Close Menu
  • ಕ್ರೀಡೆ
  • ಕ್ರೈಂ
  • ಭವಿಷ್ಯ
  • ದೇಶ-ವಿದೇಶ
  • ವ್ಯಾಪಾರ
  • ಸಿನಿಮಾ
What's Hot

ಭಾರತದ ಮಧ್ಯಮ ವರ್ಗದ ಸಿಹಿ ಕಹಿಗಳು: ಕೊಳ್ಳುಬಾಕ ಸಂಸ್ಕೃತಿಯ ನಡುವೆ ಕಣ್ಮರೆಯಾಗುತ್ತಿದೆಯೇ ಜೀವನೋತ್ಸಾಹ?

ಕಿವಿ ಹಣ್ಣು ಎಂಬ ‘ಸಣ್ಣ ಪ್ಯಾಕೆಟ್’: ಇದರ ಆರೋಗ್ಯ ಪ್ರಯೋಜನಗಳು ತಿಳಿದರೆ ದಿನಾ ತಿಂತೀರಾ!

05/06/2026 ರ ನಿತ್ಯ ಭವಿಷ್ಯ

Facebook X (Twitter) Instagram
  • ಕ್ರೀಡೆ
  • ಕ್ರೈಂ
  • ಭವಿಷ್ಯ
  • ದೇಶ-ವಿದೇಶ
  • ವ್ಯಾಪಾರ
  • ಸಿನಿಮಾ
Facebook X (Twitter) Instagram
Times Of Bayaluseeme
  • ಮುಖಪುಟ
  • ಕ್ರೀಡೆ
  • ಕ್ರೈಂ
  • ಜಿಲ್ಲಾ ಸುದ್ದಿ
  • ರಾಜಕೀಯ
  • ರಾಜ್ಯ
  • ಸಿನಿಮಾ
Subscribe
Times Of Bayaluseeme
Home»ಮುಖಪುಟ»ಭಾರತದ ಮಧ್ಯಮ ವರ್ಗದ ಸಿಹಿ ಕಹಿಗಳು: ಕೊಳ್ಳುಬಾಕ ಸಂಸ್ಕೃತಿಯ ನಡುವೆ ಕಣ್ಮರೆಯಾಗುತ್ತಿದೆಯೇ ಜೀವನೋತ್ಸಾಹ?
ಮುಖಪುಟ

ಭಾರತದ ಮಧ್ಯಮ ವರ್ಗದ ಸಿಹಿ ಕಹಿಗಳು: ಕೊಳ್ಳುಬಾಕ ಸಂಸ್ಕೃತಿಯ ನಡುವೆ ಕಣ್ಮರೆಯಾಗುತ್ತಿದೆಯೇ ಜೀವನೋತ್ಸಾಹ?

Times Of Bayaluseeme StaffBy Times Of Bayaluseeme StaffJune 5, 2026No Comments5 Mins Read
Share WhatsApp Facebook Twitter Threads Telegram
Follow Us
Facebook Instagram
indian-middle-class-family-stress-and-peace
Share
WhatsApp Twitter Facebook Telegram

ಆಧುನಿಕ ತಂತ್ರಜ್ಞಾನ, ಕೊಳ್ಳುಬಾಕ ಸಂಸ್ಕೃತಿ ಮತ್ತು ಆರ್ಥಿಕ ತಲ್ಲಣಗಳ ನಡುವೆ ಭಾರತದ ಮಧ್ಯಮ ವರ್ಗದವರ ಜೀವನೋತ್ಸಾಹ ಕುಗ್ಗುತ್ತಿದೆಯೇ? ಕಳೆದುಹೋಗುತ್ತಿರುವ ನೆಮ್ಮದಿಯನ್ನು ಮರಳಿ ಪಡೆದು, ಮನಸ್ಸನ್ನು ವಿಶಾಲಗೊಳಿಸಿಕೊಳ್ಳಲು ಲೇಖಕ ವಿವೇಕಾನಂದ ಎಚ್.ಕೆ. ಅವರ ಮಾರ್ಗದರ್ಶಿ ಸೂತ್ರಗಳು ಇಲ್ಲಿವೆ.

ಭಾರತದ ಬಹಳಷ್ಟು ಮಧ್ಯಮ ವರ್ಗದ ಜನರಲ್ಲಿ ಜೀವನೋತ್ಸಾಹ ಕಡಿಮೆಯಾಗುತ್ತಿದೇಯೇ ಎಂಬ ಅನುಮಾನ ಶುರುವಾಗಿದೆ. ನಿಜಕ್ಕೂ ಬೃಹತ್ ಸಂಖ್ಯೆಯ ಮಧ್ಯಮ ವರ್ಗದವರು ಈ ಆಧುನಿಕ ಕಾಲದಲ್ಲಿ ಎಲ್ಲ ರೀತಿಯ ತಂತ್ರಜ್ಞಾನದ ಸೌಕರ್ಯಗಳನ್ನು ಉಪಯೋಗಿಸಿಕೊಂಡು, ಚೈತನ್ಯದ ಚಿಲುಮೆಗಳಂತೆ ಬದುಕನ್ನು ಸಾಗಿಸಿಕೊಂಡು, ಎಲ್ಲೆಲ್ಲೂ ಸಂತೋಷ, ಸಂಭ್ರಮ, ಮನೋಲ್ಲಾಸದಿಂದ ಪುಟಿದೇಳುತ್ತಿರುವಂತಿರಬೇಕಿತ್ತು, ಅವರಿಗಿರುವ ಸೌಲಭ್ಯಗಳನ್ನು ಉಪಯೋಗಿಸಿಕೊಂಡು ಜಿಂಕೆ ಮರಿಗಳಂತೆ ಕುಣಿಯುತ್ತಾ, ನಲಿಯುತ್ತಾ ಇರಬೇಕಿತ್ತು…..

