Close Menu
  • ಪ್ರಮುಖ ಸುದ್ದಿ
    • ಅಡಿಕೆ ರೇಟ್‌
    • ಮಾರುಕಟ್ಟೆ ಧಾರಣೆ
  • ಅಪರಾಧ ಸುದ್ದಿ
  • ದಿನದ ವಿಶೇಷ
  • ನಮ್ಮ ಚಿತ್ರದುರ್ಗ
    • ಬಯಲುಸೀಮೆ ನೋಟ
What's Hot

ಮೋದಿ ಬಂದ ಮೇಲೆ ರಕ್ಷಣಾ ವ್ಯವಸ್ಥೆಯಲ್ಲಿ ಏನೆಲ್ಲ ಬದಲಾವಣೆ ಆಗಿದೆ ಗೊತ್ತೇ; ಶಾಸಕ ಎಂ.ಚಂದ್ರಪ್ಪ

ಪ್ರತಿದಿನ ಭಾರತ ಮಾತೆಯ ವೀರ ಪುತ್ರರ ಧೈರ್ಯವನ್ನು ನೆನಪಿಸಿಕೊಳ್ಳಬೇಕು – ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ

ಕಾಂತರಾಜ್ ವರದಿಯನ್ನು ಮೇಲ್ಜಾತಿಯವರು ಮೂಲೆಯಲ್ಲಿ ಕೂರಿಸಿದ್ದಾರೆ – ರಾಮಚಂದ್ರಪ್ಪ

Facebook X (Twitter) Instagram
  • ಪ್ರಮುಖ ಸುದ್ದಿ
  • ನಮ್ಮ ಚಿತ್ರದುರ್ಗ
  • ಬಯಲುಸೀಮೆ ನೋಟ
Facebook X (Twitter) Instagram
Bayaluseeme Times | ಬಯಲುಸೀಮೆ ಟೈಮ್ಸ್
  • ಪ್ರಮುಖ ಸುದ್ದಿ
    • ಅಡಿಕೆ ರೇಟ್‌
    • ಮಾರುಕಟ್ಟೆ ಧಾರಣೆ
  • ಅಪರಾಧ ಸುದ್ದಿ
  • ದಿನದ ವಿಶೇಷ
  • ನಮ್ಮ ಚಿತ್ರದುರ್ಗ
    • ಬಯಲುಸೀಮೆ ನೋಟ
Subscribe
Bayaluseeme Times | ಬಯಲುಸೀಮೆ ಟೈಮ್ಸ್
Home»ಬಯಲುಸೀಮೆ ನೋಟ»ಬುದ್ಧ ಕಟ್ಟ ಬಯಸಿದ ಸಮಾಜ
ಬಯಲುಸೀಮೆ ನೋಟ

