ಚಿತ್ರದುರ್ಗ ಮೇ.21: ಅಂಗವಿಕಲರ ಸಬಲೀಕರಣ ಉತ್ತೇಜಿಸುವ ಸಲುವಾಗಿ ಹಮ್ಮಿಕೊಂಡಿರುವ “ಸುಗಮ್ಯ ಯಾತ್ರಾ” ಅರಿವು ಮೂಡಿಸುವ ಜಾಥಾ ಕಾರ್ಯಕ್ರಮಕ್ಕೆ ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ಹಸಿರು ನಿಶಾನೆ ತೋರುವ ಮೂಲಕ ಚಾಲನೆ ನೀಡಿದರು.
ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಮೀಪದ ಒನಕೆ ಓಬವ್ವ ವೃತ್ತದಲ್ಲಿ ಬುಧವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ಜಿಲ್ಲಾ ವಿಕಲಚೇತನರ ಪುನರ್ವಸತಿ ಕೇಂದ್ರ, ದಿ ಅಸೋಷಿಯೇಷನ್ ಆಫ್ ಪೀಪಲ್ವಿತ್ ಡಿಸೆಬಿಲಿಟಿ (ಎಪಿಡಿ) ಸಂಯುಕ್ತಾಶ್ರಯದಲ್ಲಿ “ಸುಗಮ್ಯ ಯಾತ್ರಾ-ಪ್ರತಿ ಹೆಜ್ಜೆ ಸಮಾನತೆಯ ಕಡೆಗೆ” ಜಾಥಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಎಲ್ಲರಿಗೂ ಸಮಾನ ಅವಕಾಶ-ಸುಗಮ್ಯ ಯಾತ್ರೆ ನಮ್ಮ ಹಕ್ಕು, ಸುಗಮ್ಯ ಭವಿಷ್ಯದ ಕಡೆಗೆ ಹೆಜ್ಜೆ ಹಾಕುವ ಒಟ್ಟಾಗಿ ನಡೆಯೋಣ, ಸುಗಮ ಸಮಾಜ ಕಟ್ಟೋಣ, ವಿಕಲಚೇತನ ವ್ಯಕ್ತಿಗಳ ಪ್ರಭುತ್ವಕ್ಕೆ ದಾರಿ ಹಾಸೋಣ, ಸುಗಮ್ಯ ಯಾತ್ರೆ-ಸೊಗಸಾದ ಜೀವನ, ನಡೆಯೋಣ ಸುಗಮ್ಯ ಮಾರ್ಗದಲ್ಲಿ, ಎಲ್ಲರಿಗೂ ಸಮಾನ ಸೌಲಭ್ಯದಲ್ಲಿ ನಾವು ನಿರ್ಬಂಧ ಮುಕ್ತ ಸಮಾಜದತ್ತ, ಅಡಚಣೆ ಇಲ್ಲದ ಹಾದಿ, ಸುಗಮ ಬದುಕಿನ ನಾಡಿ, ಸುಗಮ್ಯ ಯಾತ್ರೆ, ಸಮಾನತೆಗೊಂದು ಹೆಜ್ಜೆ, ಯಾರಿಗೂ ತಡೆಗೋಡೆಯಲ್ಲದ ಯಾನ-ಇದು ನಮ್ಮ ಗುರಿ ಎಂಬ ಜಾಗೃತಿ ಫಲಕ ಹಿಡಿದು ಘೋಷಣೆ ಕೂಗಿ, “ಸುಗಮ್ಯ ಯಾತ್ರಾ” ಕುರಿತು ಸಾರ್ವಜನಿಕರಿಗೆ ಅರಿವು ಮೂಡಿಸಲಾಯಿತು.
ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಜೆ.ವೈಶಾಲಿ
ಈ ವೇಳೆ ಮಾತನಾಡಿದ ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಜೆ.ವೈಶಾಲಿ, ಜಿಲ್ಲೆಯ ಎಲ್ಲಾ ಸರ್ಕಾರಿ ಕಛೇರಿಗಳು, ಸಾರ್ವಜನಿಕ ಕಟ್ಟಡಗಳು, ಬ್ಯಾಂಕುಗಳು, ಗ್ರಂಥಾಲಯಗಳು, ಅಂಗನವಾಡಿ ಕೇಂದ್ರಗಳು, ಶಾಲಾ-ಕಾಲೇಜುಗಳು, ಮನರಂಜನೆ ಸ್ಥಳಗಳು. ಉದ್ಯಾನವನಗಳು, ಮಾರುಕಟ್ಟೆ, ಪ್ರವಾಸಿ ತಾಣಗಳು ಮತ್ತು ಸಾರ್ವಜನಿಕ ಶೌಚಾಲಯಗಳು ವಿಕಲಚೇತನ ವ್ಯಕ್ತಿಗಳಿಗೆ ಅನುಕೂಲವಾಗುವಂತೆ ಅಡೆ-ತಡೆ ರಹಿತ ವಾತಾವರಣ ಹಾಗೂ ಮೂಲಭೂತ ಸೌಲಭ್ಯಗಳನ್ನು ಹೊಂದಿರುವ ಬಗ್ಗೆ ಅಥವಾ ಇವುಗಳನ್ನು ವಿಕಲಚೇತನ ವ್ಯಕ್ತಿಗಳ ಸ್ನೇಹಮಹಿಯಾಗಿ ಪರಿವರ್ತಿಸುವ ಬಗ್ಗೆ ಕೈಗೊಳ್ಳಬಹುದಾದ ಕ್ರಮಗಳ ಬಗ್ಗೆ ಸಾಮಾಜಿಕ ಪರಿಶೋಧನೆಯನ್ನು yes to access application ಮೂಲಕ ಮಾಹಿತಿಯನ್ನು ಸಂಗ್ರಹಿಸುವ ನಿಟ್ಟಿನಲ್ಲಿ ಇಲಾಖೆಯಡಿ ಕಾರ್ಯನಿರ್ವಹಿಸುತ್ತಿರುವ ಗ್ರಾಮೀಣ, ನಗರ, ವಿವಿದೋದ್ದೇಶ ಪುನರ್ವಸತಿ ಕಾರ್ಯಕರ್ತರು, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಶಾಲಾ ಶಿಕ್ಷಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ವಿವಿಧ ಇಲಾಖೆಗಳು, ಸ್ವಯಂ ಸೇವಾ ಸಂಸ್ಥೆಗಳ ಸಹಕಾರದೊಂದಿಗೆ ಅರಿವು ಮೂಡಿಸುವ ಕಾರ್ಯಕ್ರಮವನ್ನು ಅನುಷ್ಟಾನಗೊಳಿಸಲಾಗುತ್ತಿದೆ ಎಂದು ಹೇಳಿದರು.
“ಸುಗಮ್ಯ ಯಾತ್ರಾ” ಅರಿವು ಮೂಡಿಸಲು ಕಾರ್ಯಕ್ರಮ
ಅಂಗವಿಕಲ ವ್ಯಕ್ತಿಗಳ ಹಕ್ಕುಗಳ ಅಧಿನಿಯಮ-2016ರ ಸೆಕ್ಷನ್ 40 ರಿಂದ 46 ರವರೆಗಿನ ಸೆಕ್ಷನ್ಗಳ ಪ್ರಕಾರ ವಿಕಲಚೇತನ ವ್ಯಕ್ತಿಗಳಿಗೆ ಅಗತ್ಯ ಇರುವ ಮೂಲಭೂತ ಸೌಕರ್ಯಗಳನ್ನು ಹಾಗೂ ಸರ್ಕಾರಿ ಮತ್ತು ಸಾರ್ವಜನಿಕ ಕಟ್ಟಡಗಳಲ್ಲಿ ಅಡೆ-ತಡೆ ರಹಿತ ವಾತಾವರಣ, ಸಮಂಜಸ ಸೌಕರ್ಯ ನಿರ್ಮಿಸಬೇಕಾಗಿರುವುದು ಸರ್ಕಾರ ಮತ್ತು ಸ್ಥಳೀಯ ಸಂಸ್ಥೆಗಳ ಜವಾಬ್ದಾರಿಯಾಗಿರುತ್ತದೆ.
