ಹೈದರಾಬಾದ್: ಕೋಟ ಶ್ರೀನಿವಾಸ್ ರಾವ್ ನಿಧನ ಬೆನ್ನಲ್ಲೇ ತೆಲುಗು ಚಿತ್ರರಂಗಕ್ಕೆ ಮತ್ತೊಂದು ಆಘಾತ ಎದುರಾಗಿದೆ. ಖ್ಯಾತ ಹಾಸ್ಯ ನಟ ಫಿಶ್ ವೆಂಕಟ್ (53) ಅವರು ಶನಿವಾರ ನಿಧನರಾಗಿದ್ದಾರೆ.ತಲುಗು ಚಿತ್ರರಂಗದಲ್ಲಿ ಹಾಸ್ಯ ನಟನಾಗಿ ತಮ್ಮದೇ ಆದ ಛಾಪು ಮೂಡಿಸಿದ್ದ ಫಿಶ್ ವೆಂಕಟ್ ಅನಾರೋಗ್ಯದ ಕಾರಣದಿಂದಾಗಿ ಕೊನೆಯುಸಿರೆಳೆದಿದ್ದಾರೆ.ಫಿಶ್ ವೆಂಕಟ್ ಅವರು ಟಾಲಿವುಡ್‌ನಲ್ಲಿ ಹಲವು ಚಿತ್ರಗಳಲ್ಲಿ ಖಳನಟನಾಗಿ, ಹಾಸ್ಯ ಖಳ ನಟನಾಗಿ, ಹಾಸ್ಯನಟನಾಗಿ ನಟಿಸಿ ನಗೆಯ ಹೊಳೆಯನ್ನೇ ಹರಿಸಿದ್ದರು. ಆದರೆ, ಅನಾರೋಗ್ಯ ಕಾರಣದಿಂದಾಗಿ ಕಳೆದ ಕೆಲವು ಕಾಲದಿಂದ ಸಿನಿಮಾಗಳಿಂದ ದೂರ ಉಳಿದಿದ್ದರು.
ಮೂತ್ರಪಿಂಡ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದ ಫಿಶ್ ವೆಂಕಟ್ ಅವರು, ಕಾಯಿಲೆ ಉಲ್ಬಣಗೊಂಡು ಎರಡೂ ಮೂತ್ರಪಿಂಡಗಳು ಹಾಳಾದ ಕಾರಣ ಡಯಾಲಿಸಿಸ್ ಚಿಕಿತ್ಸೆಗೆ ಒಳಗಾಗಿದ್ದರು. ಇದಾದ ಕೆಲ ದಿನಗಳ ಬಳಿಕ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿದೆ ಎನ್ನಲಾಗಿತ್ತು. ಆದರೆ, ಮತ್ತೆ ಆರೋಗ್ಯದಲ್ಲಿ ಏರುಪೇರಾದ ಕಾರಣ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಬಳಿಕ ಸಹಾಯ ಮಾಡುವಂತೆ ಚಿತ್ರರಂಗ ಮತ್ತು ಸರ್ಕಾರಕ್ಕೆ ಕುಟುಂಬ ಸದಸ್ಯರು ಮನವಿ ಮಾಡಿದ್ದರು. ಅನೇಕರು ನೆರವಿನ ಹಸ್ತ ಚಾಚಿದ್ದರು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಇಂದು ಕೊನೆಯುಸಿರೆಳೆದಿದ್ದಾರೆ. ಫಿಶ್ ವೆಂಕಟ್ ನಿಧನಕ್ಕೆ ಅವರ ಆಪ್ತರು ಮತ್ತು ಅಭಿಮಾನಿಗಳು ತೀವ್ರ ಸಂತಾಪ ವ್ಯಕ್ತಪಡಿಸುತ್ತಿದ್ದಾರೆ. ಫಿಶ್ ವೆಂಕಟ್ ಅವರ ಅಕಾಲಿಕ ಮರಣವು ಟಾಲಿವುಡ್‌ಗೆ ದೊಡ್ಡ ನಷ್ಟವಾಗಿದೆ ಎಂದು ಅನೇಕರು ಹೇಳಿದ್ದಾರೆ.