ಆದರೆ ಕೊರೋನಾ ಉಂಟುಮಾಡಿದ ಆ ಭಯಾನಕ ಪರಿಸ್ಥಿತಿ, ಸಾವು ಬದುಕಿನ ತಲ್ಲಣಗಳು, ಅದಕ್ಕೂ ಮೊದಲು ನೋಟ್ ಬ್ಯಾನ್ ಆದ ಕಾರಣದಿಂದಾಗಿ , ಚಿನ್ನ, ಭೂಮಿ ಬೆಲೆ ಜಾಸ್ತಿಯಾಗಿ, ಹಾಗೆಯೇ ಸಂಬಳಗಳು ಹೆಚ್ಚಾಗಿ,
ಜಿ ಎಸ್ ಟಿ ಜಾರಿಗೆ ಬಂದಿದ್ದರಿಂದ ಎಲ್ಲಾ ವಸ್ತುಗಳ ಬೆಲೆ ಏರಿಕೆಯೂ ದುಬಾರಿಯಾಗಿ, ಆಸ್ಪತ್ರೆಗಳು, ವಾಹನಗಳು ಹೈಟೆಕ್ ಆಗಿ, ಎಲ್ಲೆಲ್ಲೋ ಟೋಲ್ ಗಳು ಸಹ ಹಣ ವಸೂಲಿ ಕೇಂದ್ರಗಳಾಗಿ, ಒಳ್ಳೆಯ ಐಷಾರಾಮಿ ರಸ್ತೆಗಳು, ಹೋಟೆಲ್ ಗಳು, ಬಟ್ಟೆಗಳು, ಮಾಲ್ ಗಳು, ಐಪಿಎಲ್ ಮ್ಯಾಚ್ಗಳು, ಸಾಮಾನ್ಯ ಜನರ ಕೈಗೆಟಕುತ್ತಿರುವ ಈ ಸಂದರ್ಭದಲ್ಲಿ, ಮೊಬೈಲ್, ಲ್ಯಾಪ್ ಟಾಪ್, ಫೈವ್ ಜಿ ಸಂಪರ್ಕ ಹೀಗೆ ವೇಗವಾಗಿ ಬೆಳವಣಿಗೆ ಹೊಂದುತ್ತಿರುವ ಸಂದರ್ಭದಲ್ಲಿ, ಜನರ ಜೀವನೋತ್ಸಾಹ ಕಡಿಮೆಯಾಗಿ ಅದರ ವಿರುದ್ಧ ದಿಕ್ಕಿನಲ್ಲಿ ಸ್ಮಶಾನ ಸನ್ಯಾಸ ಆವರಿಸಿಕೊಳ್ಳುತ್ತಿದೆಯೇನೋ ಎಂದೆನಿಸುತ್ತಿದೆ……

ಏಕೆಂದರೆ ಮಾಧ್ಯಮಗಳ ಮುಖಾಂತರ ಎಲ್ಲರಿಗೂ ಹಂಚಿಕೆಯಾಗುತ್ತಿರುವ ಪುನೀತ್ ರಾಜಕುಮಾರ್ ಸೇರಿ ಅನೇಕರ ದಿಢೀರನೆ ಉಂಟಾಗುತ್ತಿರುವ ಅಸಹಜ ಸಾವು ನೋವುಗಳು, ಅಪಘಾತಗಳು, ಆತ್ಮಹತ್ಯೆಗಳು, ಕೊಲೆಗಳು, ಎಷ್ಟೇ ದುಡಿದರೂ ಖರ್ಚು ನಿಭಾಯಿಸಲು ಸಾಧ್ಯವಾಗುತ್ತಿಲ್ಲದಿರುವುದು, ಮನುಷ್ಯ ಸಂಬಂಧಗಳು, ವೈವಾಹಿಕ ಜೀವನಗಳು ವಾಣಿಜ್ಯೀಕರಣವಾಗಿರುವುದು, ಈ ಎಲ್ಲವೂ ಅವರ ಜೀವನೋತ್ಸಾಹ ಕುಗ್ಗಲು ಕಾರಣವಾಗುತ್ತಿದೆ……

ಇದರ ಜೊತೆ ಪರಿಸರ ನಾಶದಿಂದ ನೀರು, ಗಾಳಿ, ಮಲಿನವಾಗಿ ಆಹಾರಗಳು ರಾಸಾಯನಿಕಯುಕ್ತವಾಗಿ ದೇಹ, ಮನಸ್ಸು ಒಂದು ರೀತಿಯಲ್ಲಿ ಜಿಡ್ಡು ಕಟ್ಟುತ್ತಿವೆ. ನರನಾಡಿಗಳು, ಶ್ವಾಸಕೋಶಗಳು, ರಕ್ತನಾಳಗಳು, ಕಣ್ಣು, ಕಿವಿ, ಮೂಗು ತಮ್ಮ ಸಂವೇದನೆಯನ್ನು ಕಳೆದುಕೊಳ್ಳುತ್ತಿವೆ. ಬಿಪಿ ಶುಗರ್, ಥೈರಾಯ್ಡ್, ಗ್ಯಾಸ್ಟ್ರಿಕ್, ಚರ್ಮರೋಗ, ಬೆನ್ನು ನೋವು, ತಲೆನೋವು ಮುಂತಾದ ಕಾಯಿಲೆಗಳು ಎಲ್ಲರನ್ನೂ ಬಹಳ ಚಿಕ್ಕ ವಯಸ್ಸಿಗೇ ಕಾಡತೊಡಗಿವೆ….

