ಪತ್ರಕರ್ತನ ಕನಸಿನಲ್ಲಿ ಮೂಡಿಬಂದ ಕರ್ನಾಟಕದ ನೂತನ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ರೋಚಕ ಸಂದರ್ಶನ. ಮಾಧ್ಯಮ, ರಾಜಕೀಯ ವ್ಯವಸ್ಥೆ ಮತ್ತು ಸ್ವಾಮೀಜಿಗಳ ಕುರಿತು ಡಿಕೆಶಿ ಬಿಚ್ಚಿಟ್ಟ ಅಂತರಂಗದ ಸತ್ಯಗಳ ವಿಡಂಬನಾತ್ಮಕ ಲೇಖನ.
ತುಂಬಾ ತುಂಬಾ ಆಶ್ಚರ್ಯವಾಗುತ್ತಿದೆ. ಇದು ಕನಸೋ ನನಸೋ ಇನ್ನೂ ಅರ್ಥವಾಗುತ್ತಿಲ್ಲ…..
ಪ್ರಮಾಣವಚನಕ್ಕೆ ಸಿದ್ದರಾಗಿ ಕೈಯಲ್ಲಿ ಪ್ರತಿಜ್ಞಾವಿಧಿಯ ಹಸ್ತಪ್ರತಿಯನ್ನು ಹಿಡಿದು ದಟ್ಟ ಕಾಡಿನ ಒಳಗಿನಿಂದ ಶುಭ್ರ ಶ್ವೇತ ವಸ್ತ್ರಧಾರಿಯಾಗಿ, ತಲೆಗೆ ಮೈಸೂರಿನ ಪೇಟಾ ಧರಿಸಿ, ಚಿನ್ನದ ಅಂಚಿನ ಶಲ್ಯವನ್ನು ಹೆಗಲ ಮೇಲೆ ಹಾಕಿಕೊಂಡು ಕರ್ನಾಟಕದ ನೂತನ ಮುಖ್ಯಮಂತ್ರಿ ಸನ್ಮಾನ್ಯ
ಶ್ರೀ ಡಿಕೆ ಶಿವಕುಮಾರ್ ಅವರು ನೇರವಾಗಿ ನನ್ನತ್ತಲೇ ಬರುತ್ತಿದ್ದರು……
ನನಗೂ ಒಂದು ಕ್ಷಣ ದಿಗ್ಬ್ರಮೆಯಾಯಿತು. ಇದೇನು ನಾನು ಯಾರನ್ನು ಸಂದರ್ಶಿಸಬೇಕು ಎಂದು ಪತ್ರಕರ್ತನ ವೇಷದಲ್ಲಿ ಪೆನ್ನು, ಪೇಪರ್ ಮತ್ತು ಸ್ವಯಂ ಚಾಲಿತ ದ್ರೋಣ್ ಕ್ಯಾಮರಾದೊಂದಿಗೆ ಹೋಗುತ್ತಿರುವಾಗ ಆ ವ್ಯಕ್ತಿ ನನ್ನ ಎದುರಿಗೆ ಬರುತ್ತಿರುವುದನ್ನು ನೋಡಿ ಎಲ್ಲವೂ ದೈವೇಚ್ಚೆ ಎನಿಸಿತು, ಪವಾಡವೆನಿಸಿತು. ನೇರವಾಗಿ ಶಿವಕುಮಾರ್ ಅವರಿಗೆ ನಮಸ್ಕಾರ ಹೇಳಿ ಮಾತನಾಡಿಸತೊಡಗಿದೆ.
ನಾನು : ನಮಸ್ಕಾರ ಡಿಕೆ ಶಿವಕುಮಾರ್ ಅವರೇ, ಅಭಿನಂದನೆಗಳು. ಕರ್ನಾಟಕದ 24ನೆಯ ಮುಖ್ಯಮಂತ್ರಿ ಆಗಿ ಪ್ರಮಾಣವಚನ ಸ್ವೀಕರಿಸಲು ಹೊರಟಿರುವುದಕ್ಕೆ.
