ಬೆಂಗಳೂರು: ಮುಸ್ಸೂರಿಯ ಲಾಲ್ ಬಹುದ್ದೂರ್ ಶಾಸ್ತ್ರಿ ರಾಷ್ಟ್ರೀಯ ಆಡಳಿತ ಅಕಾಡೆಮಿ ಹಾಗೂ ಮೈಸೂರು ಆಡಳಿತ ತರಬೇತಿ ಸಂಸ್ಥೆಯ ಸಹಯೋಗದಲ್ಲಿ ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ದಂಡಾಧಿಕಾರಿಗಳಿಗೆ ತಂತ್ರಾತ್ಮಕ ನಾಯಕತ್ವ ಮತ್ತು ಮಾರ್ಗದರ್ಶಕ 3ನೇ ಆವೃತ್ತಿಯ ಕಾರ್ಯಾಗಾರವನ್ನು ಮೈಸೂರಿನ ಆಡಳಿತ ತರಬೇತಿ ಸಂಸ್ಥೆಯಲ್ಲಿ ಸೆಪ್ಟೆಂಬರ್ 19 ರಂದು ಆಯೋಜಿಸಲಾಗಿದೆ.ಭಾರತದ ನಾಗರಿಕ ಸೇವೆಗಳ ಸದಸ್ಯರಿಗೆ ತರಬೇತಿ ನೀಡುವ ದೇಶದ ಪ್ರಮುಖ ಸಂಸ್ಥೆಯಾಗಿ ಎಲ್.ಬಿ.ಎಸ್. ಎನ್.ಎ.ಎ. ಗುರುತಿಸಿಕೊಂಡಿದೆ. ಭಾರತೀಯ ಆಡಳಿತ ಸೇವೆ (ಐಎಎಸ್) ವೃಂದದ ಅಧಿಕಾರಿಗಳು 02 ವರ್ಷಗಳ ಕಾಲ ಎಲ್.ಬಿ.ಎಸ್.ಎನ್.ಎ.ಎ. ಯಲ್ಲಿ ತರಬೇತಿಯನ್ನು ಪಡೆದಿರುತ್ತಾರೆ. ನಂತರ ಸುಮಾರು 52 ವಾರಗಳ ಈ ತರಬೇತಿಯ ಗಣನೀಯ ಭಾಗವಾಗಿ, ಪ್ರಶಿಕ್ಷಣಾರ್ಥಿ ಅಧಿಕಾರಿಗಳನ್ನು ಜಿಲ್ಲಾ ಮಟ್ಟದಲ್ಲಿ ತರಬೇತಿ ಪಡೆಯಲು ಆಯಾ ಕೇಡರ್ ಗಳಿಗೆ ಕಳುಹಿಸಲಾಗುತ್ತದೆ.ಅಲ್ಲಿ ಪ್ರಶಿಕ್ಷಣಾರ್ಥಿ ಅಧಿಕಾರಿಗಳನ್ನು ಸಂಬಂಧಪಟ್ಟ ಜಿಲ್ಲಾ ಮಟ್ಟದ ಮ್ಯಾಜಿಸ್ಟ್ರೇಟ್ಗಳ ಮಾರ್ಗದರ್ಶನ ಹಾಗೂ ಅಗತ್ಯ ತರಬೇತಿಯಲ್ಲಿ ಅಮೂಲ್ಯವಾದ ಪ್ರಾಯೋಗಿಕ ಅನುಭವವನ್ನು ಪಡೆಯುತ್ತಾರೆ. ಪ್ರೊಬೇಷನರ್ ಗಳ ಸಾಮರ್ಥ್ಯಗಳು, ಆಡಳಿತಾತ್ಮಕ ತೀರ್ಪು ಮತ್ತು ನೈತಿಕ ದೃಷ್ಟಿಕೋನವನ್ನು ರೂಪಿಸುವಲ್ಲಿ ಈ ಕ್ಷೇತ್ರದ ತರಬೇತಿ ಅತ್ಯಗತ್ಯವಾಗಿರುತ್ತದೆ. ಏಕೆಂದರೆ ಅವರು ನೈಜ-ಪ್ರಪಂಚದ ಆಡಳಿತ ಮತ್ತು ಸಾರ್ವಜನಿಕ ಸೇವಾ ವಿತರಣೆಯ ಸಂಕೀರ್ಣತೆಗಳನ್ನು ಅಗತ್ಯ ಮಾರ್ಗದರ್ಶನ ನೀಡಲು ಕಲಿಯುತ್ತಾರೆ.ಪ್ರಶಿಕ್ಷಣಾರ್ಥಿ ಅಧಿಕಾರಿಗಳಿಗೆ ನೀಡುವ ತರಬೇತಿ ವ್ಯವಸ್ಥೆಯನ್ನು ಇನ್ನಷ್ಟು ಬಲಪಡಿಸಲು, ಜಿಲ್ಲಾಧಿಕಾರಿಗಳು / ಉಪ ವಿಭಾಗಾಧಿಕಾರಿಗಳಿಗೆ ವಿಶೇಷವಾದ ಕಾರ್ಯಾಗಾರಗಳನ್ನು ಎಲ್.ಬಿ.ಎಸ್.ಎನ್.ಎ.ಎ. ಆರಂಭಿಸಿದೆ.