ಬುದ್ಧ ಕಟ್ಟ ಬಯಸಿದ ಸಮಾಜ

Times of bayaluseemeBy Times of bayaluseemeMay 9, 2025No Comments13 Mins Read
Share WhatsApp Facebook Twitter Telegram Copy Link
Follow Us
Google News Flipboard
Share
Facebook Twitter LinkedIn Pinterest Email Copy Link
ಬಹುದೊಡ್ಡ ಸಾಂಸ್ಕøತಿಕ ಪರಂಪರೆ ಭಾರತಕ್ಕಿದೆ. ಇಲ್ಲಿನ ಅಧ್ಯಾತ್ಮಕ್ಕೆ ಸಾವಿರಾರು ವರ್ಷಗಳ ಹಿನ್ನೆಲೆಯಿದೆ. ಹಲವು ಋಷಿ ಮುನಿಗಳ ತತ್ವ ವಿಚಾರಗಳು ಜಗತ್ತಿಗೆ ಮಾರ್ಗದರ್ಶನ ಮಾಡುತ್ತಿವೆ.
ಇಲ್ಲಿನ ನದ-ನದಿಗಳು, ಪುಣ್ಯಕ್ಷೇತ್ರಗಳು, ಸಾಧುಸಂತರು, ಬಹುಸಂಖ್ಯೆಯಲ್ಲಿವೆ. ಆದರೂ ಹೃದಯದಾರಿದ್ರ, ಅನಕ್ಷರತೆ, ಅವೈಚಾರಿಕತೆ, ಅಪ್ರಾಮಾಣಿಕತೆ ಹಾಗೂ ಭ್ರμÁ್ಟಚಾರಗಳು ಮುತ್ತಿಗೆ ಹಾಕಿ ಇಡೀ ಸಾಮಾಜಿಕ ಬದುಕನ್ನೆ ಕಂಗೇಡಿಸುತ್ತಿವೆ. ಭಾರತ ದೇಶವೆಂದರೆ ಬಹು ಸಂಸ್ಕøತಿಗಳ ನೆಲೆ. ಬಡವ-ಬಲ್ಲಿದ, ಮೇಲು-ಕೀಳು, ಕೂಲಿಕಾರ-ಮಾಲಿಕ, ಶೋಷಿತ-ಶೋಷಕ, ಅಕ್ಷರಸ್ಥ-ಅನಕ್ಷರಸ್ಥ, ಕ್ರೂರಿ-ಕರುಣಿ, ಪಂಡಿತ-ಪಾಮರ, ಉತ್ಕøಷ್ಟ-ನಿಕೃಷ್ಟ, ಮುಗ್ದ-ಕಪಟಿ, ಆಸ್ತಿಕ-ನಾಸ್ತಿಕ, ಜೋಗಿ-ಯೋಗಿ, ಸ್ವಾರ್ಥಿ-ನಿಸ್ವಾರ್ಥಿ, ಅಹಂಕಾರಿ-ನಿರಹಂಕಾರಿ, ಸ್ತ್ರೀ-ಪುರುಷರು, ಪುರುಷಸ್ತ್ರೀಯರು, ಸ್ತ್ರೀಯಪುರುಷರು, ನಪುಂಸಕರು, ಬಡಗಿ, ಕಮ್ಮಾರ, ಚಮ್ಮಾರ, ಬಳೆಗಾರ, ಜೀತಗಾರ, ಸಿಂಪಿಗ, ಅಗಸ, ಪೂಜಾರಿ, ಬೆಸ್ತ, ವೈದ್ಯ, ಶಿಕ್ಷಕ, ಒಕ್ಕಲಿಗ, ಅಧಿಕಾರಿ, ಆಳು ಮೊದಲಾದ ನೆಲೆಯಲ್ಲಿ ರೂಪಿತಗೊಂಡಿರುವ ಭಾರತ ದೇಶವನ್ನು ಒಂದು ನೆಲೆಯಲ್ಲಿ ಸೆರೆಹಿಡಿಯಲು ಸಾಧ್ಯವಾಗುವುದಿಲ್ಲ. ತಿನ್ನಲು ಸಿಗದೆ ಒಂದು ಅಗಳು ಅನ್ನಕ್ಕಾಗಿ ಅಲೆಯುವವರು ಒಂದೆಡೆ, ತಿಂದು ಹೆಚ್ಚಾಗಿ ಬಿಸಾಡುವ ಜನರು ಮತ್ತೊಂದೆಡೆಯಿರುವುದನ್ನು ಕಾಣುತ್ತೇವೆ. ಕ್ಷಣಕ್ಷಣವೂ ಭಯ, ಆತಂಕ, ತಲ್ಲಣಗಳಿಂದ ಬದುಕುತ್ತಿರುವ ಮಂದಿಯಿರುವಂತೆಯೇ, ನಿರ್ಭಯವಾಗಿ, ನಿರಾತಂಕವಾಗಿ ಬದುಕುವವರೂ ಇದ್ದಾರೆ. ವೈವಿದ್ಯಮಯವಾದ ಮತ್ತು ವೈರುದ್ಧ್ಯವಾದ ಸಾಮಾಜಿಕ ವ್ಯವಸ್ಥೆ ಭಾರತ ದೇಶದ್ದಾಗಿತ್ತು.
   “ಆನಂದಮಯ ಈ ಜಗ ಹೃದಯ……….ಸೂರ್ಯೋದಯ ಚಂದ್ರೋದಯ ದೇವರ ದಯೆ ಕಾಣೋ…” ಎಂಬ ಕುವೆಂಪು ಅವರ ವಾಣಿಯಂತೆ ಆನಂದಾನುಭವಿಗಳೂ ಇದ್ದಾರೆ.  “ಅವರ ಭಾವಕ್ಕೆ ಅವರವರ ಭಕುತಿಗೆ ಅವರವರಿಗೆಲ್ಲ ಗುರು ನೀನೊಬ್ಬನೇ….”ಎಂಬ ಕವಿವಾಣಿಯಂತೆ ‘ಬದುಕು’ ಎಂಬುದು ಅವರವರು ಭಾವಿಸಿದಂತೆ, ಬಾಳಿದಂತೆ, ಬೆಳಗುವುದಿದೆ. ಕಗ್ಗತ್ತಲಾಗಿ ಕಾಡಿ ಕಾಡಿ ನರಳಿಸುವುದಿದೆ. ಒಟ್ಟಾರೆ ಪ್ರತಿ ವ್ಯಕ್ತಿಗೆ ಆತನ ಹಿನ್ನಲೆ, ಒದಗಿದ ಪ್ರೇರಣೆಗಳು ಮತ್ತು ಪ್ರಭಾವಗಳಿಂದ ಆ ವ್ಯಕ್ತಿಯ ಪ್ರಗತಿ ಮತ್ತು ಅಧೋಗತಿ ಅವಲಂಬಿತವಾಗಿರುತ್ತದೆ.
   “ಪರಿಸರದಿಂದ ಮಹಾತ್ಮ ದುರಾತ್ಮನಾಗಬಲ್ಲ, ದುರಾತ್ಮ ಮಹತ್ಮನಾಗಬಲ್ಲ” ಎಂಬ ರಸಋಷಿ, ದಾರ್ಶನಿಕ, ರಾಷ್ಟ್ರಕವಿ ಕುವೆಂಪುರವರ ವಾಣಿಯಂತೆ ಗೌತಮ ಬುದ್ಧ ಭಗವಾನ್ ಅವರ ಜನನ, ಬಾಲ್ಯ ಹಾಗೂ ಅಧ್ಯಯನದ ಪರಿಸರಗಳು ಅವರ ಮೇಲೆ ಅಗಾಧವಾದ ಪ್ರಭಾವವನ್ನು ಬೀರಿವೆ. ಅದನ್ನೆಲ್ಲ ಅನುಭವಿಸಿದ ಬುದ್ಧ ಮಹಾಶಯರು ಸಮಾಜ ಮತ್ತು ವ್ಯಕ್ತಿಗಳನ್ನು ಸೂಕ್ಷ್ಮವಾಗಿ ಅವಲೋಕಿಸಿದವರು. ಕುಟುಂಬ ವ್ಯವಸ್ಥೆಯನ್ನು ಅತಿ ಸೂಕ್ಷ್ಮವಾಗಿ ಗಮನಿಸಿದವರು. ಸಮಾಜದ ನಾಡಿಮಿಡಿತವನ್ನು ಬಲ್ಲವರಾಗಿದ್ದರು. ಅಸಮಾನತೆಯ ಭಾರತವನ್ನು, ಸಾಮಾಜಿಕ ಬದಲಾವಣೆಯನ್ನು ಪಡೆಯದ, ಮನುಷ್ಯ ಮನುಷ್ಯರ ನಡುವೆ ಅಗಾಧವಾದ ಅಂತರ ಕಲ್ಪಿಸುವುದನ್ನು, ಮನುಷ್ಯನ ಅಸ್ತಿತ್ವದ ಬೆಲೆಯನ್ನು ಅರಿಯದವರನ್ನು ನಿಜ ದೈವ ತಮ್ಮೊಳಗೆ ಇರುವುದನ್ನು ಅರಿಯದವರನ್ನು, ಮಾನವೀಯತೆಯನ್ನು ಮರೆತಿರುವವರನ್ನು,  ಕಂದಾಚಾರ, ಮೂಢನಂಬಿಕೆಗಳಲ್ಲಿ ಮುಳುಗಿರುವವರನ್ನು ಕಂಡವನು ಸಿದ್ಧಾರ್ಥ.
ಇಂದಿನ ಸಾಮಾಜಿಕ ವ್ಯವಸ್ಥೆ ಹೇಗಿದೆಯೆಂದರೆ ಜಾತಿಯ ಜಾಡ್ಯ, ಮತದ ಮೌಢ್ಯ ಮತ್ತು ಆಸ್ತಿ-ಅಂತಸ್ತುಗಳ ಆರ್ಭಟದೊಳಗೆ ನೀತಿ-ಪ್ರೀತಿ, ನ್ಯಾಯ-ನಿಷ್ಟೆ, ಶಾಂತಿ-ಕಾಂತಿಗಳು ಅರಳದೆ ನರಳುತ್ತಿವೆ. ಮುಖವಾಡದ ಬದುಕು ಮೆರೆಯುತ್ತಿದೆ. `ಬಾಯಿಯಲ್ಲಿ ಬೆಣ್ಣೆ, ಬಗಲಲ್ಲಿ ದೊಣ್ಣೆ’ ಎಂಬಂತೆ ಛದ್ಮವೇಷದಾರಿಗಳು, ಗಳಿಗೆ ಗಳಿಗೆ ಬಣ್ಣ ಬದಲಿಸುವ ಗೋಸುಂಬೆಗಳಂಥವರು ಇಮ್ಮಡಿಯಾಗಿ ನೂರ್ಮಡಿಯಾಗುತ್ತಿದ್ದಾರೆ. ಅಪನಂಬಿಕೆ, ದ್ವಂದ್ವತೆ, ಅನಿಶ್ಚಿತೆಗಳು ಕಾಡಿ ಕಾಡಿ ಕಂಗೇಡಿಸುತ್ತಿವೆ. ಹಸಿವು, ಬಡತನ, ಅಜ್ಞಾನ, ಅಂಧಾನುಕರಣೆ, ಅನಕ್ಷರತೆ, ಅನ್ಯಾಯ, ಅನೀತಿ, ಅಧರ್ಮ ಕುಣಿದು ಕುಪ್ಪಳಿಸುತ್ತಿವೆ. ತಲ್ಲಣ, ಆತಂಕ ಮತ್ತು ಭಯಗಳು ಮುಪ್ಪರಿಗೊಂಡು ಮನುಷ್ಯನನ್ನು ನುಂಗಿ ನೀರು ಕುಡಿಯುತ್ತಿವೆ. ಶ್ರಮಜೀವಿಗಳು, ಸಾಧುಸಜ್ಜನರು ಮೂಲೆಗುಂಪಾಗುತ್ತಿದ್ದಾರೆ. ಕಪಟಿಗಳು, ಕ್ರೂರಿಗಳು, ಕಳ್ಳರು, ಸುಳ್ಳರು, ನುಡಿವಂಚಕರು, ನಡೆವಂಚಕರು  ಮೆರೆಯುತ್ತಿದ್ದಾರೆ. ಶ್ರೇಷ್ಟತೆಯ ವ್ಯಸನಿಗಳು ವಿಕಾರಿಗಳಾಗಿ ಶಾಂತಿಯನ್ನು ಭಂಗಪಡಿಸುತ್ತಿದ್ದಾರೆ. ಇದೇ ಪರಿಸ್ಥಿತಿ ಸಿದ್ಧಾರ್ಥನ ಜನನದ ಸಂದರ್ಭದಲ್ಲಿತು.
“ಏನ್ ಪ್ರಪಂಚವಿದು ಏನು ದಾಳಿದಾಳಿ!
ಏನಿದು ನಿರ್ಘಾತ! ಮಾನವನ ನಿಲುವೇನು? ಗುರಿಯೇನು?
ಏನಿದು ಅಪಾರ ಶಕ್ತಿ ನಿರ್ಘಾತ”– ಖ್ಯಾತ ಸಂಸ್ಕøತಿ ಚಿಂತಕ, ಸಾಹಿತಿ, ಯೋಗಿ ಡಿ.ವಿ.ಗುಂಡಪ್ಪನವರ ವಾಣಿಯಿದು. ವಿಸ್ಮಯಕಾರಿಯಾದ ಈ ಪ್ರಪಂಚದಲ್ಲಿ ಮಾನವ ಮತ್ತು ಆತನ ಶಕ್ತಿ, ಪ್ರಕೃತಿಯ ಪ್ರಖರ ಶಕ್ತಿಗಳು ವಿಸ್ಮಯವನ್ನುಂಟುಮಾಡುತ್ತವೆ.
ಬೀಜ ಮೊಳಕೆಯೊಡೆದು, ಸಸಿಯಾಗಿ, ಮರವಾಗಿ; ಅದರೊಳಗಿಂದ ಹೂವಾಗಿ-ಕಾಯಿಯಾಗಿ ಹಣ್ಣಾಗಿ ಮತ್ತೆ ಬೀಜವಾಗಿ ಧನ್ಯತೆ ಪಡೆದುಕೊಳ್ಳುವ ಪ್ರಕ್ರಿಯೆ ದಂಗುಬಡಿಸುವಂತೆಯೇ, ಒಂದ್ಹನಿ ವೀರ್ಯಾಣು ಮತ್ತು ಅಂಡಾಣುಗಳ ಸಮ್ಮಿಲನದಿಂದ ಉತ್ಪನ್ನಗೊಂಡ ಮಾಂಸದ ಮುದ್ದೆಯಾಗಿದ್ದು; ಶಿಶುವಾಗಿ, ಮಗುವಾಗಿ ನಗುವುದು-ಅಳುವುದು, ವ್ಯಕ್ತಿಯಾಗಿ ಶಕ್ತಿಯಾಗುವುದು, ಶಕ್ತಿಯೊಳಗಿಂದ ಮತ್ತೊಂದು ಶಕ್ತಿಗೆ ತನ್ನೆಲ್ಲದ್ದನ್ನು ರವಾನಿಸಿ, ಸಾರ್ಥಕತೆಯೊಳಗೆ ಅಡಗಿಕೊಳ್ಳುವುದು ವಿಸ್ಮಯವೇ. ಕಂಡು ಕಾಣದಂತೆ ಮರೆಯಲ್ಲಿ ನಿಂತು ತನ್ನ ಶಕ್ತಿಯ ಪ್ರತಿರೂಪದ ಆಟೋಟಗಳನ್ನು ವೀಕ್ಷಿಸಿ ಆನಂದಿಸುವುದು. ಇಲ್ಲವೇ ಸರಿ ದಿಕ್ಕಿನಲ್ಲಿ ಸಾಗಿ ಸಾರ್ಥಕತೆಯನ್ನು ಪಡೆದುಕೊಳ್ಳಲು ಪ್ರೇರೇಪಿಸುವುದು.
ಒಂದು ನೂರಾಗುವುದು, ನೂರು ಒಂದಾಗುವುದು. ಇದೆಲ್ಲಾ ಶಕ್ತಿಯ ಅಚ್ಚರಿಯಾದ ಆಟ. ವ್ಯಕ್ತಿಯ ಜೀವನವು ಒಂದು ಆಟ. ಜೀವನದ ರಂಗವೇದಿಕೆಯ ವಿವಿಧ ಪರಿಕರಗಳ ಪರಿಚಯವು ಹತ್ತಾರು. ಆ ಜೀವನದ ನೀತಿ ಆಟದ ನಿಯಮಗಳು ತಲತಲೆಮಾರುಗಳ ಸಂಸ್ಕಾರದಿಂದಲೂ ಸಾಗಿಕೊಂಡು ಬರುತ್ತದೆಂಬುದರಲ್ಲಿ ಸಂಶಯವಿಲ್ಲ. ಹುಟ್ಟಿನೊಳಗಿನ ಸಾವು; ಸಾವಿನೊಳಗಿನ ಹುಟ್ಟು ಪ್ರಕೃತಿಯಲ್ಲಿ ನಿರಂತರ ಸಾಗುತ್ತಲೇ ಇರುತ್ತದೆ. ಹುಟ್ಟು ಮತ್ತು ಸಾವಿನ ನಡುವಿನ ಬದುಕು ಭವಕ್ಕೆ ಭಾರವಗಿದೆ. ಭವದ ಭವ್ಯತೆಯನ್ನು ಸಾರುವ ಸಾಧನವಾದಾಗ ಮಾತ್ರ ಆ ಜನ್ಮ ಸಾರ್ಥಕವಾಗುತ್ತದೆ.
