರ ಅವರು ಧ್ರುವ ವಿರುದ್ಧ ವಂಚನೆ ಪ್ರಕರಣ ದಾಖಲಿಸಿದ್ದಾರೆ.ಆದರೆ ಧ್ರುವ ಸರ್ಜಾ ಅವರ ಆಪ್ತರು ಈ ಆರೋಪವನ್ನು ತಳ್ಳಿ ಹಾಕಿದ್ದು, 2018 ರಲ್ಲಿ ರಾಘವೇಂದ್ರ ಅವರು ಸಿನಿಮಾ ಮಾಡಲು ಬಂದಿದ್ದು, ಹಾಗೂ ಅಡ್ವಾನ್ಸ್ ನೀಡಿದ್ದು ಸತ್ಯವೇ ಆದರೆ ನಾವು ಅವರನ್ನು ದೂರ ತಳ್ಳಿಲ್ಲ. ಅವರು ತೆಲುಗು ಹಾಗೂ ತಮಿಳಿನಲ್ಲಿ ಸಿನಿಮಾ ಮಾಡೋಣ ಎಂದರು, ಧ್ರುವ ಸರ್ಜಾ ಅವರು ಕನ್ನಡದಲ್ಲಿಯೇ ಸಿನಿಮಾ ಮಾಡೋಣ ಎಂದು ಹೇಳಿದರು. ಆ ನಂತರ ಅವರೇ ಅಚಾನಕ್ಕಾಗಿ ನಮ್ಮ ಸಂಪರ್ಕದಿಂದ ತಪ್ಪಿ ಹೋದರು. ಬಳಿಕ ನ್ಯಾಯಾಲಯದ ನೊಟೀಸ್ ಕಳಿಸಿದ್ದಾರೆ. ಅದಕ್ಕೆ ನಾವು ನ್ಯಾಯಾಲಯದ ಮೂಲಕವೇ ಉತ್ತರ ನೀಡುತ್ತೇವೆ ಎಂದಿದ್ದಾರೆ.
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ಹೌದು, ನಿಮ್ಮ ಊರಿನಲ್ಲಿ ಜಾತ್ರೆ, ಸಭೆ, ಸಮಾರಂಭಗಳು ನಡೆದರೆ ಅದನ್ನು ಬಯಲುಸೀಮೆಟೈಮ್ಸ್.ಕಾಂ ಮೂಲಕ ನಾಡಿಗೆ ತಿಳಿಸಿ. ಅಷ್ಟೇ ಅಲ್ಲ ನಿಮ್ಮೂರಿನ ರಸ್ತೆ, ಚರಂಡಿ, ಆಸ್ಪತ್ರೆ , ಶಾಲೆ ಯಾವುದೇ ಸಮಸ್ಯೆ ಇದ್ದರೂ ಅಧಿಕಾರಿಗಳ ಕಣ್ಣು ತೆರೆಯುವಂತೆ ಸುದ್ದಿ ಮಾಡಿ. ನೀವು ಜಸ್ಟ್ ನಮ್ಮ ವಾಟ್ಸ್ ಆಪ್ ಸಂಖ್ಯೆಗೆ ಸುದ್ದಿ ಕಳುಹಿಸಿ ಉಳಿದದ್ದನ್ನು ಬಯಲುಸೀಮೆಟೈಮ್ಸ್.ಕಾಂ ಮಾಡಲಿದೆ. ನಮ್ಮ ವಾಟ್ಸ್ ಆಪ್ ಸಂಖ್ಯೆ: +91 96201 39796
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.







