ಇತ್ತೀಚೆಗೆ ಮಾಧ್ಯಮಗಳಲ್ಲಿ ಹದಿ ಹರೆಯದ ಯುವಕ, ಯುವತಿಯರು ಹೃದಯಾಘಾತಕ್ಕೆ ಬಲಿಯಾಗುತ್ತಿರುವ ಸುದ್ದಿ ಪ್ರತಿಕ್ಷಣದ ಹಾಗೂ ಪ್ರತಿದಿನದ ಪ್ರಮುಖ ಸುದ್ದಿಯಾಗುತ್ತಿವೆ.ಈ ಸಾವನ್ನು ಹಲವು ಆಯಾಮಗಳಲ್ಲಿ ಚರ್ಚಿಸಲಾಗುತ್ತಿದೆ.ನಾನು ವೈದ್ಯ ಅಥವಾ ಹೃದಯತಜ್ಞನಲ್ಲ, ಮೇಲಾಗಿ ಆಹಾರ ತಜ್ಞ ಖಂಡಿತಾ ಅಲ್ಲ. ಇಲ್ಲಿ ಗಮನಿಸಬೇಕಾದ ಬಹು ಮುಖ್ಯ ಸಂಗತಿಯೆಂದರೆ, ದಕ್ಷಿಣ ಕರ್ನಾಟಕದ ಮತ್ತು ಅರೆ ಮಲೆನಾಡಿನಲ್ಲಿ ಇಂತಹ ಸಾವಿನ ಸುದ್ದಿಗಳು ಹೆಚ್ಚಾಗಿವೆ. ಕಳೆದ ಮೂರು ತಿಂಗಳಲ್ಲಿ ಮಂಡ್ಯ ಜಿಲ್ಲೆಯಲ್ಲಿ 22 ಸಾವುಗಳು ಹಾಗೂ ಹಾಸನ ಜಿಲ್ಲೆಯಲ್ಲಿ 37 ಕ್ಕೂ ಹೆಚ್ಚು ಸಾವುಗಳು ಸಂಭವಿಸಿವೆ.
ಇದನ್ನು ಹೊರತು ಪಡಿಸಿದರೆ, ಬೆಂಗಳೂರು, ಶಿವಮೊಗ್ಗ, ಮಂಗಳೂರು, ಉಡುಪಿಯಲ್ಲಿ ಐದಾರು ಸಾವುಗಳು ಸಂಭವಿಸಿರಬಹುದು. ಇಲ್ಲಿ ಪ್ರಶ್ನೆ ಇರುವುದು ಮಂಡ್ಯ ಮತ್ತು ಹಾಸನದಲ್ಲಿ ಏಕೆ ಹೃದಯಾಘಾತದ ಸಾವು ಹೆಚ್ಚಾಗಿವೆ ಎಂಬುದು.ಹೈದರಾಬಾದ್ ಕರ್ನಾಟಕ ಅಥವಾ ಉತ್ತರ ಕರ್ನಾಟಕದಲ್ಲಿ ಬಳ್ಳಾರಿ,ರಾಯಚೂರು, ಗುಲ್ಬರ್ಗಾ, ಕೊಪ್ಪಳ, ಬೀಜಾಪುರ, ಗದಗ ಹೀಗೆ ಬಹುತೇಕ ಜಿಲ್ಲೆಗಳಲ್ಲಿ ಈ ಪ್ರಕರಣ ಶೂನ್ಯ ಎನ್ನಬಹುದು. ಅಥವಾ ಒಂದೆರೆಡು ಸಂಭವಿಸಿದ್ದರೆ, ಸಹಜ ಸಾವು ಎನ್ನಬಹುದು.