ಈ ಎಲ್ಲದರ ಪರಿಣಾಮ ಮಧ್ಯಮ ವರ್ಗ ಎಷ್ಟು ಚಟುವಟಿಕೆಯಿಂದ, ಖುಷಿ ಖುಷಿಯಾಗಿ ಇರಬೇಕಾಗಿತ್ತೋ ಅಷ್ಟರಮಟ್ಟಿಗೆ ಇಲ್ಲ ಎಂದು ಅನಿಸುತ್ತಿದೆ. ಯಾವಾಗ, ಯಾರಿಗೆ, ಏನು ಅಪಾಯ ಕಾದಿದೆಯೋ, ಯಾವಾಗ ಸಾವು ಬರುತ್ತದೆಯೋ ಏನೋ ಎಂಬ ಆತಂಕದಲ್ಲಿಯೇ ಜನರು ಸದಾ ಮಾತನಾಡಿಕೊಳ್ಳುತ್ತಾ ಬದುಕುವುದು ಕೇಳಿ ಬರುತ್ತಿದೆ…..

ಎಲ್ಲರೂ ಅಲ್ಲದಿದ್ದರೂ ಬಹಳಷ್ಟು ಜನರು ನಿರುತ್ಸಾಹದಿಂದ ಮಾತನಾಡುತ್ತಿದ್ದಾರೆ. ನೆಮ್ಮದಿಯನ್ನು ಕಳೆದುಕೊಂಡು ರೆಸ್ಟ್ಲೆಸ್ ಆಗುತ್ತಿದ್ದಾರೆ. ತಾಳ್ಮೆ ಗುಣಮಟ್ಟ ಕಡಿಮೆಯಾಗುತ್ತಿದೆ. ಕೋಪ, ತಾಪಗಳು ಅಧಿಕವಾಗುತ್ತಿವೆ. ಈ ಎಲ್ಲವೂ ನಿರಾಶಾವಾದದ ಭಾಗವಾಗಿ ಆ ಗುಣಲಕ್ಷಣಗಳನ್ನು ಹೊರ ಹಾಕುತ್ತಿದೆ‌….

ಜೊತೆಗೆ ಯುವಕ ಯುವತಿಯರ ಮದುವೆಗಳು ಸಹ ನಿಧಾನವಾಗುತ್ತಿದೆ. ಗಂಡುಗಳಿಗೆ ಅಥವಾ ಹೆಣ್ಣುಗಳಿಗೆ ತಮ್ಮ ಆಯ್ಕೆಯ ಜೊತೆಗಾರರು ದೊರೆಯುವುದು ಕಷ್ಟವಾಗುತ್ತಿದೆ. ಇದು ಸಹ ಒಂದು ರೀತಿ ಕೆಲವರಲ್ಲಿ ಅಸಹನೆ ಮೂಡಲು ಕಾರಣವಾಗಿದೆ…..

ಹಾಗೆಯೇ, ಈ ಕೊಳ್ಳುಬಾಕ ಸಂಸ್ಕೃತಿಯಿಂದ ಎಷ್ಟು ದುಡಿದರೂ ಸಾಕಾಗುತ್ತಿಲ್ಲ, ಮಕ್ಕಳೊಂದಿಗೆ, ಕುಟುಂಬದೊಂದಿಗೆ ಸಮಯ ಕಳೆಯಲು ಸಾಧ್ಯವಾಗುತ್ತಿಲ್ಲ, ಅತಿಯಾದ ಸಾಮಾಜಿಕ ಜಾಲತಾಣಗಳ ಉಪಯೋಗ, ಸಮೂಹ ಸಂಪರ್ಕ ಮಾಧ್ಯಮಗಳ ಬೆಳವಣಿಗೆ, ಮನರಂಜನಾ ಉದ್ಯಮದ ಅತಿರೇಕದ ವರ್ತನೆಗಳು, ಜನರಲ್ಲಿ ವ್ಯಕ್ತಿಗತ ಅನಾಥ ಪ್ರಜ್ಞೆಯನ್ನು ಉಂಟುಮಾಡುತ್ತಿದೆ……

ಹೀಗೆ ಒಂದಲ್ಲ ಒಂದು ಕಾರಣದಿಂದ 20/25 ವರ್ಷಗಳ ಹಿಂದೆ ಇದ್ದ ದೇಹ, ಮನಸ್ಸಿನ ಆರೋಗ್ಯ, ಜೀವನೋತ್ಸಾಹ, ಧೈರ್ಯ, ಬದುಕುವ, ಸಾಧಿಸುವ ಛಲ, ಆಸಕ್ತಿ ಈಗ ಕಡಿಮೆಯಾಗುತ್ತಿರುವುದು ನಮ್ಮೆಲ್ಲರ ಅನುಭವಕ್ಕೆ, ಗಮನಕ್ಕೆ ಬರುತ್ತಿದೆ……

