ಅರಸೀಕೆರೆ: ಮುಖ್ಯಮಂತ್ರಿ ಸಿದ್ದರಾಮಯ್ಯ ಸಾರ್ವಜನಿಕ ಸಮಾರಂಭಗಳನ್ನು ಉದ್ದೇಶಿಸಿ ಮಾತನಾಡಲು ವೇದಿಕೆ ತಲುಪಿದಾಗ ಅಭಿಮಾನಿಗಳು ಘೋಷಣೆಗಳನ್ನು ಕೂಗುವುದು ಮತ್ತು ಶಿಳ್ಳೆ ಹೊಡೆಯುವುದು ಸಾಮಾನ್ಯ. ಇದನ್ನು ಹಗುರವಾಗಿ ಪರಿಗಣಿಸಿ ಸಿದ್ದರಾಮಯ್ಯ ಅವರು ತಮ್ಮ ಭಾಷಣವನ್ನು ಮುಂದುವರೆಸುತ್ತಾರೆ. ಆದರೆ, ಅರಸೀಕೆರೆಯಲ್ಲಿ ನಡೆದ ಫಲಾನುಭವಿಗಳ ಸಮಾವೇಶದಲ್ಲಿ ಅಭಿಮಾನಿಗಳ ವರ್ತನೆಗೆ ಕೆಂಡಾಮಂಡಲಗೊಂಡು ವೇದಿಕೆಯಿಂದ ಹೊರ ನಡೆದ ಬೆಳವಣಿಗೆ ಕಂಡು ಬಂದಿತು.ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಒಟ್ಟು 600 ಕೋಟಿಗೂ ಅಧಿಕ ಮೊತ್ತದ 11 ಕಾಮಗಾರಿಗಳ ಲೋಕಾರ್ಪಣೆ ಹಾಗೂ 23 ನೂತನ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಿದರು.ಸಮಾವೇಶದಲ್ಲಿ ಮೊದಲಿಗೆ ಮಾತನಾಡಿದ ಸಚಿವ ಜಮೀರ್ ಅಹ್ಮದ್ ಖಾನ್ ಅವರು, “ನಮ್ಮ ಪಕ್ಷ ಇರುವುದು ಜನರಿಗೆ ಸಹಾಯ ಮಾಡಲು. ನಾನು ಕೈ ಮುಗಿತಿನಿ ಸಿಎಂ, ಡಿಸಿಎಂ ಅವರೇ ಆದಷ್ಟು ಬೇಗ ಶಿವಲಿಂಗೇಗೌಡ ಅವರನ್ನು ಮಂತ್ರಿ ಮಾಡಿ ಎಂದು ಮನವಿ ಮಾಡಿದರು.ನಂತರ ಮಾತನಾಡಿದ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್, “ಅರಸೀಕೆರೆ ಶಾಸಕ ಕೆ.ಎಂ.ಶಿವಲಿಂಗೇಗೌಡ ಉತ್ತಮ ಕೆಲಸ ಮಾಡಿದ್ದಾರೆ. ಇಂತಹ ಶಾಸಕರು ಎಲ್ಲೆಡೆ ಇದ್ದರೆ ಹೆಚ್ಚಿನ ಸ್ಥಾನಗಳನ್ನು ಗೆಲ್ಲಬಹುದು ಎಂದರು.
ಈ ವೇಳೆ ಅಭಿಮಾನಿಗಳು, ಕೆ.ಎಂ.ಶಿವಲಿಂಗೇಗೌಡರನ್ನು ಮಂತ್ರಿ ಮಾಡಿ ಎಂದು ಕೂಗಿದರು. “ಮಾಡ್ತೀನಿ ಬಿಡ್ರಿ ಆಯ್ತು ಆಯ್ತು, ಅದೆಲ್ಲ ಅಂಗಡಿಯಲ್ಲಿ ಸಿಗಲ್ಲ ಎಂದು ಭರವಸೆ ನೀಡಿದರು.ಕೊನೆಗೆ ಸಮಾವೇಶದ ಅಧ್ಯಕ್ಷತೆ ವಹಿಸಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಭಾಷಣ ಮಾಡಲು ಆರಂಭಿಸಿದರು. ಭಾಷಣದ ಮಧ್ಯೆ ಸಿಎಂ ಸಿದ್ದರಾಮಯ್ಯ ಅವರು ಶಾಸಕ ಶಿವಲಿಂಗೇಗೌಡ ಅವರಿಗೆ ಉತ್ತಮ ಭವಿಷ್ಯವಿದೆ ಎಂದರು.ಈ ವೇಳೆ ಶಿವಲಿಂಗೇಗೌಡ ಅವರ ಬೆಂಬಲಿಗರು ಅವರನ್ನು ಮಂತ್ರಿ ಮಾಡಿ ಎಂದು ಘೋಷಣೆ ಕೂಗಲು ಆರಂಭಿಸಿದರು. ಆಗ ಸಿದ್ದರಾಮಯ್ಯ ಅವರು ಸುಮ್ಮನೆ ಕುಳಿತುಕೊಳ್ಳಿ ಎಂದು ಸಿಟ್ಟಾದರು. ಆದರೂ ಜನರು ಕೂಗುತ್ತಿದ್ದರಿಂದ ಆಕ್ರೋಶಗೊಂಡ ಅವರು, ಭಾಷಣವನ್ನು ಅರ್ಧಕ್ಕೆ ಮೊಟಕುಗೊಳಿ ತಮ್ಮ ಕುರ್ಚಿಯತ್ತ ತೆರಳಿದರು.ಬಳಿಕ ಕೆ.ಎನ್. ರಾಜಣ್ಣ ಮತ್ತು ಕೆ.ಎಂ. ಶಿವಲಿಂಗೇಗೌಡ ಇಬ್ಬರೂ ಅಭಿಮಾನಿಗಳ ವರ್ತನೆ ವಿರುದ್ಧ ಕಿಡಿಕಾರಿದರು. ನಂತರ ಸಿಎಂ ಸಿದ್ದರಾಮಯ್ಯ ಅವರನ್ನು ಸಮಾಧಾನಗೊಳಿಸಿದರು.
