ಕಳೆದ ಹತ್ತು ವರ್ಷಗಳಲ್ಲಿ ದೇಶದ ಬಡವರಿಗೆ ಜನೌಷಧ ಕೇಂದ್ರಗಳ ಮೂಲಕ ಔಷಧ ಖರೀದಿಯಲ್ಲಿ ಸುಮಾರು 30 ಸಾವಿರ ಕೋಟಿ ರೂ. ಉಳಿತಾಯವಾಗಿದೆ. ಈ ಸಾಧನೆಯನ್ನು ಗಮನದಲ್ಲಿಟ್ಟು, ಕರ್ನಾಟಕದ ಕಾಂಗ್ರೆಸ್ ಸರಕಾರವು ಸರಕಾರಿ ಆಸ್ಪತ್ರೆಗಳ ಆವರಣದಲ್ಲಿರುವ ಪ್ರಧಾನಮಂತ್ರಿ ಜನೌಷಧ ಕೇಂದ್ರಗಳನ್ನು ಶಾಶ್ವತವಾಗಿ ಮುಚ್ಚುವ ಆದೇಶವನ್ನು ತಕ್ಷಣ ಹಿಂಪಡೆಯಬೇಕೆಂದು ಸಂಸದ ಗೋವಿಂದ ಎಂ. ಕಾರಜೋಳ ಒತ್ತಾಯಿಸಿದ್ದಾರೆ.
ರಾಜ್ಯ ಸರಕಾರದ ಈ ನಿರ್ಧಾರವನ್ನು “ಬಡವರ ಬಗ್ಗೆ ಕಾಳಜಿಯಿಲ್ಲದ, ಅಸಂವೇದನಾಶೀಲ ಮತ್ತು ಮೂರ್ಖತನದ ಕ್ರಮ” ಎಂದು ಕಾರಜೋಳ ಖಂಡಿಸಿದ್ದಾರೆ. ದೇಶಾದ್ಯಂತ 16,290 ಜನೌಷಧ ಕೇಂದ್ರಗಳು ಕಾರ್ಯನಿರ್ವಹಿಸುತ್ತಿದ್ದು, ಕರ್ನಾಟಕದಲ್ಲಿ 1,459 ಕೇಂದ್ರಗಳಿದ್ದು, ಇವುಗಳಲ್ಲಿ 400ಕ್ಕೂ ಹೆಚ್ಚು ಕೇಂದ್ರಗಳು ಸರಕಾರಿ ಆಸ್ಪತ್ರೆಗಳ ಆವರಣದಲ್ಲಿವೆ. ಈ ಕೇಂದ್ರಗಳ ಮೂಲಕ 2,047 ಬಗೆಯ ಔಷಧಗಳು ಮತ್ತು 300ಕ್ಕೂ ಹೆಚ್ಚು ಶಸ್ತ್ರಚಿಕಿತ್ಸಾ ಉಪಕರಣಗಳು ರಿಯಾಯಿತಿ ದರದಲ್ಲಿ ರೋಗಿಗಳಿಗೆ ಲಭ್ಯವಾಗುತ್ತಿವೆ.
