ಮಹಾ ಮಾನವತವಾದಿ, ವಿಶ್ವಗುರು ಮಹಾತ್ಮ ಬಸವೇಶ್ವರರ ಜಯಂತಿಯ ಈ ಶುಭದಿನದಂದು “ಮಹಾತ್ಮರ ಚರಿತಾಮೃತ” ಕೃತಿಯಿಂದ ಲೇಖನ ಸಂಪಾದಿಸಿ ಕೊಟ್ಟಿದ್ದಾರೆ ರುದ್ರಮೂರ್ತಿ ಎಂ. ಜೆ
“ಆಯತದಲ್ಲಿ ಪೂರ್ವಾಚಾರಿಯ ಕಂಡೆ ಸ್ವಾಯತದಲ್ಲಿ ಪೂರ್ವಚಾರಿಯ ಕಂಡೆಸನ್ನಿಹಿತದಲ್ಲಿ ಪೂರ್ವಚಾರಿಯ ಕಂಡೆಗುಹೇಶ್ವರಲಿಂಗದಲ್ಲಿ ಪೂರ್ವಾಚಾರಿ ಸಂಗನ ಬಸವಣ್ಣನಶ್ರೀಪಾದಕ್ಕೆ ನಮೋ ನಮೋ ಎಂಬೆನು” -ಅಲ್ಲಮಪ್ರಭು ದೇವರು
ಹನ್ನೆರಡನೆಯ ಶತಾಬ್ದಿಯ ಸ್ವರ್ಣೋಧ್ಯಾಯದ ಸಮಾನತೆಯ ಶಿಖರಸೂರ್ಯ ವಿಶ್ವಗುರು ಬಸವಣ್ಣನವರು. ವಿಶ್ವಕ್ಕೆ ಸಂಸತ್ತನ್ನು ಕೊಟ್ಟ ಪ್ರಥಮ ಪಿತಾಮಹ. ವಚನಾಂದೋಲನದ ಪ್ರಥಮ ನೇತಾರ. ನಾಡಿಗೆ ಇಷ್ಟಲಿಂಗ ಕೊಟ್ಟ ಪ್ರಥಮ ಹರಿಕಾರ ಮಹಾಮಾನವತಾವಾದಿ.
ಕಲ್ಯಾಣವೆಂಬ ಪ್ರಣತಿಯಲ್ಲಿ ಬಹುಬೆಲೆ ಬಾಳುವ ಭಕ್ತಿರಸವೆಂಬ ತೈಲವನ್ನೆರೆದು ಬೆಳ್ಳಂಬೆಳಕಾಗಿ ಶಿವನ ಪ್ರಕಾಶದಂತೆ ತೊಳಗಿ ಬೆಳಗಿದ ವಿಶ್ವ ವಿಭೂತಿ ಬಸವಣ್ಣನವರು, ಮುತ್ತಿನ ಹಾರದಂತೆ ನುಡಿದು ,ಲಿಂಗ ಮೆಚ್ಚಿ, ಅಹುದು ಎಂಬಂತೆ ನಡೆದು ಸರ್ವಕಾಲಿಕವೂ ,ಶಾಶ್ವತವೂ ಆದ ವಿಶ್ವ ತತ್ವಗಳನ್ನು ಸಾರಿದವರು. ಇಂಗಳೇಶ್ವರದ ಮಂಗಳಮೂರ್ತಿಯಾದ ಇವರು ಶಿವಾನುಭಾವದ ಸಹಕಾರ ಮೂರ್ತಿಯಾಗಿ, ಜಂಗಮ ಶಿವ ಶಾಸನದಂತೆ ಬಾಳಿದವರು. ದೇಶ-ಕಾಲ- ಜಾತಿ- ಕುಲ- ಮತಗಳ ಮಾನವ ನಿರ್ಮಿತ ಸಂಕುಚಿತ ಸೀಮಾ ರೇಖೆಯನ್ನು ಸೀಮೋಲಂಘನಗೈದು , ಕಾಯಕ ತತ್ವದ ತಾರಕ ಮಂತ್ರವನ್ನು ಉಪದೇಶಿಸಿ ದಕ್ಷಿಣ ಭಾರತದಲ್ಲಿ ಮೊದಲ ಸ್ವತಂತ್ರ ಕನ್ನಡ ಧರ್ಮವನ್ನು ಕೊಟ್ಟವರು ಬಸವಣ್ಣನವರು. ಲಿಂಗಾಯತ ಧರ್ಮ ಬಸವಣ್ಣನವರು ನೀಡಿದ ಮೊದಲ ಪ್ರಜಾಸತ್ತಾತ್ಮಕ ಧರ್ಮವಾಗಿದೆ. ಇದರ ನೇತಾರ ಶ್ರೀ ಬಸವಣ್ಣ.
ದಲಿತೋದ್ಧಾರಕ, ಮಹಿಳಾ ಸ್ವಾತಂತ್ರ್ಯ ನೀಡಿದ ಸಮತಾವಾದಿ, ವಚನಕಾರ ,ಸಮಾಜೋಧಾರ್ಮಿಕ ಚಳುವಳಿಯ ವಿಶ್ವಚೇತನ ಶ್ರೀ ಬಸವಣ್ಣನವರು. ಅರ್ಥರ್ ಮೈಲ್ಸ್ ಹೇಳುವಂತೆ “ಭಾರತದ ಮೊಟ್ಟ ಮೊದಲ ಸ್ವತಂತ್ರ ವಿಚಾರವಾದಿ ಬಸವಣ್ಣ” ಎಂದು ಬಣ್ಣಿಸುತ್ತಾರೆ. ಅವರು ಹೊಸದೊಂದು ಧರ್ಮ ನೀಡಿದರು.
ಚಾರಿತ್ರಿಕ ಯುಗಪುರುಷ ಬಸವಣ್ಣನವರ ಕುರಿತು ಮೂಡಿ ಬಂದಷ್ಟು ಪುರಾಣಗಳು ಕಾವ್ಯಗಳು, ಚರಿತ್ರೆಗಳು, ವಚನಗಳು ಮತ್ತಾವ ವ್ಯಕ್ತಿಗಳ ಕುರಿತು ಬಂದಿಲ್ಲ ಎಂದರೆ ಅತಿಶಯೋಕ್ತಿಯೇನಲ್ಲ. ಶಂಭು ಶಿವನಾಗಿ ದರ್ಶನವಿತ್ತರೆ; ದ್ವಿತೀಯ ಶಂಭುವಾಗಿ ಬೆಳಗಿದ ಭಾಗ್ಯವಿಧಾತ ಬಸವಣ್ಣನವರು.