ಶಿವಕುಮಾರ್ : ಥ್ಯಾಂಕ್ಯೂ ಪತ್ರಕರ್ತರೆ. ನನ್ನ ಬಗ್ಗೆ ಸುಮಾರು 40 ವರ್ಷಗಳಿಂದಲೂ ಪತ್ರಿಕೆಗಳಲ್ಲಿ ಮತ್ತು ಇತ್ತೀಚಿನ ವರ್ಷಗಳಲ್ಲಿ ಟಿವಿ ಸುದ್ದಿ ಮಾಧ್ಯಮಗಳಲ್ಲಿ ನನ್ನನ್ನು ಅತ್ಯಂತ ಕೆಟ್ಟ ರೀತಿಯಲ್ಲಿ ಬಿಂಬಿಸುತ್ತಾ, ನಾನೊಬ್ಬ ರೌಡಿ, ನಾನೊಬ್ಬ ನೀಲಿ ಚಿತ್ರಗಳ ವಿತರಕ ಮತ್ತು ಪ್ರದರ್ಶಕ, ನಾನೊಬ್ಬ ಭ್ರಷ್ಟಾಚಾರಿ, ನಾನೊಬ್ಬ ದುರಹಂಕಾರಿ, ಅಷ್ಟೇ ಏಕೆ ಕೆಲವೊಮ್ಮೆ ಕನಕಪುರದ ಕನಕಾಸುರ ಎಂದು ರಾಕ್ಷಸನಂತೆ ವರ್ಣಿಸಿದವರು ಪತ್ರಕರ್ತರು. ಆದರೆ ಕನ್ನಡ ನಾಡಿನ ಜನ ನನ್ನನ್ನು ಮುಖ್ಯಮಂತ್ರಿ ಸ್ಥಾನದವರೆಗೂ ಕರೆದುಕೊಂಡು ಬಂದಿದ್ದಾರೆ. ನಿಮ್ಮ ಪತ್ರಿಕೆ ಮತ್ತು ಟಿವಿ ಮಾಧ್ಯಮಗಳು ನನ್ನ ಬೆಳವಣಿಗೆಯನ್ನು ತಡೆಯಲು ಸಾಧ್ಯವೇ ಆಗಲಿಲ್ಲ. ಜನರಿಗೆ ನಿಮ್ಮ ಮಾತು, ಬರಹಗಳಿಗಿಂತ ನನ್ನ ಮಾತು, ಕೆಲಸಗಳೇ ಹೆಚ್ಚು ಇಷ್ಟವಾದವು. ಅವುಗಳೇ ಹೆಚ್ಚು ನಂಬಿಕೆಗೆ ಅರ್ಹವಾದವು. ಆದರೂ ನೀವು ಅಭಿನಂದನೆ ಸಲ್ಲಿಸಿರುವುದಕ್ಕೆ ಧನ್ಯವಾದಗಳು. ತುಂಬಾ ಥ್ಯಾಂಕ್ಸ್.
ನಾನು : ಅಲ್ಲಾ ಶಿವಕುಮಾರ್ ಅವರೇ, ನಾವು ಪತ್ರಕರ್ತರು. ಈ ದೇಶದಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯ ಇದೆ. ನಾವು ಪ್ರಜಾಪ್ರಭುತ್ವದ ನಾಲ್ಕನೇ ಅಂಗ. ನಾವು ಜನರ ಭಾವನೆಗಳ ಸಾಂಕೇತಿಕ ಪ್ರತಿನಿಧಿಗಳು. ಆದ್ದರಿಂದ ನಾವು ಕಂಡ ಸತ್ಯವನ್ನು ಜನರಿಗೆ ವಿವರಿಸಬೇಕು. ಅದನ್ನೇ ಮಾಡಿದ್ದೇವೆ. ಅದರಲ್ಲಿ ತಪ್ಪೇನಿದೆ.