ಇಡೀ ದಕ್ಷಿಣ ಕರ್ನಾಟಕದಲ್ಲಿ ಅತಿ ಹೆಚ್ಚು ಮಾಂಸಹಾರಿಗಳು ಇರುವುದು ಮಂಡ್ಯ ಮತ್ತು ಹಾಸನ ಜಿಲ್ಲೆಯಲ್ಲಿ ಮತ್ತು ಅತಿ ಹೆಚ್ಚು ಹಂದಿ ಮಾಂಸ ಸೇವನೆ ಮಾಡುವವರು ಈ ಜಿಲ್ಲೆಗಳಲ್ಲಿ ಇದ್ದಾರೆ. ಇತ್ತೀಚೆಗೆ ಕುರಿ ಮತ್ತು ಮೇಕೆ ಮಾಂಸದ ಬೆಲೆ 750 ರಿಂದ ಒಂದು ಸಾವಿರಕ್ಕೆ ಏರಿದೆ. ಹಂದಿ ಮಾಂಸದ ಬೆಲೆ 300 ರಿಂದ 400 ರೂಪಾಯಿ ಇದೆ.ಹಾಗಾಗಿ ಎಲ್ಲರೂ ಕೋಳಿ ಮಾಂಸ ವಿಶೇಷವಾಗಿ ಬಾಯ್ಲರ್ ಕೋಳಿ ಮಾಂಸ ರಬ್ಬರ್ ಅಗಿದ ಅನುಭವ ಹಾಗಾಗಿ ಬಹುತೇಕ ಮಂದಿ ಇಷ್ಟಪಡುವುದಿಲ್ಲ. ಮಾಂಸದ ರುಚಿಗಾಗಿ ಹಂದಿ ಮಾಂಸಕ್ಕೆ ಒಗ್ಗಿ ಹೋಗಿದ್ದಾರೆ.
ಹಾಸನದ ಹಳೆ ಬಸ್ ನಿಲ್ದಾಣದ ಎದುರು ಇರುವ ಅಂಗಡಿಯಲ್ಲಿ ದಿನವೊಂದಕ್ಕೆ ಎರಡೂವರೆ ಕ್ವಿಂಟಾಲ್ ಹುರಿದ ಹಂದಿ ಮಾಂಸ ಖರ್ಚಾಗುತ್ತದೆ. ಮನೆಗೆ ಯಾರಾದರೂ ಅತಿಥಿಗಳು ಬಂದರೆ, ಎರಡು ಕೆ.ಜಿ. ಮೂರು ಕೆ.ಜಿ. ಕೊಂಡೊಯ್ಯುತ್ತಾರೆ. ಅಕ್ಕಿರೊಟ್ಟಿ, ಹಂದಿ ಮಾಂಸ ಆ ದಿನದ ಸ್ಪೆಷಲ್. ಮಂಡ್ಯದಲ್ಲಿ ಹುಣಸೆ ಮರ ಸ್ಟಾಪ್ ಎನ್ನುವ ನಾಗಮಂಗಲ, ತುಮಕೂರು ರಸ್ತೆಯಲ್ಲಿ ದಿನವೊಂದಕ್ಕೆ ಐದು ಕ್ವಿಂಟಾಲ್ ಮಾಂಸ ಖರ್ಚಾಗುತ್ತದೆ. ಹೋಬಳಿ ಕೇಂದ್ರವಾದ ನನ್ನೂರು ಕೊಪ್ಪದಲ್ಲಿ ದಿನವೊಂದಕ್ಕೆ ಒಂದೂವರೆ ಕ್ವಿಂಟಾಲ್ ಹಂದಿ ಮಾಂಸ ಖರ್ಚಾಗುತ್ತದೆ. ಜಿಲ್ಲೆಯ ಉಳಿದ ಊರುಗಳಲ್ಲಿ ಎಷ್ಟು ಖರ್ಚಾಗಬಹುದು ಊಹಿಸಿ.