ಶಾಸನಗಳಲ್ಲಿ ಬಸವೇಶ್ವರ ದೇವರು;-
ಕೆಲವರ ದೃಷ್ಟಿಯಲ್ಲಿ ಶಾಸನಗಳಲ್ಲಿ ದೊರೆತದ್ದು ಮಾತ್ರ ಇತಿಹಾಸ. ಇತಿಹಾಸ ಮತ್ತು ಸಂಸ್ಕೃತಿಗಳ ನಿರೂಪಣೆಯಲ್ಲಿ ಇಂದು ಶಾಸನಗಳ ಪಾತ್ರ ಮಹತ್ವಪೂರ್ಣವಾದುದೆಂಬುದರಲ್ಲಿ ಸಂದೇಹವೇ ಇಲ್ಲ .ಆದರೆ ಶಾಸನಗಳಲ್ಲಿ ಇದ್ದದ್ದು ಇತಿಹಾಸವೇ ಅಲ್ಲವೆಂಬ ಅಭಿಪ್ರಾಯ ತೀರಾ ಅತಿರೇಕವಾಗುತ್ತದೆ. ಶಾಸನಗಳು ರಚಿತವಾಗುತ್ತಿದ್ದ ಉದ್ದೇಶ ಮತ್ತು ಅವುಗಳ ಪರಿಮಿತ ವ್ಯಾಪ್ತಿಯನ್ನು ಬಲ್ಲವರಾರೂ ಈ ಅತಿರೇಕಕ್ಕೆ ಹೋಗಲಾರರು. ಡಾ. ವೆಂಕಟಸುಬ್ಬಯ್ಯನವರ ಆಕ್ಷೇಪಕ್ಕೆ ಉತ್ತರ ಕೊಡುತ್ತಾ ರಾ. ನರಸಿಂಹಾಚಾರ್ಯರು ಹೇಳುವ ಈ ಮಾತುಗಳನ್ನು ಗಮನಿಸಬೇಕು. ವ್ಯಕ್ತಿಗಳ ಸತ್ಯಗೆ ಶಾಸನವೇ ಪ್ರಮಾಣವಾದ ಪಕ್ಷದಲ್ಲಿ ಶಾಸನೋಕ್ತರಲ್ಲದ ಶಂಕರಾಚಾರ್ಯ, ರಾಮಾನುಜಾಚಾರ್ಯರಾದಿಗಳ ಸತ್ತೆಯನ್ನು ಹೇಗೆ ನಂಬುವುದು ?ಎಂದು ಕೇಳುತ್ತಾರೆ. ಬಸವಣ್ಣನವರು ಒಂದು ರಾಜ್ಯದ ದಂಡಾಧೀಶರಾಗಿದ್ದುದ್ದರಿಂದ ಅವರ ಹೆಸರಿನಲ್ಲಿ ಶಾಸನಗಳಿರಬೇಕೆಂಬುದರ ಆಶಯವನ್ನು ನಾವು ಅರ್ಥಮಾಡಿಕೊಳ್ಳಬಹುದು. ಆದರೆ ಶಾಸನಗಳು ಸಿಕ್ಕಲಿಲ್ಲವೆಂದು ಆ ವ್ಯಕ್ತಿಯೇ ಕಾಲ್ಪನಿಕ ಎನ್ನುವುದು ಐತಿಹಾಸಿಕ ದೃಷ್ಟಿಯಲ್ಲ. ಆದರೂ ನಾರಾಯಣರಾಯರಂತೆ ಕೆಲವರಿಗೆ ಅಲ್ಲೊಮ್ಮೆ ಇಲ್ಲೊಮ್ಮೆ ಸಂದೇಹ ತಲೆದೋರುತ್ತಿದ್ದಾಗ ಬಸವಣ್ಣನವರ ಹೆಸರನ್ನು ಉಲ್ಲೇಖಿಸಿರುವ ಕೆಲವು ಶಾಸನಗಳು ಕಣ್ಣಿಗೆ ಬಿದ್ದವು. ಅವುಗಳಲ್ಲಿ ಮುಖ್ಯವಾಗಿ ಹೆಸರಿಸಬೇಕಾದುದೆಂದರೆ ಅರ್ಜುನ ವಾಡದ ಶಿಲಾ ಶಾಸನ. ಶಕ ವರ್ಷ 1182 ಅಂದರೆ ಕ್ರಿ.ಶ 1260 ರಲ್ಲಿ ನಿರ್ಮಿತವಾದದ್ದು.
ಈ ಶಾಸನ. ಯಾದವ ದೊರೆ ಕನ್ನಡ( ಅಥವಾ ಕೃಷ್ಣ)ನ ಮಂತ್ರಿ ಚಾಮುಂಡಶೆಟ್ಟಿ ಮತ್ತು ಆತನ ಗೆಳೆಯ ನಾಗರಸ ಇವರು ಬಸವಣ್ಣನವರ ವಂಶದ ಹಾಲಬಸವಿದೇವನಿಗೆ ಕವಿವಿಳಾಸಪುರವನ್ನು ದತ್ತಿಬಿಟ್ಟುದು ಈ ಶಾಸನದ ಮುಖ್ಯ ವಿಷಯ. ಬಸವರಾಜ ಸಂಗನಬಸವ ಎಂದು ಬಸವಣ್ಣನವರನ್ನು ಕರೆದಿರುವ ಈ ಶಾಸನ ಅವರ ವಂಶದ ಮೂರು ನಾಲ್ಕು ತಲೆಮಾರುಗಳ ಮೇಲೆ ಬೆಳಕನ್ನು ಬೀರುತ್ತದೆ. ಈ ಶಾಸನದಲ್ಲಿ ಪ್ರಕೃತ ದೃಷ್ಟಿಯಿಂದ ಮುಖ್ಯವಾದ ಭಾಗವನ್ನು ಇಲ್ಲಿ ಉದಾಹರಣೆಸಬಹುದು.