ಈ ಕಾರ್ಯಾಗಾರದಲ್ಲಿ ಹಿರಿಯ ಅಧಿಕಾರಿಗಳಿಗೆ ಮಾರ್ಗದರ್ಶಕರಾಗಿ ತಮ್ಮ ಪಾತ್ರವನ್ನು ವೃದ್ಧಿಪಡಿಸಲು ನೆರವಾಗುತ್ತಿದ್ದು, ಅನುಭವಗಳನ್ನು ಹಂಚಿಕೊಳ್ಳುವ ಅವಕಾಶವನ್ನು ಒದಗಿಸುತ್ತವೆ. ಇದರಿಂದ ತರಬೇತಿ ನೀಡುವ ವಿಧಾನಗಳು ಹೆಚ್ಚು ಗುರಿಯನ್ನು ಸಾಧಿಸಲು, ಪ್ರಾಯೋಗಿಕ ಕೌಶಲ್ಯಗಳನ್ನು ಬೆಳೆಸುವಲ್ಲಿ ಸಹಾಯವಾಗುತ್ತವೆ.ಈ ಸರಣಿಯ 3ನೇ ಆವೃತ್ತಿಯ ಕಾರ್ಯಾಗಾರದಲ್ಲಿ ಕರ್ನಾಟಕ, ಆಂಧ್ರಪ್ರದೇಶ, ತಮಿಳುನಾಡು, ಕೇರಳ, ತೆಲಂಗಾಣ, ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು ಹಾಗೂ ಪುದುಚೇರಿ ಸೇರಿದಂತೆ ದಕ್ಷಿಣ ಭಾರತದ ರಾಜ್ಯಗಳ 40 ಅಧಿಕಾರಿಗಳು ಭಾಗವಹಿಸಿ ಆಡಳಿತದ ನವೀನತೆ ಮತ್ತು ಅನುಭವ ಹಂಚಿಕೆಗೆ ವೇದಿಕೆಯನ್ನು ರೂಪಿಸಲಾಗುತ್ತಿದೆ.ಎಲ್.ಬಿ.ಎಸ್.ಎನ್.ಎ.ಎ. ನಿರ್ದೇಶಕರಾದ ಶ್ರೀರಾಮ್ತರಣಿಕಂತಿ, ಅವರು ಕಾರ್ಯಾಗಾರದಲ್ಲಿ ಖುದ್ದಾಗಿ ಭಾಗವಹಿಸಲಿದ್ದು, ಮುಂದಿನ ಪೀಳಿಗೆಯ ನಾಗರಿಕ ಸೇವಾ ಅಧಿಕಾರಿಗಳಿಗೆ ಮಾರ್ಗದರ್ಶನ ನೀಡುವ ಮೂಲಕ ಬದ್ಧತೆಯನ್ನು ವ್ಯಕ್ತಪಡಿಸಲಿದ್ದಾರೆ. ಅವರ ನಾಯಕತ್ವದಲ್ಲಿ ಎಲ್.ಬಿ.ಎಸ್.ಎನ್.ಎ.ಎ. ತರಬೇತಿ ಕ್ಷೇತ್ರದಲ್ಲಿ ಹೊಸ ಏಳಿಗೆಯನ್ನು ತಲುಪಿ, ಪ್ರಾಯೋಗಿಕ ಆಡಳಿತ ಮತ್ತು ನೈತಿಕ ನಾಯಕತ್ವದ ಮೇಲೆ ವಿಶೇಷವಾಗಿ ಗಮನಹರಿಸಲು ಈ ಕಾರ್ಯಾಗಾರಕ್ಕೆ ಆಗಮಿಸಿ ಭಾಗವಹಿಸುವುದರಿಂದ, ಎಲ್ಲ ಜಿಲ್ಲಾಧಿಕಾರಿಗಳು ಹಾಗೂ ಅಧಿಕಾರಿ ತರಬೇತುದಾರರುಗಳಿಗೆ ನೇರವಾಗಿ ಅವರೊಂದಿಗೆ ಸಂವಾದ ನಡೆಸಲು, ಮಾರ್ಗದರ್ಶನ ಪಡೆಯಲು ಹಾಗೂ ಉತ್ತಮ ಆಡಳಿತ ನೀಡುವಲ್ಲಿ ಮುಂದಿನ ಭವಿಷ್ಯದ ಕುರಿತ ಅವರ ಅನುಭವ ಮತ್ತು ದೃಷ್ಟಿಕೋನವನ್ನು ಹಂಚಿಕೊಳ್ಳುವ ಅಪರೂಪದ ಸದಾವಕಾಶವನ್ನು ಒದಗಿಸಿದ್ದಾರೆ.