ನಿಜಕ್ಕೂ ಇದೊಂದು ಆತಂಕ ಮೂಡಿಸುವ ಪರಿಸ್ಥಿತಿ ಎಂದು ನನಗನಿಸುತ್ತದೆ. ನಿಧಾನವಾಗಿ ಜೀವನೋತ್ಸಾಹ ಹೆಚ್ಚಿಸುವ ವಿವಿಧ ಮಾರ್ಗಗಳ ಹುಡುಕಾಟ ಮಾಡಬೇಕಾಗಿದೆ. ಇಲ್ಲದಿದ್ದರೆ ಸಾಮಾಜಿಕ ವ್ಯವಸ್ಥೆ ದುರ್ಬಲವಾಗಬಹುದು…..

ಇದನ್ನು ಹೀಗೆಯೇ ಎಂದು ಸ್ಪಷ್ಟವಾಗಿ ಹೇಳುವುದು ಸಾಧ್ಯವಿಲ್ಲ. ಕೆಲವರು ಮೊದಲಿಗಿಂತ ಹೆಚ್ಚು ಜೀವನೋತ್ಸಾಹದಿಂದ, ವ್ಯಾಪಾರ ವಹಿವಾಟು, ಕಲೆ, ವಿಜ್ಞಾನ, ಸಾಹಿತ್ಯ, ಸಂಗೀತ, ಕ್ರೀಡೆಗಳಲ್ಲಿ ತೊಡಗಿಸಿಕೊಂಡು ಹೆಚ್ಚು ಚಟುವಟಿಕೆಯಿಂದ ಇರುವವರನ್ನು ಕಾಣಬಹುದು. ಆದರೆ ಒಟ್ಟು ವ್ಯವಸ್ಥೆಯನ್ನು ನೋಡಿದಾಗ ನನಗೆ ಸಮಾಜದ, ವ್ಯಕ್ತಿಗಳ ಜೀವನೋತ್ಸಾಹ ಕಡಿಮೆಯಾಗುತ್ತಿರುವುದು ಕಂಡು ಬರುತ್ತಿದೆ. ಇದನ್ನು ಅರಿತುಕೊಂಡು ಮತ್ತೆ ಪುಟಿದೇಳುವ ಜೀವನೋತ್ಸಾಹ ರೂಪಿಸಿಕೊಳ್ಳೋಣ….

ಅದಕ್ಕಾಗಿ ಆಂತರಿಕವಾಗಿ ಒಂದಷ್ಟು ಮನೋಚೈತನ್ಯ ಬೆಳೆಸಿಕೊಳ್ಳೋಣ. ಅನೇಕ ಮಾರ್ಗಗಳು ನಮ್ಮ ಮುಂದಿವೆ ಅದನ್ನು ಅಳವಡಿಸಿಕೊಳ್ಳೋಣ.,

” ನೀವು ಹೆಚ್ಚು ತಿಳಿದುಕೊಳ್ಳುತ್ತಾ ಹೋದಂತೆ, ಗೊತ್ತಿಲ್ಲದಿರುವುದು ಬಹಳಷ್ಟಿದೆ ಎಂಬುದು ನಿಮ್ಮ ಅರಿವಿಗೆ ಬರುತ್ತದೆ ”

ಅರಿಸ್ಟಾಟಲ್…….

” ಜ್ಞಾನದ ಬಲದಿಂದ ಅಜ್ಞಾನದ ಕೇಡ ನೋಡಾ ”

ವಚನ ಸಂಸ್ಕೃತಿ…….

ಮನೋ ನಿಯಂತ್ರಣ ಮತ್ತು ಮನಸ್ಸಿನ ವಿಶಾಲತೆ……..

ಮನಸ್ಸಿಗೆ ಏನೋ ಕಿರಿಕಿರಿಯಾಗುತ್ತಿದೆಯೇ ?

ಒಳಗೊಳಗೆ ಹೇಳಿಕೊಳ್ಳಲಾಗದ ಅಸಹನೆ ಉಂಟಾಗುತ್ತಿದೆಯೇ ?

ಕೌಟುಂಬಿಕ ಸಂಬಂಧಗಳಲ್ಲಿ ಸಹಿಸಲಾಗದ ಮಾನಸಿಕ ಹಿಂಸೆಯಾಗುತ್ತಿದೆಯೇ ?

ಹೊರ ಜಗತ್ತಿನ ನಮ್ಮ ಸುತ್ತಮುತ್ತಲಿನ ಅನೇಕ ಘಟನೆಗಳು ನಮ್ಮ ಇಚ್ಚೆಗೆ ವಿರುದ್ಧವಾಗಿ ಘಟಿಸುತ್ತಿದೆಯೇ ?

ಮಾಧ್ಯಮ, ಗೆಳೆತನ, ಸಾಮಾಜಿಕ ಜಾಲತಾಣಗಳಲ್ಲಿ ನಮ್ಮ ನಂಬಿಕೆಗೆ ವಿರೋಧ ವ್ಯಕ್ತವಾಗುತ್ತಿದೆಯೇ ?