ಪ್ರಸ್ತುತ ರಾಷ್ಟ್ರದಲ್ಲಿರುವ ಸರ್ಕಾರಿ ಕಛೇರಿಗಳು, ಸಾರ್ವಜನಿಕ ಕಟ್ಟಡಗಳು, ಮನರಂಜನೆ ಸ್ಥಳಗಳು. ಉದ್ಯಾನವನಗಳು, ಗ್ರಂಥಾಲಯಗಳು, ಮಾರುಕಟ್ಟೆ, ಪ್ರವಾಸಿ ತಾಣಗಳು ಮತ್ತು ಸಾರ್ವಜನಿಕ ಶೌಚಾಲಯಗಳು ಆಡೆ-ತಡೆ ರಹಿತ ವಾತಾವರಣ ಒಳಗೊಂಡಿರುವ ಬಗ್ಗೆ ಮಾಹಿತಿ ಕಲೆ ಹಾಕಲು ಹಾಗೂ ಈ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸಲು ಭಾರತ ಸರ್ಕಾರದ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಮಂತ್ರಾಲಯವು “ಸುಗಮ್ಯ ಯಾತ್ರಾ” ಎಂಬ ಅರಿವು ಮೂಡಿಸಲು ಕಾರ್ಯಕ್ರಮವನ್ನು ಹಮ್ಮಿಕೊಳ್ಳಲು ಎಲ್ಲಾ ರಾಜ್ಯಗಳಿಗೆ ಸೂಚಿಸಿದೆ ಎಂದು ಹೇಳಿದರು.
ಎಲ್ಲ ಸರ್ಕಾರಿ ಹಾಗೂ ಸಾರ್ವನಿಕ ಕಟ್ಟಡಗಳಲ್ಲಿರುವ ಮೂಲಭೂತ ಸೌಕರ್ಯಗಳಾದ ಶೌಚಾಲಯ, ರಾಂಪ್, ಟ್ಯಾಕ್ಟೈಲ್ಸ್ ಮತ್ತು ಸೈನೇಜ್ ಬೋರ್ಡ್ಗಳು ಒಳಗೊಂಡಂತೆ ವಿಕಲಚೇತನ ವ್ಯಕ್ತಿಗಳ ಸ್ನೇಹ ಮಹಿಯಾಗಿರುವ ಬಗ್ಗೆ ಮಾಹಿತಿಯನ್ನು ಕ್ರೂಢೀಕರಿಸಲು ಕೇಂದ್ರ ಸರ್ಕಾರವು ರಾಜ್ಯ ಸರ್ಕಾರದ ದಿ ಅಸೋಸಿಯೇಷನ್ ಆಫ್ ಪೀಪಲ್ ವಿತ್ ಡಿಸೆಬಿಲಿಟಿ ಬೆಂಗಳೂರು ಈ ಸಂಸ್ಥೆಯೊಂದಿಗೆ ಒಪ್ಪಂದ ಮಾಡಿಕೊಂಡಿರುತ್ತದೆ. ದಿ ಅಸೋಸಿಯೆಷನ್ ಆಫ್ ಪೀಪಲ್ ವಿತ್ ಡಿಸಬಿಲಿ ಸಂಸ್ಥೆಯು ಅಡೆ-ತಡೆ ರಹಿತ ವಾತಾವರಣದ ಬಗ್ಗೆ ಸಂಪೂರ್ಣ ಮತ್ತು ನಿಖರವಾದ ಮಾಹಿತಿಯನ್ನು ಸಂಗ್ರಹಿಸಲು yes to access ಎಂಬ ಆ್ಯಪ್ ಅನ್ನು ಅಭಿವೃದ್ಧಿ ಪಡಿಸಿದೆ.