…. ಮತ್ತಂ ತರ್ದವಾಡಿ ಮಧ್ಯಗ್ರಾಮ ಬಾಗವಾಡಿ ಪುರವರಾದೀಶ್ವರಮಾದಿರಾಜ ತನೂಜಂ ಬಸವರಾಜನ ಮಹಿಮೆಯೆಂತೆಡೆ:ಮಂಗಳಕೀರ್ತಿ ಪುರಾತನಜಂಗಮ ಲಿಂಗೈಕ ಭಕ್ತಿ ನಿರ್ಭರ ಲೀಲಾಸಂಗಂ ಸಂಗನಬಸವಂಸಂಗತಿಯಂ ಮಾಳ್ಕೆ ಭಕ್ತಿಯೊಳಗನವರತಂ
ಎಂದು ಮುಂತಾಗಿ ಶಾಸನ ಮುಂದುವರಿದು ಈ ಹಾಲಬಸವಿದೇವನಿಗೆ ಕೊಟ್ಟ ದಾನವನ್ನು ವರ್ಣಿಸುತ್ತದೆ. ಇಲ್ಲಿ ಬರುವ ಪದ್ಯ ಬಸವಣ್ಣನವರನ್ನು ಕುರಿತದ್ದೆಂಬ ವಿಚಾರದಲ್ಲಿ ಯಾವ ಸಂದೇಹವೂ ಇಲ್ಲ. ಬಸವಣ್ಣನವರ ಮಹಿಮೆಯಿಂದ ಮನದುಂಬಿ ಶಾಸನಕಾರ ಅದನ್ನು ಲಿಖಿಸಿರುವಂತಿದೆ. ಅಂತೂ ಈ ಶಾಸನದಿಂದ ಲಭ್ಯವಾಗಿರುವ ಬಸವಣ್ಣನವರ ವಂಶವೃಕ್ಷದ ಪರಿಚಯವನ್ನು ಹೀಗೆ ಹೇಳಬಹುದು. ಬಾಗವಾಡಿ ಪುರವರಾದೀಶ್ವರ ಮಾದಿರಾಜನ ಮಕ್ಕಳು, ದೇವರಾಜ ಮುನಿಪ ಮತ್ತು ಸಂಗನ ಬಸವಣ್ಣ ದೇವರಾಜ ಮುನಿಪನ ಮಗ ಬಸವರಸ ಅಥವಾ ಇನ್ನೊಂದು ಪಾಠಾಂತರವನ್ನು ಒಪ್ಪುವುದಾದರೆ ಕಾಮರಸ .ಅವನ ಮಗ ಕಲಿದೇವರಸ; ಅವನ ಮಗನೇ ಹಾಲಬಸವಿದೇವ.ಈ ವಂಶವೃಕ್ಷ ಮತ್ತು ಇತರ ವಿವರಗಳ ವಿಚಾರ ಏನೇ ಇರಲಿ ಇಲ್ಲಿ ನಮಗೆ ಮುಖ್ಯವಾಗಿ ಬೇಕಾದುದೇನೆಂದರೆ ಸಂಗಣ್ಣ ಬಸವಣ್ಣ ಮಾದಿರಾಜನ ಮಗ ಮತ್ತು ಆತ ಐತಿಹಾಸಿಕ ವ್ಯಕ್ತಿ ಎಂಬುದಷ್ಟೇ.
* ಬಸವಣ್ಣನವರ ಕುರಿತು ಕಾವ್ಯಗಳು:- ಅರ್ಜುನವಾಡದ ಶಾಸನ ಬಸವಣ್ಣನವರನ್ನು ಚಾರಿತ್ರಿಕ ವ್ಯಕ್ತಿ ಎಂದು ಸಾಬೀತು ಮಾಡಿದರೆ, ಬಸವಣ್ಣನವರನ್ನು ಕುರಿತು ಮೊಟ್ಟಮೊದಲ ಕೃತಿ ಹೊರಬಂದದ್ದು ಹರಿಹರನಿಂದ. ಹರಿಹರನ ಬಸವರಾಜ ದೇವರ ರಗಳೆ ಕೃತಿಯೆಂಬ ಕೀರ್ತಿಗೆ ಪಾತ್ರವಾಗಿದೆ. ತದನಂತರ ಪಾಲ್ಕುರಿಕೆ ಸೋಮನಾಥನು ತೆಲುಗು ಭಾಷೆಯಲ್ಲಿ ಬಸವ ಪುರಾಣವನ್ನು ರಚಿಸಿದನು. ಈ ಕೃತಿಯನ್ನು ಆದರಿಸಿ ಭೀಮಕವಿ ಕನ್ನಡದಲ್ಲಿ ಬಸವ ಪುರಾಣವನ್ನು ರಚಿಸಿದನು. ಸಿಂಘಿರಾಜನ “ಅಮಲ ಬಸವರಾಜ ಚಾರಿತ್ರ” ಷಡಕ್ಷರ ದೇವನ “ಬಸವರಾಜ ವಿಜಯಂ” ಮೊದಲಾದ ಕೃತಿಗಳು ಬಸವಣ್ಣನವರ ಘನ ವ್ಯಕ್ತಿತ್ವವನ್ನು ಲೋಕಕ್ಕೆ ಸಾರುವ ಅಮೂಲ್ಯ ಆಕಾರಗಳಾಗಿವೆ.
* ಭುವನ ಭಾಗ್ಯೋದಯ!:- ಐತಿಹಾಸಿಕ ನಗರಿ ವಿಜಯಪುರ ಜಿಲ್ಲೆಯ ಬಾಗೇವಾಡಿ ಬಸವಣ್ಣನವರ ಉದಯದಿಂದ ಅದು ಬಸವನಬಾಗೇವಾಡಿಯಾಯಿತು. ಇಲ್ಲಿ ಸುಪ್ರಸಿದ್ದ ಅಗ್ರಹಾರವಿತ್ತು. ಹೆಚ್ಚಾಗಿ ಶೈವ ಬ್ರಾಹ್ಮಣರು ವಾಸವಾಗಿದ್ದರು. ಈ ಅಗ್ರಹಾರದ ಅಧಿಪತಿ ಮಂಡಿಗೆಯ ಮಾದಿರಾಜ. ಕಮ್ಮೆ ಕುಲದ ವಂಶಸ್ಥನಾದ ಮಾದರಸ ಮತ್ತು ಮಾದಲಾಂಬಿಕೆಯರು ಆದರ್ಶ ದಂಪತಿಗಳು. ಮಾದಲಾಂಬಿಕೆಯವರ ತವರು ಮನೆ ಇಂಗಳೇಶ್ವರ. ಇಂತಹ ದಂಪತಿಗಳ ಪುಣ್ಯೋದರ ದಿಂದ ಕ್ರಿಸ್ತಶಕ ಸಾವಿರ 1131 ರಲ್ಲಿ ಅವತರಿಸಿದ ಅರಿವ ಮಹಾಮೂರ್ತಿ ಶ್ರೀ ಬಸವಣ್ಣನವರು. ಬಸವಣ್ಣನ ಸಹೋದರ ದೇವರಾಜು. ಅಕ್ಕ ನಾಗಲಾಂಬಿಕೆ. ಕಿರಿಯ ಪುತ್ರನೇ ಬಸವಣ್ಣ.
