ಮೊಳಕಾಲ್ಮೂರು: ಬರದ ನಾಡಿನ ಆ ಒಂದು ಜಲಾಶಯ ಭರ್ತಿಯಾಗಿದ್ದು, ಬಾಗಿನ ಅರ್ಪಣೆಗೆ ಸಿದ್ಧವಾಗಿ ನಿಂತಿದೆ. ಆದರೆ ಸಣ್ಣ ನೀರಾವರಿ ಇಲಾಖೆ ಹಾಗೂ ಆ ಕ್ಷೇತ್ರದ ಶಾಸಕರ ಇಚ್ಛಾಶಕ್ತಿ ಕೊರತೆಯಿಂದ ಜಲಾಶಯದ ನೀರು ಆಂಧ್ರದ ಪಾಲಾಗುತ್ತಿದೆ. ಇದರಿಂದ ಅಲ್ಲಿನ ಅನ್ನದಾತರಿಗೆ ಸಂಕಷ್ಟ ತಂದೊಡ್ಡಿದೆ.ಹೌದು… ನಿರಂತರ ಮಳೆಯಿಂದ ಬರದ ನಾಡು ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮುರು ತಾಲೂಕಿನ ರಂಗಯ್ಯನದುರ್ಗ ಜಲಾಶಯ ಭರ್ತಿಯಾಗಿದೆ. ಜೊತೆಗೆ ಒಳ ಹರಿವಿನ ಪ್ರಮಾಣ ಹೆಚ್ಚಾದ ಹಿನ್ನಲೆ ಜಲಾಶಯದ ಸುರಕ್ಷತೆಯ ಹಿತದೃಷ್ಟಿಯಿಂದ ಜಲಾಶಯದ ಗೇಟ್ ಗಳ ಮೂಲಕ ನೀರನ್ನು ಹೊರ ಬಿಡಲಾಗುತ್ತಿದ್ದು ಸಣ್ಣ ನೀರಾವರಿ ಇಲಾಖೆಯ ನಿರ್ಲಕ್ಷ್ಯಕ್ಕೆ ಡ್ಯಾಂ ವ್ಯಾಪ್ತಿಯ ರೈತರ ಉಪಯೋಗಕ್ಕೆ ಸಿಗದೇ ಅಪಾರ ಪ್ರಮಾಣದ ನೀರು ಆಂಧ್ರ ಪಾಲಾಗುತ್ತಿದೆ ಎಂದು ರೈತರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.1977ರಲ್ಲಿ ಮೊಳಕಾಲ್ಮೂರು ತಾಲೂಕಿನ ರೈತರಿಗೆ ಉಪಯೋಗವ ಸದುದ್ದೇಶದಿಂದ ಈ ಜಲಾಶಯ ನಿರ್ಮಾಣ ಮಾಡಲಾಗಿತ್ತು. ಈ ಜಲಾಶಯ 33 ಅಡಿ ನೀರು ಶೇಖರಣೆಯ ಸಾಮರ್ಥ್ಯ ಹೊಂದಿದ್ದು, ಈ ಡ್ಯಾಂ 2009ರಿಂದ ಸತತವಾಗಿ ಮೂರು ಬಾರಿ ಭರ್ತಿಯಾಗಿತ್ತು ಜೊತೆಗೆ ಆಗಿನ ಶಾಸಕರು ಬಾಗಿನ ಅರ್ಪಿಸಿದ್ದರು. ಈಗ ಮತ್ತೊಮ್ಮೆ ಭರ್ತಿಯಾಗಿ ಬಾಗಿನಕ್ಕೆ ಸಜ್ಜಾಗಿದೆ. ಜಗಳೂರು, ಸಂಡೂರು, ಕೂಡ್ಲಿಗಿ ಭಾಗದಲ್ಲಿ ಹೆಚ್ಚು ಮಳೆ ಸುರಿದು ಕೂಡ್ಲಿಗಿ ತಾಲೂಕಿನ ಗಂಡೇಬೊಮ್ಮನಹಳ್ಳಿ ಮತ್ತು ಸಂಗೇನಹಳ್ಳಿ ಹಳ್ಳದ ನೀರು ಹರಿದು ಬರುತ್ತಿರುವುದರಿಂದ ಡ್ಯಾಂ ಭರ್ತಿಯಾಗಿದೆ.