ಪ್ರಾಣಿ-ಪಕ್ಷಿ-ಸಸ್ಯ-ಕೀಟಾದಿ ಜಗತ್ತಿನಲ್ಲಿಯೇ ಮಾನವ ಮಾತ್ರ ಅತಿ ವಿಶಿಷ್ಟನಾದವನು. ಅವನು ಮಹದೇವನಾಗಲು ಅರ್ಹತೆಯನ್ನು ಸಂಪಾದಿಸಿಕೊಂಡವನೆಂಬುದನ್ನು ಅರಿತು ಬಾಳಿದರೆ; ಆ ಬಾಳು ಬಂಗಾರವೂ ಹೌದು, ಸಿಂಗಾರವೂ ಹೌದು. ಮನುಕುಲಕ್ಕೆ ಸಿಂಧೂರವೂ ಆಗುವುದು. ಅದಕ್ಕಾಗಿಯೇ ನಮ್ಮ ಸಾಧಕ ಪರಂಪರೆಯು ಸಾರಿದ್ದು; ತನ್ನ ತಾನು ಅರಿತು; ಅರಿವಿನೊಳಗೆ ಬೆರೆತು ಬೆಳೆದಾಗ ಆ ಬಾಳು ಗೋಳಾಗದು. ಹೋಳಾಗದು. ಅಮಾವಾಸ್ಯೆಯ ಶಶಿಯು ಪೂರ್ಣಿಮೆಯಲ್ಲಿ ಹೊಳೆಯುವಂತೆ; ಸಾಧಕನು ಮೆಟ್ಟಿಲ ಮೇಲೆ ಮೆಟ್ಟಿಲನ್ನೇರಿ ಗೋಪುರವನ್ನು ಮುಟ್ಟಬೇಕು. ಆ ಗೋಪುರವೇ ತಾನಾಗ ಬೇಕು. ಇದುವೇ ಜೀವ ಜೀವನದ ವಿಕಾಸ ಕ್ರಿಯೆ.
“ಅಡಿಜಾರಿ ಬೀಳುವುದು, ತಡವಿಕೊಂಡೇಳುವುದು|
ಕಡುಬು ನುಂಗುವುದು, ಕಹಿಮದ್ದು ಕುಡಿಯುವುದು||
ದುಡುಕಿ ಮತಿದಪ್ಪುವುದು, ತಪ್ಪನೊಪ್ಪೆನ್ನುವುದು|
ಬದುಕೆಂಬುದಿದು ತಾನೆ? -ಮಂಕುತಿಮ್ಮ” -ಎಂಬ ಡಿ.ವಿ.ಜಿಯವರ ಕವಿವಾಣಿಯಂತೆ ಬೀಳುತ್ತೇವೆ, ಏಳುತ್ತೇವೆ, ಗೆಲ್ಲುತ್ತೇವೆ, ಸೋಲುತ್ತೇವೆ.
ಅಹಂಕಾರ-ಮಮಕಾರಗಳಲ್ಲಿ ಮುಳುಗುತ್ತೇವೆ. ನಾನೆ ಶ್ರೇಷ್ಠ ಇತರರೆಲ್ಲಾ ಕನಿಷ್ಟರೆಂದು ಬೀಗಿ ಬೀಗಿ ಬೀಳುತ್ತೇವೆ. ಬೀಗುವುದು ಬೀಳಲಿಕ್ಕೆ, ರೇಗುವುದು ರೋಗದ ಗೂಡಾಗಲಿಕ್ಕೆ, ನಾನು ನಾನೆಂಬುದು ನಾಶವಾಗುವುದಕ್ಕೆಂಬ ಅರಿವಿನ ಜ್ಯೋತಿ ಹೃದಯದ ಕಮಲದಲ್ಲಿ ಪ್ರಣತೆಯಂತೆ ಹೊತ್ತಿದಾಗ; ಅಹಂಕಾರದ ಆರ್ಭಟದಿಂದ ಮುಕ್ತರಾಗುತ್ತೇವೆ.
 ‘ಸೇವೆ’ಯ ನಂದಾದೀಪವನ್ನು ಹೊತ್ತಿಸಿಕೊಂಡು ಹಗಲಿರುಳೆನ್ನದೆ ದುಡಿಯುತ್ತೇವೆ. ದುಡಿ-ದುಡಿದು; ದುಡಿಮೆಯನ್ನೆಲ್ಲಾ ಮೂಲ ಶಕ್ತಿಗೆ ಧಾರೆ ಎರೆದು; ಅದರೊಳಗೆ ಆನಂದದ ಸವಿಯನ್ನು ಸವಿದು ಸದಾನಂದರಾಗುತ್ತೇವೆ. ‘ಸೇವೆ’ ಎಂಬುದೊಂದು ವಿಶಿಷ್ಟ ಪದ. ಪ್ರತಿಫಲಾಪೇಕ್ಷೆಯಿಲ್ಲದೆ ನಿರ್ವಹಿಸುವ ಕಾರ್ಯವಾದ ಸೇವೆಯೊಳಗೆ ಒಳ್ಳೆಯದು ಅಡಗಿದೆ. ಆನಂದದ ಚಿಲುಮೆಯಿರುವುದು ಇಲ್ಲಿಯೇ. ‘ಸೇವೆ’ ಎಂಬುದು ಮಾನವನಿಗೆ ದೇವರು ಕೊಟ್ಟ ಅಪೂರ್ವ ವರ. ಆ ವರವನ್ನು ಸರಿಯಾಗಿ ಸದ್ಬಳಕೆ ಮಾಡಿಕೊಂಡವನು ಸಾರ್ಥಕನಾಗುತ್ತಾನೆ. ದುರ್ಬಳಕೆ ಮಾಡಿಕೊಂಡವನು ದುರಾತ್ಮನಾಗುತ್ತಾನೆ.
ನಮ್ಮ ಕಣ್ಮನದ ಮುಂದೆ ಸಾರ್ಥಕ ಸಾಧಕರ ಪರಂಪರೆಯಿದೆ. ಸಾವಿರಾರು ಸಂಕಷ್ಟಗಳು ಬಂದರೂ ಹೆದರದೇ, ಬೆದರದೇ ಬೆಳಕಿನ ಬೆಟ್ಟವಾದವರು. ಸೇವೆಯ ನಂದಾದೀಪವಾದವರು ಇಂದಿನ-ಮುಂದಿನ ಬದುಕಿಗೆ ಮಾರ್ಗದರ್ಶಿಗಳಾಗುತ್ತಾರೆ. ಅಂತಹ ಬೆಳಕಿನ ಬೆಟ್ಟ ಗೌತಮ ಬುದ್ಧ ವiಹಶಯರು. ವರ್ತನೆಯನ್ನು ಪರಿವರ್ತಿಸುವ ಶಿಕ್ಷಣದಿಂದ ಪತಿತ ಜೀವನ ಪಾವನವಾಗುವುದು. ಉತ್ತಮ ನಡವಳಿಕೆಯನ್ನು, ಉತ್ತಮ ನುಡಿಯನ್ನು ಕಲಿಸುವ ಶಿಕ್ಷಣದಿಂದ ಮಾತ್ರ ವ್ಯಷ್ಟಿ ಮತ್ತು ಸಮಷ್ಟಿಯನ್ನು ಸಂವರ್ಧನೆಗೊಳಿಸಲು ಸಾಧ್ಯವಾಗುತ್ತದೆ. ಶಿಕ್ಷಣದಿಂದ ಮಾತ್ರ ಸಾಮಾಜಿಕ ಅಸಮಾನತೆಗಳ ಕೊಳೆಯನ್ನು ತೊಳೆಯಲು ಸಾಧ್ಯ. ಶಿಕ್ಷಣದಿಂದ ಮಾತ್ರ ಆರ್ಥಿಕ ಅಸಮಾನತೆಯನ್ನು ಹೋಗಲಾಡಿಸಲು ಸಾಧ್ಯ. ಶಿಕ್ಷಣದಿಂದ ಮಾತ್ರ ನಿರಂಕುಶ ಪ್ರಭುತ್ವವನ್ನು ಅಂತ್ಯಗೊಳಿಸಿ ಪ್ರಜಾಪ್ರಭುತ್ವವನ್ನು ಅಸ್ತಿತ್ವಕ್ಕೆ ತರಲು ಸಾಧ್ಯ. ಶಿಕ್ಷಣದಿಂದ ಮಾತ್ರ ಧಾರ್ಮಿಕ ಮತ್ತು ಆಧ್ಯಾತ್ಮಿಕ ಕ್ಷೇತ್ರಗಳಿಂದಾಗುವ ಆತ್ಮಾನಂದವನ್ನು ಧಾರೆ ಎರೆಯಲು ಸಾಧ್ಯ.
ಕ್ಷಣ ಕ್ಷಣವೂ ಹಿಂಸೆಯಿಂದ ನರಳುವವರನ್ನು ಅರಳಿಸುವ ಶಕ್ತಿ ಇರುವುದು ಶಿಕ್ಷಣಕ್ಕೆ ಮಾತ್ರ. ಶತ ಶತಮಾನಗಳಿಂದ ಬಹುಸಂಖ್ಯಾತ ಜನರನ್ನು ಅಜ್ಞಾನ ಕೂಪಕ್ಕೆ ತಳ್ಳಿರುವ ವ್ಯವಸ್ಥೆಗೆ ಸರಿಯಾದ ಪಾಠ ಕಲಿಸುವ ಶಕ್ತಿ ಶಿಕ್ಷಣಕ್ಕಿದೆ. ಹಾಗಾಗಿ ಶಿಕ್ಷಣ ಸರ್ವರ ಸ್ವತ್ತಾಗಬೇಕೆಂಬುದು ಸಮ ಸÀಮಾಜ ಚಿಂತಕರಾದ ಗೌತಮ ಬುದ್ಧರ ಆಶಯವಾಗಿತ್ತು. ಸಮಾಜದ ಸಾಮರಸ್ಯಕ್ಕೆ ಅರಿವೆ ಮೂಲವೆಂದು ಪ್ರತಿಪಾದಿಸಿದವರು. ಈ ದೇಶದ ಮೊಟ್ಟಮೊದಲ ಪ್ರಜಾಪ್ರೇಮಿಯೆಂದರೆ ಗೌತಮ ಬುದ್ಧ. ಆತನು ಬೋಧಿಸಿದ ಚಿಂತನೆಗಳು ಸಾರ್ವತ್ರಿಕವಾದವುಗಳು. ಬುದ್ಧ ಭಾರತದಲ್ಲಿ ಅಸಮಾನತೆ, ಅವಮಾನ, ಅಗೌರವಗಳಿರುವುದಿಲ್ಲ. ಸಾಮಾಜಿಕ, ಆರ್ಥಿಕ, ಧಾರ್ಮಿಕ ಮತ್ತು ಆಧ್ಯಾತ್ಮಿಕ ಅಸಮಾನತೆಗಳಿರವುದಿಲ್ಲ. ಶಿಕ್ಷಣ ಪಡೆಯುವ ಮೂಲಕ ಬುದ್ಧ ಭಾರತ ಕಟ್ಟುವ ಕಟ್ಟಾಳಾಗುತ್ತಾರೆಂಬುದರಲ್ಲಿ ಸಂಶಯವಿಲ್ಲ.
ಅದ್ಭುತಗಳಲ್ಲಿ ಅದ್ಭುತವಾದ ಈ ಮಾನವ, ಮಾನವನಾಗಿ ಬದುಕುವುದೊಂದನ್ನು ಬಿಟ್ಟು ಬೇರೆಲ್ಲಾ ರೂಢಿಸಿಕೊಂಡಿದ್ದಾನೆ. ಹಾಗೂ ಇಡೀ ನೈಸರ್ಗಿಕ ಕ್ರಿಯೆಯ ಮೇಲೆ ಬಲವಾದ ಪ್ರಭುತ್ವವನ್ನು ಸ್ಥಾಪಿಸಿ ಹಠಸಾಧಿತ ಶಕ್ತಿ ಪಡೆದಿದ್ದಾನೆ. ಮಾನವ ಸ್ವಭಾವವನ್ನು ಪ್ರೇಮ ಮತ್ತು ಪಾವಿತ್ರ್ಯ ಭಾವಗಳಲ್ಲಿ ಯೋಗ್ಯ ವಿವೇಕ, ಮುನ್ನೆಚ್ಚರಿಕ, ಹವಣು ಹದಗಳಿಂದ ವರಿಸಿ ಸಹಾನುಭೂತಿಯಿಂದ ಸಮತತ್ವವನ್ನಾಧರಿಸಿ ಬದುಕಬೇಕೆಂದು ಸಫೆÇೀಕ್ಲಿಸ್ ಸ್ಪಷ್ಟಪಡಿಸುತ್ತಾನೆ. ಪ್ರಾಯರ್ಶ ಸಾಮಾಜಿಕ ಬದುಕಿನಲ್ಲಿ ಮನುಷ್ಯನ ಹೊಂದಾಣಿಕೆಯ ಸೋಲು, ಪ್ರಗತಿ ಮತ್ತು ಅಧೋಗತಿಗೂ ಕಾರಣವಾಗುತ್ತದೆ.
ಪ್ರಾಚೀನ ಭಾರತೀಯ ಸಮಾಜ ಆಧುನಿಕತೆಯ ಕಣ್ಣಿನೊಳಗೆ ಪ್ರತಿಫಲಿತವಾಗುವ ರೀತಿ ಅತ್ಯಂತ ಹೇಯ ಹಾಗೂ ಅಮಾನುಷ ಗುಣಗಳ ಮೊತ್ತವಲ್ಲದೆ ಬೇರೆನೂ ಆಗಿರಲಾರದು. ಅದೇ ರೀತಿ ಆಧುನಿಕ ಭಾರತೀಯ ಸಮಾಜದಲ್ಲಿ ಹೇಯ ಮತು ್ತಅಮಾನುಷ ರೀತಿ-ನೀತಿಗಳು ಇಲ್ಲವೇ ಇಲ್ಲವೆಂದು ಹೇಳಲಾಗುವುದಿಲ್ಲ. ಈ ಗುಣಗಳು ಪ್ರಸ್ತುತ ಪ್ರಪಂಚದಲ್ಲಿ ಆಧುನಿಕ ರೂಪತೊಟ್ಟು ನಡೆದಾಡುವ ಬಗೆಯಂತೂ ಅತ್ಯಂತ ಭಯಾನಕವಾದುದೇ ಆಗಿದೆ. ಜಗತ್ತಿನ ಅತ್ಯಂತ ಶ್ರೀಮಂತ ರಾಷ್ಟ್ರಗಳೆಂದು ಹಣೆಪಟ್ಟಿ ಹೊತ್ತ ಪ್ರಭಾವಿ ರಾಷ್ಟ್ರಗಳು ತಮ್ಮ ವಸಾಹತು ಪ್ರಭುತ್ವವನ್ನು ಜಾಗತೀಕರಣದ ವಿವಿಧ ವಿಕಾರ ರೂಪಗಳಲ್ಲಿ ಅಭಿವೃದ್ಧಿಶೀಲ ರಾಷ್ಟ್ರಗಳ ಮೇಲೆ ಚಲಾಯಿಸಲು ಹವಣಿಸುತ್ತಿವೆ.
“ಸದ್ಗುಣಗಳ ಸಾಧಕ ಮತ್ತು ಬುದ್ಧಿ ಚಾತುರ್ಯದವ, ನ್ಯಾಯ ನಿಷ್ಠಾವಂತ, ಸತ್ಯವನ್ನೇ ನುಡಿಯುವವನು, ತನ್ನ ಕರ್ತವ್ಯವನ್ನು ಮಾತ್ರವೇ ನಿಸ್ಪøಹತೆಯಿಂದ ನಿರ್ವಹಿಸುವವನು, ಅವನನ್ನು ಇಡೀ ಪ್ರಪಂಚವೇ ಪ್ರೀತ್ಯಾಧಾರಗಳಿಂದ ಕಾಣುವುದು.’’ “ತೊಂದರೆ ಕೊಡಬೇಡ ದುಷ್ಟ ಸಂಕಲ್ಪಭಾವಗಳ ಆನಂದ ಬೇಡ.’’ಎಂಬ ಬುದ್ಧರ ನುಡಿಗಳನ್ನು ಅರಿತು ಆಚರಿಸಬೇಕು. “ಭರವಸೆಯಿಂದ ಶಕ್ತಿಯ ಬಲದಿಂದ, ಧ್ಯಾನದಿಂದ, ಸತ್ಯದ ಸಂಶೋಧನೆಗಳಿಂದ, ಉತ್ಕøಷ್ಟ ಜ್ಞಾನ ಬಲದಿಂದ ಮತ್ತು ಸನ್ನಡತೆಗಳಿಂದ, ಮರುನೆನಪುಗಳಿಂದ, ಈ ಘೋರ ಸಂಕಟಗಳನ್ನು ಹಿಂದೆ ಬಿಟ್ಟುಬಿಡಿರಿ.’’ ಎಂಬ ಬುದ್ಧರ ನುಡಿಗಳು ಸ್ವಚ್ಛಂದ ಬದುಕಿನ ಸಮಾಜಕ್ಕೆ ದಾರಿದೀಪವಾಗಿವೆ. (ಬುದ್ಧ ಮತ್ತು ಆತನ ಧಮ್ಮ ; ಪುಟ ಸಂಖ್ಯೆ : 413)
ಮಾನವೀಯ ಮೌಲ್ಯಗಳು ದಿನೇ ದಿನೇ ಕುಸಿದು ತಳ ಕಾಣುತ್ತಿರುವ ಸಂದರ್ಭದಲ್ಲಿ, ಮಾನವ ಸಮಾಜ ಉಸಿರುಗಟ್ಟಿ ಜೀವಿಸಲೇಬೇಕಾದ ಪರಿಸ್ಥಿತಿ ಉಂಟಾಗಿದೆ. ಮನುಷ್ಯ ಸಮಾಜ ತನ್ನ ಉದಾತ್ಮವಾದ ಮೌಲ್ಯಗಳನ್ನು ಯಂತ್ರ ನಾಗರಿಕತೆಯ ಅಮಾನವೀಯ ಮೌಲ್ಯಗಳ ನಡುವೆ ವಿಭಜನೆ ಹೊಂದಿದೆ. ಮನುಷ್ಯ ತಾನೇ ಸೃಷ್ಟಿಸಿದ ವಿಷದ ಗಾಳಿಗೆ ಆತ ತತ್ತರಿಸಿ ಹೋಗಿದ್ದಾನೆ. ನೈಸರ್ಗಿಕ ಸಂಪನ್ಮೂಲಗಳನ್ನು ದೋಚಿ, ನಿಸರ್ಗದ ಮೇಲೆ ಅಧಿಪತ್ಯಕ್ಕೆ ವಿಜ್ಞಾನ ಮತ್ತು ತಂತ್ರಜ್ಞಾನವನ್ನೂ ಬಳಸಿಕೊಳ್ಳುತ್ತಿದ್ದಾನೆ. ಜಾತಿವಾದಿ, ಜನಾಂಗವಾದಿಯಾಗಿ ದ್ವೇಷವನ್ನು ಬಿತ್ತಿ ಬೆಳೆಯುತ್ತಿದ್ದಾನೆ. ಕೋಮುವಾದಿಯಾಗಿರುವ ವ್ಯಕ್ತಿ ಧರ್ಮ ಧರ್ಮಗಳ ನಡುವೆ ಮತ-ಮತಗಳ ಮಧ್ಯೆ ಯುದ್ಧಗಳು ಸಂಭವಿಸುವಲ್ಲಿ ಪ್ರೇರಕನಾಗಿದ್ದಾನೆ. ಭಯೋತ್ಪಾದಕನಾಗಿ ಅಬ್ಬರಿಸುತ್ತಿದ್ದಾನೆ. ಮದ್ದುಗುಂಡುಗಳ ಕಾರ್ಖಾನೆ ಸ್ಥಾಪಿಸಿದ್ದಾನೆ.  ಇಂತಹ ವಿಕೃತಿಗಳನ್ನು ನಾಶಗೊಳಿಸಬೇಕಾಗಿದೆ.

