ಹೊಸದುರ್ಗ: ಹೊಸದುರ್ಗ ಪಟ್ಟಣದ ನಿವಾಸಿ ಫಕೃದ್ದೀನ್ (46) ಹೃದಯಾಘಾತದಿಂದ ನಿಧನರಾಗಿದ್ದಾರೆ. ಸ್ನೇಹಿತರೊಂದಿಗೆ ಬೆಂಗಳೂರಿಗೆ ತೆರಳಿ ವಾಪಸ್ಸು ಬರುವಾಗ ಶಿರಾ ಬಳಿ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಶನಿವಾರ ಫಕೃದ್ದೀನ್ ಅಂತ್ಯಕ್ರಿಯೆ ನೆರವೇರಿದ್ದು, ಶಾಸಕ ಬಿ.ಜಿ.ಗೋವಿಂದಪ್ಪ, ಮಾಜಿ ಶಾಸಕ ಗೂಳಿಹಟ್ಟಿ ಡಿ.ಶೇಖರ್, ಖನಿಜ ನಿಗಮದ ಮಾಜಿ ಅಧ್ಯಕ್ಷ ಎಸ್.ಲಿಂಗಮೂರ್ತಿ, ಉದ್ಯಮಿ ಪ್ರದೀಪ್ ಸೇರಿದಂತೆ ಅನೇಕ ಗಣ್ಯರು, ಸ್ನೇಹಿತರು ಸಂತಾಪ ಸೂಚಿಸಿದ್ದಾರೆ.ಫಕೃದ್ದೀನ್ ಮೃತಪಟ್ಟ ನಂತರ ಹೊಸದುರ್ಗದಲ್ಲಿ ನಡೆಯುತ್ತಿರುವ ಮೀಟರ್ ಬಡ್ಡಿ ದಂಧೆ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ಖುದ್ದು ಮಾಜಿ ಶಾಸಕ ಗೂಳಿಹಟ್ಟಿ ಶೇಖರ್ ಈ ಬಗ್ಗೆ ಸುಧೀರ್ಘವಾಗಿ ಮಾತನಾಡಿದ್ದು, ಪೊಲೀಸರ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಿಲೋ ಮೀಟರ್ ಬಡ್ಡಿ ದಂಧೆ
ಹೊಸದುರ್ಗದ ಜನಾನುರಾಗಿ ಫಕೃದ್ದಿನ್ ಸಾವಿನ ಬಗ್ಗೆ ತೀವ್ರ ಬೇಸರ ವ್ಯಕ್ತಪಡಿಸಿರುವ ಮಾಜಿ ಸಚಿವ ಗೂಖಿಹಟ್ಟಿ ಶೇಖರ್, ಈ ಸಾವು ಅತ್ಯಂತ ದುಖಃ ತಂದಿದೆ. ಸಮಾಜಮುಖಿಯಾಗಿ ಫಕೃದ್ದೀನ್ ಕೆಲಸ ಮಾಡುತ್ತಿದ್ದರು. ಅವರ ಸಾವಿಗೆ ಖಾಸಗಿ ಚಿಟ್ ಪಂಡ್ ಕಂಪನಿ ಹಾಗೂ ಪಟ್ಟಣದಲ್ಲಿ ಖಾಸಗಿ ಮೀಟರ್, ಕಿ.ಮೀ ಬಡ್ಡಿ ವ್ಯವಹಾರ ನಡೆಸುವವರೇ ನೇರ ಕಾರಣ ಎಂದು ಆರೋಪಿಸಿದ್ದಾರೆ.ಫಕೃದ್ದಿನ್ ಮನೆ ನಿರ್ಮಾಣಕ್ಕೆ ಸಾಲ ಮಾಡಿದ್ದರು. ಸಾಲ ಪಡೆದುಕೊಂಡ ಹಣಕ್ಕಿಂತ ಹೆಚ್ಚು ಹಣವನ್ನು ಬಡ್ಡಿ ರೂಪದಲ್ಲಿ ಕಟ್ಟಿದ್ದಾರೆ. ನನ್ನ ಬಳಿ ಹಲವಾರು ಬಾರಿ ನೋವು ತೋಡಿಕೊಂಡಿದ್ದರು. ಮೀಟರ್ ಬಡ್ಡಿ ನಡೆಸುವವರ ಹೆಸರುಗಳನ್ನು ಬರೆದು ಸರ್ಕಲ್ ಇನ್ಸಪೆಕ್ಟರ್ ಗೆ ಕಳುಹಿಸಿದ್ದೆ. ಮೀಟರ್ ಬಡ್ಡಿ ನಡೆಸುವವರನ್ನು ಠಾಣೆಗೆ ಕರೆಯಿಸಿ ಎಚ್ಚರಿಕೆ ನೀಡಿದ್ದರು. ಆದರೂ, ಮೀಟರ್ ಬಡ್ಡಿ ವ್ಯವಹಾರಸ್ಥರ ಕಿರುಕುಳ ನಿಂತಿಲ್ಲ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಮೀಟರ್ ಬಡ್ಡಿ ನಡೆಸುವವರನ್ನು ಮಟ್ಟ ಹಾಕಬೇಕು ಎಂದು ಆಗ್ರಹಿಸಿದ್ದಾರೆ.