ಪರಿಸ್ಥಿತಿ ತಿಳಿಗೊಂಡ ಬಳಿಕ ಸಿದ್ದರಾಮಯ್ಯ ಅವರು ಮತ್ತೆ ಭಾಷಣ ಮುಂದುವರಿಸಿ, ಶಿವಲಿಂಗೇಗೌಡ ಅವರನ್ನು ಮಂತ್ರಿ ಮಾಡುವುದು ಹೈಕಮಾಂಡ್, ಸರ್ಕಾರ. ಶಿವಲಿಂಗೇಗೌಡ ಮಂತ್ರಿ ಆಗಲು ಎಲ್ಲ ಅರ್ಹತೆ ಹೊಂದಿದ್ದಾರೆ. ಅವರ ವ್ಯಕ್ತಿತ್ವ ಗಮನಿಸಿ ನೀವು ಅವರನ್ನು ನಾಲ್ಕು ಬಾರಿ ಗೆಲ್ಲಿಸಿದ್ದೀರಿ. ಜನರು ಇದೇ ಬಾಂಧವ್ಯವನ್ನು ಕಾಯ್ದುಕೊಳ್ಳಬೇಕು ಮತ್ತು ಎಲ್ಲಾ ಅಂಶಗಳಲ್ಲಿ ಶಿವಲಿಂಗೇಗೌಡರನ್ನು ಬೆಂಬಲಿಸಬೇಕು. 2028 ರ ವಿಧಾನಸಭಾ ಚುನಾವಣೆಯಲ್ಲಿಯೂ ಅವರನ್ನು ಮತ್ತೆ ಆಯ್ಕೆ ಮಾಡಬೇಕು. ಕೆ.ಎಂ. ಶಿವಲಿಂಗೇಗೌಡ ರಾಜ್ಯದ ಅತ್ಯುತ್ತಮ ಮತ್ತು ಜನಪ್ರಿಯ ಶಾಸಕರಲ್ಲಿ ಒಬ್ಬರು. ಆದರೆ, ಎಲ್ಲ ವಿಚಾರಗಳನ್ನು ಬಹಿರಂಗವಾಗಿ ಹೇಳಲು ಆಗಲ್ಲ ಎಂದರು.
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ಹೌದು, ನಿಮ್ಮ ಊರಿನಲ್ಲಿ ಜಾತ್ರೆ, ಸಭೆ, ಸಮಾರಂಭಗಳು ನಡೆದರೆ ಅದನ್ನು ಬಯಲುಸೀಮೆಟೈಮ್ಸ್.ಕಾಂ ಮೂಲಕ ನಾಡಿಗೆ ತಿಳಿಸಿ. ಅಷ್ಟೇ ಅಲ್ಲ ನಿಮ್ಮೂರಿನ ರಸ್ತೆ, ಚರಂಡಿ, ಆಸ್ಪತ್ರೆ , ಶಾಲೆ ಯಾವುದೇ ಸಮಸ್ಯೆ ಇದ್ದರೂ ಅಧಿಕಾರಿಗಳ ಕಣ್ಣು ತೆರೆಯುವಂತೆ ಸುದ್ದಿ ಮಾಡಿ. ನೀವು ಜಸ್ಟ್ ನಮ್ಮ ವಾಟ್ಸ್ ಆಪ್ ಸಂಖ್ಯೆಗೆ ಸುದ್ದಿ ಕಳುಹಿಸಿ ಉಳಿದದ್ದನ್ನು ಬಯಲುಸೀಮೆಟೈಮ್ಸ್.ಕಾಂ ಮಾಡಲಿದೆ. ನಮ್ಮ ವಾಟ್ಸ್ ಆಪ್ ಸಂಖ್ಯೆ: +91 96201 39796
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.