ಹುಟ್ಟುತ್ತಲೇ ಕೆಳವರ್ಗದ ಬಂಧುವಿನ ಬಂಧನ ಬಗೆಹರಿಸಿದ ಪರಮಾವತಾರಿ, ಮುಂದೆ ಬಾಗೇವಾಡಿಯಲ್ಲಿ ಬಸವಣ್ಣ ಬೆಳೆಯತೊಡಗಿದ. ವಯಸ್ಸಿಗೆ ಮೀರಿದ ಕುತೂಹಲ ,ಅಪರೂಪದ ಜಾಣ್ಮೆ, ಎಚ್ಚೆತ್ತ ಚೇತನ: ಆಗಲೇ ಎಚ್ಚರಿಕೆಯ ಜೀವನ ಅರಿತಿದ್ದ ಸೂಕ್ಷ್ಮ ಗ್ರಾಹಿ! ಬ್ರಾಹ್ಮಣ ಪದ್ಧತಿಯಂತೆ ಬಸವಣ್ಣನಿಗೆ 8ನೇ ವಯಸ್ಸಿಗೆ ಉಪನಯನ ನೆರವೇರಿಸಲು ಸಿದ್ಧತೆಗೆ ಸನ್ನದ್ಧರಾದರು. ಅಕ್ಕಳಿಗೂ ಈ ಉಪನಯನ ಮಾಡಿಸಿರಿ, ಅಂದಾಗ ಮಾತ್ರ ನಾನು ಉಪನಯನ ಮಾಡಿಕೊಳ್ಳುತ್ತೇನೆ ಎಂದ. ಕರ್ಮಲತೆಯಂತಿದ್ದವನಿಗೆ ಉಪನಯನ, ವೈದಿಕಾಚರಣೆಗಳು ಬೇಡವಾಗಿದ್ದವು. ಹಠ ಹಿಡಿಯುತ್ತಾನೆ.
* ಕೂಡಲಸಂಗಮದೆಡೆಗೆ:- ಬಸವಣ್ಣನ ಮಾತಿಗೆ ಸಹಮತ ಸಿಗದಾದಾಗ ಈ ಸಂಪ್ರದಾಯವಾದಿಗಳ ಸಹವಾಸವೇ ಸಾಕು ಎಂದು ಮನೆಯ ಬಿಟ್ಟು ಹೊರಟು ಕೂಡಲಸಂಗಮಕ್ಕೆ ಬರುತ್ತಾನೆ., ಕೂಡಲಸಂಗಮ ಆ ಕಾಲದಲ್ಲಿ ಒಂದು ದೊಡ್ಡ ವಿದ್ಯಾಕೇಂದ್ರವಾಗಿತ್ತು. ತಮ್ಮ ಮನೆ ಬಿಟ್ಟು, ಬಂಧು ಬಳಗ ಬಿಟ್ಟು ಹೊರಟಾಗ ಒಡಹುಟ್ಟಿದ ಅಕ್ಕ ನಾಗಲಾಂಬಿಕೆ ತಮ್ಮನೊಂದಿಗೆ ಹೊರಟು ನಿಲ್ಲುತ್ತಾಳೆ. ಆತನನ್ನೇ ಹಿಂಬಾಲಿಸುತ್ತಾಳೆ. ನಾಗಲಾಂಬಿಕೆಗೆ ಶಿವಸ್ವಾಮಿ ಅವರೊಂದಿಗೆ ವಿವಾಹವಾಗಿತ್ತು. ಬೆನ್ನ ಹಿಂದಿನ ನೆರಳಿನಂತೆ ಬಸವಣ್ಣನವರಿಗೆ ಬೆಂಗಾವಲಾಗಿ ನಿಂತ ಶಕ್ತಿ ಗಂಗೋತ್ರಿ ಅಕ್ಕನಾಗಲಾಂಬಿಕಾ ತಾಯಿ. ಕೂಡಲಸಂಗಮ ಕ್ಷೇತ್ರದೊಳಗೆ ಅಪರೂಪದ ಗುರುಕುಲದಲ್ಲಿ ಸುಮಾರು 10 ವರ್ಷಗಳ ಕಾಲ ಬಸವಣ್ಣ ಅಲ್ಲಿ ವಿದ್ಯಾರ್ಜನೆ ಪೂರೈಸಿದನು. ಪುಟಕ್ಕಿಟ್ಟ ಚಿನ್ನವಾದನು. ಸಾಧನೆಯ ಅರಿವಿನ ಮೂರ್ತಿಯಾದನು. ಸಂಸ್ಕೃತ , ಹಳೆಗನ್ನಡ ಭಾಷೆಗಳು ಪರವಶವಾದವು. ಸಂಗಮದ ಸಾಧನ ರಂಗದಲ್ಲಿ ಸಂಪ್ರದಾಯ, ವೈಚಾರಿಕತೆ, ಮಾನವತೆ ಹೀಗೆ ಅನೇಕ ಮಹತ್ವದ ವಿಷಯಗಳು ಬಸವಣ್ಣನಿಗೆ ಗೋಚರಿಸತೊಡಗಿದವು. ವಯಸ್ಸು ಪ್ರೌಢಾವಸ್ಥೆಗೆ ಬಂದಿತು.
* ಕಲ್ಯಾಣ ಮಹೋತ್ಸವ:- ತಾಯಿ ಮಾದಲಾಂಬಿಕೆಯ ಅಣ್ಣ ಬಲದೇವನು ಕಳಚೂರಿ ವಂಶದ ಬಿಜ್ಜಳ ಮಹಾರಾಜನ ದಂಡನಾಯಕ ರಾಗಿದ್ದರು. ಬಲದೇವ ಬಸವಣ್ಣನ ಸೋದರ ಮಾವ: ಬಸವಣ್ಣನ ಕೀರ್ತಿ ಅದಾಗಲೆ ಕಲ್ಯಾಣ ತಲುಪಿತ್ತು. ಬಸವಣ್ಣನನ್ನು ಅರಸಿ ಕೂಡಲಸಂಗಮಕ್ಕೆ ಬಂದ ಬಲದೇವ ಮಂತ್ರಿ ಬಸವಣ್ಣನನ್ನು ನೋಡಿ ಸಂತೋಷಗೊಂಡ. ತನ್ನ ಮಗಳನ್ನು ಕೊಟ್ಟು ವಿವಾಹ ಮಾಡಿಸಲು ಮುಂದಾದ. ಅಕ್ಕ ಹಾಗೂ ಬಲದೇವರು ಸೇರಿ ಬಸವಣ್ಣನನ್ನು ಒಪ್ಪಿಸಿ ಗಂಗಾಂಬಿಕೆಯೊಂದಿಗೆ ಕಲ್ಯಾಣ ಮಹೋತ್ಸವವನ್ನು ನೆರವೇರಿಸಿದರು. ಮಂಗಳ ವೇಡೆಯಲ್ಲಿ ಅಕ್ಕನಾಗಲಾಂಬಿಕೆ ಪತಿ ಶಿವದೇವರು, ತಮ್ಮ ಬಸವಣ್ಣನವರು ನೆಲೆ ನಿಂತರು.