    ಬುದ್ಧರ ವಾಣಿಗಳು ಹೀಗಿವೆ:

     “ಸದ್ಗುಣಗಳ ನಿಯಮ ಪಾಲನೆ ನಿಮ್ಮದಾಗಲಿ. ಪಾಪ ಕೃತ್ಯಗಳನ್ನೆಸಗದಿರಿ; ಪಾಪದಿಂದ ಆನಂದ ಪಡೆಯದಿರಿ ಈ ಪ್ರಪಂಚದಲ್ಲಿ ಸದ್ಗುಣಗಳೇ ಆನಂದದಾಯಕಗಳು.’’
     “ಹಸಿವೆಂಬುದೊಂದು ಅತಿ ಅಪಾಯಕರ ರೋಗ (ಸಂಯೋಜನೆ) ಅದರಿಂದ ಅತಿ ಘೋರ ಮಾನಸಿಕ ದುಃಖ. ಇದನ್ನು ಸತ್ಯದ ಮತ್ತು ವಾಸ್ತವಿಕತೆಯ ಬೆಳಕಿನಲ್ಲಿ ಅರಿತುಕೊಂಡರೆ, ಆ ನಿರ್ವಾಣವು ಅತ್ಯುನ್ನತ ಸಂತೋಷವನ್ನುಂಟು ಮಾಡುವುದು.’’
     “ಯಾರೊಬ್ಬರೂ, ಯಾವುದಕ್ಕೂ ಅಂಟಿಕೊಳ್ಳಬಾರದು; ಏಕೆಂದರೆ ಅದು ದೊರಕದಾದಾಗ ಸಂಕಟ ಕೊಡುವುದು. ಯಾರು ಯಾವುದಕ್ಕೂ ಅಂಟಿಕೊಳ್ಳದವರು, ಮತ್ತು ಯಾವುದನ್ನೂ ತುಚ್ಛಭಾವದಿಂದ ಕಾಣದವರು, ಯಾವ ಬಗೆಯ ಶೃಂಖಲೆಗಳಿಗೂ ಸಿಕ್ಕರು.’’
    “ಹಂಬಲ ಮತ್ತು ದುರಾಶೆಗಳಿಗೆಂದೂ ನೀವು ಆಶ್ರಯದಾತರಾಗದಿರಿ’’
     “ಸುಖ, ಸಂತೋಷಗಳು ದುಃಖವನ್ನು ತಂದೇ ತರುವುವು, ಈ ಸಂತೋಷಗಳೇ ಭಯದ ಮೂಲ. ಇಂತಹ ಸುಖ. ಸಂತೋಷಗಳಿಂದ ವಿಮುಕ್ತತೆ ಹೊಂದಿದವನು ದುಃಖ (ವ್ಯಸನ)ವನ್ನಾಗಲೀ ಅಥವಾ ಭಯವನ್ನಾಗಲೀ ಪಡನು’’ (ಬುದ್ಧ ಮತ್ತು ಆತನ ಧಮ್ಮ-ಪು.ಸಂ.: 411,  412) ಎಂದು ಮಾರ್ಗದರ್ಶನ ಮಾಡುತ್ತಾರೆ ಬುದ್ಧ ಗುರು.
    ಕಲ್ಮಶಗಳಾದ ರಾಗ, ಮೋಹ ಮತ್ತು ದ್ವೇಷಗಳನ್ನು ಕಳೆದುಕೊಂಡಾಗ ಮನಸ್ಸು ಪರಿಶುದ್ಧವಾಗುವುದು. ಆಗ ತನ್ನನ್ನು ತಾನು ಅರಿಯಬೇಕು. ಲೋಪ ದೋಷಗಳನ್ನು ತಿಳಿಯಬೇಕು ಆಗ ಸತ್ಯವು ಗೋಚರಿಸುವುದು. ಹತ್ತು ಸತ್ಯದ ಮಹಾಮಾರ್ಗಗಳಾದ ದಾನ, ಶೀಲ, ತ್ಯಾಗ, ಪ್ರಜ್ಞೆ, ಸತ್ಯ, ಪ್ರಯತ್ನಶೀಲತೆ, ಸಹನೆ, ದೃಢಸಂಕಲ್ಪ, ಮೈತ್ರಿ ಮತ್ತು ಉಪೇಕ್ಷಾ ಇವುಗಳನ್ನು ಅನುಸರಿಸಬೇಕು. ಸಿ.ಎಚ್. ರಾಜಶೇಖರ್ ಅವರು ಗುರುತಿಸುವಂತೆ “ಬುದ್ಧರು ಜಗತ್ತಿನಲ್ಲಿ ಇತರೆ ಎಲ್ಲಾ ಮತ ಸಂಸ್ಥಾಪಕರಿಗಿಂತ ಭಿನ್ನವೂ ಅನನ್ಯ ವಿಚಾರವಾದಿಯಾಗಿ ನಿಲ್ಲುವುದು ಈ ನಿಟ್ಟಿನಲ್ಲಿಯೇ. ಈ ಕಾರಣಕ್ಕಾಗಿಯೇ ಧಾರ್ಮಿಕ ಇತಿಹಾಸದಲ್ಲಿ ಅವರಿಗೆ ಪ್ರತ್ಯೇಕವೇ ಆದ ಸ್ಥಾನಮಾನವಿದೆ.
ಧರ್ಮದ ಹಂಗನ್ನು ತೊರೆ ಎನ್ನುವುದಾಗಲೀ ಮತ್ತು ತೊರೆದು ನಿಲ್ಲುವುದಾಗಲೀ ಸಾಮಾನ್ಯ ಸಂಗತಿ ಅಲ್ಲ. ಬುದ್ಧರ ದೃಷ್ಟಿಯಲ್ಲಿ ಧರ್ಮವೆಂದರೆ, ಮತ ಅಥವಾ ಪಂಥವಲ್ಲ. ಒಂದು ನಿರ್ದಿಷ್ಟ ಜಾತಿ, ಜನಾಂಗ, ವರ್ಗ ಮತ್ತು ವರ್ಣದ ಆರಾಧನೆಯಲ್ಲ.” ಋತುಮಾನದ ಬದಲಾವಣೆ ಮತ್ತು ಅದರಲ್ಲಿ ಇರುವ ಸತ್ಯಗಳಾಗಿದೆ. ಈ ಕಾರಣಕ್ಕಾಗಿಯೇ ಬುದ್ಧರು ಕಣ್ಣಿಗೆ ಕಾಣುವ ಸತ್ಯದ ಹಿಂದಿನ ಸತ್ಯವನ್ನು ಹುಡುಕುತ್ತಾ ಸಾಗುತ್ತಾರೆ. ಆದುದರಿಂದ ಇಲ್ಲಿ ಹಂಗೆಂಬುದು “ಸ್ವಾರ್ಥದ” ಪ್ರತಿರೂಪವಾಗಿದೆ. ಹಾಗೆ ಹೇಳುವವನು ಸ್ವಾರ್ಥವನ್ನು ಗೆದ್ದವನು ಮತ್ತು ಪರಿಪೂರ್ಣತೆಯ ಗೆರೆಯನ್ನು ದಾಟಿದವನೇ ಆಗಿರಬೇಕು. ಈ ಬಗ್ಗೆ ಜಿಜ್ಞಾಸೆಗೊಂಡ ಪೂಜ್ಯ ರಾಧನೆಂಬುವ ಪಂಡಿತನು ಬುದ್ಧರನ್ನು ಸಂಧಿಸಿ ಹೀಗೆ ಪ್ರಶ್ನಿಸುತ್ತಾನೆ:   “ಗುರುದೇವ, ಧರ್ಮದ ಹಂಗನ್ನು ತೊರೆದಾಗ ಅಥವಾ ಎಲ್ಲೆಯನ್ನು ಮೀರಿ ನಿಂತಾಗ ನಮ್ಮಲ್ಲಿನ ಯಾವ ಯಾವ ಉಪಾದಿಗಳು (ತೊಡಕಾದ ಅಂಶಗಳು) ಅರಿವೆಂಬ ಬೆಂಕಿಯ ಜ್ವಾಲೆಯಲ್ಲಿ ದಹಿಸಿ ಭಸ್ಮವಾಗುತ್ತವೆ?” ಎನ್ನಲು ಬುದ್ಧರು ; “ಎಲೈ ರಾಧನೇ, ಹುಟ್ಟು, ರೋಗ, ಮುಪ್ಪು ಮತ್ತು ಸಾವು ಉರಿಯುತ್ತದೆ. ದುಃಖ, ಅಳಲು, ಗೋಳು, ವ್ಯಸನ ಮತ್ತು ನಿರಾಸೆಗಳು ಉರಿಯುತ್ತವೆ. ಕಣ್ಣು, ದೃಶ್ಯ, ಕಿವಿ, ಮೂಗು, ವಾಸನೆಗಳು ಉರಿಯುತ್ತವೆ. ನಾಲಿಗೆ, ರುಚಿ ರಸಗಳು ಮತ್ತು ವಿಚಾರಗಳು ಉರಿಯುತ್ತವೆ. ದೇಹವು ಹತ್ತಿ ಉರಿಯುತ್ತದೆ. ಏನೇನು ಹಿತಕರ, ಅಹಿತಕರ, ಆಸಕ್ತಿ, ಅನಾಸಕ್ತಿ, ವೇದನೆ, ಸಂವೇದನೆ ಇದೆಯೋ ಅವುಗಳು ಮನಸ್ಸು ಗ್ರಹಿಸಿದ ಪ್ರಭಾವದಿಂದ ಹುಟ್ಟಿಕೊಂಡಂತವುಗಳು. ಅವುಗಳೂ ಕೂಡ ಹೊತ್ತಿ ಹುರಿಯುತ್ತವೆ. ಹೀಗೆ ಇವುಗಳು ರಾಗಜ್ವಾಲೆಯಲ್ಲಿ, ದ್ವೇಷಜ್ವಾಲೆಯಲ್ಲಿ ಮತ್ತು ಮೋಹಾಗ್ನಿಯಲ್ಲಿ ಉರಿದು ಭಸ್ಮವಾಗುತ್ತದೆ. ಕೊನೆಗೆ ಅರಿವು, ವಿಮೋಚನೆ ಮತ್ತು ಪ್ರಜ್ಞೆ ಮಾತ್ರ ಅವನ ಸಂಗಾತಿಯಾಗಿ ಉಳಿಯುತ್ತದೆ” ಎಂದು ಉತ್ತರಿಸುತ್ತಾರೆ. ಈ ಕಾರಣಕ್ಕಾಗಿಯೇ ಬುದ್ಧರ ತತ್ವ ಸಿದ್ಧಾಂತ ಮತ್ತು ಧರ್ಮವು ಜಗತ್ತಿನಾದ್ಯಂತ ಮಹತ್ವದ ಚರ್ಚೆಯ ಮೂಲವಾಗಿದೆ. ಅದೇ ಸಂದರ್ಭದಲ್ಲಿ ನಿಸ್ವಾರ್ಥದಿಂದ ಕೂಡಿದ ಧರ್ಮವು ಶೀಲ, ಪ್ರಜ್ಞೆ ಮತ್ತು ನಮ್ಮ ಸ್ವಯಂ ಸಾಧನೆಯ ನೆಲೆಗಟ್ಟಿನ ಮೇಲೆ ನಿಲ್ಲುತ್ತದೆ.
ಬುದ್ಧರು ನಮಗೇಕೆ ಅನಿವಾರ್ಯ, ಅಂತಿಮ ಮತ್ತು ಪ್ರಸ್ತುತರಾಗುತ್ತಾರೆ ಎಂದರೆ ಈ ಸಲುವಾಗಿಯೆ. ಅವರ ಹಿರಿಮೆ, ಘನತೆಯು ಲೋಕಕ್ಕೆ ಹೇಗೆ ನಿಸ್ಸಂದೇಹವಾಗಿಯು ಬೆಳಕು ಎಂಬ ಜಾಡನ್ನು ಕುತೂಹಲದಿಂದ ಹಿಂಬಾಲಿಸಿಕೊಂಡು ನಡೆದದ್ದೇ ಆದರೆ, ನಮ್ಮನ್ನು ನಾವು ಮೊದಲು ಸಮಗ್ರವಾಗಿ ಅರ್ಥ ಮಾಡಿಕೊಂಡು ಬಿಡುತ್ತೇವೆ. ಆ ಮೂಲಕ ನಮ್ಮ ಬದುಕಿಗೆ ಒಂದು ಹೊಸ ದೃಷ್ಟಿಕೋನ, ರೂಪ, ಆಕಾರ ಮತ್ತು ಅರ್ಥವಂತಿಕೆ ಮೈಗೂಡಿಬಿಡುತ್ತದೆ. ಇದು ಬುದ್ಧರನ್ನು ನಾವು ಓದುವುದರಿಂದ ಆಗುವ ಮಹತ್ವದ ಲಾಭವಾಗಿದೆ. ಅದುವರೆವಿಗೂ ನಮ್ಮನ್ನು ಕಾಡುತ್ತಿದ್ದಂತಹ ಅಜ್ಞಾನ ಮತ್ತು ದ್ವಂದ್ವದ ಸಂಕೋಲೆ ತನ್ನಿಂದ ತಾನೇ ಕಳಚಿ ನಾವು ಮುಕ್ತರು, ಸ್ವತಂತ್ರರು ಮತ್ತು ಹೊಚ್ಚ ಹೊಸ ಮನುಷ್ಯರಾಗಿ ಬಿಡುತ್ತೇವೆ. (ಬುದ್ಧ ನೀ ಅಲ್ಲೇ ನಿಲ್ಲೆಂದ ಅಂಗುಲಿಮಾಲ-ಸಿ.ಎಚ್.ರಾಜಶೇಖರ್-ಸೌಮ್ಯಶ್ರೀ ಪುಸ್ತಕ ಪ್ರಕಾಶನ, ಬೆಂಗಳೂರು-2011-ಪು.ಸಂ- ಘಿಗಿ)