ಈ ಆ್ಯಪ್ ಅನ್ನು Google play store & Apple store ಮುಖಾಂತರ ಸಾಮಾನ್ಯ ವ್ಯಕ್ತಿಗಳು ಸಹ ಡೌನ್ಲೋಡ್ ಮಾಡಿಕೊಳ್ಳಲು ಅವಕಾಶ ಕಲ್ಪಿಸಿದೆ. ಈ yes to access application ಕನ್ನಡ, ಆಂಗ್ಲ ಅಥವಾ ಹಿಂದಿ ಭಾಷೆಗಳಲ್ಲಿ ಮೊಬೈಲ್ನಲ್ಲಿ ಡೌನ್ಲೋಡ್ ಮಾಡಿಕೊಂಡು ಅಡೆ-ತಡೆ ರಹಿತ ವಾತಾವರಣದ ಮಾಹಿತಿಯನ್ನು ಸಂಗ್ರಹಿಸಬಹುದಾಗಿದೆ. ಈ ಅಪ್ಲಿಕೇಷನ್ ಅನ್ನು ಬಳಸಲು ಹೆಚ್ಚಿನ ತಂತ್ರಜ್ಞಾನದ ಅವಶ್ಯಕತೆ ಇರುವುದಿಲ್ಲ. ಸಾಮಾನ್ಯ ವ್ಯಕ್ತಿಯು ಸಹ ತನ್ನ ಮೊಬೈಲ್ನಿಂದ ಈ ಆ್ಯಪ್ಅನ್ನು ಸುಲಭವಾಗಿ ಬಳಸಲು ಸಾಧ್ಯವಿದೆ ಎಂದು ಹೇಳಿದರು.
ನಗರದ ಒನಕೆ ಓಬವ್ವ ವೃತ್ತದಿಂದ ಆರಂಭವಾದ ಸುಗಮ್ಯ ಯಾತ್ರೆ ಜಾಥಾವು ಮದಕರಿ ವೃತ್ತ, ಸ್ಟೇಡಿಯಂ ರಸ್ತೆ ಮೂಲಕ ಜಿಲ್ಲಾ ಬಾಲಭವನದವರೆಗೂ ಜಾಥಾ ನಡೆಯಿತು.
ಈ ಸಂದರ್ಭದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕಿ ಭಾರತಿ ಆರ್ ಬಣಕಾರ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಅಧಿಕಾರಿ ಪವಿತ್ರ, ಜಿಲ್ಲಾ ಆರೋಗ್ಯಾಧಿಕಾರಿ ಡಾ.ಜಿ.ಪಿ.ರೇಣುಪ್ರಸಾದ್, ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಬಿ.ವಿ.ಗಿರೀಶ್ ಸೇರಿದಂತೆ ಗ್ರಾಮೀಣ, ನಗರ, ವಿವಿದೋದ್ದೇಶ ಪುನರ್ವಸತಿ ಕಾರ್ಯಕರ್ತರು ಇದ್ದರು.
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ಹೌದು, ನಿಮ್ಮ ಊರಿನಲ್ಲಿ ಜಾತ್ರೆ, ಸಭೆ, ಸಮಾರಂಭಗಳು ನಡೆದರೆ ಅದನ್ನು ಬಯಲುಸೀಮೆಟೈಮ್ಸ್.ಕಾಂ ಮೂಲಕ ನಾಡಿಗೆ ತಿಳಿಸಿ. ಅಷ್ಟೇ ಅಲ್ಲ ನಿಮ್ಮೂರಿನ ರಸ್ತೆ, ಚರಂಡಿ, ಆಸ್ಪತ್ರೆ , ಶಾಲೆ ಯಾವುದೇ ಸಮಸ್ಯೆ ಇದ್ದರೂ ಅಧಿಕಾರಿಗಳ ಕಣ್ಣು ತೆರೆಯುವಂತೆ ಸುದ್ದಿ ಮಾಡಿ. ನೀವು ಜಸ್ಟ್ ನಮ್ಮ ವಾಟ್ಸ್ ಆಪ್ ಸಂಖ್ಯೆಗೆ ಸುದ್ದಿ ಕಳುಹಿಸಿ ಉಳಿದದ್ದನ್ನು ಬಯಲುಸೀಮೆಟೈಮ್ಸ್.ಕಾಂ ಮಾಡಲಿದೆ. ನಮ್ಮ ವಾಟ್ಸ್ ಆಪ್ ಸಂಖ್ಯೆ: +91 96201 39796
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.



