ದೇಶದಾದ್ಯಂತ ಸಿನಿಮಾ ಪ್ರೇಮಿಗಳು ಮಾತ್ರವೇ ಅಲ್ಲದೆ ವಿಶ್ವ ಸಿನಿಮಾ ಪ್ರಿಯರು ನಿರೀಕ್ಷೆಯಿಂದ ಕಾಯುತ್ತಿರುವ ಸಿನಿಮಾ ಎಂದರೆ ಅದು ರಾಜಮೌಳಿ ನಿರ್ದೇಶಿಸಿ, ಮಹೇಶ್ ಬಾಬು (Mahesh Babu) ನಟಿಸುತ್ತಿರುವ ಇನ್ನೂ ಹೆಸರಿಡದ ಹೊಸ ಸಿನಿಮಾ. ಈ ಸಿನಿಮಾದ ಚಿತ್ರೀಕರಣ ಭರದಿಂದ ಸಾಗುತ್ತಿದೆ. ಸಿನಿಮಾದ ಒಂದು ಸಣ್ಣ ಪೋಸ್ಟರ್ ಮಾತ್ರವನ್ನು ಈ ವರೆಗೆ ಅಧಿಕೃತವಾಗಿ ರಾಜಮೌಳಿ ಹೊರಬಿಟ್ಟಿದ್ದಾರೆ. ಬಿಡುಗಡೆ ಆಗಿರುವ ಫೋಟೊನಲ್ಲಿ ನಂದಿ ಮತ್ತು ಶಿವನ ವಿಭೂತಿಯ ಹೊರತಾಗಿ ಹೆಚ್ಚಿನ ಮಾಹಿತಿ ಇಲ್ಲ.ಆದರೆ ಸಿನಿಮಾದ ಮೊದಲ ಲುಕ್ ಅನ್ನು ಬಿಡುಗಡೆ ಮಾಡಲು ರಾಜಮೌಳಿ ದೊಡ್ಡ ಯೋಜನೆಯನ್ನೇ ಹಾಕಿಕೊಂಡಿದ್ದಾರೆ. ಸಿನಿಮಾದ ಹೆಸರು ಮತ್ತು ಸಿನಿಮಾದ ಮೊದಲ ಲುಕ್ ಪೋಸ್ಟರ್ ಅನ್ನು ರಾಜಮೌಳಿ ಶೀಘ್ರವೇ ಬಿಡುಗಡೆ ಮಾಡಲಿದ್ದಾರೆ. ಅದೂ ಜಗದ್ವಿಖ್ಯಾತ ಸಿನಿಮಾ ನಿರ್ದೇಶಕರೊಬ್ಬರು ರಾಜಮೌಳಿ-ಮಹೇಶ್ ಅವರ ಸಿನಿಮಾದ ಪೋಸ್ಟರ್ ಅನ್ನು ಬಿಡುಗಡೆ ಮಾಡಲಿದ್ದಾರೆ.‘ಟೈಟ್ಯಾನಿಕ್’, ‘ಅವತಾರ್’ ಅಂಥಹಾ ಅತ್ಯದ್ಭುತ ಸಿನಿಮಾಗಳನ್ನು ನೀಡಿರುವ ಸೋಲೇ ಕಾಣದ ಹಾಲಿವುಡ್ ನಿರ್ದೇಶಕ ಜೇಮ್ಸ್ ಕ್ಯಾಮರನ್ ಅವರು ರಾಜಮೌಳಿ-ಮಹೇಶ್ ಬಾಬು ಅವರ ಹೊಸ ಸಿನಿಮಾದ ಮೊದಲ ಪೋಸ್ಟರ್ ಅನ್ನು ಬಿಡುಗಡೆ ಮಾಡಲಿದ್ದಾರೆ. ಇದೇ ವರ್ಷ ನವೆಂಬರ್ ತಿಂಗಳಲ್ಲಿ ಈ ಪೋಸ್ಟರ್ ಬಿಡುಗಡೆ ಕಾರ್ಯಕ್ರಮ ನಡೆಯಲಿದೆ.