ಈ ಜಗತ್ತಿನಲ್ಲಿ ಬಡವರು ಸಾಯುತ್ತಿರುವುದು ಹಸಿವಿನಿಂದಲೇ ಹೊರತು, ಮಧುಮೇಹ, ಕೊಬ್ಬು ಅಥವಾ ರಕ್ತದೊತ್ತಡದ ಕಾಯಿಲೆಗಳಿಂದ ಅಲ್ಲ. ಇಂತಹ ಸಂಗತಿಗಳ ಕುರಿತಾಗಿ ನಾವು ಆಲೋಚಿಸಬೇಕಾಗಿದೆ. ಉತ್ತರ ಕರ್ನಾಟಕದಲ್ಲಿ ಜೋಳದ ರೊಟ್ಟಿ ಕಾಳುಫಲ್ಯ ಹಾಗೂ ಬಡವರ ಪಾಲಿಗೆ ರೊಟ್ಟಿಯ ಜೊತೆ ಕಾರ, ಈರುಳ್ಳಿ ಮೆಣಸಿನಕಾಯಿ ಅವರ ಆಹಾರವಾಗಿದೆ. ಬಡವರು ಮಾಂಸವಿರಲಿ, ಅನ್ನ ಕೂಡ ಕಾಣಲಾರದ ಸ್ಥಿತಿ. ನಮ್ಮ ಆಹಾರ ಪದ್ಧತಿ ಕೂಡ ನಮ್ಮ ಸಾವಿಗೆ ಕಾರಣವಾಗುತ್ತಿದೆ ಎಂಬ ನಿಟ್ಟಿನಲ್ಲಿ ನಾವೀಗ ಯೋಚಿಸಬೇಕಾಗಿದೆ.
ಈಗಿನ ನಮ್ಮ ಮಕ್ಕಳು ದಿನ ನಿತ್ಯ ತಿನ್ನುತ್ತಿರುವ ಆಹಾರ ಪದಾರ್ಥಗಳ ಬಗ್ಗೆ ನಾವು ಯೋಚಿಸಲೇ ಇಲ್ಲ. ಗೋಬಿ ಮಂಚೂರಿ, ಪಾನಿಪೂರಿ, ಮಸಾಲೆಪೂರಿ, ಚಿಕನ್ ಕಬಾಬ್, ಬಿರಿಯಾನಿ , ಪಿಶ್ ಪ್ರೈ ಎಂಬ ರಸ್ತೆ ಬದಿಯ ಆಹಾರಗಳು ಅವರಿಗೆ ಈಗ ಫೆವರೆಟ್ ಆಹಾರವಾಗಿವೆ. ಮನೆಯ ಇಡ್ಲಿ, ದೋಸೆ, ಅನ್ನಸಾರು, ಮುದ್ದೆ, ರೋಟ್ಟಿ ಇವುಗಳಿಗಿಂತ ಹೊರಗಿಂದ ತರಿಸುವ ಪಿಜ್ಜಾ, ಮುಖ್ಯವಾಗಿದೆ. ಇಂದಿನ ಯುವ ತಲೆಮಾರು ಕಸವನ್ನು ತಿಂದು, ವಿಷವನ್ನು ವಿಸರ್ಜಿಸುತ್ತಿದೆ. ಅವರಿಗೆ ಹಾಲು, ಕಾಫಿ, ಚಹಾ ಗಳಿಗಿಂತ ಕೋಕಾ ಕೋಲಾ, ಥಮ್ಸ್ ಅಪ್ ನಂತಹ ಪಾನೀಯಗಳು ಇಷ್ಟ.
