ಬೆಂಗಳೂರು, ಜು.02: ಪಕ್ಷದಲ್ಲಿ ಎಲ್ಲಿಯೂ ಅಸಮಾಧಾನವಿಲ್ಲ. ಪಕ್ಷ ಸಂಘಟನೆ ಸೇರಿದಂತೆ ಪಕ್ಷದ ಹಾಗುಹೋಗುಗಳನ್ನು ಗಮನಿಸಲು ರಣದೀಪ್ ಸುರ್ಜೇವಾಲ ಅವರು ಭೇಟಿ ನೀಡಿದ್ದಾರೆ”ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಹೇಳಿದರು.ಸದಾಶಿವನಗರ ನಿವಾಸದ ಬಳಿ ಶಿವಕುಮಾರ್ ಅವರು ಮಾಧ್ಯಮಗಳಿಗೆ ಬುಧವಾರ ಪ್ರತಿಕ್ರಿಯೆ ನೀಡಿದರು.ಎಐಸಿಸಿ ಪ್ರಧಾನ ಕಾರ್ಯದರ್ಶಿ ರಾಜ್ಯ ಉಸ್ತುವಾರಿ ರಣದೀಪ್ ಸುರ್ಜೇವಾಲ ಅವರ ಎದುರು ಶಾಸಕರು ಅಸಮಾಧಾನ ಹೇಳಿಕೊಂಡಿದ್ದಾರೆ ಎಂದು ಕೇಳಿದಾಗ, “ಈಗಿನಿಂದಲೇ ಚುನಾವಣೆಗೆ ಹೇಗೆ ತಯಾರಿ ನಡೆಸಬೇಕು ಎಂಬುದು ಸೇರಿದಂತೆ, ಜವಾಬ್ದಾರಿಗಳ ನಿರ್ವಹಣೆ ಹೇಗೆ ಮಾಡಬೇಕು ಎಂದು ಚರ್ಚೆ ನಡೆಸಲು, ಜವಾಬ್ದಾರಿ ವಹಿಸಲು ಸುರ್ಜೆವಾಲ ಅವರು ಬಂದಿದ್ದಾರೆ” ಎಂದರು.
ಶಾಸಕ ಇಕ್ಬಾಲ್ ಹುಸೇನ್ ಗೆ ನೋಟಿಸ್ ನೀಡಿರುವ ಬಗ್ಗೆ ಕೇಳಿದಾಗ, “ಪಕ್ಷದಲ್ಲಿ ಶಿಸ್ತು ಮುಖ್ಯ. ಅವರಿಗೂ ನೋಟಿಸ್ ನೀಡುವೆ, ಬೇರೆಯವರಿಗೂ ನೋಟಿಸ್ ನೀಡಬೇಕಾಗುತ್ತದೆ. ನನ್ನ ಹೆಸರು ಹೇಳಿ, ನನ್ನನ್ನು ಸಿಎಂ ಮಾಡಿ ಎಂದು ಹೇಳುವ ಅವಶ್ಯಕತೆಯಿಲ್ಲ. ಮುಖ್ಯಮಂತ್ರಿ ಸ್ಥಾನದಲ್ಲಿ ಸಿದ್ದರಾಮಯ್ಯ ಅವರು ಇರುವಾಗ ಬೇರೆ ಹೆಸರು ಏಕೆ?” ಎಂದರು. ನೀವು ಪಕ್ಷ ಕಟ್ಟಲು ಕಷ್ಟಪಟ್ಟಿದ್ದೀರಿ ಆ ಕಾರಣಕ್ಕೆ ನಿಮ್ಮ ಹೆಸರು ಪ್ರಸ್ತಾಪಿಸಿದ್ದಾರೆ ಎಂದು ಕೇಳಿದಾಗ, “ನಾನೊಬ್ಬನೆ ಪಕ್ಷ ಕಟ್ಟಿದ್ದೇನೆಯೇ? ನನ್ನಂತೆ ನೂರಾರು, ಸಾವಿರಾರು ಲಕ್ಷಾಂತರ ಜನ ಪಕ್ಷ ಕಟ್ಟಿದ್ದಾರೆ. ಮೊದಲು ಅವರ ನಂಬಿಕೆ ಉಳಿಸಿಕೊಳ್ಳೋಣ” ಎಂದು ಹೇಳಿದರು.