ಬಿಜ್ಜಳ ಮಹಾರಾಜನ ಮತ್ತೋರ್ವ ದಂಡನಾಯಕನಾಗಿದ್ದವನು ಸಿದ್ದರಸ. ರಾಜಕಾರ್ಯಗಳಲ್ಲಿ ತೊಡಗಿದ್ದಾಗ ಅಚಾತುರ್ಯದಿಂದ ಸಿದ್ಧರಸ ದಂಪತಿಗಳು ಕಾಲವಾದರು. ಅವರಿಗೆ ಓರ್ವ ಮಗಳಿದ್ದಳು. ಬಾಲ್ಯದಿಂದಲೂ ಅವಳನ್ನು ಸಾಕಿ ಸಲುಹಿದವರು ಬಿಜ್ಜಳ ಮಹಾರಾಜರು. ಅವಳೇ ಶ್ರೀ ನೀಲಾಂಬಿಕೆ. ಬಸವಣ್ಣನ ವಿನಯ ,ವಿದ್ವತ್ತು ಪ್ರೌಢಿಮೆ ಅರಿತು ಮಹಾರಾಜರು ಗಂಗಾಂಬಿಕೆಯೊಂದಿಗೆ ನೀಲಾಂಬಿಕೆಯನ್ನೂ ಕೊಟ್ಟು ವಿವಾಹ ಮಾಡಿದರು. ಬಸವಣ್ಣನವರು ಗಂಗಾಂಬಿಕೆ ಮತ್ತು ನೀಲಾಂಬಿಕೆಯರ ಬಾಳಿನ ಆದರ್ಶ ಪತಿದೇವರಾದರು.
* ಪ್ರಧಾನ ಮಂತ್ರಿ ಪಟ್ಟ;- ಭಗವದವತಾರವೇ ಮೈವೆತ್ತು ಬಂದ ಬಸವಣ್ಣ, ಜನಮಾನಸದ ಏಳಿಗೆಗಾಗಿಯೇ ಅವತರಿಸಿದ ಮನುಕುಲೋದ್ಧಾರಿ! ಅಪಾರ ಅಧ್ಯಯನ, ಆರ್ಥಿಕ ಸೂಕ್ಷ್ಮತೆ, ಆಡಳಿತ ಪ್ರಜ್ಞೆ ,ಸಮಾಜ ಸಂವೇದನೆ ,ಸಾಹಿತ್ಯ ಆಲೋಚನೆ ಹೀಗೆ ಎಲ್ಲ ವ್ಯಕ್ತಿತ್ವಗಳ ಸಂಗಮವಾಗಿದ್ದರು !.ಓರ್ವ ಪರಿಪೂರ್ಣ ಜಂಗಮರಾಗಿದ್ದರು. ಪೂರ್ವವದ ಚಾಲುಕ್ಯರು ಅಡಗಿಸಿಟ್ಟಿದ್ದ 66 ಕೋಟಿ ಹೊನ್ನಿನ ಸ್ಥಳವನ್ನು ಪರಿಶೀಲಿಸಿ ಹೇಳಿದರು .ಬಸವಣ್ಣನವರ ಬೆಳವಣಿಗೆಯನ್ನು ಅರಿತ ಬಿಜ್ಜಳ ಮಹಾರಾಜನು ಬಲದೇವರಸರ ಮಂತ್ರಿ ಪದವಿಯನ್ನು ಬಸವಣ್ಣನವರಿಗೆ ನೀಡಿದರು. ಯಾವ ಪದವಿ ಪ್ರಶಸ್ತಿಗಳಿಗೆ ಮನಸೋಲದ ಬಸವಣ್ಣ ನಾಡವರ ಏಳ್ಗೆಗಾಗಿ ಸೇವೆ ಎಂದು ಒಪ್ಪಿಕೊಂಡರು. ಮಹಾರಾಜನ ಪ್ರಧಾನಮಂತ್ರಿಯಾಗಿ ಆರ್ಥಿಕ, ಸಾಮಾಜಿಕ ಎಲ್ಲ ಆಡಳಿತ ವ್ಯವಸ್ಥೆಯನ್ನು ಸುಧಾರಿಸಿದರು. ಇದರಿಂದ ಸಂತಸಗೊಂಡ ಬಿಜ್ಜಳ ಮಹಾರಾಜ ಇವರನ್ನು ಕಲ್ಯಾಣದ ಮಹಾ ಪ್ರಧಾನಿಯನ್ನಾಗಿ ಮಾಡಿದರು. ಬಸವಣ್ಣನವರಿಂದ ರಾಜ್ಯವು ಸುಭಿಕ್ಷೆಯಿಂದ ಕಂಗೊಳಿಸತೊಡಗಿತು.