ಡಿಕೆಶಿ : ರೀ ಸಾಕು ನಿಲ್ಲಿಸಿ ನಿಮ್ಮ ಪುಸ್ತಕದ ಪುರಾಣ. ಏನ್ರೀ ಈ ದೇಶದಲ್ಲಿ ಯಾರಾದರೂ ಒಬ್ಬ ರಾಜಕಾರಣಿ ಭ್ರಷ್ಟಾಚಾರ ಮಾಡದೆ, ದೌರ್ಜನ್ಯ ಮಾಡದೆ, ಸುಳ್ಳು ಭರವಸೆ ಕೊಡದೆ, ಧರ್ಮದ ವಿಷಯ ಹೇಳದೆ, ಜಾತಿಯ ವಿಷಯ ಪ್ರಸ್ತಾಪಿಸದೆ, ಹಣ, ಹೆಂಡ, ಹಂಚದೇ ಚುನಾವಣೆಯಲ್ಲಿ ಗೆಲ್ಲಲಿಕ್ಕಾಗುತ್ತದೆಯೇ. ಅಸಲಿಗೆ ಪಕ್ಷದ ಟಿಕೆಟ್ ಪಡೆಯಲಿಕ್ಕೆ ಆಗುತ್ತದೆಯೇ. ಮಂತ್ರಿ, ಮುಖ್ಯಮಂತ್ರಿ ಆಗಲು ಆಗುತ್ತದೆಯೇ. ಯಾರೋ ಅಪರೂಪದ ಕೆಲವರನ್ನು ಹೊರತುಪಡಿಸಿ ಬಹುತೇಕರು ಇದೇ ವ್ಯವಸ್ಥೆಯಲ್ಲಿ ತಾನೆ ಗೆಲ್ಲುತ್ತಿರುವುದು. ಆದರೆ ನೀವುಗಳು ನನ್ನನ್ನು ಮಾತ್ರ ಟಾರ್ಗೆಟ್ ಮಾಡಿದಿರಿ. ಹಳ್ಳಿಯ ಈ ರೈತನನ್ನು ರೌಡಿಯಾಗಿ ಚಿತ್ರಿಸಿದ್ದೀರಿ. ಇದೇನಾ ನಿಮ್ಮ ಅಭಿವ್ಯಕ್ತಿ ಸ್ವಾತಂತ್ರ್ಯ, ಇದೇನಾ ನಮ್ಮ ನಿಮ್ಮ ಪತ್ರಿಕಾಧರ್ಮ…
ನಾನು : ಡಿಕೆಶಿ ಅವರೇ, ಬೇರೆಯವರ ಬಗ್ಗೆನೂ ಹೇಳಿದೀವಿ. ಆದರೆ ನಿಮ್ಮ ಬಗ್ಗೆ ಸ್ವಲ್ಪ ಹೆಚ್ಚಿಗೆ ಹೇಳಿರಬಹುದು, ತೋರಿಸಿರಬಹುದು, ನೀವೇ ಆಗಾಗ ಹೇಳ್ತಿರ್ತೀರಲ್ಲ, ಜನ ಕಲ್ಲು ಹೊಡೆಯುವುದು ಹಣ್ಣಿರುವ ಮರಕ್ಕೆ ಅಂತ. ಈಗ ನೀವು ಮುಖ್ಯಮಂತ್ರಿಯಾಗುತ್ತಿರುವ ಸಮಯದಲ್ಲಿ ನಿಮ್ಮನ್ನು ಕೂಡ ಒಬ್ಬ ಛಲಗಾರ, ಸಾಧಕ, ಸಂತ, ಬಂಡೆ ಎಂದು ಒಳ್ಳೆಯ ಗುಣಗಳನ್ನು ನಾವೆಲ್ಲರೂ ಬರೆಯುತ್ತಿಲ್ಲವೇ, ಟಿವಿಗಳಲ್ಲಿ ವರ್ಣಿಸುತ್ತಿಲ್ಲವೇ……
ಶಿವಕುಮಾರ್ : ಮುಚ್ರೀ ಸಾಕು. ಈಗ ನಾನು ಮುಖ್ಯಮಂತ್ರಿ ಆಗ್ತಾ ಇದ್ದೀನಿ. ನನ್ನ ಶ್ರಮ ನನಗೆ ಒಳ್ಳೆಯ ಫಲಿತಾಂಶ ನೀಡಿದೆ. ಆ ಕಾರಣದಿಂದ ನೀವು ನನ್ನನ್ನು ಹೊಗಳುತ್ತಿದ್ದೀರಿ. ನಿಮಗೆ ಗೊತ್ತಾ, ನಾನು ಜೈಲಿಗೆ ಹೋದಾಗ ಇನ್ನೇನು ನನ್ನ ಬದುಕು ಮುಗಿದೇ ಹೋಯಿತು. ನಾನಿನ್ನು 10 ವರ್ಷ ಜೈಲಿನಲ್ಲಿ ಕಳೆಯಬೇಕು. ಭ್ರಷ್ಟಾಚಾರಿಗೆ ಸರಿಯಾದ ಶಿಕ್ಷೆ ಇತ್ಯಾದಿ ಇತ್ಯಾದಿ ನೀವು ಬರೆದಿದ್ದು, ಟಿವಿಯಲ್ಲಿ ಹೇಳಿದ್ದು ನನಗೇನು ಗೊತ್ತಿಲ್ಲವೇ.