ಇಂದಿನ ಆಧುನಿಕ ಯುಗದಲ್ಲಿ ಸಾಂಪ್ರದಾಯಕ ಮಾಂಸಹಾರಿ ಅಡುಗೆ ಮಾಯವಾಗಿದೆ. ಎಲ್ಲಿ ನೋಡಿದರೂ ಬಿರಿಯಾನಿ ಮತ್ತು ಕಬಾಬ್. ಇವುಗಳಿಗೆ ದೊನ್ನೆ ಬಿರಿಯಾನಿ, ಗೌಡರ ಬಿರಿಯಾನಿ ಎಂಬ ಹೆಸರು ಬೇರೆ. ಈ ಬಿರಿಯಾನಿ ಮತ್ತು ಕಬಾಬ್ ಗಳಿಗೆ ಬಳಸುವ ಎಣ್ಣೆ , ತುಪ್ಪ ಅವುಗಳ ಗುಣಮಟ್ಟದ ಬಗ್ಗೆ ನಾವು ಯೋಚಿಸುವುದಿಲ್ಲ. ಕೇವಲ ಐವತ್ತು ರೂಪಾಯಿನಿಂದ ಎಂಬತ್ತು ರೂಪಾಯಿಗೆ ಸಿಗುವ ಈ ಆಹಾರ ಮತ್ತು ಎಗ್ ಪ್ರೈಡ್ ರೈಸ್ ಮತ್ತು ಚಿಕನ್ ಪ್ರೈಡ್ ರೈಸ್ ಈಗ ಬಹುತೇಕ ಯುವಜನತೆಯ ಮೆಚ್ಚಿನ ಆಹಾರವಾಗಿದೆ.ಬೆಂಗಳೂರಿನಲ್ಲಿ ರಾತ್ರಿ ವೇಳೆ ನಲವತ್ತು ವರ್ಷಗಳಸುಭೆಧಾರ್ ರಸ್ತೆ, ಧರ್ಮರಾಜ ದೇವಸ್ಥಾನದ ರಸ್ತೆ, ಅವಿನ್ಯೂ ರೋಡ್ ಇಂತಹ ಸ್ಥಳಗಳಲ್ಲಿ ರಾತ್ರಿ ಒಂಬತ್ತರಿಂದ ಹನ್ನೆರೆಡು ಗಂಟೆಯವರೆಗೆ ಇಡ್ಡಿ ಚಟ್ನಿ ಮತ್ತು ಬೆಣ್ಣೆ, ದೋಸೆ, ಚಿತ್ರಾನ್ನ ಇವೆಲ್ಲವೂ ಈಗ ಬಹುತೇಕ ಮರೆಯಾಗಿವೆ. ಎಲ್ಲಿ ನೋಡಿದರೂ ಕಳಪೆ ಎಣ್ಣೆಯಿಂದ ತಯಾರಿಸಿದ ಎಗ್ ಪ್ರೈಡ್ ರೈಸ್, ಕಬಾಬ್ ವಿಜೃಂಭಿಸುತ್ತಿವೆ.
ಇದು ಬೆಂಗಳೂರು ನಗರದ ಕಥೆ ಮಾತ್ರವಲ್ಲ, ಎಲ್ಲ ನಗರಗಳ ಕಥೆಯೂ ಹೌದು. ನಮ್ಮ ಯುವಜನರನ್ನು ಬೀದಿ ಬದಿಯ ಆಹಾರಗಳಿಂದ ವಿಶೇಷವಾಗಿ ಬಿರಿಯಾನಿ, ಕಬಾಬ್ ಮೋಹದಿಂದ ರಕ್ಷಿಸಬೇಕು. ಹೈದರಾಬಾದ್ ಬಿರಿಯಾನಿ ಮತ್ತು ಲಕ್ನೋ ಬಿರಿಯಾನಿ ಇಡೀ ದೇಶ ಮಾತ್ರವಲ್ಲ, ಜಗತ್ತಿನಲ್ಲಿ ಪ್ರಸಿದ್ಧಿ. ಒಟ್ಟು ಆರು ಬಾರಿ ಹೈದರಾಬಾದಿಗೆ ಮತ್ತು ಒಮ್ಮೆ ಲಕ್ನೊ ನಗರಕ್ಕೆ ಭೇಟಿ ನೀಡಿದ್ದೀನಿ. ಆದರೆ, ಈ ಆಹಾರದತ್ತ ಕಣ್ಣೆತ್ತಿ ತಿರುಗಿಯೂ ನೋಡಲಿಲ್ಲ.