  ಬಹುದೊಡ್ಡ ಪರಂಪರೆಯಿರುವ ಭಾರತಕ್ಕೆ  ಸಾವಿರಾರು ವರ್ಷಗಳ ಆಧ್ಯಾತ್ಮಿಕ ಹಿನ್ನೆಲೆಯೂ ಇದೆ. ಅನೇಕ ಋಷಿಮುನಿಗಳು ತತ್ತ್ವವೇತ್ತರು ಅಮೋಘವಾದ ವಿಚಾರಗಳನ್ನು ಪ್ರತಿಪಾದಿಸಿರುವುದು ಇಲ್ಲಿಯೇ. ಪರಮಾತ್ಮನು ಅವತಾರಗಳ ಮೇಲೆ ಅವತಾರಗಳನ್ನು ಎತ್ತಿರುವುದೂ ಯುಗಯುಗದಲ್ಲೂ ಸಂಭವಿಸಿರುವುದು ಇಲ್ಲಿಯೇ.  ಪವಿತ್ರವಾದ ನದಿಗಳೂ, ಪುಣ್ಯಕ್ಷೇತ್ರಗಳೂ, ಸಾಧುಸಂತರೂ ಬಹುಸಂಖ್ಯೆಯಲ್ಲಿ ಬರುವುದು ಇಲ್ಲಿಂದಲೇ ಎಂದು ನಾವು ಹೆಮ್ಮೆಯಿಂದ ಹೇಳಿಕೊಳ್ಳುತ್ತಾ ಬಂದಿದ್ದೇವೆ. ಆದರೆ ಇಂಥ ಹಿನ್ನಲೆ ಇರುವ ಈ ದೇಶದಲ್ಲಿನ ಜನರಜೀವನವು ತತ್ವಗಳಿಗೂ ತನಗೂ ಏನೇನೂ ಸಂಬಂಧವಿಲ್ಲದಂತೆ ಬದುಕುತ್ತಿದೆಯಲ್ಲಾ ಯಾಕೆ? ಪರಂಪರಾಗತವಾದ ಹಾಗೂ ಘೋಷಿತವಾದ ವಿಚಾರ ಮತ್ತು ಆದರ್ಶಗಳಿಗೂ ಪ್ರಸ್ತುತ ಜೀವನಕ್ರಮಕ್ಕೂ ಇರುವ ಈ ಕಂದರವು ದಿಗಿಲುಗೊಳಿಸುವಂಥದ್ದಾಗಿದೆ. ಹೀಗಾಗಿ ಹೃದಯದಾರಿದ್ರ, ಅವೈಚಾರಿಕತೆ, ಅನಕ್ಷರತೆ, ಅಪ್ರಾಮಾಣಿಕತೆ ಹಾಗೂ ಭ್ರμÁ್ಟಚಾರಗಳು ನಮ್ಮ ಬದುಕನ್ನು ಗುತ್ತಿಗೆ ಹಿಡಿದುಕೊಂಡಂತೆ ಆರ್ಭಟಿಸುತ್ತವೆ.  ಸಾಂಸ್ಕೃತಿಕ ವೈರುಧ್ಯಗಳ ಬದುಕಿನಲ್ಲಿ ಮಾನವೀಯತೆಯನ್ನು ಹುಡುಕುವುದು ಬಹು ಕಷ್ಟ. ಇದಕ್ಕೆಲ್ಲ ಬುದ್ಧ ಗುರುವಿನ ವಿಚಾರಗಳು ಸರಿಯಾದ ಮಾರ್ಗವನ್ನು ತೋರಿಸುವಲ್ಲಿ ಸಫಲವಾಗುತ್ತವೆ.
“ಯಾರೊಬ್ಬನೇ ಆಗಲೀ ಸೌಮ್ಯ ಪುರುಷರನ್ನು ಮತ್ತು ನಿರ್ದೋಷಿಗಳನ್ನು ಅಪರಾಧಿಗಳನ್ನಾಗಿ ಮಾಡಿದರೆ, ಆ ದುರ್ವರ್ತನೆಯ ಕೇಡು ಅದನ್ನು ಪ್ರಯೋಗಿಸಿದ ಅವಿವೇಕಿಯತ್ತಲೇ ಹಿಮ್ಮರಳುವುದು; ಹಗುರವಾದ ಧೂಳನ್ನು ಎದುರು ಗಾಳಿಯು ಎಸೆದಂತೆ.’’ “ಕೋಪದ ಆನಂದ ಬೇಡ, ವೈಮನಸ್ಸುಗಳನ್ನು ಮರೆಯಿರಿ, ನಿಮ್ಮ ಶತ್ರುಗಳನ್ನು ಪ್ರೀತಿ ಗೌರವಗಳಿಂದ ಜಯಿಸಿರಿ’’ ಎನ್ನುತ್ತಾರೆ ಬುದ್ಧಗುರು. (ಅಂಬೇಡ್ಕರ್ ಬುದ್ಧ ಮತ್ತು ಆತನ ಧಮ್ಮ- ಅನು -ಎ.ಡಿ.ಕೃಷ್ಣಯ್ಯ; ಪುಟ ಸಂಖ್ಯೆ : 414, 415) ಭಾರತದಂತಹ ಅಸಮಾನತೆಯ, ಸಾಮಾಜಿಕ ಬದಲಾವಣೆಯನ್ನು ಪಡೆಯದ, ಜಿಡ್ಡುಗಟ್ಟಿದ, ಮನುಷ್ಯ ಮನುಷ್ಯರ ನಡುವೆ ಅಂತರ ಕಲ್ಪಿಸುವ ಸಾಂಸ್ಕೃತಿಕ ಸಂದರ್ಭದಲ್ಲಿ ಮನುಷ್ಯನ ಅಸ್ತಿತ್ವಕ್ಕೆ ಯಾವುದೇ ಬೆಲೆ ಇಲ್ಲವಾಗಿದೆ. ಮಾನವೀಯತೆಯು ಸ್ವಾರ್ಥದ ಪರಿಧಿಯನ್ನು ಮೀರಿ, ಮನುಷ್ಯ ಮನುಷ್ಯರ ನಡುವೆ ಸಮಾನ ಸ್ಪಂದನೆ ಸಹನೆ, ಸಹಜ ಪ್ರೀತಿ, ಗೌರವ, ಪ್ರಾಮಾಣಿಕತೆ, ಸತ್ಯಸಂಧತೆ, ನೈತಿಕತೆ ಮುಂತಾದ ಮಾನವ ಗುಣಗಳು ಕಾಣಿಸಿಕೊಂಡಿರುವುದು ಬುದ್ಧ ಗುರುವಿನ ಚಿಂತನೆಗಳಲ್ಲಿ. ಈ ಸಾಮಾಜಿಕ ಮೌಲ್ಯಗಳ ತಳಪಾಯವೇ ಭಾರತೀಯ ಸಂದರ್ಭದಲ್ಲಿ ಅತ್ಯಂತ ದುರ್ಬಲವಾದುದು. ಶ್ರಮದ ಮೂಲಕ ಬದುಕನ್ನು ಕಟ್ಟಲು ಆಲೋಚಿಸುವಂಥ ನೆಲೆಗಟ್ಟು ಎಲ್ಲಿ ಇಲ್ಲವೂ ಅಲ್ಲಿ ಸಮಾನತೆಯನ್ನು ಕಾಣಲು ಸಾಧ್ಯವಿಲ.್ಲ ಭಾರತೀಯ ಸಮಾಜದಲ್ಲಿ ಜಾತಿ, ಮತ, ಆಸ್ತಿ, ಅಂತಸ್ತುಗಳೇ ಪ್ರಧಾನ ಮೌಲ್ಯಗಳಾಗಿರುವ ಮೌಢ್ಯ ಸಂಸ್ಕೃತಿಯಲ್ಲಿ, ಒಬ್ಬ ವ್ಯಕ್ತಿಯಲ್ಲಿರುವ ಉತ್ತಮ ಶೀಲವನ್ನು, ಉತ್ತಮ ಹೃದಯವಂತಿಕೆಯನ್ನು, ಉತ್ತಮ ಗುಣವಂತಿಕೆಯನ್ನು ಧಾರೆ ಏರೆಯುತ್ತಿರುವ ಜ್ಞಾನ ದಾಸೋಹಿ ಗೌತಮ ಬುದ್ಧರು.
ಜ್ಞಾನಕ್ಕಿಂತ ಶ್ರೇಷ್ಠವಾದ ಹಾಗೂ ಪ್ರಬಲವಾದ ಶಕ್ತಿ ಮತ್ತೊಂದಿಲ್ಲ. ಅದು ಕಲ್ಪವೃಕ್ಷವೂ ಹೌದು. ಕಾಮಧೇನುವೂ ಹೌದು. ಚಿಂತಾಮಣಿಯು ಹೌದು. ಸೃಷ್ಟಿಗೆ ಮಾತ್ರವಲ್ಲ ಸೃಷ್ಟಿ ವಿಕಾಸಕ್ಕೂ ಜ್ಞಾನವೇ ಮೂಲ. ಮಾನವನ ಸಕಲ ಸಿದ್ಧಿಗಳಿಗೆ ಹಾಗೂ ಪುರುμÁರ್ಥ ಸಾಧನೆಗೆ ಸುಜ್ಞಾನ-ವಿಜ್ಞಾನ-ಪ್ರಜ್ಞಾನಗಳೇ ಮೂಲ. ಮೃಗತ್ವದಿಂದ-ನರತ್ವದ ತನಕ, ನರತ್ವದಿಂದ ನಾರಾಯಣತ್ವದ ತನಕ ಮನುಷ್ಯನಿಗೆ ದಾರಿ ತೋರಿಸುವ ದೀವಿಗೆಯೇ ಅದು. ವಿಶ್ವದ ರಹಸ್ಯಗಳನ್ನು ಭೇದಿಸುವ ಸಾಧನವಾಗಿದೆ. ಆಕಾಶ ಕಾಯಗಳನ್ನು ತಲುಪುವ ಏಣಿಯಾಗಿದೆ. ಜ್ಞಾನ ಸ್ವಾತಂತ್ರ್ಯಕ್ಕೆ ದಾರಿಯಾಗಿದೆ. ಅಜ್ಞಾನ ದಾಸ್ಯಕ್ಕೆ ದಾರಿಯಾಗುತ್ತದೆ. ಜ್ಞಾನವೇ ಬೆಳಕು. ಅಜ್ಞಾನವೇ ಕತ್ತಲು, ಹೊರಗಿನ ಬೆಳಕು ಸೂರ್ಯ, ಒಳಗಿನ ಬೆಳಕು ಜ್ಞಾನ. ಸೂರ್ಯನ ಬೆಳಕಿಗಿಂತ ಜ್ಞಾನದ ಬೆಳಕು ಪ್ರಖರವಾದುದು. ಸೂರ್ಯನಿಗೆ ಕಾಣದ್ದು, ಜ್ಞಾನಕ್ಕೆ ಕಾಣಿಸುತ್ತದೆ. ಮಾನವನ ಸಕಲ ಶ್ರೇಯಸ್ಸಿಗೆ ಜ್ಞಾನವೇ ಮೂಲ ಅದೇ ಸತ್ಯ, ಅದೇ ಮುಕ್ತಿ. ಇಂತಹ ಜ್ಞಾನವನ್ನು ಸರ್ವರಿಗೂ ಧಾರೆ ಎರೆಯಲು ತಿಳಿಸಿದವರು ಬುದ್ಧ ಮಹಶಯರು. ಜ್ಞಾನರ್ಥಿಗÀಳು ವಿನಯವಂತರಾಗಿ, ವಿಧೇಯರಾಗಿ ವಿದ್ಯೆಯನ್ನು ಬೇಡಿದಾಗ  ವಿದ್ಯೆಯು ಲಭಿಸುತ್ತದೆ. ಆದರೆ ಇಂದು ಬಹುತೇಕರು ಫ್ಯಾಶನ್ ಮಾಡುತ್ತಾ, ಶೋಕಿ ಮಾಡುತ್ತಾ, ಜೀವನವನ್ನು ವ್ಯರ್ಥವಾಗಿ ಕಳೆದುಕೊಳ್ಳುತ್ತಿದ್ದಾರೆ. ಜ್ಞಾನ ಮತ್ತು ಶ್ರೇಷ್ಠ ಬದುಕಿನ ಉಳಿವಿಕೆಗೆ ಗೌತಮ ಬುದ್ಧರು ಪ್ರೇರಕಶಕ್ತಿಯಾಗಿದ್ದಾರೆ.
ಗೌತಮರು “ಮಾನವನು ಕೋಪವನ್ನು ಪ್ರೀತಿಯಿಂದ ಜಯಿಸಲಿ, ಅವನು ಕೆಟ್ಟತನವನ್ನು ತೋರಿದರೆ, ನೀವು ಉತ್ತಮ ತನದಿಂದ ಗೆಲ್ಲಿರಿ, ಲೋಭತ್ವವನ್ನು ಧಾರಾಳತ್ವವು ಜಯಿಸಲಿ, ಅಸತ್ಯವು ಸತ್ಯದಿಂದ ಜಯಿಸಲಿ.’’ ಎನ್ನುತ್ತಾರೆ. ಇದು ವ್ಯಷ್ಟಿಯನ್ನು ಕಟ್ಟುವ ಪರಿ.
 “ಸತ್ಯವನ್ನು ನುಡಿ, ಕೋಪಕ್ಕೆ ತಗ್ಗಬೇಡ, ಬೇಡುವವರಿಗೆ ಅಲ್ಪವಾದರೂ ಕೊಡು’’ “ಉತ್ತಮತನವನ್ನು ಪಡೆಯಲು ಈ ಮನಸ್ಸನ್ನು ಸುವ್ಯವಸ್ಥೆಯ ತರಬೇತಿಗೆ ಒಡ್ಡಬೇಕು, ಇದೇ ಸರಿಯಾದ ಜೀವನ ಮಾರ್ಗದ ಪ್ರಥಮ ಹೆಜ್ಜೆ.’’