ಜೇಮ್ಸ್ ಕ್ಯಾಮರನ್ ನಿರ್ದೇಶನದ ‘ಅವತಾರ್: ದಿ ಫೈರ್ ಆಂಡ್ ಆಶ್’ ಸಿನಿಮಾ ಡಿಸೆಂಬರ್ 19 ರಂದು ವಿಶ್ವದಾದ್ಯಂತ ಬಿಡುಗಡೆ ಆಗಲಿದೆ. ಸಿನಿಮಾದ ಪ್ರಚಾರಕ್ಕಾಗಿ ಜೇಮ್ಸ್ ಕ್ಯಾಮರನ್ ನವೆಂಬರ್ ತಿಂಗಳಲ್ಲಿ ಭಾರತಕ್ಕೆ ಬರಲಿದ್ದಾರೆ. ಆ ಸಮಯದಲ್ಲಿ ರಾಜಮೌಳಿ ಸಹ ಜೇಮ್ಸ್ ಕ್ಯಾಮರನ್ ಅವರ ಜೊತೆಗೂಡಲಿದ್ದಾರೆ. ರಾಜಮೌಳಿ ಸಹ ‘ಅವತಾರ್’ ಸಿನಿಮಾದ ಪ್ರಚಾರದಲ್ಲಿ ಭಾಗಿ ಆಗಲಿದ್ದು, ಇದೇ ಸಮಯದಲ್ಲಿ ಅವರು ತಮ್ಮ ಹೊಸ ಸಿನಿಮಾದ ಪೋಸ್ಟರ್ ಬಿಡುಗಡೆಯನ್ನು ಜೇಮ್ಸ್ ಅವರಿಂದ ಮಾಡಿಸಲಿದ್ದಾರೆ.ಜೇಮ್ಸ್ ಕ್ಯಾಮರನ್, ರಾಜಮೌಳಿ ನಿರ್ದೇಶಿಸಿದ್ದ ‘ಆರ್ಆರ್ಆರ್’ ಸಿನಿಮಾ ಅನ್ನು ವೀಕ್ಷಿಸಿ ಬಹುವಾಗಿ ಮೆಚ್ಚಿಕೊಂಡಿದ್ದರು. ರಾಜಮೌಳಿಗೆ ತಮ್ಮ ಮೆಚ್ಚುಗೆ ವ್ಯಕ್ತಪಡಿಸಿದ್ದ ಜೇಮ್ಸ್ ಕ್ಯಾಮರನ್, ‘ನೀವು ಇಲ್ಲಿ (ಹಾಲಿವುಡ್) ಸಿನಿಮಾ ಮಾಡುವಿರಾದರೆ ಹೇಳಿ, ನಾವು ಮಾತನಾಡಿ ವ್ಯವಸ್ಥೆ ಮಾಡುತ್ತೇವೆ’ ಎಂದು ದೊಡ್ಡ ಆಫರ್ ಒಂದನ್ನು ನೀಡಿದ್ದರು. ಆ ಬಳಿಕವೂ ಸಹ ‘ಆರ್ಆರ್ಆರ್’ ಸಿನಿಮಾದ ಡಾಕ್ಯುಮೆಂಟರಿಯಲ್ಲಿಯೂ ಸಹ ಜೇಮ್ಸ್ ಕ್ಯಾಮರನ್ ಸಿನಿಮಾ ಅನ್ನು ಹಾಗೂ ರಾಜಮೌಳಿಯ ಪ್ರತಿಭೆಯನ್ನು ಕೊಂಡಾಡಿದ್ದರು. ರಾಜಮೌಳಿ ಹಾಗೂ ಜೇಮ್ಸ್ ಕ್ಯಾಮರನ್ ನಡುವೆ ಉತ್ತಮ ಗೆಳೆತನ ಹಾಗೂ ಪರಸ್ಪರ ಗೌರವ ಇದೆ.
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ಹೌದು, ನಿಮ್ಮ ಊರಿನಲ್ಲಿ ಜಾತ್ರೆ, ಸಭೆ, ಸಮಾರಂಭಗಳು ನಡೆದರೆ ಅದನ್ನು ಬಯಲುಸೀಮೆಟೈಮ್ಸ್.ಕಾಂ ಮೂಲಕ ನಾಡಿಗೆ ತಿಳಿಸಿ. ಅಷ್ಟೇ ಅಲ್ಲ ನಿಮ್ಮೂರಿನ ರಸ್ತೆ, ಚರಂಡಿ, ಆಸ್ಪತ್ರೆ , ಶಾಲೆ ಯಾವುದೇ ಸಮಸ್ಯೆ ಇದ್ದರೂ ಅಧಿಕಾರಿಗಳ ಕಣ್ಣು ತೆರೆಯುವಂತೆ ಸುದ್ದಿ ಮಾಡಿ. ನೀವು ಜಸ್ಟ್ ನಮ್ಮ ವಾಟ್ಸ್ ಆಪ್ ಸಂಖ್ಯೆಗೆ ಸುದ್ದಿ ಕಳುಹಿಸಿ ಉಳಿದದ್ದನ್ನು ಬಯಲುಸೀಮೆಟೈಮ್ಸ್.ಕಾಂ ಮಾಡಲಿದೆ. ನಮ್ಮ ವಾಟ್ಸ್ ಆಪ್ ಸಂಖ್ಯೆ: +91 96201 39796
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.