ಬಸುಮತಿ ಅಕ್ಕಿಯಿಂದ ತಯಾರಿಸುವ ಈ ಬಿರಿಯಾನಿಯ ಅನ್ನದೊಳಕ್ಕೆ ಒಮ್ಮೆ ನಿಮ್ಮ ಕೈ ಬೆರಳುಗಳನ್ನು ಅದ್ದಿ, ಮೇಲಕ್ಕೆ ಎತ್ತಿದರೆ, ಬೆರಳುಗಳಲ್ಲಿ ಎಣ್ಣೆ ತೊಟ್ಟಿಕ್ಕುತ್ತದೆ. ಇಂತಹ ಆಹಾರ ನಮ್ಮ ನಾಲಿಗೆಗೆ ರುಚಿಸಬಲ್ಲದು ಆದರೆ, ಹೃದಯಕ್ಕೆ ರುಚಿಸಲಾರದು. ಈ ಕಟು ಸತ್ಯ ಸದಾ ನಮ್ಮ ಗಮನದಲ್ಲಿ ಇರಬೇಕು. ಈಗಾಗಲೇ ನಗರಗಳು ವಿಷಗಾಳಿಯಿಂದ ತುಂಬಿ ತುಳುಕುತ್ತಿವೆ. ಅವುಗಳ ಜೊತೆಗೆ ಪಾಸ್ಟ್ ಪುಡ್ ಎಂಬ ಗೊಬ್ಬರದ ಆಹಾರಗಳು ಬೇರೆ.ಇತ್ತೀಚೆಗೆ ಬಹುತೇಕರ ಮನೆಗಳಲ್ಲಿ ತಿಂಡಿ, ಊಟ ಮನೆಯಲ್ಲಿ ತಯಾರಾಗುವುದಿಲ್ಲ ಜಿಮೊಟೊ, ಸ್ವಿಗ್ಗಿ ಮೂಲಕ ಮನೆಗೆ ಬರುತ್ತವೆ. ನಾವು ಮನೆಗೆ ತರಿಸುವುದು ಹಸಿವು ನೀಗಿಸುವುದಕ್ಕೆ ಆಹಾರವಲ್ಲ, ಹೃದಯ ಮತ್ತು ದೇಹವನ್ನು ಕೊಲ್ಲುವ ನಿಧಾನ ವಿಷ ಎಂಬುದನ್ನು. ಈಗಲಾದರೂ ಅರಿಯುವುದು ಸೂಕ್ತ.
ನಮ್ಮ ಆಹಾರದ ಅಭಿರುಚಿಯು ತಂದಿತ್ತ ಅನಾಹುತಗಳ ಕುರಿತಾಗಿ ಯಾವ ತಜ್ಞರ ಸಮಿತಿಯೂ ಬೇಕಾಗಿಲ್ಲ. ನಾವು ತಿನ್ನುವ ಆಹಾರದ ಬಗ್ಗೆ ನಮ್ಮ ಮಕ್ಕಳಿಗೆ ತಿಳಿ ಹೇಳಬೇಕು. ಐಸ್ ಕ್ರೀಂ, ದುಬಾರಿ ಚಾಕ್ಲೇಟ್, ಕುರ್ಕುರೆ, , ಪಿಜ್ಜಾ, ಇವೆಲ್ಲಾ ವಿಷದ ಮತ್ತೊಂದು ರೂಪ ಎಂದು ಹೇಳಬೇಕಿದೆ.
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ಹೌದು, ನಿಮ್ಮ ಊರಿನಲ್ಲಿ ಜಾತ್ರೆ, ಸಭೆ, ಸಮಾರಂಭಗಳು ನಡೆದರೆ ಅದನ್ನು ಬಯಲುಸೀಮೆಟೈಮ್ಸ್.ಕಾಂ ಮೂಲಕ ನಾಡಿಗೆ ತಿಳಿಸಿ. ಅಷ್ಟೇ ಅಲ್ಲ ನಿಮ್ಮೂರಿನ ರಸ್ತೆ, ಚರಂಡಿ, ಆಸ್ಪತ್ರೆ , ಶಾಲೆ ಯಾವುದೇ ಸಮಸ್ಯೆ ಇದ್ದರೂ ಅಧಿಕಾರಿಗಳ ಕಣ್ಣು ತೆರೆಯುವಂತೆ ಸುದ್ದಿ ಮಾಡಿ. ನೀವು ಜಸ್ಟ್ ನಮ್ಮ ವಾಟ್ಸ್ ಆಪ್ ಸಂಖ್ಯೆಗೆ ಸುದ್ದಿ ಕಳುಹಿಸಿ ಉಳಿದದ್ದನ್ನು ಬಯಲುಸೀಮೆಟೈಮ್ಸ್.ಕಾಂ ಮಾಡಲಿದೆ. ನಮ್ಮ ವಾಟ್ಸ್ ಆಪ್ ಸಂಖ್ಯೆ: +91 96201 39796
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.