ಧರ್ಮ, ಜಾತಿ, ಭಾಷೆ, ಹಣಕಾಸು, ಪಕ್ಷ, ಸಂಪ್ರದಾಯ, ಸಿದ್ದಾಂತಗಳ ವಿಷಯದಲ್ಲಿ ಏನೋ ಒಂತರಾ ಕಸಿವಿಸಿ ಎನಿಸುವಂತೆ ಮನಸ್ಸಿಗೆ ತಳಮಳವಾಗುತ್ತಿದೆಯೇ ?

ಕೆಲವು ವಿಷಯಗಳ ಬಗ್ಗೆ ಬೇಗ ಕೋಪ ಬಂದು ಪ್ರತಿಕ್ರಿಯಿಸಿ ವಿರೋಧಿಗಳ ಸದ್ದಡಗಿಸಬೇಕು ಎಂಬ ಅಭಿಪ್ರಾಯ ಉಂಟಾಗಿ ಬಿಪಿ ಏರಿಕೆಯಾಗುತ್ತದೆಯೇ ?…

ಈ ರೀತಿಯ ಕೆಲವು ಅಥವಾ ಎಲ್ಲವೂ ನಿಮ್ಮಲ್ಲಿ ಉಂಟಾಗುತ್ತಿದ್ದರೆ ಅದನ್ನು ನಿಯಂತ್ರಿಸಿಕೊಳ್ಳಲು ಕೆಲವು ಸಲಹೆ ರೂಪದ ಕಿವಿಮಾತುಗಳು ನಿಮಗಾಗಿ……..

ನಿಮ್ಮ ಮನಸ್ಸನ್ನು ವಿಶಾಲಗೊಳಿಸಿಕೊಂಡರೆ ಖಂಡಿತವಾಗಿ ಈ ಸಮಸ್ಯೆಗಳಿಗೆ ಸಹಜ ಸ್ವಾಭಾವಿಕವಾಗಿ ಪರಿಹಾರ ಕಂಡುಕೊಳ್ಳಬಹುದು ಮತ್ತು ನೆಮ್ಮದಿಯಿಂದ ಬದುಕಿನ ಸಾರ್ಥಕತೆಯತ್ತ ಹೆಜ್ಜೆ ಹಾಕಬಹುದು.

ಹೇಗೆ ಮನಸ್ಸನ್ನು ವಿಶಾಲ ಮಾಡಿಕೊಳ್ಳುವುದು ?

1) ನಮ್ಮ ಮೂಲ ನಿಷ್ಠೆಯನ್ನು ಪ್ರಕೃತಿಗೆ ವರ್ಗಾಯಿಸುವುದು……..

ನಮ್ಮನ್ನು ಹುಟ್ಟಿಸಿರುವ ಅಪ್ಪ ಅಮ್ಮ, ನಾವು ಹುಟ್ಟಿಸುವ ಮಕ್ಕಳು ಸೇರಿ ಎಲ್ಲಾ ಸಂಬಂಧಗಳು ಒಂದು ಸಾಮಾಜಿಕ ವ್ಯವಸ್ಥೆಯೇ ಹೊರತು ಅದೇ ಅಂತಿಮವಲ್ಲ. ನಾವು ಸೃಷ್ಟಿಯ ಪ್ರತ್ಯೇಕ ಜೀವಿ. ನಮ್ಮ ಅಸ್ತಿತ್ವ ಸ್ವತಂತ್ರ. ಹುಟ್ಟಿಗೆ ಗಂಡು ಹೆಣ್ಣು ಒಂದು ಮಾರ್ಗ. ಅವರನ್ನು ವ್ಯಾವಹಾರಿಕ ಗುರುತಿಗಾಗಿ ತಂದೆ ತಾಯಿ, ಮಗ ಮಗಳು ಮುಂತಾದ ಹೆಸರಿನಿಂದ ಕರೆಯಲಾಗುತ್ತದೆ. ಅದರ ಅರ್ಥ ನಾವು ಈ ಯಾವ ಸಂಬಂಧಗಳ ನಿಯಂತ್ರಣಕ್ಕೆ ಒಳಪಡಬಾರದು ಅಥವಾ ಒಳಪಡಿಸಬಾರದು. ಪರಸ್ಪರ ಪ್ರೀತಿ, ವಿಶ್ವಾಸ, ಸಹಕಾರ ಇರಬೇಕೆ ಹೊರತು ಹೆಚ್ಚಿನ ನಿರೀಕ್ಷೆ ನಿಯಂತ್ರಣ ನಮ್ಮ ದುಃಖ ಹೆಚ್ಚಿಸುತ್ತದೆ. ಅಪ್ಪ ಮಗ ಮಗಳು ನಮ್ಮ ವಿರುದ್ಧ ಅಭಿಪ್ರಾಯ ಅಥವಾ ನಡವಳಿಕೆ ಪ್ರದರ್ಶಿಸಿದರೆ ಅದನ್ನು ಸಹಜವಾಗಿ ಸ್ವೀಕರಿಸಿ ಮುಂದೆ ಹೋಗಬೇಕು. ಅವರು ನಮ್ಮವರು ನಮ್ಮ ವಿರುದ್ಧವಿದ್ದಾರೆ ಎಂದು ಕೊರಗುತ್ತಾ ಇರಬಾರದು. ನಾವು ಇರುವುದು ನಮಗಾಗಿ ಮಾತ್ರ.