ನಾನು : ಡಿಕೆಶಿಯವರೇ, ಮುಖ್ಯಮಂತ್ರಿ ಅಧಿಕಾರ ಸಿಕ್ತು ಅಂತ ದುರಹಂಕಾರದಿಂದ ಹೀಗೆ ಪತ್ರಕರ್ತರನ್ನು ಟೀಕಿಸುತ್ತಿದ್ದೀರಿ. ನಾವು ನಿಮ್ಮ ಬೆಳವಣಿಗೆಯಲ್ಲಿ ಏನೂ ಕಾಣಿಕೆಯ ಕೊಟ್ಟಿಲ್ವಾ. ನಿಮಗೆ ಕೆಲವೊಂದು ಸಾರಿ ಒಳ್ಳೇಯ ಪ್ರಚಾರವನ್ನು ಕೊಟ್ಟಿಲ್ವಾ. ಸ್ವಲ್ಪ ತಾಳ್ಮೆ ಇಟ್ಕೊಳ್ಳಿ ಡಿಕೆಶಿ. ನಾವು ಮುಂದೇನು ಬೇಕಾಗ್ತಿವಿ…..
ಶಿವಕುಮಾರ್ : ಅದು ನನಗೂ ಗೊತ್ತು ರೀ. ನಾನೇನು ಎಲ್ಲರ ಮುಂದೆ ಹೀಗೆ ಹೇಳೋದಿಲ್ಲ. ನೀವು ನನಗೆ ತುಂಬಾ ಬೇಕಾದವರಲ್ವಾ, ಒಳಗಡೆ ಸ್ವಲ್ಪ ಕೋಪ ಇತ್ತು. ಅದನ್ನು ಹೊರಗೆ ಹಾಕೋದಕ್ಕೆ ನಿಮ್ಮ ಮುಂದೆ ಹೇಳ್ದೆ ಅಷ್ಟೇ. ಏನಪ್ಪಾ ನೀವು, ನಾನು ನಿಮಗೂ ಮುಖ್ಯಮಂತ್ರಿಯಾದ ಮೇಲೆ ಏನಾದರೂ ಒಳ್ಳೆ ಸ್ಥಾನಮಾನ ಕೊಡ್ತೀನಿ. ಏನಾದರೂ ಕೆಲಸ ಇದ್ದರೆ ತಗೊಂಡು ಬನ್ನಿ ಅಥವಾ ನೋಡಿ ನಮ್ಮ ಪತ್ರಿಕಾ ಮಾಧ್ಯಮದ ಕಾರ್ಯದರ್ಶಿಯೋ, ಸಲಹೆಗಾರರೋ ಆಗೋದಾದ್ರೆ ಬಂದುಬಿಡಿ….
ನಾನು : ಆ ಯೋಗ್ಯತೆ ನನಗಿಲ್ಲ ಬಿಡಿ ಡಿಕೆಶಿಯವರೇ. ಮತ್ತೆ ನಿಮ್ಮನ್ನು ಹ್ಯಾಂಡಲ್ ಮಾಡಕ್ಕೆ ನನಗೂ ಆಗೋದಿಲ್ಲ. ಅದಿರ್ಲಿ, ವಿಧಾನಸೌಧಕ್ಕೆ ಜ್ಯೋತಿಷಿಗಳು, ಸ್ವಾಮೀಜಿಗಳು, ನಿಮ್ಮ ಹಳೆಯ ಸ್ನೇಹಿತರು ಎಲ್ಲರೂ ನಿಮ್ಮ ಪ್ರಮಾಣವಚನ ಸ್ವೀಕರಿಸುವುದಕ್ಕೆ ಬರ್ತಾ ಇದ್ದಾರೆ. ನಿಮ್ಮ ಆಹ್ವಾನದ ಮೇರೆಗೆ ಎಂಬ ಸುದ್ದಿ ಇದೆ. ನಿಜಾನೆ ?