ರಾಜ್ಯದ ಬಡವರ ಮತ್ತು ದೀನದಲಿತರ ಬಗ್ಗೆ ಕಾಳಜಿಯಿದ್ದರೆ, ಸರಕಾರ ಈ ಆದೇಶವನ್ನು ಕೂಡಲೇ ರದ್ದುಗೊಳಿಸಬೇಕು ಎಂದು ಕಾರಜೋಳ ಆಗ್ರಹಿಸಿದ್ದಾರೆ. ಸರಕಾರಿ ಆಸ್ಪತ್ರೆಗಳಲ್ಲಿ ಉಚಿತ ಔಷಧ ಸರಬರಾಜು ಮಾಡುವುದಾಗಿ ಆರೋಗ್ಯ ಸಚಿವರು ಹೇಳಿದ್ದಾರಾದರೂ, ಎಷ್ಟು ಆಸ್ಪತ್ರೆಗಳಲ್ಲಿ ಔಷಧಗಳು ಪೂರ್ಣಪ್ರಮಾಣದಲ್ಲಿ ಲಭ್ಯವಿವೆ ಎಂಬುದನ್ನು ಸಚಿವರು ಮೊದಲು ಖಾತರಿಪಡಿಸಬೇಕು. “ರಿಂಗರ್ ಲ್ಯಾಕ್ಟೇಟ್ ದ್ರಾವಣದ ಗುಣಮಟ್ಟದಿಂದ ರಾಜ್ಯದಲ್ಲಿ ಎಷ್ಟು ಬಾಣಂತಿಯರು ಪ್ರಾಣ ಕಳೆದುಕೊಂಡಿದ್ದಾರೆ ಎಂಬುದು ಆರೋಗ್ಯ ಸಚಿವರಿಗೆ ತಿಳಿದಿದೆಯೇ?” ಎಂದು ಕಾರಜೋಳ ಪ್ರಶ್ನಿಸಿದ್ದಾರೆ. ಸರಕಾರಿ ಆಸ್ಪತ್ರೆಗಳಲ್ಲಿ ಔಷಧ ಕೊರತೆಯಿಂದ ವೈದ್ಯರು ಅಸಹಾಯಕರಾಗಿದ್ದು, ರೋಗಿಗಳ ಆಕ್ರೋಶಕ್ಕೆ ಬಲಿಯಾಗುತ್ತಿದ್ದಾರೆ.
ಇದರ ಜೊತೆಗೆ, 400ಕ್ಕೂ ಹೆಚ್ಚು ಜನೌಷಧ ಕೇಂದ್ರಗಳನ್ನು ಮುಚ್ಚುವುದರ ಜತೆಗೆ, ಹೊಸದಾಗಿ 31 ಕೇಂದ್ರಗಳನ್ನು ತೆರೆಯುವ ಪ್ರಸ್ತಾವನೆಯನ್ನು ಸರಕಾರ ತಿರಸ್ಕರಿಸಿದೆ. ಇದು ರಾಜ್ಯದ ಜನರಿಗೆ ಮಾಡುವ ದೊಡ್ಡ ಅನ್ಯಾಯ ಎಂದು ಸಂಸದ ಕಾರಜೋಳ ತಮ್ಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ಹೌದು, ನಿಮ್ಮ ಊರಿನಲ್ಲಿ ಜಾತ್ರೆ, ಸಭೆ, ಸಮಾರಂಭಗಳು ನಡೆದರೆ ಅದನ್ನು ಬಯಲುಸೀಮೆಟೈಮ್ಸ್.ಕಾಂ ಮೂಲಕ ನಾಡಿಗೆ ತಿಳಿಸಿ. ಅಷ್ಟೇ ಅಲ್ಲ ನಿಮ್ಮೂರಿನ ರಸ್ತೆ, ಚರಂಡಿ, ಆಸ್ಪತ್ರೆ , ಶಾಲೆ ಯಾವುದೇ ಸಮಸ್ಯೆ ಇದ್ದರೂ ಅಧಿಕಾರಿಗಳ ಕಣ್ಣು ತೆರೆಯುವಂತೆ ಸುದ್ದಿ ಮಾಡಿ. ನೀವು ಜಸ್ಟ್ ನಮ್ಮ ವಾಟ್ಸ್ ಆಪ್ ಸಂಖ್ಯೆಗೆ ಸುದ್ದಿ ಕಳುಹಿಸಿ ಉಳಿದದ್ದನ್ನು ಬಯಲುಸೀಮೆಟೈಮ್ಸ್.ಕಾಂ ಮಾಡಲಿದೆ. ನಮ್ಮ ವಾಟ್ಸ್ ಆಪ್ ಸಂಖ್ಯೆ: +91 96201 39796
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.