ಕಾರ್ಯಾಗಾರದ ಮೊದಲ ಭಾಗದಲ್ಲಿ ಜಿಲ್ಲಾ ಆಡಳಿತದ ಕ್ಷೇತ್ರದಲ್ಲಿ ತಂತ್ರಾತ್ಮಕ ನಾಯಕತ್ವ ಮತ್ತು ಮಾರ್ಗದರ್ಶನದ ಅವಶ್ಯಕತೆಯನ್ನು ಪರಿಚಯಿಸುವ ಉದ್ಘಾಟನಾ ಕಾರ್ಯಕ್ರಮವು ನಡೆಯಲಿದೆ. ನಂತರ ಎಲ್.ಬಿ.ಎಸ್.ಎನ್.ಎ.ಎ. ಯ ಹಿರಿಯ ಉಪನಿರ್ದೇಶಕಿ ಶ್ರೀಮತಿ ಶಣ್ಮುಗಾ ಪ್ರಿಯಾ ಮಿಶ್ರಾ ಅವರು ಜಿಲ್ಲಾ ತರಬೇತಿ ಕಾರ್ಯಕ್ರಮದ ಉದ್ದೇಶಗಳು ಮತ್ತು ಅನುಷ್ಠಾನದ ಕುರಿತು ವಿವರ ನೀಡಲಿದ್ದಾರೆ.ಕ್ಷೇತ್ರದ ಅನುಭವಗಳನ್ನು ಆಧರಿಸಿ ತರಬೇತಿಯ ಅಗತ್ಯತೆ ಹೇಗೆ ರೂಪಾಂತರಗೊಂಡಿದೆ ಎಂಬುದರ ಕುರಿತು ಸಿಬಿಸಿ ಕಾರ್ಯದರ್ಶಿ ಶ್ರೀಮತಿ ವಿ. ಲಲಿತಲಕ್ಷ್ಮಿ ಅವರು ತಮ್ಮ ಅನುಭವಗಳನ್ನು ಹಂಚಿಕೊಳ್ಳಲಿದ್ದಾರೆ. ಬಳಿಕ ಎಲ್.ಬಿ.ಎಸ್.ಎನ್.ಎ.ಎ. ಯ ಜಂಟಿ ನಿರ್ದೇಶಕಿ ಶ್ರೀಮತಿ ಸೌಜನ್ಯ ಅವರು ಪ್ರಾದೇಶಿಕ ದೃಷ್ಟಿಕೋನದಿಂದ ಮುಖ್ಯ ಆಡಳಿತ ಸೂಚಕಗಳನ್ನು ಪ್ರಸ್ತುತಪಡಿಸಲಿದ್ದಾರೆ.ಮಧ್ಯಾಹ್ನದ ಭಾಗದಲ್ಲಿ ಜಿಲ್ಲಾಧಿಕಾರಿಗಳು ತರಬೇತಿ ಸಂದರ್ಭ ಎದುರಿಸುವ ಸಮಸ್ಯೆಗಳ ಕುರಿತು ದುಂಡು ಮೇಜು ಚರ್ಚೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ನಂತರ ಎಲ್.ಬಿ.ಎಸ್.ಎನ್.ಎ.ಎ. ನಿರ್ದೇಶಕರೊಂದಿಗೆ ವಿಶೇಷ ಸಂವಾದ ನಡೆಸಲಾಗುವುದು. ಕೊನೆಗೆ ಮುಂದಿನ ಕ್ರಮಗಳನ್ನು ರೂಪಿಸುವುದು ಹಾಗೂ ಸಮಾರೋಪ ಕಾರ್ಯಕ್ರಮದೊಂದಿಗೆ ಕಾರ್ಯಾಗಾರದ ದಿನ ಮುಕ್ತಾಯಗೊಳ್ಳಲಿದೆ.ಈ ತಂತ್ರಾತ್ಮಕ ನಾಯಕತ್ವ ಮತ್ತು ಮಾರ್ಗದರ್ಶನ ಕಾರ್ಯಾಗಾರವು ತರಬೇತುದಾರರು ಮತ್ತು ತರಬೇತಿ ಪಡೆಯುವವರ ಸಾಮಥ್ರ್ಯವನ್ನು ವೃದ್ಧಿಪಡಿಸಲು ಎಲ್.