ಶಿವಕುಮಾರ್ : ಹೌದೌದು ನನ್ನ ಯಶಸ್ಸಿಗೆ ಅವರೇ ಅಲ್ವೇನ್ರಿ ಕಾರಣ.
ನಾನು : ಇದೇನ್ ಹೀಗಂದ್ರೆ. ಮೊದಲನೆಯದಾಗಿ ನೀವು ಈ ಭೂಮಿಗೆ ಬರೋದಿಕ್ಕೆ ನಿಮ್ಮ ತಂದೆ ತಾಯಿ, ಎರಡನೆಯದಾಗಿ ನೀವು ಚುನಾವಣೆಗೆ ಸ್ಪರ್ಧಿಸಿ ಗೆಲ್ಲೋದಕ್ಕೆ ನಮ್ಮ ಸಂವಿಧಾನ ನೀಡಿರುವ ಹಕ್ಕು ಮತ್ತು ಸ್ವಾತಂತ್ರ್ಯ ಹಾಗೂ ಮೂರನೆಯದಾಗಿ ನಿಮ್ಮನ್ನು ಚುನಾಯಿಸಿದ ಮತದಾರರು. ಇವರೇ ಮುಖ್ಯ ಅಲ್ವಾ. ನೀವು ನೋಡಿದ್ರೆ ಯಾರೋ ಜ್ಯೋತಿಷಿ, ಸ್ವಾಮಿಗಳ ಹೆಸರು ಹೇಳ್ತಾ ಇದ್ದೀರಾ!
ಶಿವಕುಮಾರ್ : ರೀ ಸ್ವಾಮಿ, ಅಪ್ಪ ಅಮ್ಮ ಅವರ ಆಸೆ ಆಕಾಂಕ್ಷೆಗೆ ಸೇರ್ತಾರೆ, ಮಕ್ಕಳು ಹುಟ್ಟುತ್ತಾರೆ. ಅದು ಅತ್ಯಂತ ಸಹಜವಾದದ್ದು ಮತ್ತು ನಾವು ಕೂಡ ಅವರನ್ನು ಕೊನೆಯವರೆಗೂ ಅದೇ ಗೌರವದಿಂದ, ಪ್ರೀತಿಯಿಂದ ನೋಡಿಕೊಳ್ಳುತ್ತೇವೆ. ಅದರಲ್ಲಿ ವಿಶೇಷ ಏನಿಲ್ಲ. ಇನ್ನು ಮತದಾರರು, ನಿಮಗೆ ಗೊತ್ತು ಜಾತಿ ನೋಡಿ, ಹಣ ನೋಡಿ, ಧರ್ಮ ನೋಡಿ, ತಮಗೆ ಏನು ಲಾಭ ಎನ್ನುವ ಸ್ವಾರ್ಥದಿಂದ ಓಟು ಹಾಕ್ತಾರೆ. ಅದೂ ವಿಶೇಷ ಅಲ್ಲ. ಇನ್ನು ಸಂವಿಧಾನ ನನಗೊಬ್ಬನಿಗಾಗಿ ಇಲ್ಲ. ಎಲ್ಲರಿಗೂ ಇದೆ. ಅದಕ್ಕೆ ವಿಶೇಷ ಮಹತ್ವ ಏನು ಇಲ್ಲ. ಆದರೆ ಈ ಸ್ವಾಮಿಗಳು, ಅಜ್ಜಯ್ಯ ಅವರೆಲ್ಲ ದೈವಾಂಶ ಸಂಭೂತರು. ಅವರು ನುಡಿಯುವ ದೈವ ವಾಣಿ ಯಾವಾಗಲೂ ನಿಜ ಆಗುತ್ತೆ. ಅವರ ಆ ದಿವ್ಯಶಕ್ತಿಯಿಂದಾನೆ ನಾನು ಇವತ್ತು ಈ ಸ್ಥಾನಕ್ಕೆ ಬಂದಿರೋದು. ಅದೇ ಕಾರಣಕ್ಕೆ ಅವರ ಮೇಲೆ ಪ್ರಮಾಣ ಮಾಡಿ ಪ್ರತಿಜ್ಞಾವಿಧಿ ಸ್ವೀಕರಿಸಿದ್ದೇನೆ. ನಾವು ಬುದ್ಧಿಜೀವಿಗಳು, ದೇವರೇ ಇಲ್ಲ, ಧರ್ಮ ಇಲ್ಲ, ಆಚಾರ ವಿಚಾರ ಸಂಪ್ರದಾಯಗಳೆಲ್ಲ ಮೌಢ್ಯ ಅಂತ ನೀವೆಲ್ಲ ಸುಮ್ನೆ ಹೇಳ್ಕೊಂಡಿರ್ತಿರಿ. ಈಗ ನೀವೇ ನೋಡಿ ಇವತ್ತು ನೀವೇನಾಗಿದ್ದೀರಿ. ನಾನು ಏನಾಗಿದ್ದೇನೆ. ಇಷ್ಟೇ, ದೇವರು ಯಾರಿಗೆ ಒಲಿಯುತ್ತಾನೇ ಅನ್ನೋದನ್ನ ಈಗಲಾದರೂ ಅರ್ಥ ಮಾಡಿಕೊಳ್ಳಿ.