*ಮಹಾಮನೆಯ ಮೌಕ್ತಿಕದಚ್ಚು:- ಕಲ್ಯಾಣದಲ್ಲಿ ಬಸವಣ್ಣನವರು ಮಾಡಿದ ಕ್ರಾಂತಿಕಾರಿ ಕೆಲಸಗಳ ಜೊತೆಗೆ ಜನಸಾಮಾನ್ಯರಿಗೂ ಧರ್ಮ ತತ್ವ ಸಿದ್ಧಾಂತಗಳ ಅರಿವು ಆಗಬೇಕು, ಅವರಲ್ಲಿ ವೈಚಾರಿಕ ಪ್ರಜ್ಞೆ ಮೂಡಬೇಕು, ಸಮಾನತೆ, ಕಾಯಕ, ದಾಸೋಹ ತತ್ವಗಳು ಅನುಷ್ಠಾನಕ್ಕೆ ಬರಬೇಕೆಂದು ಬಸವಣ್ಣನವರು ಬಯಸಿದರು. ಅದಕ್ಕಾಗಿ ಅನುಭವ ಮಂಟಪ ,ಮಹಾಮನೆಯನ್ನು ನಿರ್ಮಿಸಿದರು. ಇಷ್ಟ ಲಿಂಗದ ಅನುಸಂಧಾನ , ವಚನ ರಚನೆ, ಮೊದಲಾದ ಕಾರ್ಯಗಳ ಜೊತೆಗೆ ಶತಶತಮಾನಗಳಿಂದ ಅಸ್ಪೃಶ್ಯತೆಯ ಕಳಂಕದಿಂದ ಬದುಕುತ್ತಿದ್ದ ಜನರ ನೋವಿಗೆ ಸ್ಪಂದಿಸಿದರು. ಅವರ ಬಾಳಿನಲ್ಲಿ ಬೆಳಕು ಮೂಡಿಸಿದರು. ಬಸವಣ್ಣನವರ ಕೀರ್ತಿ ವಾರ್ತೆಯನ್ನು ಕೇಳಿ ದೇಶ -ವಿದೇಶದಿಂದ ಜನರು ಕಲ್ಯಾಣಕ್ಕೆ ಆಗಮಿಸಿದರು. ಕಾಶ್ಮೀರದ ಅರಸು ಮಾರಯ್ಯ ತನ್ನ ಅರಸೊತ್ತಿಗೆಯನ್ನು ದಿಕ್ಕರಿಸಿ ಕಲ್ಯಾಣಕ್ಕೆ ಬಂದ. ಮಹಾರಾಷ್ಟ್ರ, ಒರಿಸ್ಸಾ ,ಆಂಧ್ರಪ್ರದೇಶ, ತಮಿಳುನಾಡು, ಕೇರಳ ,ಕಂದಹಾರ ,(ಇಂದಿನ ಅಪಘಾನಿಸ್ತಾನ )ಮೊದಲಾದ ಕಡೆಗಳಿಂದ ಕಾಯಕ ಜೀವಿಗಳು ಪ್ರವೇಶಿಸಿದರು. ಕಲ್ಯಾಣದಲ್ಲಿ ಲಕ್ಷದ ಮೇಲೆ ತೊಂಬತ್ತಾರು ಸಾವಿರ ಜಂಗಮರು ನೆಲೆ ನಿಂತರು. ಅವರಿಗೆಲ್ಲ ಬಸವಣ್ಣನವರ ಮಹಾ ಮನೆಯಲ್ಲಿ ನಿತ್ಯ ಪ್ರಸಾದ ವ್ಯವಸ್ಥೆಯಾಯಿತು. ಇವರೆಲ್ಲರ ಸಹಕಾರದಿಂದ ಬಸವಣ್ಣನವರು ಅನುಭವ ಮಂಟಪ ಎಂಬ ಸಂಸತ್ತನ್ನು ನಿರ್ಮಿಸಿದರು. ಶೂನ್ಯ ಪೀಠವನ್ನು ಸ್ಥಾಪಿಸಿದರು. ಈ ಪೀಠಕ್ಕೆ ಕೆಳವರ್ಗದ ಮಹಾಜ್ಞಾನಿ ಅಲ್ಲಮನನ್ನು ಅಧ್ಯಕ್ಷನನ್ನಾಗಿ ಮಾಡಿ ಸಮಾನತೆಯ ಕ್ರಾಂತಿಗೆ ನಾಂದಿ ಹಾಡಿದರು. 770 ಅಮರ ಗಣಂಗಳು ಸಂಸದರಂತೆ ಕಾರ್ಯ ನಿರ್ವಹಿಸಿದರು. ಆಧ್ಯಾತ್ಮಿಕ ಸಾಮ್ರಾಜ್ಯವೇ ನಿರ್ಮಾಣವಾಯಿತು . ಕಲ್ಯಾಣ ಕೈಲಾಸವಾಯಿತು.
* ಕಾಯಕ ಜೀವಿಗಳ ಸಂಘಟನೆ:- ಆರಂಭ ಮಾಡುವೆ ಗುರುಪೂಜೆಗೆಂದು ಎಂದು ಭಾವಿಸಿದ್ದ ಬಸವಣ್ಣನವರು ಕಲ್ಯಾಣ ರಾಜ್ಯದಲ್ಲಿ ಪ್ರತಿಯೊಬ್ಬರು ಕಾಯಕ ಮಾಡಿ ಪ್ರಸಾದ ಮಾಡಬೇಕೆಂದು ಆದೇಶ ನೀಡಿದರು. ಕಸ ಒಡೆಯುವುದರಿಂದ ಕಲಶದವರೆಗೆ ಪತ್ರಿ ಎತ್ತುವುದರಿಂದ ಹಿಡಿದು ಪಾದರಕ್ಷೆಯ ತಯಾರಿಸುವವರೆಗೆ ,ಎಲ್ಲರೂ ನಿತ್ಯ ಕಾಯಕದಲ್ಲಿ ನಿರತರಾದರು .ಕಲ್ಯಾಣ ಎನ್ನುವುದು ಕೇವಲ ಒಂದು ಪುರವಾಗಿ ,ಪ್ರದೇಶವಾಗಿ ಉಳಿಯಲಿಲ್ಲ. ಅದು ಕಲ್ಯಾಣ ರಾಜ್ಯವಾಯಿತು .19ನೇ ಶತಮಾನದಲ್ಲಿ ಕಾರ್ಲ್ ಮಾರ್ಕ್ಸ್ ಹೇಳಿದ್ದು ಕಾಯಕ ಜೀವಿಗಳ ಸಂಘಟನೆಯನ್ನು. 12ನೇ ಶತಮಾನದಲ್ಲಿ ಸಂಘಟನೆ ಮಾಡಿ ಪ್ರತಿಯೊಬ್ಬ ಶರಣರಿಗೆ ಕಾಯಕವೇ ಕೈಲಾಸ ವಾಯಿತು.