 “ಸರ್ವ ವಿಷಯ ವಸ್ತುಗಳಲ್ಲಿಯೂ ಮನಸ್ಸು ಅತಿ ಪ್ರಮುಖ ಮೂಲಧಾತು. ಮನಸ್ಸೇ ಅಗ್ರಗಣ್ಯ ಸ್ಥಾನದ್ದು.’’ ಎಂದಿದ್ದಾರೆ ಬುದ್ಧ ದೇವ. (ಬುದ್ಧ ಮತ್ತು ಆತನ ಧಮ್ಮ ; ಪು.ಸಂ. : 415, 416)
ಶಕ್ತಿ ಸಾಗರವಾಗಿರುವ ‘ಯೌವನ’ ಮುಂದಿನ ಬದುಕು ಉತ್ಕೃಷ್ಟವಾಗಿರಲು ಕೈದಿವಿಗೆಯಾಗಿದೆ ಗೌತಮ ಬುದ್ಧರ ಚಿಂತನ ಮಂಥನಗಳು. ವಿಶ್ವದ ಅಭಿವೃದ್ಧಿಯು ಯುವಶಕ್ತಿಯನ್ನು ಆಧರಿಸಿದೆ. ಹಾಗಾಗಿ ಯುವಕ- ಯುವತಿಯರು ಹೇಗಿರಬೇಕೆಂದರೆ ಸವಾರ್ಂಗ ಸುಂದರ ಶರೀರ, ತೇಜಸ್ವಿಯಾದ ಮೈಕಾಂತಿ, ಪಳಪಳ ಹೊಳೆಯುವ ನಯನಗಳನ್ನು, ಉತ್ಸಾಹ-ಉಲ್ಲಾಸ-ಹುಮ್ಮಸ್ಸು ಚುಮ್ಮುವಂತಹ ಮುಖ ಮುದ್ರೆಯನ್ನು, ಉದಾತ್ತ ಕಲ್ಪನೆಗಳ ಕಡಲಾಗಿರುವ ಹೃದಯದ ಮಡಿಲನ್ನು ಹೊಂದಿರಬೇಕು. ಸಾಗರದಷ್ಟು ಸದ್ಗುಣಗಳನ್ನು ಪಡೆದು ಸಚಾರಿತ್ರ್ಯವಂತನಾಗಬೇಕೆಂಬ ಅಪಾರ ಹಂಬಲ ಯುವಸಮುದಾಯಕ್ಕಿರಬೇಕು. ಅಂತಹ ಯುವ ಸಮುದಾಯವನ್ನು ಪಡೆದ ರಾಷ್ಟ್ರ, ರಾಜ್ಯ, ಪ್ರಗತಿಯ ಉತ್ತುಂಗ ಸ್ಥಿತಿಯನ್ನು ತಲುಪಲು ಸಾಧ್ಯವಾಗುತ್ತದೆ. ಆದರೆ ಇಂದಿನ ಬಹುತೇಕ ಯುವಕರು ‘ಸದಾ ಬಾಯ್ತುಂಬ ಉಗುಳು ತುಂಬಿಕೊಂಡು, ಮೇಲುಕು ಹಾಕುವ, ಕಾಂತಿಹೀನ ಕೆನ್ನೆಗಳು, ಆಳದಲ್ಲಿ ಅವಿತುಕೊಂಡಿರುವ ಕಣ್ಣುಗಳು, ವಿಕಾರವಾದ ವದನ, ನಿರ್ಲಕ್ಷ್ಯ, ನಿರಾಸೆ, ನಿಕೃಷ್ಟತೆಗಳಿಂದ ಮುಪ್ಪುರಿಗೊಂಡ ದೇಹಾತ್ಮ, ದೃಷ್ಟ ಚಿಂತೆ, ದುಷ್ಕೃತಿಗಳಿಂದ ದಹಿಸುತ್ತಿರುವ ಅಸ್ಥಿಪಂಜರದಂತಹ ಮೈಕಟ್ಟು, ಈ ಬದುಕೆ ಬೇಡಪ್ಪಾ ಎನ್ನುವಂತಹ ಭಾವನೆಯ ತೋಳಲಾಟ, ಕಳವಳ, ಕೋಪ-ತಾಪ-ತಲ್ಲಣಗಳ ಗೂಡಾಗಿದ್ದಾರೆ. ಯುವ ಜನತೆ ಇಂದಿನ ಜಾಹೀರಾತಿನ ಮೋಡಿಗೆ ವಶರಾಗಿ, ದುಶ್ಚಟಗಳ ದಾಸರಾಗಿ ತಮಗೆ ಅರಿವಿಲ್ಲದಂತೆ ಅಮೂಲ್ಯವಾದ ಬದುಕನ್ನು ಕಳೆದುಕೊಳ್ಳುತ್ತಿರುವುದು ಈ ಶತಮಾನದ ದುರಂತವಾಗಿದೆ. ಈ ದುರಂತವು ಸುಖಾಂತವಾಗಲು ಗೌತಮ ಬುದ್ಧರ ಚಿಂತನೆಗಳು ಪ್ರೇರೇಕವಾದ ಅಂಶಗಳಾಗಿವೆ.
ಗೆಳೆಯರ ಒತ್ತಡದಿಂದಲೂ ಇಲ್ಲವೇ ತನ್ನ ಕುತೂಹಲಕ್ಕೋ, ಮನೋದೌರ್ಬಲ್ಯಕ್ಕೋ, ಪ್ರತಿμÉ್ಠಗೂ, ಉಲ್ಲಾಸ ದೊರೆಯುವುದೆಂಬ ಭ್ರಮೆಗೋ ಒಳಗಾಗಿ ವ್ಯಷ್ಟಿ ಮತ್ತು ಸಮಷ್ಟಿಗೆ ಅಹಿತವಾದ, ಅನಪೇಕ್ಷಣೀಯವಾದ ಆಕ್ಷೇಪಕ್ಕೆ ಅರ್ಹವಾದ ದುಶ್ಚಟಗಳ ದಾಸರಾದ ಯುವ ಜನತೆ ದುರಂತ ದಾಖಲಿಸುತ್ತಿದ್ದಾರೆ. ಪಾರ್ಥೆನಿಯಂ ಕಳೆಯಂತೆ ಯುವ ಜನತೆಯಲ್ಲಿ ಧೂಮಪಾನ, ಮದ್ಯಪಾನ, ಗೂಟಾಖಾದ ದಾಸರಾಗಿರುವವರನ್ನು ಹೊರ ತರಲು ಬುದ್ಧವಾಣಿ ಪ್ರಬಲ ಅಸ್ತ್ರವಾಗಿದೆ. ಗಿಣಿ ಕುಡುಕರು, ನಾಯಿ ಕುಡುಕರ ಮತ್ತು ಹಂದಿ ಕುಡುಕರುಗಳು ಸಮಾಜದಲ್ಲಿ ಹೆಚ್ಚಾಗಿ ಬೆಳೆಯುತ್ತಿದ್ದಾರೆ. ಈ ದುಶ್ಚಟಗಳಿಂದ ಹೊರ ಬರಲು ಬುದ್ಧ ಗುರುವಿನ ಅರಿವನ್ನು ಹೃದಯಸ್ಥವಾಗಿಸಿಕೊಳ್ಳಬೇಕಾಗಿದೆ. ಗಾಂಜಾ, ಭಂಗಿ, ಚರಸ್, ಸೇವನೆಗಳು ಇಡೀ ಸಾಮಾಜಿಕ ವ್ಯವಸ್ಥೆಯನ್ನು ಹದಗೆಡಿಸುತ್ತಿವೆ. “ಅಪಾರ ಬಂಧನಗಳಿಂದ ವ್ಯಸನವನ್ನು ತಂದುಕೊಳ್ಳುವವು; ಈ ಬಂಧನಗಳಿಂದಲೇ ಭಯವೂ ಹುಟ್ಟುವುದು, ಯಾರು ಈ ಬಂಧನಗಳ ವಿಮೋಚನೆ ಪಡೆದಿರುವರೋ ಅವರಿಗೆ ವ್ಯಸನಗಳು ಇಲ್ಲದೇ ಭಯವೂ ಬಾರದು.’’ (ಬುದ್ಧ ಮತ್ತು ಆತನ ಧಮ್ಮ ; ಪುಟ ಸಂಖ್ಯೆ : 413) ಎನ್ನುತ್ತಾರೆ ಬುದ್ಧಗುರು.
 ‘ವ್ಯಸನದಲ್ಲಿ ದೇಹವು ಮಸಣವನು ಕಾಣುವುದು
 ವ್ಯಸನವನ್ನು ಬಿಟ್ಟು ಹಸನಾಗಿ ದುಡಿದರೆ
 ಹಸನ ವಸನಗಳು| ಸರ್ವಜ್ಞ|’- ವ್ಯಸನ-ದುರ್ವಾಸನಗಳು ಅಮೂಲ್ಯವಾದ ಈ ದೇಹವನ್ನು ಮಸಣ ಕಾಣುವವರೆಗೂ ಬೆನ್ನಟ್ಟಿ ಬರುತ್ತವೆ. ಹಾಗಾಗಿ ವ್ಯಸನಗಳಿಂದ ಮುಕ್ತರಾಗಿ ಹಸನಾಗಿ ಬಾಳಿರೆಂಬ ತಿಳಿವನ್ನು ಸರ್ವಜ್ಞ ಕವಿ ನೀಡಿರುವುದಕ್ಕಿಂತ ಮುಂಚೆಯೇ ಗೌತಮ ಮಹಶಯರು ದುಶ್ಚಟಗಳ ದುಷ್ಪಾರಿಣಾಮಗಳನ್ನು ತಿಳಿಸಿದ್ದರು.
     ಈ ಲೋಕದ ದಾರ್ಶನಿಕರು, ಚಿಂತಕರು, ಸಮಾಜ ಸುಧಾರಕರು, ಗುರುಗಳು ಆದ ಗೌತಮ ಬುದ್ಧರು ಬದುಕಿನ ಮಹತ್ವ ತಿಳಿಸಿದ್ದಾರೆ. ಅದನ್ನು ತಿಳಿಯಬೇಕು. ಒಬ್ಬ ಚಿಂತಕ-’ಜೀವನ’ ಎಂದರೇನೆಂಬುದನ್ನು ಪ್ರಕೃತಿಯಿಂದ ತಿಳಿಯಬೇಕೆಂದು ಹೊರಟ. ಮೊದಲಿಗೆ ಬಗೆಬಗೆಯ ಅರಳಿರುವ ಹೂಗಳಿಂದ ಮಕರಂದವನ್ನು ಹೀರುತ್ತಿರುವ ಜೇನುನೊಣಗಳನ್ನು ಕಂಡು ಬೆರಗಾದ. ಅವುಗಳಿಗೆ ಜೀವನ ಎಂದರೇನು? ಎಂದು ಕೇಳಿದ. ಅದಕ್ಕೆ ಅವು ಹೇಳಿದವು ‘ಜೀವನವೆಂದರೆ ನಿರಂತರ ಸತ್ಕಾರ್ಯದಲ್ಲಿ ತೊಡಗಿರುವುದು. ಸವಿಯನ್ನೇ ಸಂಗ್ರಹಿಸಿ, ಸವಿಯನ್ನೇ ಹಂಚಿಕೊಂಡು ಸದಾ ಸರ್ವರಿಗೂ ಸವಿಯನ್ನೆ ಹಂಚುವುದು ಎಂದಿತು. ತುಂಬಾ ಸಂತಸಗೊಂಡ ಚಿಂತಕ ಮಾಮರದಲ್ಲಿ ಕೋಗಿಲೆಯು ಸುಮಧುರವಾದ ಧ್ವನಿಯನ್ನು ಕೇಳಿಸಿಕೊಂಡ. ಅಲ್ಲಿಗೆ ಹೋಗಿ ಜೀವನವೆಂದರೇನು? ಎಂದು ಕೇಳಿದ. ಅದಕ್ಕೆ ಕೋಗಿಲೆಯು ಹೇಳಿತು ‘ಜೀವನವೆಂದರೆ ಪ್ರಕೃತಿಯ ಸೊಬಗನ್ನು ಸವಿಯುವುದು, ಒಡಲಾಳದಿಂದ ಬರುವ ಗೀತೆಗಳನ್ನು ಸಂತಸದಿಂದ ಹಾಡುವುದು, ಈ ಸುಂದರ ಜಗತ್ತನ್ನು ಜೀವನವನ್ನು ಸಂಗೀತಮಯಗೊಳಿಸುವುದು ಎಂದಿತು. ಚಿಂತಕ ಮುನ್ನಡೆದ ’ಜುಳು ಜುಳು ನೀನಾದದೊಂದಿಗೆ ಅರಿಯುವ ನದಿಯನ್ನು ಕಂಡು ಅದಕ್ಕೂ  ಜೀವನವೆಂದರೇನು? ಎಂದ ಕೇಳಿದ. ಅದಕ್ಕೆ ಆ ನದಿ ಹೆಳ್ತು ‘ಜೀವನವೆಂದರೆ ಎಲ್ಲಿಯೂ ನಿಲ್ಲದೆ ನಿರಂತರ ಹರಿಯುತ್ತಿರುವುದು ಅದರಿಂದ ನಾನು ಹಸನಾಗುತ್ತೇನೆ. ಜಗತ್ತು ಹಸಿರು ಹಸಿರಾಗುತ್ತದೆ. ಹೀಗೆ ಹರಿದು ಒಂದು ದಿನ ಮಹಾಸಾಗರದಲ್ಲಿ ಬೆರೆತು ಮರೆಯಾಗಿ ಹೋಗುತ್ತೇನೆ.” ಎಂದಿತು. ‘ಜೀವನವೆಂದರೆ, ಸದಾ ಸತ್ಕರ್ಯದಲ್ಲಿ ನಿರತನಾಗಿರುವುದು ಸವಿಗೀತೆಗಳನ್ನು ಹೇಳುವುದು ನಿರ್ಮೂಹದಿಂದ ನಿರಂತರ ಹರಿಯುವುದು. ಪರಮಾತ್ಮನ ಸಾಗರದಲ್ಲಿ ಬೆರೆಯುವುದು’- ಎಂಬ ನಿಸರ್ಗದ ಸಂದೇಶವನ್ನು ಅರಿತು, ಅನುμÁ್ಠನದಲ್ಲಿ ತೊಡಗಿದ ವ್ಯಕ್ತಿ ಶಕ್ತಿಯಾಗುತ್ತಾನೆ. ಜೇನು ನೊಣದಂತೆ ದುಡಿ, ಹಕ್ಕಿಯಂತೆ ಹಾಡು, ನದಿಯಂತೆ ಹರಿ, ವಿಶಾಲ ವಿಶ್ವದಲಿ ಬೆರೆ, ಕೈಯೊಳಗೆ ಕಾರ್ಯ, ಹೃದಯದಲಿ ಹಾಡು, ತಲೆಯೊಳಗೆ ಸುವಿಚಾರ ಪ್ರವಾಹ ಹರಿಯಲಿ ಆಗಲೇ ಈ ಬದುಕು ಸಾರ್ಥಕವಾಗುವುದು.