2000ರಲ್ಲಿ ʼಸಮ್ಮಕ್ಕ ಸಾರಕ್ಕʼ ಚಿತ್ರದ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟ ಫಿಶ್ ವೆಂಕಟ್ ನೂರಾರು ಸಿನಿಮಾಗಳಲ್ಲಿ ನಟಿಸಿದ್ದಾರೆ. ಎಲ್ಲಾ ಸ್ಟಾರ್ ಹೀರೋಗಳೊಂದಿಗೆ ತೆರೆ ಹಂಚಿಕೊಂಡಿದ್ದರು.ಫಶ್ ವೆಂಕಟ್ ತಮ್ಮ ವಿಶಿಷ್ಟ ತೆಲಂಗಾಣ ಉಪಭಾಷೆ ಮತ್ತು ನಿಷ್ಪಾಪ ಹಾಸ್ಯ ಸಮಯಪ್ರಜ್ಞೆಗೆ ಹೆಸರುವಾಸಿಯಾಗಿದ್ದರು. ಇದು ಪ್ರೇಕ್ಷಕರಿಂದ ವ್ಯಾಪಕ ಮೆಚ್ಚುಗೆಯನ್ನು ಗಳಿಸಿತು.
ಹೈದರಾಬಾದ್‌ನಲ್ಲಿ ಜನಿಸಿದ ಅವರು 2000ರ ದಶಕದ ಆರಂಭದಲ್ಲಿ ʼಖುಷಿʼ ಚಿತ್ರದ ಮೂಲಕ ಉತ್ತಮ ಹೆಸರು ಮಾಡಿದ್ದರು. ಆದಿ, ಬನ್ನಿ, ಅದುರ್ಸ್, ಗಬ್ಬರ್ ಸಿಂಗ್ ಮತ್ತು ಡಿಜೆ ಟಿಲ್ಲು ಮುಂತಾದ ಹಲವಾರು ಚಿತ್ರಗಳಲ್ಲಿ ಪ್ರೇಕ್ಷಕರನ್ನು ರಂಜಿಸಿದ್ದಾರೆ.ಹಸ್ಯ ಪಾತ್ರಗಳ ಜೊತೆಗೆ ಅವರು ವಿಲನ್ ಪಾತ್ರಗಳಲ್ಲಿನ ಅಭಿನಯದ ಮೂಲಕವೂ ಛಾಪು ಮೂಡಿಸಿದ್ದರು. ಫಿಶ್ ವೆಂಕಟ್ ಇತ್ತೀಚಿನ ಚಿತ್ರಗಳಾದ ಸ್ಲಮ್ ಡಾಗ್ ಹಸ್ಬೆಂಡ್, ನರಕಾಸುರ ಮತ್ತು ಕಾಫಿ ವಿತ್ ಎ ಕಿಲ್ಲರ್‌ನಲ್ಲಿ ನಟಿಸಿದ್ದರು
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ಹೌದು, ನಿಮ್ಮ ಊರಿನಲ್ಲಿ ಜಾತ್ರೆ, ಸಭೆ, ಸಮಾರಂಭಗಳು ನಡೆದರೆ ಅದನ್ನು ಬಯಲುಸೀಮೆಟೈಮ್ಸ್.ಕಾಂ ಮೂಲಕ ನಾಡಿಗೆ ತಿಳಿಸಿ. ಅಷ್ಟೇ ಅಲ್ಲ ನಿಮ್ಮೂರಿನ ರಸ್ತೆ, ಚರಂಡಿ, ಆಸ್ಪತ್ರೆ , ಶಾಲೆ ಯಾವುದೇ ಸಮಸ್ಯೆ ಇದ್ದರೂ ಅಧಿಕಾರಿಗಳ ಕಣ್ಣು ತೆರೆಯುವಂತೆ ಸುದ್ದಿ ಮಾಡಿ. ನೀವು ಜಸ್ಟ್ ನಮ್ಮ ವಾಟ್ಸ್ ಆಪ್ ಸಂಖ್ಯೆಗೆ ಸುದ್ದಿ ಕಳುಹಿಸಿ ಉಳಿದದ್ದನ್ನು ಬಯಲುಸೀಮೆಟೈಮ್ಸ್.ಕಾಂ ಮಾಡಲಿದೆ. ನಮ್ಮ ವಾಟ್ಸ್ ಆಪ್ ಸಂಖ್ಯೆ: +91 96201 39796
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.