*ದಾಸೋಹವೇ ಪ್ರಾಣ ಜೀವಾಳ!. ಕಾಯಕದಿಂದ ಬಂದದ್ದನ್ನು ಕೂಡಿಡದೆ ಅದನ್ನು ಸಮಾಜಕ್ಕೆ ಬಳಸಬೇಕು ಎನ್ನುವ ದೈವೀ ಭಾವವೇ ದಾಸೋಹ. ಹಸಿದವರಿಗೆ, ನೋಂದವರಿಗೆ ,ನಿರಾಶ್ರಿತರಿಗೆ ಉಳಿಸಿ ಉಣ್ಣುವ ಶರಣಾಗತಿ ಭಾವವೇ ಅದಾಗಿದೆ. ಸೋಹಂ ಎಂದೆನಿಸದೆ ದಾಸೋಹಂ ಎಂದೆನಿಸಯ್ಯ ಎಂದು ಬಸವಣ್ಣನವರು ಕೇಳಿಕೊಂಡರು. ಕಲ್ಯಾಣದ ಮಹಾಮಾರ್ಗದಲ್ಲಿ ಎಲ್ಲರೂ ನೀಡುವವರು ಇದ್ದರು. ಬೇಡುವವರಿಲ್ಲದೆ ಬಡವನಾದೆ ಎಂದರು ಬಸವಣ್ಣನವರು.
*ಅನುಭವ ಮಂಟಪ:- ವಿಶ್ವದ ಎಲ್ಲ ಅನುಭಾವಿಗಳು, ಕಾಯಕ ಜೀವಿಗಳು ಸಂಗಮಗೊಂಡ ಅವಿಮುಕ್ತ ಕ್ಷೇತ್ರವೇ ಅನುಭವ ಮಂಟಪ ! ವಿಶ್ವದ ಪ್ರಥಮ ಸಂಸತ್ತನ್ನು ನಿರ್ಮಿಸಿದ ನಿರ್ಮಾತೃ ಬಸವಣ್ಣನವರು. ಪ್ರತಿಯೊಬ್ಬರು ತಮ್ಮ ತಮ್ಮ ಅನುಭವಗಳನ್ನು ಹಂಚಿಕೊಂಡು ಸಮಾನತೆಯಿಂದ ಬದುಕಬೇಕೆಂಬ ಆಶಯದ ಆಡುಂಬಲ ಈ ಅನುಭವ ಮಂಟಪ .ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ ಎಲ್ಲ ಭಾವಜೀವಿಗಳು ಬಸವಣ್ಣನವರ ಕೀರ್ತಿ ವಾರ್ತೆಯನ್ನು ಕೇಳಿ ಅನುಭವ ಮಂಟಪಕೆ ಬಂದರು. ವೈರಾಗ್ಯ ನಿಧಿ ಅಲ್ಲಮಪ್ರಭುದೇವರು ಇದರ ಅಧ್ಯಕ್ಷರಾದರು. ಶಾಂತರಸರು ವಚನ ಭಂಡಾರಿಯಾದರು. ಎಲ್ಲ ಶರಣರ ಸಮೂಹ ಅನುಭವ ಮಂಟಪದ ಕರ್ಣಧಾರತ್ವ ವಹಿಸಿಕೊಂಡರು.
*ಕರ್ತಾರನ ಕಮ್ಮಟ..! ಭಾರತ ಮೌಢ್ಯದ ಮನೆ, ಕಂದಾಚಾರದ ಕೊಂಪೆ, ಕಲ್ಲು ನಾಗರಕೆ ಹಾಲೆರೆಯುವ ಉಣದ ಲಿಂಗಕ್ಕೆ ಬೋನ ಹಿಡಿಯುವ, ನೀರ ಕಂಡಲ್ಲಿ ಮುಳುಗುವ, ಮರ ಸಿಕ್ಕಲ್ಲಿ ಸುತ್ತುವ, ಮಡಕೆ ದೈವ, ಮೊರದೈವ ಎಂದು ನೂರೆಂಟು ದೈವಗಳನ್ನು ಪೂಜಿಸುವ, ಹೆಜ್ಜೆಗೊಂದು ಶಕುನ ,ಬಿದ್ದರೊಂದು ಶಾಸ್ತ್ರ ಕೇಳುವ ಮೌಡ್ಯಕ್ಕೆ ಒಲಿದು, ಸಹಜತೆಯನ್ನು ಮರೆತವರೇ ಬಹಳ. ಇವರಿಗೆ ನಡೆ-ನುಡಿಯಲ್ಲಿ ಮಡಿಯಾಗಿರುವುದನ್ನು ಕಲಿಸಿದವರು ಬಸವಣ್ಣನವರು.
ಧರ್ಮ ಎಂಬುದು ಒಂದು ಜೀವನ ವಿಧಾನ. ಬಸವಣ್ಣನಲ್ಲಿ ಶ್ರೇಷ್ಠ ಮಾನವತೆ ನಿಜವಾದ ಧರ್ಮ. ಅಂತಹ ಧರ್ಮವನ್ನು ಅಪ್ಪಿದ ಜಾತೀಯತೆಯನ್ನು ದ್ವೇಷಿಸಿದ. ಅದೇ ರೀತಿ ದೈವದ ಅಸ್ತಿತ್ವವನ್ನು ಒಪ್ಪಿದ ,ದೇವಾಲಯ ಸಂಸ್ಕೃತಿಯನ್ನು ತಿರಸ್ಕರಿದ, ಅವನು ದೇವರನ್ನು ಕಂಡಿದ್ದು ಕಲ್ಲಿನಲ್ಲಿ ಅಲ್ಲ, ಮಣ್ಣಿನಲ್ಲಿ ಅಲ್ಲ, ಪ್ರತಿಯೊಬ್ಬ ಮಾನವನ ಹೃದಯದಲ್ಲಿ. ಪಕ್ಕದವರನ್ನು ಪ್ರೀತಿಸಿದರೆ ದೇವ ದೇವನನ್ನೂ ಪೂಜಿಸಿದಂತೆ ಎಂಬ ಸದ್ಭಾವನೆಯನ್ನು ಬಿತ್ತಿದ.ಮನುಷ್ಯ ಮನುಷ್ಯರ ನಡುವೆ ಸೌಹಾರ್ದದ ಸೂತ್ರವೇ ಹರಿದು ಹೋಗಿ ಪ್ರತಿಯೊಬ್ಬ ವ್ಯಕ್ತಿಯೂ ಒಂದೊಂದು ದ್ವೀಪವಾಗಿರುವ ಈ ದಿನಗಳಲ್ಲಿ ಬಸವಣ್ಣನವರು ತುಂಬಾ ಪ್ರಸ್ತುತರಾಗುತ್ತಾರೆ. ಅವರ ವಿಶ್ವಪ್ರೇಮ – ವಿಶ್ವ ಮೈತ್ರಿ ಅನ್ಯಾದೃಶ್ಯವಾದವುಗಳು.