ಈ ಜಲಾಶಯವು ಸಣ್ಣ ನೀರಾವರಿ ಇಲಾಖೆ ವ್ಯಾಪ್ತಿಗೆ ಒಳಪಟ್ಟಿದೆ. ಜಲಾಶಯದ ವ್ಯಾಪ್ತಿಗೆ ಒಳಪಡುವ ಭಟ್ರಹಳ್ಳಿ, ಅಮಕುಂದಿ, ನಾಗಸಮುದ್ರ, ಸಿದ್ದಾಪುರ, ಹಿರೇಕೆರೆಹಳ್ಳಿ ಹಾಗೂ ಚಿಕ್ಕನಹಳ್ಳಿ ಕೆರೆಗಳಿಗೆ ನಿರ್ಮಿಸಿದ ಚಾನಲ್ ಮಾರ್ಗಗಳು ಅನೇಕ ದಶಕಗಳಿಂದಲೂ ಸೂಕ್ತ ನಿರ್ವಹಣೆ ಕೊರತೆಯಿಂದ ಹಾಗೂ ಬಳಕೆಯಿಲ್ಲದೆ ಹಾಳಾಗಿವೆ. ಈ ಕಾಲುವೆಗಳ ಮೂಲಕ ನೀರು ಹರಿಸಲು ಸಾಧ್ಯವಿಲ್ಲ, ಜಲಾಶಯ ತುಂಬಿ ಹೊರ ಹರಿದು ಹೋಗುವ ನೀರನ್ನು ತಡೆ ಹಿಡಿದು ತಾಲೂಕಿನ ರೈತರ ಅನುಕೂಲಕ್ಕೆ ಬಳಕೆ ಮಾಡುವಲ್ಲಿ ಸಣ್ಣನೀರಾವರಿ ಇಲಾಖೆ ಸಂಪೂರ್ಣವಾಗಿ ವಿಫಲವಾಗಿದೆಸಣ್ಣ ನೀರಾವರಿ ಇಲಾಖೆಗೆ ಈ ಡ್ಯಾಂ ಸೇರಿದಂತೆ ಮುತ್ತಿಗಾರಹಳ್ಳಿ, ದುಪ್ಪಿ, ತುಪ್ಪದಕ್ಕನಹಳ್ಳಿ, ಭಟ್ರಹಳ್ಳಿ, ಹಿರೇಕೆರೆಹಳ್ಳಿ, ಆಮಕುಂದಿ, ಸಿದ್ದಾಪುರ, ನಾಗಸಮುದ್ರ, ಚಿಕ್ಕನಹಳ್ಳಿ, ಗೌರಸಮುದ್ರ, ಹೊಸಹಳ್ಳಿ, ಪಕ್ಕುರ್ತಿ, ದೇವಸಮುದ್ರ, ಕೋನಸಾಗರ ಒಳಗೊಂಡಂತೆ ಒಟ್ಟು 14 ಕೆರೆಗಳಿವೆ. ಇದರಲ್ಲಿ ಆರು ಕೆರೆಗಳಿಗೆ ಮಾತ್ರ ರಂಗಯ್ಯನದುರ್ಗ ಡ್ಯಾಂ ನೀರು ಕಾಲುವೆ ಹರಿಸಲು ಮೊದಲಿನಿಂದಲೂ ನಿರ್ಮಿಸಲಾಗಿದೆ. ಈ ಕಾಲುವೆಗಳನ್ನೂ ದುರಸ್ತಿ ಮಾಡಿ ನೀರು ಸರಾಗವಾಗಿ ಹರಿಸಲು ಇಲಾಖೆಯ ಅಧಿಕಾರಿಗಳು ಇದುವರೆಗೂ ಯಾವುದೇ ರೀತಿಯ ವ್ಯವಸ್ಥೆ ಮಾಡದಿರುವುದರಿಂದ ನೀರು ಹರಿದು ಆಂಧ್ರದಲ್ಲಿ ಹರಿಯುವ ವೇದಾವತಿ ನದಿ ಮೂಲಕ ಮುಂದುವರಿದು ಕೃಷ್ಣನದಿಗೆ ಸೇರಲಿದೆ.
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ಹೌದು, ನಿಮ್ಮ ಊರಿನಲ್ಲಿ ಜಾತ್ರೆ, ಸಭೆ, ಸಮಾರಂಭಗಳು ನಡೆದರೆ ಅದನ್ನು ಬಯಲುಸೀಮೆಟೈಮ್ಸ್.ಕಾಂ ಮೂಲಕ ನಾಡಿಗೆ ತಿಳಿಸಿ. ಅಷ್ಟೇ ಅಲ್ಲ ನಿಮ್ಮೂರಿನ ರಸ್ತೆ, ಚರಂಡಿ, ಆಸ್ಪತ್ರೆ , ಶಾಲೆ ಯಾವುದೇ ಸಮಸ್ಯೆ ಇದ್ದರೂ ಅಧಿಕಾರಿಗಳ ಕಣ್ಣು ತೆರೆಯುವಂತೆ ಸುದ್ದಿ ಮಾಡಿ. ನೀವು ಜಸ್ಟ್ ನಮ್ಮ ವಾಟ್ಸ್ ಆಪ್ ಸಂಖ್ಯೆಗೆ ಸುದ್ದಿ ಕಳುಹಿಸಿ ಉಳಿದದ್ದನ್ನು ಬಯಲುಸೀಮೆಟೈಮ್ಸ್.ಕಾಂ ಮಾಡಲಿದೆ. ನಮ್ಮ ವಾಟ್ಸ್ ಆಪ್ ಸಂಖ್ಯೆ: +91 96201 39796
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.