ಸಚಿವ ಸಂಪುಟ ಸಭೆ ವಿಚಾರವಾಗಿ ಕೇಳಿದಾಗ, “ನಾಡಪ್ರಭು ಕೆಂಪೇಗೌಡರ ಮಾಗಡಿ ಸ್ಮಾರಕ ಅಭಿವೃದ್ಧಿ ಸೇರಿದಂತೆ ಬೆಂಗಳೂರಿಗೆ ಒಂದಷ್ಟು ಚಿಕ್ಕಪುಟ್ಟ ನೀರಾವರಿ ಯೋಜನೆಗಳ ಅನುಷ್ಠಾನದ ಕುರಿತು ಸಚಿವ ಸಂಪುಟ ಸಭೆಯಲ್ಲಿ ಚರ್ಚೆ ನಡೆಸಲಾಗುವುದು” ಎಂದು ಹೇಳಿದರು.ಕೋಲಾರ, ಚಿಕ್ಕಬಳ್ಳಾಪುರ ಭಾಗಕ್ಕೆ ಈಗಾಗಲೇ ಕುಡಿಯುವ ನೀರಿನ ಯೋಜನೆಗಳನ್ನು ನೀಡಿದ್ದೇವೆ. ಬೆಂಗಳೂರು ಗ್ರಾಮಾಂತರವನ್ನು ಬೆಂಗಳೂರು ಉತ್ತರ ಎಂದು ಮರುನಾಮಕರಣಕ್ಕೆ ಬೇಡಿಕೆ ಇಟ್ಟಿದ್ದಾರೆ. ಸಭೆಯಲ್ಲಿ ಇದನ್ನೂ ಪ್ರಸ್ತಾವನೆ ಮಾಡಲಾಗುವುದು” ಎಂದು ಹೇಳಿದರು.
ಬೆಂಗಳೂರು ಉತ್ತರ ಜಿಲ್ಲೆ ಮರುನಾಮಕರಣದ ಬಗ್ಗೆ ಕೇಳಿದಾಗ, “ಈ ಮೊದಲು ಕನಕಪುರ, ಚನ್ನಪಟ್ಟಣ, ರಾಮನಗರ ಭಾಗಗಳು ಹಾಗೂ ನಾನು ಪ್ರತಿನಿಧಿಸಿದ್ದ ಜಿಲ್ಲಾ ಪಂಚಾಯತಿ ಸದಸ್ಯನಾಗಿದ್ದಾಗ ಬೆಂಗಳೂರು ಗ್ರಾಮಾಂತರ ಕ್ಷೇತ್ರವಾಗಿತ್ತು. ಬೆಂಗಳೂರು ದಕ್ಷಿಣ ಎಂದು ನಾಮಕರಣವಾದ ನಂತರ ಈ ಭಾಗದ ಶಾಸಕರ ಮನವಿ ಮೇರೆಗೆ ತೀರ್ಮಾನಕ್ಕೆ ಬರಲಾಗುವುದು” ಎಂದರು.
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ಹೌದು, ನಿಮ್ಮ ಊರಿನಲ್ಲಿ ಜಾತ್ರೆ, ಸಭೆ, ಸಮಾರಂಭಗಳು ನಡೆದರೆ ಅದನ್ನು ಬಯಲುಸೀಮೆಟೈಮ್ಸ್.ಕಾಂ ಮೂಲಕ ನಾಡಿಗೆ ತಿಳಿಸಿ. ಅಷ್ಟೇ ಅಲ್ಲ ನಿಮ್ಮೂರಿನ ರಸ್ತೆ, ಚರಂಡಿ, ಆಸ್ಪತ್ರೆ , ಶಾಲೆ ಯಾವುದೇ ಸಮಸ್ಯೆ ಇದ್ದರೂ ಅಧಿಕಾರಿಗಳ ಕಣ್ಣು ತೆರೆಯುವಂತೆ ಸುದ್ದಿ ಮಾಡಿ. ನೀವು ಜಸ್ಟ್ ನಮ್ಮ ವಾಟ್ಸ್ ಆಪ್ ಸಂಖ್ಯೆಗೆ ಸುದ್ದಿ ಕಳುಹಿಸಿ ಉಳಿದದ್ದನ್ನು ಬಯಲುಸೀಮೆಟೈಮ್ಸ್.ಕಾಂ ಮಾಡಲಿದೆ. ನಮ್ಮ ವಾಟ್ಸ್ ಆಪ್ ಸಂಖ್ಯೆ: +91 96201 39796
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.