* ಕಲ್ಯಾಣ ಕ್ರಾಂತಿ:- ಕ್ರಾಂತಿಕಾರಿ, ಸಮಾನತೆಯ ಸೇನಾನಿಯಾಗಿದ್ದ ಬಸವಣ್ಣನವರ ವಿಚಾರ ಧಾರೆಗಳು ಸಂಪ್ರದಾಯವಾದಿಗಳನ್ನು ಕೆರಳಿಸಿದವು. ಮಧುವರಸ ಮತ್ತು ಹರಳಯ್ಯನವರು ಬಂಧುಗಳಾಗಲು ಪ್ರೇರಣೆ ನೀಡಿದರು. ಜಾತಿ ಸಂಕರ ಕಿತ್ತೊಗೆಯಲು ಇರುವ ಮಾರ್ಗವೆಂದರೆ ಪರಸ್ಪರ ವಿವಾಹ ಕಾರ್ಯ ನೆರವೇರಬೇಕು ಎನ್ನುವ ಜ್ಯೋತಿ ತತ್ವ ಅವರದಾಗಿತ್ತು. ಬ್ರಾಹ್ಮಣ್ಯದ ಮಧುವರಸನ ಮಗಳು ಲಾವಣ್ಯ ಹರಳಯ್ಯನವರ ಮಗ ಶೀಲವಂತ ಇಬ್ಬರಿಗೂ ಕಲ್ಯಾಣ (ವಿವಾಹ) ನೆರವೇರಿಸಿದರು.
ರಾಜ್ಯವನ್ನು ದುರುಪಯೋಗ ಮಾಡಿ ಧರ್ಮ ಹಾಳು ಮಾಡುತ್ತಿದ್ದಾರೆ ಬಸವಣ್ಣನವರು ಎಂದು ಬಿಜ್ಜಳ ಮಹಾರಾಜನಿಗೆ ದೂರು ನೀಡಿದರು. ಕೊಂಡಿ ಮಂಚಣ್ಣಾದಿಗಳು ಬಹುದೊಡ್ಡ ರಾಜಕೀಯ ಕುತಂತ್ರ ಸಂಚು ರೂಪಿಸಿದರು. ಇದನ್ನು ತಲೆಗೆ ತುಂಬಿಕೊಂಡ ರಾಜ ಬಿಜ್ಜಳ ಹರಳಯ್ಯ ಮಧುವರಸರಿಗೆ ಮರಣದಂಡನೆ ವಿಧಿಸಿದನು. ಎಳೆಹೂಟೆ ಶಿಕ್ಷೆಗೆ ಗುರಿಪಡಿಸಿದನು. ಈ ವಿಷಯ ಕೇಳಿ ಶರಣರು ಗಣಾಚಾರಿಗಳಾದರು. ಕಲ್ಯಾಣ ನಾಡು ಅಲ್ಲೋಲಕಲ್ಲೋಲವಾಯಿತು. ಒಂದೆಡೆ ರಾಜ ಬಿಜ್ಜಳನ ಹತ್ಯೆಯಾಯಿತು. ಶರಣರಿಗೆ ಎಳೆಹೂಟೆ ಶಿಕ್ಷೆಯಾಯಿತು. ಕಲ್ಯಾಣಕ್ರಾಂತಿಯಾಯಿತು.
*ಲಿಂಗೈಕ್ಯ:- ಧಾರ್ಮಿಕ ಮತಾಂಧತೆಯ ಅಟ್ಟಹಾಸ ಅರಿತ ಶರಣರು, ಕಲ್ಯಾಣದಿಂದ ಹತ್ತು ಹಲವು ಕಡೆ ಚೆಲ್ಲುವರಿದರು. ಬಸವಣ್ಣನವರು ಕೂಡಲಸಂಗಮದೆಡೆಗೆ, ಪ್ರಭುದೇವರು ಶ್ರೀಶೈಲಕ್ಕೆ, ಚನ್ನಬಸವಣ್ಣನವರು, ಉಳವಿಗೆ ವಚನತಾಡೋಲೆಗಳನ್ನು ಬೆನ್ನಿಗೆ ಕಟ್ಟಿಕೊಂಡು “ವಚನ ಸಂಗ್ರಹ “ಕಾಯಕದೊಳಗೆ ತೊಡಗಿದರು. ನೂರೊಂದು ಕ್ಷೇತ್ರಗಳಿಗೆ ಶರಣರು ಪಾದ ಬೆಳೆಸಿದರು. ಏಕಾಂಗಿಯಾಗಿದ ಗುರುಬಸವಣ್ಣನವರು ತಮ್ಮ ಲೋಕ ಸೇವಾ ಕಾರ್ಯಗಳನ್ನು ಪೂರೈಸಿ ಶ್ರಾವಣ ಶುದ್ಧ ಪಂಚಮಿ ದಿನ ಕೂಡಲಸಂಗಮದೊಳಗೆ ಲಿಂಗಯ್ಯನೊಂದಿಗೆ ಬೆರೆತು ಮಹಾಲಿಂಗದೊಳಗೆ ಬಯಲಾದರು. ಸಮರಸಗೊಂಡರು.
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ಹೌದು, ನಿಮ್ಮ ಊರಿನಲ್ಲಿ ಜಾತ್ರೆ, ಸಭೆ, ಸಮಾರಂಭಗಳು ನಡೆದರೆ ಅದನ್ನು ಬಯಲುಸೀಮೆಟೈಮ್ಸ್.ಕಾಂ ಮೂಲಕ ನಾಡಿಗೆ ತಿಳಿಸಿ. ಅಷ್ಟೇ ಅಲ್ಲ ನಿಮ್ಮೂರಿನ ರಸ್ತೆ, ಚರಂಡಿ, ಆಸ್ಪತ್ರೆ , ಶಾಲೆ ಯಾವುದೇ ಸಮಸ್ಯೆ ಇದ್ದರೂ ಅಧಿಕಾರಿಗಳ ಕಣ್ಣು ತೆರೆಯುವಂತೆ ಸುದ್ದಿ ಮಾಡಿ. ನೀವು ಜಸ್ಟ್ ನಮ್ಮ ವಾಟ್ಸ್ ಆಪ್ ಸಂಖ್ಯೆಗೆ ಸುದ್ದಿ ಕಳುಹಿಸಿ ಉಳಿದದ್ದನ್ನು ಬಯಲುಸೀಮೆಟೈಮ್ಸ್.ಕಾಂ ಮಾಡಲಿದೆ. ನಮ್ಮ ವಾಟ್ಸ್ ಆಪ್ ಸಂಖ್ಯೆ: +91 96201 39796
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.