2) ಹುಟ್ಟಿದ ತಕ್ಷಣ ನಮ್ಮ ಮೇಲೆ ನಮ್ಮ ಧರ್ಮ, ಜಾತಿ, ಭಾಷೆ, ವಂಶ ಎಲ್ಲವೂ ಹೇರಲ್ಪಡುತ್ತದೆ. ಇದು ಸ್ವಾಭಾವಿಕವಲ್ಲ…………

ಸಮಾಜ ಮತ್ತು ಆಡಳಿತದ ಅನುಕೂಲಕ್ಕಾಗಿ ರೂಪಿತವಾದ ನೀತಿ ನಿಯಮಗಳು. ಇವುಗಳ ಅರಿವು ಇರಬೇಕು. ಆದರೆ ಅದೇ ಶ್ರೇಷ್ಠ, ಅದೇ ಅಂತಿಮ, ಅದನ್ನು ಉಳಿಸುವುದೇ ನಮ್ಮ ಕರ್ತವ್ಯ ಮುಂತಾದ ಭ್ರಮೆಗೆ ಒಳಗಾಗಬಾರದು. ಅದೊಂದು ಅವಶ್ಯ ಮತ್ತು ಅನಿವಾರ್ಯ ಅಂಶಗಳೇ ಹೊರತು ನಾವು ಅಲ್ಲಿ ಹುಟ್ಟಿದ ಮಾತ್ರಕ್ಕೆ ಅವೆಲ್ಲವೂ ಶ್ರೇಷ್ಠ ಎಂದು ಭಾವಿಸಬಾರದು. ಆಗ ಇದರಿಂದ ಇತರರು ನಮ್ಮಂತೆ ಎಂಬ ಸಹಕಾರ ಭಾವ ಮೂಡುತ್ತದೆ. ದ್ವೇಷದ ಭಾವ ಕಡಿಮೆಯಾಗುತ್ತದೆ.

3) ಇದು ಅತಿಮುಖ್ಯವಾದುದು.
ನಾವು ನಮ್ಮ ಅರಿವಿನ – ಜ್ಞಾನದ – ತಿಳಿವಳಿಕೆಯ ಮೂಲವನ್ನು ಸ್ಪಷ್ಟವಾಗಿ ಮತ್ತು ವೈಯಕ್ತಿಕವಾಗಿ ಗುರುತಿಸಬೇಕು…….‌

ಅಂದರೆ ನಮ್ಮ ತಿಳಿವಳಿಕೆಯ ಮೇಲೆ ಹೆಚ್ಚು ಪ್ರಭಾವ ಬೀರಿರುವುದು ಯಾವುದು ಎಂದು ಗಮನಿಸಬೇಕು. ತಂದೆ ತಾಯಿ ತಾತಾ ಅಜ್ಜಿ ಮಾವ ದೊಡ್ಡಪ್ಪ ಅಣ್ಣ ಅಕ್ಕ ಮುಂತಾದ ಸಂಬಂಧಗಳೇ,
ಅಥವಾ ಶಾಲೆ ಮತ್ತು ಅಲ್ಲಿನ ಉಪಾಧ್ಯಾಯರು ಅವರಲ್ಲಿ ಒಬ್ಬರು ಅಥವಾ ಎಲ್ಲರೂ ಆಗಿರಬಹುದು ಅಥವಾ ಬೀದಿಯ – ಊರಿನ ಆಕರ್ಷಕ ವ್ಯಕ್ತಿತ್ವದ ನಾಯಕ ಯಾರಾದರೂ ಆಗಿರಬಹುದು ಅಥವಾ ಪೌರಾಣಿಕದ, ಇತಿಹಾಸದ, ವರ್ತಮಾನದ ರಾಜಕೀಯ ಸಾಮಾಜಿಕ ಧಾರ್ಮಿಕ, ಸಿನಿಮಾ, ಸಾಹಿತ್ಯ, ಸಂಗೀತ ಅಥವಾ ಇತರೆ ಯಾರಾದರೂ ಆಗಿರಬಹುದು ಅಥವಾ ನೀವು ಹುಟ್ಟಿದ, ಓದಿದ ಯಾವುದಾದರೂ ಧರ್ಮ ಅಥವಾ ಧರ್ಮ ಗ್ರಂಥಗಳಾಗಿರಬಹುದು ಅಥವಾ ಬುದ್ಧ ಬಸವ ವಿವೇಕಾನಂದ ಆಚಾರತ್ರಯರು, ಗಾಂಧಿ, ಅಂಬೇಡ್ಕರ್ ರೀತಿಯ ಯಾರಾದರೂ ಆಗಿರಬಹುದು ಅಥವಾ ನೀವು ಬೆಳೆದ ಅಥವಾ ನೋಡಿದ ಪರಿಸರವೇ ಆಗಿರಬಹುದು. ಇದರಲ್ಲಿ ಒಂದು ಅಥವಾ ಎಲ್ಲವೂ ಆಗಿರಬಹುದು. ಇದನ್ನು ನಾವು ಮನನ ಮಾಡಿಕೊಂಡರೆ ನಮಗೆ ಯೋಚಿಸುವ ದಿಕ್ಕು ಸುಲಭವಾಗಿ ಸಿಗುತ್ತದೆ. ಹೇಗೆಂದರೆ ನಾವು ಯೋಚಿಸುವುದು ಒಂದು ಮೂಲವಾದರೆ ಅದರ ಇನ್ನಷ್ಟು ಮೂಲಗಳು ಇವೆ ಎಂದು ಅರ್ಥಮಾಡಿಕೊಳ್ಳಬಹುದು. ಇದರಿಂದಾಗಿ ಮನಸ್ಸನ್ನು ವಿಶಾಲ ಗೊಳಿಸಿಕೊಳ್ಳಲು ತುಂಬಾ ತುಂಬಾ ಸಹಾಯವಾಗುತ್ತದೆ…..

4) ಈ ಎಲ್ಲದರ ನಡುವೆ ವ್ಯಾವಹಾರಿಕ ಜಗತ್ತಿನ ಅನಿವಾರ್ಯತೆಯನ್ನು ಮರೆಯಬಾರದು………..

ಅದು ಸರಿಯಾಗಿ ಇಲ್ಲದಿದ್ದರೆ ಮೇಲೆ ಹೇಳಿದ ವಿಷಯಗಳು ವಾಸ್ತವದಲ್ಲಿ ವಿಫಲವಾಗುವ ಸಾಧ್ಯತೆಯೇ ಹೆಚ್ಚು. ಬದಲಾವಣೆಗಳನ್ನು ಸ್ವೀಕರಿಸುತ್ತಾ, ನಮ್ಮ ಅನುಕೂಲಕ್ಕೆ ತಕ್ಕಂತೆ ಅದನ್ನು ಹೊಂದಿಸಿಕೊಳ್ಳುತ್ತಾ ಅದರಲ್ಲಿ ನಿರಂತರತೆಯನ್ನು ಕಾಪಾಡಬೇಕು. ಮುಖ್ಯವಾಗಿ ಫಾಸ್ಟ್ ಪುಡ್, ಫಾಸ್ಟ್ ಲೈಫ್ ಸಂಸ್ಕೃತಿಯನ್ನು ಆದಷ್ಟೂ ತಿರಸ್ಕರಿಸಬೇಕು. ಇಂದಿನ ನಮ್ಮ ಬಹುತೇಕ ಅಸಹನೆ ಅತೃಪ್ತಿಗೆ ಇದೇ ಬಹುಮುಖ್ಯ ಕಾರಣವಾಗಿದೆ. ಒಮ್ಮೆ ಇದನ್ನು ನಿಯಂತ್ರಿಸಿ ಸಾಧ್ಯವಾದಷ್ಟು ತಾಳ್ಮೆಗೆ ಶರಣಾದರೆ ಮನಸ್ಸು ನಿರ್ಮಲತೆಯತ್ತ ಸಾಗುತ್ತದೆ. ಆಗ ಸಹಜವಾಗಿ ಒತ್ತಡ ಕಡಿಮೆಯಾಗಿ ಮನಸ್ಸು ವಿಶಾಲವಾಗುತ್ತದೆ….ಹ

5) ಈ ಎಲ್ಲವನ್ನೂ ಸಾಧ್ಯವಾಗಿಸಲು ನಿಮ್ಮ ದೈಹಿಕ ಆರೋಗ್ಯ ಬಹುಮುಖ್ಯ……..

ಅದಿಲ್ಲದೇ ಯಾವುದನ್ನೂ ನಿರೀಕ್ಷಿಸಲು ಸಾಧ್ಯವಿಲ್ಲ. ಅದನ್ನು ನಮ್ಮ ನಮ್ಮ ಅವಕಾಶ ಮತ್ತು ಮಿತಿಯಲ್ಲಿ ಕಡ್ಡಾಯವಾಗಿ ಸೈನಿಕ ಶಿಸ್ತು ರೂಪಿಸಿಕೊಳ್ಳಲು ಪ್ರಯತ್ನಿಸಲೇಬೇಕು. ಏಕೆಂದರೆ ಬಹುತೇಕ ದುರ್ಬಲ ಆರೋಗ್ಯದ ಜನರು ಹೆಚ್ಚು ಉದ್ವೇಗ ಮತ್ತು ನಿರಾಸೆಗೆ ಒಳಗಾಗುತ್ತಾರೆ. ಮನಸ್ಸಿನ ನಿಯಂತ್ರಣ ಕಳೆದುಕೊಂಡು ಇತರರನ್ನು ದೂಷಿಸುತಾರೆ. ಮನಸ್ಸಿನ ವಿಶಾಲತೆಗೆ ಇದು ಅಡ್ಡಿಯಾಗಬಹುದು…..

ಕೊನೆಯದಾಗಿ,
ಇದಷ್ಟೇ ಅಲ್ಲದೆ ಇನ್ನೂ ನಿಮ್ಮ ಒಳ ಮನಸ್ಸಿಗೆ ಹೊಳೆಯುವ ಯಾವುದಾದರೂ ವಿಷಯವಾಗಿರಬಹುದು. ಅದನ್ನು ಉಪಯೋಗಿಸಿಕೊಂಡು ನಿಮ್ಮ ಮನಸ್ಸುಗಳನ್ನು ವಿಶಾಲಗೊಳಿಸಿಕೊಳ್ಳಿ. ಖಂಡಿತವಾಗಿಯೂ ನಿಮ್ಮ ಜೀವನಮಟ್ಟ ತನ್ನಿಂದ ತಾನೇ ‌ಈಗಿರುವ ಸ್ಥಾನಕ್ಕಿಂತ ಉತ್ತಮ ಮಟ್ಟಕ್ಕೆ ಏರುತ್ತದೆ. ಆ ಪ್ರಜ್ಞೆಯೇ ಒಂದು ಅದ್ಬುತ ಮಾನವ ಪ್ರೇಮದ ಸಂಕೇತ. ಸಮಾಜ ಪ್ರೀತಿಯ, ದೇಶ ಭಕ್ತಿಯ ಅನುಸಂಧಾನ.