ಬಿ.ಎಸ್.ಎನ್.ಎ.ಎ. ಕೈಗೊಂಡಿರುವ ನಿರಂತರ ಪ್ರಯತ್ನವನ್ನು ಪ್ರತಿಬಿಂಬಿಸುತ್ತದೆ.ಜಿಲ್ಲೆಗಳಲ್ಲಿ ಅಧಿಕಾರಿಗಳಿಗೆ ತರಬೇತಿ ನೀಡುವ ವ್ಯವಸ್ಥೆಯನ್ನು ಮತ್ತಷ್ಟು ಗಟ್ಟಿಗೊಳಿಸುವ ಮೂಲಕ ಮಾರ್ಗದರ್ಶನವನ್ನು ಹೆಚ್ಚು ಸಂರಚಿತವಾಗಿಯೂ ಪರಿಣಾಮಕಾರಿಯಾಗಿಯೂ ರೂಪಿಸಲು ಇದು ನೆರವಾಗಲಿದೆ.
ದಕ್ಷಿಣ ಭಾರತದ ವಿವಿಧ ರಾಜ್ಯಗಳ ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ದಂಡಾಧಿಕಾರಿಗಳ ನಡುವಿನ ಅನುಭವ ಹಂಚಿಕೆ ಮೂಲಕ ಸಮನ್ವಯಾತ್ಮಕ ಪರಿಹಾರಗಳನ್ನು ಕಂಡುಕೊಳ್ಳಲು ಹಾಗೂ ಉತ್ತಮ ಆಡಳಿತದ ಕಡೆಗೆ ಒಗ್ಗೂಡಲು ಈ ಕಾರ್ಯಕ್ರಮ ಪ್ರೇರಣೆ ನೀಡುತ್ತದೆ. ಈ ಕಾರ್ಯಾಗಾರದಿಂದ ದೊರೆಯುವ ಅನುಭವಗಳು ಭವಿಷ್ಯದ ಜಿಲ್ಲಾ ತರಬೇತಿ ಕಾರ್ಯಕ್ರಮಗಳಿಗೆ ದಾರಿ ತೋರಲಿದ್ದು, ಸಾಮಥ್ರ್ಯವಿರುವ, ಸ್ಪಂದನಶೀಲ ಹಾಗೂ ಜನಹಿತಕಾರಿ ಆಡಳಿತಗಾರರನ್ನು ರೂಪಿಸುವಲ್ಲಿ ಸಹಕಾರಿಯಾಗಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ಹೌದು, ನಿಮ್ಮ ಊರಿನಲ್ಲಿ ಜಾತ್ರೆ, ಸಭೆ, ಸಮಾರಂಭಗಳು ನಡೆದರೆ ಅದನ್ನು ಬಯಲುಸೀಮೆಟೈಮ್ಸ್.ಕಾಂ ಮೂಲಕ ನಾಡಿಗೆ ತಿಳಿಸಿ. ಅಷ್ಟೇ ಅಲ್ಲ ನಿಮ್ಮೂರಿನ ರಸ್ತೆ, ಚರಂಡಿ, ಆಸ್ಪತ್ರೆ , ಶಾಲೆ ಯಾವುದೇ ಸಮಸ್ಯೆ ಇದ್ದರೂ ಅಧಿಕಾರಿಗಳ ಕಣ್ಣು ತೆರೆಯುವಂತೆ ಸುದ್ದಿ ಮಾಡಿ. ನೀವು ಜಸ್ಟ್ ನಮ್ಮ ವಾಟ್ಸ್ ಆಪ್ ಸಂಖ್ಯೆಗೆ ಸುದ್ದಿ ಕಳುಹಿಸಿ ಉಳಿದದ್ದನ್ನು ಬಯಲುಸೀಮೆಟೈಮ್ಸ್.ಕಾಂ ಮಾಡಲಿದೆ. ನಮ್ಮ ವಾಟ್ಸ್ ಆಪ್ ಸಂಖ್ಯೆ: +91 96201 39796
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.







