ಡಾ.ರಾಜ್ ಕುಮಾರ್ ಅವರ ಸಹೋದರಿ ನಾಗಮ್ಮ ಇಂದು ಬೆಳಗ್ಗೆ ನಿಧನರಾಗಿದ್ದಾರೆ. ನಾಗಮ್ಮ ಅವರಿಗೆ ಅಪ್ಪು ನಿಧನದ ಸುದ್ದಿ ತಿಳಿದಿರಲಿಲ್ಲ. ಕೆಲ ತಿಂಗಳ ಹಿಂದೆ ಗಾಜನೂರಿಗೆ ಹೋಗಿದ್ದ ಯೂಟ್ಯೂಬರ್ ಒಬ್ಬರೊಟ್ಟಿಗೆ ಮಾತನಾಡಿದ್ದ ನಾಗಮ್ಮ, ಅಪ್ಪು ಬಗ್ಗೆ ಪ್ರೀತಿಯಿಂದ ಮಾತನಾಡಿದ್ದರು. ಆದರೆ ಈಗ ಅವರೇ ಇಹಲೋಕ ತ್ಯಜಿಸಿದ್ದಾರೆ. ನಾಗಮ್ಮ ಅವರಿಗೆ ಸಾಕಷ್ಟು ವಯಸ್ಸಾಗಿತ್ತು. ಮಕ್ಕಳು, ಮೊಮ್ಮಕ್ಕಳೊಡನೆ ಗಾಜನೂರಿನಲ್ಲಿ ಅವರು ವಾಸವಿದ್ದರು.ಅಪ್ಪು, ಶಿವರಾಜ್ ಕುಮಾರ್, ರಾಘವೇಂದ್ರ ರಾಜ್ ಕುಮಾರ್ ಅವರುಗಳಿಗೆ ಬಲು ಪ್ರೀತಿಯ ನಾಗತ್ತೆಯಾಗಿದ್ದರು ನಾಗಮ್ಮ. ದೊಡ್ಮನೆ ಕುಟುಂಬದವರು ಗಾಜನೂರಿಗೆ ಹೋದಾಗಲೆಲ್ಲ ನಾಗಮ್ಮತ್ತೆಯನ್ನು ತಪ್ಪದೆ ಭೇಟಿ ಆಗಿ ಬರುತ್ತಿದ್ದರು. ದೊಡ್ಮನೆಯಲ್ಲಿ ಯಾವುದೇ ಕಾರ್ಯಕ್ರಮವಾದರೂ ನಾಗಮ್ಮ ಅವರು ಇರುತ್ತಿದ್ದರು. ಆದರೆ ವಯಸ್ಸಿನ ಕಾರಣ ಕಳೆದ ಕೆಲ ವರ್ಷಗಳಿಂದ ಅವರು ಗಾಜನೂರಿನಲ್ಲಿಯೇ ನೆಲೆಸಿದ್ದರು. ವಯಸ್ಸಾಗಿದ್ದ ಕಾರಣ, ಅವರಿಗೆ ಆಘಾತ ಆಗಬಾರದೆಂದು ಪುನೀತ್ ರಾಜ್ ಕುಮಾರ್ ನಿಧನದ ಸುದ್ದಿಯನ್ನು ಅವರಿಗೆ ಕುಟುಂಬದವರು ತಿಳಿಸಿರಲಿಲ್ಲ.
ನಾಲ್ಕು ತಿಂಗಳ ಹಿಂದೆ ಸಹ ಯೂಟ್ಯೂಬ್ ಚಾನೆಲ್ ಒಂದರ ಬಳಿ ಮಾತನಾಡಿದ್ದ ನಾಗಮ್ಮ ಅವರು ‘ಅಪ್ಪು ಕಂದ ಒಮ್ಮೆ ಬಂದು ನನ್ನನ್ನು ನೋಡಿಕೊಂಡು ಹೋಗು’ ಎಂದಿದ್ದರು. ಕಳೆದ ಬಾರಿ ಶಿವರಾಜ್ ಕುಮಾರ್, ಗೀತಾ ಶಿವರಾಜ್ ಕುಮಾರ್ ಅವರು ಗಾಜನೂರಿಗೆ ಹೋಗಿದ್ದಾಗ, ಶಿವರಾಜ್ ಕುಮಾರ್ ಕೈ ಹಿಡಿದುಕೊಂಡು ಭವಿಷ್ಯ ಹೇಳಿದ್ದರು. ಕೆನ್ನೆಗೆ ಮುತ್ತು ಕೊಟ್ಟು ಹರಸಿದ್ದರು.ಶಿವರಾಜ್ ಕುಮಾರ್ ಅವರು ಇಂದು ಬೆಳಿಗ್ಗೆಯಷ್ಟೆ ಸಿನಿಮಾ ಕಾರ್ಯಕ್ಕಾಗಿ ಗೋವಾಕ್ಕೆ ತೆರಳಿದ್ದರು. ಆದರೆ ನಾಗಮ್ಮನವರ ನಿಧನದ ಸುದ್ದಿ ತಿಳಿದು ಅವರು ಮರಳುತ್ತಿದ್ದಾರೆ ಎನ್ನಲಾಗುತ್ತಿದೆ. ಇನ್ನು ರಾಘವೇಂದ್ರ ರಾಜ್ಕುಮಾರ್ ಮತ್ತು ಕುಟುಂಬದವರು ಹಾಗೂ ಅಶ್ವಿನಿ ಪುನೀತ್ ರಾಜ್ಕುಮಾರ್ ಹಾಗೂ ಮಗಳು ಸಹ ಗಾಜನೂರಿಗೆ ತೆರಳಲಿದ್ದು, ನಾಗಮ್ಮನವರ ಅಂತ್ಯಕ್ರಿಯೆಯಲ್ಲಿ ಭಾಗಿ ಆಗಲಿದ್ದಾರೆ. ನಾಗಮ್ಮನವರ ಅಂತ್ಯಕ್ರಿಯೆ ನಾಳೆ ಗಾಜನೂರಿನಲ್ಲಿಯೇ ನಡೆಯಲಿದೆ.
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ಹೌದು, ನಿಮ್ಮ ಊರಿನಲ್ಲಿ ಜಾತ್ರೆ, ಸಭೆ, ಸಮಾರಂಭಗಳು ನಡೆದರೆ ಅದನ್ನು ಬಯಲುಸೀಮೆಟೈಮ್ಸ್.ಕಾಂ ಮೂಲಕ ನಾಡಿಗೆ ತಿಳಿಸಿ. ಅಷ್ಟೇ ಅಲ್ಲ ನಿಮ್ಮೂರಿನ ರಸ್ತೆ, ಚರಂಡಿ, ಆಸ್ಪತ್ರೆ , ಶಾಲೆ ಯಾವುದೇ ಸಮಸ್ಯೆ ಇದ್ದರೂ ಅಧಿಕಾರಿಗಳ ಕಣ್ಣು ತೆರೆಯುವಂತೆ ಸುದ್ದಿ ಮಾಡಿ. ನೀವು ಜಸ್ಟ್ ನಮ್ಮ ವಾಟ್ಸ್ ಆಪ್ ಸಂಖ್ಯೆಗೆ ಸುದ್ದಿ ಕಳುಹಿಸಿ ಉಳಿದದ್ದನ್ನು ಬಯಲುಸೀಮೆಟೈಮ್ಸ್.ಕಾಂ ಮಾಡಲಿದೆ. ನಮ್ಮ ವಾಟ್ಸ್ ಆಪ್ ಸಂಖ್ಯೆ: +91 96201 39796
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.