ಸಾಧ್ಯವಾದರೆ ಪ್ರಯತ್ನಿಸಿ……..

ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ, ಮನೆಗಳಲ್ಲಿ, ಮತಗಳಲ್ಲಿ, ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ,
ವಿವೇಕಾನಂದ. ಎಚ್. ಕೆ.
9844013068……..
9663750451…….

Indian middle class life Middle class financial struggles Mind control tips Kannada Modern life stress ಆಧುನಿಕ ಬದುಕಿನ ಒತ್ತಡ ಮತ್ತು ನಿರಾಸೆ ಧ್ಯಮ ವರ್ಗದ ಆರ್ಥಿಕ ತಲ್ಲಣಗಳು ಭಾರತದ ಮಧ್ಯಮ ವರ್ಗದ ಜೀವನ ಮನೋ ನಿಯಂತ್ರಣದ ಮಾರ್ಗಗಳು
Follow on Facebook Follow on Instagram
Share. Facebook Twitter WhatsApp Telegram
Previous Articleಕಿವಿ ಹಣ್ಣು ಎಂಬ ‘ಸಣ್ಣ ಪ್ಯಾಕೆಟ್’: ಇದರ ಆರೋಗ್ಯ ಪ್ರಯೋಜನಗಳು ತಿಳಿದರೆ ದಿನಾ ತಿಂತೀರಾ!
Times Of Bayaluseeme Staff
  • Website

Related Posts

ಕಿವಿ ಹಣ್ಣು ಎಂಬ ‘ಸಣ್ಣ ಪ್ಯಾಕೆಟ್’: ಇದರ ಆರೋಗ್ಯ ಪ್ರಯೋಜನಗಳು ತಿಳಿದರೆ ದಿನಾ ತಿಂತೀರಾ!

June 5, 2026

“ನಾನು ಸಿಎಂ ಆದ್ರೆ…” – ಪತ್ರಕರ್ತನ ಕನಸಿನಲ್ಲಿ ಡಿಕೆ ಶಿವಕುಮಾರ್ ಬಿಚ್ಚಿಟ್ಟ ರಾಜಕೀಯ ಸತ್ಯಗಳು!

June 4, 2026

ಮನೆಯಂಗಳದ ಸಂಜೀವಿನಿ: ಮಧುಮೇಹ, ಕಫ, ತಲೆನೋವಿನಂತಹ ಹತ್ತಾರು ಸಮಸ್ಯೆಗಳಿಗೆ ವೀಳ್ಯದೆಲೆಯೇ ರಾಮಬಾಣ!

June 4, 2026
Add A Comment
Leave A Reply Cancel Reply

Advertisement
Latest Posts

ಭಾರತದ ಮಧ್ಯಮ ವರ್ಗದ ಸಿಹಿ ಕಹಿಗಳು: ಕೊಳ್ಳುಬಾಕ ಸಂಸ್ಕೃತಿಯ ನಡುವೆ ಕಣ್ಮರೆಯಾಗುತ್ತಿದೆಯೇ ಜೀವನೋತ್ಸಾಹ?

ಕಿವಿ ಹಣ್ಣು ಎಂಬ ‘ಸಣ್ಣ ಪ್ಯಾಕೆಟ್’: ಇದರ ಆರೋಗ್ಯ ಪ್ರಯೋಜನಗಳು ತಿಳಿದರೆ ದಿನಾ ತಿಂತೀರಾ!

05/06/2026 ರ ನಿತ್ಯ ಭವಿಷ್ಯ

ಒತ್ತಡಕ್ಕೆ ಮಣಿಯದೆ ಕಾನೂನು ಚೌಕಟ್ಟಿನಲ್ಲಿ ಕೆಲಸ ಮಾಡಿ: ಅಧಿಕಾರಿಗಳಿಗೆ ಸಿಎಂ ಕಟ್ಟುನಿಟ್ಟಿನ ಸೂಚನೆ

Trending Posts

Subscribe to News

Get the latest sports news from NewsSite about world, sports and politics.

Facebook X (Twitter) Pinterest Vimeo WhatsApp TikTok Instagram

News

  • World
  • US Politics
  • EU Politics
  • Business
  • Opinions
  • Connections
  • Science

Company

  • Information
  • Advertising
  • Classified Ads
  • Contact Info
  • Do Not Sell Data
  • GDPR Policy
  • Media Kits

Services

  • Subscriptions
  • Customer Support
  • Bulk Packages
  • Newsletters
  • Sponsored News
  • Work With Us

Subscribe to Updates

Get the latest creative news from FooBar about art, design and business.

© 2026 ThemeSphere. Designed by ThemeSphere.
  • Privacy Policy
  • Terms
  • Accessibility

Type above and press Enter to search. Press Esc to cancel.