ನಾನು : ಓಕೆ ಶಿವಕುಮಾರ್ ಅವರೇ, ನೀವು ಯಾವಾಗಲೂ ದೇವರು ವರವನ್ನು ಕೊಡಲ್ಲ, ಶಾಪವನ್ನು ಕೊಡೋದಿಲ್ಲ. ಅವಕಾಶ ಮಾತ್ರ ಕೊಡ್ತಾನೆ, ಪ್ರಯತ್ನ ವಿಫಲವಾದರೂ ಪ್ರಾರ್ಥನೆ ವಿಫಲ ಆಗಲ್ಲ ಅಂತ ಹೇಳ್ತಿರಿ. ಅದೆಲ್ಲ ನಿಮಗೆ ಅನುಭವದಿಂದ ಬಂದಿದ್ದೋ ದೇವರೇ ಹೇಳಿದ್ದೋ.
ಡಿಕೆಶಿ : ನೋಡಿ ಈ ರೀತಿ ಪ್ರಶ್ನೆ ಕೇಳಿ ಕೇಳಿನೇ ನೀವೆಲ್ಲಾ ಹೀಗಾಗಿದ್ದು. ಅಧಿಕಾರ ಬೇಕು ಅಂದ್ರೆ ಜನರನ್ನು ಹೇಗೆ ನಿಯಂತ್ರಣ ಇಟ್ಕೋಬೇಕು ಅನ್ನೋದು ಮುಖ್ಯ ರೀ. ಜನರಿಗೆ ಸ್ವಾತಂತ್ರ್ಯ, ಸಮಾನತೆ, ವಿವೇಚನೆ ಎಲ್ಲಾ ಕೊಟ್ಟರೆ ನಾವು ಲೀಡರ್ ಆಗಲಿಕ್ಕೆ ಆಗುತ್ತೇನ್ರೀ. ಈಗ ಮೋದಿನೇ ನೋಡಿ. ಇಡೀ ದೇಶದ ಜನರಿಗೆ ಧರ್ಮ, ಅಭಿವೃದ್ಧಿ, ರಾಷ್ಟ್ರೀಯತೆ, ಅಚ್ಚೇದಿನ್ ಅಂತ ಹೇಳ್ತಾ ಜನರನ್ನು ಮೂರ್ಖರನ್ನಾಗಿ ಮಾಡಿ ಹೆಚ್ಚು ಕಡಿಮೆ ಕಳೆದ 25 ವರ್ಷಗಳಿಂದ ಗುಜರಾತ್ ಮತ್ತು ಕೇಂದ್ರದಲ್ಲಿ ಅಧಿಕಾರದಲ್ಲಿ ಇಲ್ವಾ. ಅವರು ಸಾಮ, ದಾನ, ಭೇದ, ದಂಡ ಎಲ್ಲಾ ಉಪಯೋಗಿಸಿ ಅಧಿಕಾರದಲ್ಲಿದ್ದಾರೆ. ಇದೇರಿ ವಾಸ್ತವ, ಇದೇರಿ ಸತ್ಯ. ಅದನ್ನು ಬಿಟ್ಟು ನೀವು ಬುದ್ಧಿಜೀವಿಗಳು ಎಲ್ಲಿದ್ದೀರೋ ಅಲ್ಲಿಂದ ಇನ್ನೂ ಕೆಳಕ್ಕೆ ಬರ್ತೀರಾ. ಸ್ವಲ್ಪ ಬದುಕೋದು ಕಲಿತುಕೊಳ್ಳಿ. ಸುಮ್ಮನೆ ಸದಾ ಅತೃಪ್ತ ಆತ್ಮದಂತೆ ಟೀಕೆ ಮಾಡುತ್ತಲೇ ಇರಬೇಡಿ.
