ಚಿತ್ರದುರ್ಗದಲ್ಲಿ ಭೀಕರ ಆಸಿಡ್ ದಾಳಿ – ವಿಚ್ಛೇದಿತ ಪತ್ನಿ ಸೇರಿ ಐವರಿಗೆ ಗಾಯ, ಆರೋಪಿ ಪರಾರಿ
ಚಿತ್ರದುರ್ಗ, ಮಾ.20:
ಜಿಲ್ಲೆಯ ಮಾಳಪ್ಪನಹಟ್ಟಿಯಲ್ಲಿ ಕುಟುಂಬ ವೈಷಮ್ಯದ ಹಿನ್ನೆಲೆ ಭೀಕರ ಆಸಿಡ್ ದಾಳಿ ನಡೆದಿದ್ದು, ವಿಚ್ಛೇದಿತ ಪತ್ನಿ ಸೇರಿ ಐವರು ಗಾಯಗೊಂಡಿರುವ ಘಟನೆ ಶುಕ್ರವಾರ ಬೆಳಕಿಗೆ ಬಂದಿದೆ.
ತಾಸಿನಾ ಬಾನು (ಮಾಳಪ್ಪನಹಟ್ಟಿ ನಿವಾಸಿ) ತಮ್ಮ ಪತಿ ಸುಹಿಲ್ ಭಾಷಾ ಅವರ ಕಿರುಕುಳದಿಂದ ಬೇಸತ್ತು ಕೆಲವು ತಿಂಗಳ ಹಿಂದೆ ಅವರನ್ನು ತೊರೆದು ಬೆಂಗಳೂರಿನಲ್ಲಿ ವಾಸವಾಗಿದ್ದರು. ಹಬ್ಬದ ನಿಮಿತ್ತ ಸಹೋದರಿ ನಗ್ಮಾ ನಾಯ್ಕ್ ಮನೆಗೆ ಬಂದಿದ್ದ ವೇಳೆ ಆರೋಪಿ ಸುಹಿಲ್ ಭಾಷಾ ಈ ಕೃತ್ಯ ಎಸಗಿದ್ದಾನೆ.
ಮಾಹಿತಿಯ ಪ್ರಕಾರ, ಆರೋಪಿ ಮೊದಲು ತಾಸಿನಾ ಬಾನು ಮೇಲೆ ಮಚ್ಚಿನಿಂದ ಹಲ್ಲೆ ನಡೆಸಿ, ನಂತರ ಮನೆಯಲ್ಲಿದ್ದ ಇತರರ ಮೇಲೂ ಆಸಿಡ್ ಎರಚಿದ್ದಾನೆ. ಈ ದಾಳಿಯಲ್ಲಿ ತಾಸಿನಾ ಬಾನು, ಅವರ ಪುತ್ರಿ ರೋಷನಿ, ಸಹೋದರಿ ನೇಹಾ, ನೇಹಾ ಪುತ್ರಿ ಇಕ್ರಾ ಹಾಗೂ ನಗ್ಮಾ ನಾಯ್ಕ್ ಗಾಯಗೊಂಡಿದ್ದಾರೆ.
ಗಾಯಾಳುಗಳನ್ನು ತಕ್ಷಣ ದಾವಣಗೆರೆ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.
ಘಟನೆ ಬಳಿಕ ಆರೋಪಿ ಪರಾರಿಯಾಗಿದ್ದು, ಅವನ ಬಂಧನಕ್ಕಾಗಿ ಕೋಟೆ ಪೊಲೀಸ್ ಠಾಣೆ ಪೊಲೀಸರು ವಿಶೇಷ ತಂಡ ರಚಿಸಿದ್ದಾರೆ.
ಘಟನಾ ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಂಜಿತ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಆರೋಪಿಯನ್ನು ಶೀಘ್ರ ಬಂಧಿಸಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.
ಈ ಘಟನೆ ಸ್ಥಳೀಯರಲ್ಲಿ ಆತಂಕ ಮೂಡಿಸಿದ್ದು, ಗೃಹ ಹಿಂಸೆ ಪ್ರಕರಣಗಳ ಬಗ್ಗೆ ಮತ್ತೆ ಚರ್ಚೆಗೆ ಕಾರಣವಾಗಿದೆ