ಅಗತ್ಯಕ್ಕಾಗಿ ಹಣ ಪಡೆಯುವವರ ಮೇಲೆ ದಿನದ ಬಡ್ಡಿ, ಚಕ್ರಬಡ್ಡಿ, ವಾರದ ಬಡ್ಡಿ, ಚಕ್ರಬಡ್ಡಿ, ತಿಂಗಳ ಬಡ್ಡಿ ಎಂದು ಅತಿರೇಕದ ಒತ್ತಡ ಹಾಕಿ ದೈಹಿಕ ಹಾಗೂ ಮಾನಸಿಕ ಕಿರುಕುಳ ಮಾಡುತ್ತಾರೆ. ಮನೆಗೆ ಬಂದು ಭಯ ಹುಟ್ಟಿಸುತ್ತಾರೆ. ಹೀಗಾಗಿ ಮರ್ಯಾದೆಗೆ ಅಂಜಿ ಅವರು ಕೇಳಿದ್ದಷ್ಟು ಹಣ ಕೊಟ್ಟು ಕಳುಹಿಸುತ್ತಿದ್ದಾರೆ. ಬಲಾಢ್ಯರ ವಿರುದ್ಧ ಹೋರಾಡಲಾಗದೇ ಪೊಲೀಸ್ ಠಾಣೆಗೆ ದೂರು ನೀಡಲಾಗುತ್ತಿಲ್ಲ. ಮನೆ ಬಳಿಗೆ ಬಂದು ಗಲಾಟೆ ಮಾಡುತ್ತಾರೆ ಎಂಬ ಕಾರಣಕ್ಕೆ ದೂರು ನೀಡಲು ಹಿಂದೇಟು ಹಾಕುತ್ತಿದ್ದಾರೆ. ಪೊಲೀಸ್ ಇಲಾಖೆ ಅಮಾಯಕರಿಗೆ ರಕ್ಷಣೆ ನೀಡಬೇಕು ಎಂದು ಗೂಳಿಹಟ್ಟಿ ಡಿ.ಶೇಖರ್ ಮನವಿ ಮಾಡಿದ್ದಾರೆ.
ಚಿಟ್ ಫಂಡ್ ವಿರುದ್ಧ ಪ್ರತಿಭಟನೆ
ಫಕೃದ್ದಿನ್ ಸಾವಿಗೆ ಖಾಸಗಿ ಚಿಟ್ ಪಂಡ್ ಬ್ಯಾಂಕಿನವರೇ ನೇರ ಕಾರಣ ಎಂದು ಮೃತ ಫಕೃದ್ದಿನ್ ಸ್ನೇಹಿತರು, ಸಂಬಂಧಿಕರು ಬ್ಯಾಂಕ್ಗೆ ಬೀಗ ಹಾಕಿ ಶನಿವಾರ ಪ್ರತಿಭಟನೆ ನಡೆಸಿದ್ದಾರೆ. 1 ಲಕ್ಷ ರೂ ಹಣ ಪಾವತಿ ಮಾಡಬೇಕಿತ್ತು. ಬುಧವಾರ ಪೂರ್ಣ ಹಣ ಪಾವತಿ ಮಾಡುವುದಾಗಿ ಮನವಿ ಮಾಡಿಕೊಂಡರು ಸಹ 70 ಕ್ಕೂ ಅಧಿಕ ಬಾರಿ ಪೋನ್ ಕರೆ ಮಾಡಿ ಮಾನಸಿಕ ಹಿಂಸೆ ನೀಡಿದರು. ಬ್ಯಾಂಕಿನ ಸಿಬ್ಬಂದಿ ಮನೆ ಹತ್ತಿರ ಹೋಗಿ ಗಲಾಟೆ ಮಾಡಿದ್ದಾರೆ. ಇದರಿಂದ ನೊಂದಂತಹ ಫಕೃದ್ದಿನ್ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಅವರ ಸಾವನ್ನು ವಾಪಸ್ಸು ತರಲು ಸಾಧ್ಯವಿಲ್ಲ. ಅವರ ಕುಟುಂಬಸ್ಥರ ನಿರ್ವಹಣೆಗೆ 1 ಕೋಟಿ ರೂ ಪರಿಹಾರ ನೀಡಬೇಕು ಎಂದು ಸ್ನೇಹಿತರಾದ ಹೇರೂರು ಮಂಜುನಾಥ್, ಅಲ್ತಾಪ್ ಪಾಷಾ ಆಗ್ರಹಿಸಿದ್ದಾರೆ.
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ಹೌದು, ನಿಮ್ಮ ಊರಿನಲ್ಲಿ ಜಾತ್ರೆ, ಸಭೆ, ಸಮಾರಂಭಗಳು ನಡೆದರೆ ಅದನ್ನು ಬಯಲುಸೀಮೆಟೈಮ್ಸ್.ಕಾಂ ಮೂಲಕ ನಾಡಿಗೆ ತಿಳಿಸಿ. ಅಷ್ಟೇ ಅಲ್ಲ ನಿಮ್ಮೂರಿನ ರಸ್ತೆ, ಚರಂಡಿ, ಆಸ್ಪತ್ರೆ , ಶಾಲೆ ಯಾವುದೇ ಸಮಸ್ಯೆ ಇದ್ದರೂ ಅಧಿಕಾರಿಗಳ ಕಣ್ಣು ತೆರೆಯುವಂತೆ ಸುದ್ದಿ ಮಾಡಿ. ನೀವು ಜಸ್ಟ್ ನಮ್ಮ ವಾಟ್ಸ್ ಆಪ್ ಸಂಖ್ಯೆಗೆ ಸುದ್ದಿ ಕಳುಹಿಸಿ ಉಳಿದದ್ದನ್ನು ಬಯಲುಸೀಮೆಟೈಮ್ಸ್.ಕಾಂ ಮಾಡಲಿದೆ. ನಮ್ಮ ವಾಟ್ಸ್ ಆಪ್ ಸಂಖ್ಯೆ: +91 96201 39796
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.