ಸದೃಢ ಸಮಾಜದ ನಿರ್ಮಾಣಕ್ಕೆ ಬುದ್ಧವಾಣಿ ಹೀಗಿದೆ:
    “ಸರ್ವ ವಿಷಯದಲ್ಲೂ, ಆಲೋಚನಾಶಕ್ತಿಯನ್ನಿಡು, ಪ್ರತಿ ವಿಷಯದಲ್ಲೂ ಪೂರ್ಣ ಮನಸ್ಸಿಡು. ಸರ್ವವಿಷಯಗಳಲ್ಲೂ ಪ್ರಮಾಣಿಕನಾಗಿರು ವತ್ತು ಧೈರ್ಯವಾಗಿರು.’’
    “ಜಾಗರೂಕತೆಯಿಂದಿರುವವನು, ಬುದ್ಧಿವಂತನು, ಉದಾಸೀನತೆ ತೊರೆಯುವವನು, ಬುದ್ಧಿವಂತಿಕೆಯ ಗೋಪುರವನ್ನು ಮೇಲಕ್ಕೇರುತ್ತಾ ಕೆಳಗೆ ನೋಡುವನು, ಇವನು ದುಃಖಗಳಿಂದ ದೂರವಿರುವನು’’
    “ಸುಖ ಜೀವನ ನಡೆಸಿಯೇ ಜೀವಿಸಬೇಕು ನಿಜ. ಆದರೆ, ನಮ್ಮನ್ನು ತುಚ್ಚೀಕರಿಸುವವರನ್ನು ನಾವೂ ತುಚ್ಚೀಕರಿಸುವುದರಿಂದಲ್ಲ.’’
     “ಮನೋವಿಕಾರಕ್ಕಿಂತ ಮಿಗಿಲಾದ ಬೆಂಕಿ ಬೇರೊಂದಿಲ್ಲ; ತುಚ್ಛಾಭಾವದಿಂದ ಪಡುವ ನಷ್ಟ ಎಸೆಯುವ ಜೂಜಾಟಕ್ಕಿಂತ ಮಿಗಿಲು; ಶರೀರದಿಂದುಂಟಾಗುವ ನೋವಿಗೆ ಸಮಾನವಾದುದು ಬೇರೊಂದಿಲ್ಲ. ವಿಶ್ರಾಂತಿಯಿಂದ ಪಡೆವ ಸಂತಸಕ್ಕಿಂತ ಮಿಗಿಲಾದ ಸುಖ ಬೇರೊಂದಿಲ್ಲ.’’
    “ಯಾವೊಬ್ಬನೂ ಸುಳ್ಳನ್ನು ನುಡಿಯದಿರಲಿ. ಈ ಸುಳ್ಳನ್ನು ನುಡಿಯಲು ಯಾರೊಬ್ಬರನ್ನು ನಿರ್ದೇಶಿಸಬೇಡಿರಿ ಅಥವಾ ಈ ಸುಳ್ಳು ನುಡಿದವನ ಕೆಲಸ ಕಾರ್ಯಗಳನ್ನು ಅನುಮೋದಿಸಬೇಡಿರಿ, ಎಲ್ಲಾ ಬಗೆಯ ಸುಳ್ಳು ಮತ್ತು ಅಸತ್ಯದ ನುಡಿಗಳು ನಿಮ್ಮಿಂದ ದೂರವಿರಲಿ’’
   “ಓ! ಗೃಹಸ್ಥರೇ ! ಇಲ್ಲಿನ ಸತಿಪತಿಯರಿಬ್ಬರೂ ಸಹ, ಕೊಲ್ಲುವರಲ್ಲ, ಕದಿಯುವರಲ್ಲ, ಅಪರಿಶುದ್ದರಲ್ಲ, ಠಕ್ಕರಲ್ಲ, ಕುಡುಕರಲ್ಲ, ಸದ್ಗುಣಿಗಳು, ಮತ್ತು ಉತ್ತಮ ನಡವಳಿಕೆಯವರು, ಧನಲೋಭತ್ವವಿಲ್ಲದ ಹೃದಯದಿಂದ ಸದ್ಗøಹಸ್ಥರಾಗಿ ಜೀವಿಸುವರು, ಪರರ ನಿಂದಕರಲ್ಲ ಸದ್ಗುಣಿಗಳನ್ನು ಆರೋಪಿಸದವರು, ಇವರು ನಿಜವಾಗಿಯೂ, ದೇವರು ಮತ್ತೊಬ್ಬ ದೇವತೆಯೊಡನೆ ಜೀವಿಸುವಂತಹ ಗೃಹಸ್ಥ ದಂಪತಿಗಳು’’
     “ಯಾವನು, ಇತರರ ಶ್ರೇಯಸ್ಸಿಗಾಗಿ, ತನ್ನ ಶ್ರೇಯಸ್ಸನ್ನು ಬಲಿಗೊಟ್ಟು ಶ್ರೇಯಸ್ಸಿಗೂ ಶ್ರಮಿಸುವನೋ ಅವನು, ಸರ್ವಶ್ರೇಷ್ಠನು ಮತ್ತು ಪ್ರಖ್ಯಾತ ಪುರುಷನೂ ಆಗುವನು.’’ (ಬುದ್ಧ ಮತ್ತು ಆತನ ಧಮ್ಮ – ಪು. ಸಂ.: 425. 427, 428, 429, 430, 437) ಎಂದು ಬುದ್ಧ ಹೇಳುವ ಮೂಲಕ ವ್ಯಷ್ಟಿ ಮತ್ತು ಸಮಷ್ಟಿಯನ್ನು ಭದ್ರವಾಗಿ ಕಟ್ಟಬೇಕೆಂದು ಬಯಸಿದವರು.
     ‘ನಾನು ಶಾಶ್ವತವಲ್ಲ, ನಾ ಮಾಡಿದ ಸೇವೆ ಶಾಶ್ವತ’ ಎಂಬ ಸೇವಾ ಮನೋಭಾವನೆಯನ್ನು, ‘ನಾನು ಎಂಬುದು ನಾಶ; ನೀನು ಎಂಬುದು ನಿಲುಕದೆ ಬೆಳೆ’ ಎಂಬಂತಹ ತತ್ವಗಳನ್ನು ಬುದ್ಧರ ಬದುಕು ಸಾಬೀತು ಮಾಡುತ್ತದೆ. ದೇವರನ್ನು ಕುರುಡ ಬೇಡಿದ, ದೇವರು ಪ್ರತ್ಯಕ್ಷನಾಗಿ ಒಂದೇ ಒಂದು ವರ ಕೊಡುವುದು. ಕೇಳು ಅಂದ. ಕುರುಡ ತುಂಬಾ ಚಿಂತನೆ ಮಾಡಿ ನನ್ನ ಮೊಮ್ಮಗ ಬಂಗಾರದ ಲೋಟದಲ್ಲಿ ಹಾಲು ಕುಡಿಯುವುದನ್ನು ನಾನು ನೋಡುವಂತಹ ಸೌಭಾಗ್ಯವನ್ನು ಕೊಡು ಎಂದ. ದೇವರು ತಥಾಸ್ತು ಎಂದ. ಒಂದು ವರದಲ್ಲಿ ಮೂರು ತಲೆಮಾರಿಗೆ ಆಗುವಷ್ಟು ಶ್ರೀಮಂತಿಕೆಯನ್ನು, ಕಣ್ಣನ್ನು ಪಡೆದ. ಅಂತೆಯೇ ಬುದ್ಧ ಗುರುವಿನ ಚಿಂತನೆಗಳನ್ನು ಗ್ರಹಿಸಿಕೊಂಡು ಬಾಳಿದ ಸಮಾಜ ಅತ್ಯುನ್ನತ ಸಮಾಜವಾಗಿ ಬೆಳೆದು ಬೆಳಗುವುದು.
    ಮತಿಯವಾದ, ಜಾತಿವಾದ, ಕ್ರೂರವಾದಗಳ ಕಪಿ ಮುಷ್ಟಿಯಲ್ಲಿ ಸಿಲುಕಿ ಒದ್ದಾಡುತ್ತಿದ್ದೇವೆ. ಪ್ರತಿಕ್ಷಣವೂ ಉದ್ವೇಗ, ಆತಂಕ, ಭಯದ ವಾತಾವರಣದಲ್ಲಿ ಬದುಕುತ್ತಿದ್ದೇವೆ. ಅಸೂಯೆ, ದ್ವೇಷ, ಅನ್ಯಾಯ, ಅನಾಚಾರ, ಅನೀತಿಗಳು ತಾಂಡವಾಡುತ್ತಿವೆ. ಏಕೆಂದರೆ ಅಪರಿಮಿತ ಆಸೆ, ದುರಾಸೆಗಳು ಭಯಂಕರ ಬಯಕೆಗಳ ದಾಸರಾಗಿರುವುದರಿಂದ, ಇಂತಹವುಗಳಿಂದ ಮುಕ್ತರಾಗಲು ಬುದ್ಧವಾಣಿಯು ನೇರವಾಗುತ್ತದೆ. ಯಾವುದೇ ಮಾರುಕಟ್ಟೆ, ಅಂಗಡಿಗಳಲ್ಲಿ ಕೆಜಿಯಷ್ಟು ಶಾಂತಿ ನೆಮ್ಮದಿ ಖರೀದಿಸಲು ಸಾಧ್ಯವಿಲ್ಲ. ಆ ಶಾಂತಿ ನೆಮ್ಮದಿಯನ್ನು ನಮ್ಮ ಅಂತರಂಗ ವಿಕಾಸದಿಂದ ಪಡೆದುಕೊಳ್ಳಬೇಕಾಗಿದೆ. ಅದಕ್ಕೆ ಭಗವಾನ್ ಬುದ್ಧರ ಸಾವಿಲ್ಲದಂಥ ಸಂದೇಶಗಳು ನೆರವಾಗುತ್ತವೆ. ಅವುಗಳು ಸಂಜೀವಿನಿ. ಮೌಲ್ಯಗಳನ್ನು ಆದರ್ಶಗಳನ್ನು ಹೃನ್ಮನಕ್ಕೆ ತಲುಪಿಸುವ ದೀಪ್ತಿಯಾಗಿವೆ. ‘ಓ ಶ್ರದ್ದೆ| ನೀನಿದ್ದರೆ ನಾ ಗೆದ್ದೆ ನೀ ಕೈಬಿಟ್ಟರೆ ನಾ ಬಿದ್ದೆ’- ಎಂಬಂತೆ ಶ್ರದ್ಧೆಯಿಂದ ಬುದ್ಧ ಗುರುವಿನ ಚಿಂತನೆಗಳನ್ನು ಅಧ್ಯಯನ ಮಾಡಬೇಕು.
ಡಾ.ನೆಲ್ಲಿಕಟ್ಟೆ ಎಸ್.ಸಿದ್ದೇಶ್ 
ಎಂ.ಎ.,ಎಂ.ಇಡಿ., ಪಿಜಿಡಿಜೆ.,,ಪಿಎಚ್.ಡಿ.  
ಪ್ರಾಧ್ಯಾಪಕರು ಮತ್ತು ನಿರ್ದೇಶಕರು ಕನ್ನಡ ಭಾರತಿ,  
ನಿರ್ದೇಶಕರು, ಡಾ.ಬಿ.ಆರ್.ಅಂಬೇಡ್ಕರ್ ಅಧ್ಯಯನ ಕೇಂದ್ರ
ಕುವೆಂಪು ವಿಶ್ವವಿದ್ಯಾಲಯ,  ಜ್ಞಾನಸಹ್ಯಾದ್ರಿ, ಶಂಕರಘಟ್ಟ,  ಶಿವಮೊಗ್ಗ : ಜಿಲ್ಲೆ-577451

ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು

ಹೌದು, ನಿಮ್ಮ ಊರಿನಲ್ಲಿ ಜಾತ್ರೆ, ಸಭೆ, ಸಮಾರಂಭಗಳು ನಡೆದರೆ ಅದನ್ನು ಬಯಲುಸೀಮೆಟೈಮ್ಸ್.ಕಾಂ ಮೂಲಕ ನಾಡಿಗೆ ತಿಳಿಸಿ. ಅಷ್ಟೇ ಅಲ್ಲ ನಿಮ್ಮೂರಿ‌ನ ರಸ್ತೆ, ಚರಂಡಿ, ಆಸ್ಪತ್ರೆ , ಶಾಲೆ ಯಾವುದೇ ಸಮಸ್ಯೆ ಇದ್ದರೂ ಅಧಿಕಾರಿಗಳ ಕಣ್ಣು ತೆರೆಯುವಂತೆ ಸುದ್ದಿ ಮಾಡಿ. ನೀವು ಜಸ್ಟ್ ನಮ್ಮ ವಾಟ್ಸ್ ಆಪ್ ಸಂಖ್ಯೆಗೆ ಸುದ್ದಿ ಕಳುಹಿಸಿ ಉಳಿದದ್ದನ್ನು ಬಯಲುಸೀಮೆಟೈಮ್ಸ್.ಕಾಂ ಮಾಡಲಿದೆ. ನಮ್ಮ ವಾಟ್ಸ್ ಆಪ್ ಸಂಖ್ಯೆ: +91 96201 39796

ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್‌ ಮೇಲ್‌ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.

bayaluseeme times ads (2)
Follow on Google News Follow on Instagram
Share. Facebook Twitter Telegram WhatsApp
Previous Articleವಿಶ್ವಕ್ಕೆ ಸಂಸತ್ತನ್ನು ಕೊಟ್ಟ ಪ್ರಥಮ ಪಿತಾಮಹ; ಸಮಾನತೆಯ ಶಿಖರ
Next Article ಬುದ್ಧ ಕಟ್ಟ ಬಯಸಿದ ಸಮಾಜ: ಬೌದ್ಧ ಪೂರ್ಣಿಮೆ ವಿಶೇಷ ಲೇಖನ
Times of bayaluseeme
  • Website

Related Posts

ವಿಶ್ವಕ್ಕೆ ಸಂಸತ್ತನ್ನು ಕೊಟ್ಟ ಪ್ರಥಮ ಪಿತಾಮಹ; ಸಮಾನತೆಯ ಶಿಖರ

May 9, 2025

ಅಲೆಮಾರಿ, ಅರೆ ಅಲೆಮಾರಿ ಸಮುದಾಯಗಳ ಬಗ್ಗೆ ಇರಲಿ ಗಮನ

May 9, 2025
Add A Comment
Leave A Reply Cancel Reply

Advertisement
Latest Posts

ಮೋದಿ ಬಂದ ಮೇಲೆ ರಕ್ಷಣಾ ವ್ಯವಸ್ಥೆಯಲ್ಲಿ ಏನೆಲ್ಲ ಬದಲಾವಣೆ ಆಗಿದೆ ಗೊತ್ತೇ; ಶಾಸಕ ಎಂ.ಚಂದ್ರಪ್ಪ

ಪ್ರತಿದಿನ ಭಾರತ ಮಾತೆಯ ವೀರ ಪುತ್ರರ ಧೈರ್ಯವನ್ನು ನೆನಪಿಸಿಕೊಳ್ಳಬೇಕು – ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ

ಕಾಂತರಾಜ್ ವರದಿಯನ್ನು ಮೇಲ್ಜಾತಿಯವರು ಮೂಲೆಯಲ್ಲಿ ಕೂರಿಸಿದ್ದಾರೆ – ರಾಮಚಂದ್ರಪ್ಪ

ಹೆಣ್ಣು ಮಕ್ಕಳಿಗೆ ಕಡ್ಡಾಯ ಶಿಕ್ಷಣ ಕೊಡಿಸಿ – ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ

Trending Posts

Subscribe to News

Get the latest sports news from NewsSite about world, sports and politics.

Facebook X (Twitter) Pinterest Vimeo WhatsApp TikTok Instagram

News

  • World
  • US Politics
  • EU Politics
  • Business
  • Opinions
  • Connections
  • Science

Company

  • Information
  • Advertising
  • Classified Ads
  • Contact Info
  • Do Not Sell Data
  • GDPR Policy
  • Media Kits

Services

  • Subscriptions
  • Customer Support
  • Bulk Packages
  • Newsletters
  • Sponsored News
  • Work With Us

Subscribe to Updates

Get the latest creative news from FooBar about art, design and business.

© 2025 Bayaluseeme Time. Designed by Bayaluseeme time
  • Privacy Policy
  • Terms
  • Accessibility

Type above and press Enter to search. Press Esc to cancel.