ನಾನು : ಹೋಗ್ಲಿ ಬಿಡಿ ಶಿವಕುಮಾರ್ ಅವರೇ, ಈಗ ನೀವು ಮುಖ್ಯಮಂತ್ರಿಯಾಗಿದ್ದೀರಿ. ಏನು ನಿಮ್ಮ ಮುಂದಿನ ಯೋಜನೆ. ಯಾಕೆಂದರೆ ನಿಮ್ಮ ಮೇಲೆ ಸಾಮಾನ್ಯವಾಗಿ ಎಲ್ರೂ ಭ್ರಷ್ಟ, ದುರಹಂಕಾರಿ, ಇಡೀ ಕರ್ನಾಟಕವನ್ನೇ ಮಾರಿ ಬಿಡ್ತಾರೆ ಅಂತೆಲ್ಲಾ ಮಾತಾಡಿಕೊಳ್ಳುತ್ತಾರೆ. ಇದಕ್ಕೆ ನೀವೇನಂತೀರಿ ?
ಶಿವಕುಮಾರ್ : ಅಷ್ಟೇ ನೋಡಿ ನಿಮ್ಮ ಬುದ್ಧಿ. ಜನ ಬೈಕೊಳ್ತಾನೆ ಇರ್ತಾರೆ. ಅವರಿಗೇನು ಜವಾಬ್ದಾರಿ ಇದೆಯಾ, ಒಳ್ಳೆಯ ಚಿಂತನೆ ಇದೆಯಾ. ಯಾವುದು ಇಲ್ಲ. ಅವರೇ ಭ್ರಷ್ಟರು. ನೀವೇ ನೋಡಿ ಬೇಕಾದ್ರೆ ಒಂದೇ ಒಂದು ಸರ್ಕಾರಿ ಶಾಲೆ ಉತ್ತಮ ಗುಣಮಟ್ಟದಲ್ಲಿಲ್ಲ. ಒಂದೇ ಒಂದು ಆಸ್ಪತ್ರೆ ಒಳ್ಳೇದಾಗಿ ಇಲ್ಲ. ಇಡೀ ಪರಿಸರ ನಾಶ ಆಗ್ತಾ ಇದೆ. ಭ್ರಷ್ಟಾಚಾರ ತುಂಬಿ ತುಳುಕಾಡ್ತಾ ಇದೆ. ಬಿಡದಿ ಪ್ರಾಜೆಕ್ಟ್ ಬೇಡ ಅನ್ನೋರಿಗಿಂತ ಇನ್ನೂ ಜಾಸ್ತಿ ದುಡ್ಡು ಕೊಡಿ ಅನ್ನೋರೆ ಹೆಚ್ಚು. ಆಯ್ತು ಜಾಸ್ತಿನೇ ಕೊಡ್ತೀನಿ ಅಂತ ಇಟ್ಟುಕೊಳ್ಳಿ. ನಾನೇನು ನನ್ನ ಜೇಬಿನಿಂದ ಕೊಡ್ತೀನಾ? ಸರ್ಕಾರಿ ಖಜಾನೆಯಿಂದ ತಾನೇ ಕೊಡೋದು. ಜನಕ್ಕೆ ಇಷ್ಟೂ ಗೊತ್ತಾಗಲ್ರೀ. ಅವರೆಲ್ಲರೂ ಒಂದಾಗಿ, ಒಟ್ಟಾಗಿ ಇದ್ದಿದ್ರೆ ಇವತ್ತು ಈ ದೇಶ, ಈ ರಾಜ್ಯ ಮತ್ತು ಜನತೆ ಅಭಿವೃದ್ಧಿ ಹೊಂದಿ ಸುಖ ಸಮೃದ್ಧಿಯಿಂದ ಇರುತ್ತಾ ಇದ್ರು. ನಾನು ಮಾತ್ರ ಅಲ್ಲ, ಆಗ ಇಂದಿರಾಗಾಂಧಿ, ಈಗ ಮೋದಿ ಆಡಳಿತ ಮಾಡ್ತಾ ಇರೋದು ಕೂಡ ಇದೇ ತಂತ್ರದಿಂದನೇ. ಜನರನ್ನು ನೆಮ್ಮದಿಯಾಗಿ ಇರಲು ಬಿಡದೆ ಎಲ್ಲಾ ಖಾಸಗಿಕರಣ ಮಾಡಿ, ಬೆಲೆ ಹೆಚ್ಚಿಸಿ, ಜನರು, ಮಾಧ್ಯಮ ಬೆಳಗ್ಗೆ ಎದ್ದರೆ ಮೋದಿ ಮೋದಿ ಅಂತ ಜಪ ಮಾಡಿಕೊಂಡು ಅವರು ಗೆಲ್ಲುತ್ತಾನೆ ಇರಬೇಕು. ಅವರೇ ಜನರನ್ನು ಬಾವಿಗೆ ತಳ್ಳೋದು, ಆಮೇಲೆ ಕೈಹಿಡಿದು ಮೇಲೆ ಎತ್ತುವ ನಾಟಕ ಮಾಡುತ್ತಾರೆ. ಜನ ಅವರನ್ನು ತಮ್ಮ ರಕ್ಷಕರು ಎಂದೇ ಭಾವಿಸುತ್ತಾರೆ. ಎಲ್ಲಾ ಆಡಳಿತಗಾರರು ಅದೇ ತಂತ್ರ ಮಾಡೋದು. ನಾನು ಹಾಗೇ ಮಾಡಬೇಕು. ಬಹುಶಃ ನೀವು ಬಂದ್ರು ಹಾಗೆ ಮಾಡುತ್ತೀರಿ.
ನಾನು : ಏನ್ ಡಿಕೆಶಿ ಅವರೇ, ಒಳ್ಳೆ ಫಿಲಾಸಫರ್ ತರ ಮಾತಾಡ್ಬಿಟ್ರಿ.
ಡಿಕೆಶಿ : ಇದೇ ವಾಸ್ತವಾರೀ, ದಯವಿಟ್ಟು ಅರ್ಥ ಮಾಡಿಕೊಳ್ಳಿ. ಆದರೂ ಏನೋ ನಮ್ಮ ಜನರಿಗೆ ಒಳ್ಳೇದ್ ಮಾಡ್ಬೇಕು ಅಂತ ಪ್ರಯತ್ನ ಪಡ್ತೀನಿ. ಆದ್ರೆ ನಮ್ಮ ಸುತ್ತಮುತ್ತ ಇರೋರು ಅಷ್ಟು ಸುಲಭವಾಗಿ ಒಳ್ಳೇದ್ ಮಾಡೋದಕ್ಕೆ ಬಿಡಲ್ಲ. ನೋಡೋಣ ಮುಂದೆ ಏನೇನಾಗುತ್ತೋ. ಪ್ರಮಾಣವಚನಕ್ಕೆ ಟೈಮ್ ಆಯ್ತು. ಹೊರಡ್ತೀನಿ. ಆಮೇಲೆ ಬಂದು ಭೇಟಿಯಾಗಿ. ಇನ್ನೂ ನಿಮ್ಮತ್ರ ಜಾಸ್ತಿ ಮಾತಾಡೋದಿದೆ. ಸ್ವಲ್ಪ ನೋಡ್ಕೊಂಡು ಬರೀರಪ್ಪ. ಹೇಳಿದ್ದೆಲ್ಲ ಬರೆದು ಬಿಡಬೇಡಿ.
ನಾನು : ಆಯ್ತು ಡಿಕೆಶಿ ಅವರೇ, ಮತ್ತೊಮ್ಮೆ ಅಭಿನಂದನೆಗಳು. ಮಾಡಿದ್ದುಣ್ಣೋ ಮಾರಾಯ…..
( ನಿನ್ನೆ ರಾತ್ರಿ ಮೂಡಿದ ಕನಸೊಂದನ್ನು ನಿಮ್ಮೊಂದಿಗೆ ಹಾಗೆಯೇ ಹಂಚಿಕೊಂಡಿದ್ದೇನೆ…)
ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ – ಮನೆಗಳಲ್ಲಿ – ಮತಗಳಲ್ಲಿ – ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ,
ವಿವೇಕಾನಂದ. ಎಚ್. ಕೆ.
9663750451…….
9844013068…….
