ಡಾ.ಎಸ್.ಎಲ್.ಭೈರಪ್ಪ ಅವರು ಕನ್ನಡ ವಿಶ್ವವಿದ್ಯಾಲಯದ ಬಗ್ಗೆ ಬಹಳ ಪ್ರೀತಿಯನ್ನು ವ್ಯಕ್ತಪಡಿಸುತ್ತಿದ್ದರು. ಅವರ ಕಾದಂಬರಿಗಳು ಓದುಗರನ್ನು ವಿಸ್ತರಿಸುವುದರ ಜೊತೆಗೆ ಜನಸಾಮಾನ್ಯರಲ್ಲೂ ಜನಪ್ರಿಯತೆಯನ್ನು ಪಡೆದಿದ್ದವು. ಕನ್ನಡದಿಂದ ಕೃತಿಗಳು ಅತಿಹೆಚ್ಚು ಅನುವಾದ ಆಗಿರುವ ಲೇಖಕರು ಯಾರಾದರೂ ಇದ್ದಾರೆಂದರೆ ಅವರು ಡಾ. ಎಸ್.ಎಲ್ ಭೈರಪ್ಪನವರು ಮಾತ್ರ. ಸಾಹಿತ್ಯ ಕೃಷಿಯೊಂದಿಗೆ ಹೇಮಾವತಿ ನದಿಗೆ ನೀರು ತುಂಬುವಂತೆ ಮಾಡಿ ಸುತ್ತಮುತ್ತಲಿನ ರೈತರ ಮುಖದಲ್ಲಿ ಮಂದಹಾಸವನ್ನೂ ಮೂಡಿಸಿದ್ದರು ಎಂದು ಶ್ರದ್ಧಾಂಜಲಿ ಸಭೆಯಲ್ಲಿ ಮಾನ್ಯ ಕುಲಪತಿಗಳಾದ ಡಾ. ಡಿ.ವಿ. ಪರಮಶಿವಮೂರ್ತಿ ಅವರು ತಿಳಿಸುತ್ತಾ, ಪುರಾಣಗಳನ್ನು ವಿಭಿನ್ನ ದೃಷ್ಟಿಕೋನದಲ್ಲಿ ನೋಡುವ ಹೊಸ ಜಾಯಮಾನವನ್ನು ಕಾದಂಬರಿ ಕ್ಷೇತ್ರದಲ್ಲಿ ಹುಟ್ಟುಹಾಕಿದ್ದರು. ಅವರ ವಂಶವೃಕ್ಷ, ದಾಟು, ಪರ್ವ, ದೂರ ಸರಿದವರು ಮೊದಲಾದ ಕಾದಂಬರಿಗಳು ಕನ್ನಡಿಗರ ಹೃದಯದಲ್ಲಿ ಶಾಶ್ವತವಾಗಿ ನೆಲೆಸಿವೆ. ಯಾರ, ಯಾವ ಟೀಕೆ, ಟಿಪ್ಪಣಿಗಳಿಗೂ ಎದೆಗುಂದದೆ ಶಾಂತ ಮನಸ್ಸಿನಿಂದ ಸಾಹಿತ್ಯ ಕೃಷಿಯಲ್ಲಿ ತೊಡಗಿರುತ್ತಿದ್ದರು. ಅವರ ಕಾದಂಬರಿಗಳಲ್ಲಿ ಸಾಮಾಜಿಕ ವ್ಯವಸ್ಥೆಯ ಜೊತೆಗೆ ಕುಟುಂಬದ ಒಳಗಿನ ಅತ್ಯಂತ ಸೂಕ್ಷ್ಮ ಸಂಗತಿಗಳನ್ನು ಬಹಳ ಅಚ್ಚುಕಟ್ಟಾಗಿ ಚಿತ್ರಿಸುತ್ತಿದ್ದರು. ಇಡೀ ದೇಶಕ್ಕೆ ಮಾದರಿಯಾದ ಭೈರಪ್ಪನವರು ನಮ್ಮೆಲ್ಲರಿಂದ ದೂರವಾಗಿದ್ದಾರೆ ಎಂದು ಮಾನ್ಯ ಕುಲಪತಿಯವರು ಭಾವುಕರಾದರು. ನಂತರ ಭೈರಪ್ಪನವರ ಭಾವಚಿತ್ರಕ್ಕೆ ಮಾನ್ಯ ಕುಲಪತಿಯವರಾದ ಡಾ. ಡಿ.ವಿ.ಪರಮಶಿವಮೂರ್ತಿ, ಕುಲಸಚಿವರಾದ ಡಾ. ವಿಜಯ್ ಪೂಣಚ್ಚ ತಂಬಂಡ ಮೊದಲಾದವರು ಪುಷ್ಪ ನಮನದ ಮೂಲಕ ಶ್ರದ್ಧಾಂಜಲಿಯನ್ನು ಸಲ್ಲಿಸಿದರು. ಪಂಪ ಸಭಾಂಗಣದಲ್ಲಿ ನಡೆದ ಶ್ರದ್ಧಾಂಜಲಿ ಸಭೆಯಲ್ಲಿ ಹಣಕಾಸು ಅಧಿಕಾರಿಗಳು, ಡೀನರು, ವಿವಿಧ ವಿಭಾಗಗಳ ಮುಖ್ಯಸ್ಥರು ಹಾಗೂ ಪ್ರಾಧ್ಯಾಪಕರು, ಆಡಳಿತಾಧಿಕಾರಿಗಳು, ವಿದ್ಯಾರ್ಥಿಗಳು, ಸಿಬ್ಬಂದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ಹೌದು, ನಿಮ್ಮ ಊರಿನಲ್ಲಿ ಜಾತ್ರೆ, ಸಭೆ, ಸಮಾರಂಭಗಳು ನಡೆದರೆ ಅದನ್ನು ಬಯಲುಸೀಮೆಟೈಮ್ಸ್.ಕಾಂ ಮೂಲಕ ನಾಡಿಗೆ ತಿಳಿಸಿ. ಅಷ್ಟೇ ಅಲ್ಲ ನಿಮ್ಮೂರಿನ ರಸ್ತೆ, ಚರಂಡಿ, ಆಸ್ಪತ್ರೆ , ಶಾಲೆ ಯಾವುದೇ ಸಮಸ್ಯೆ ಇದ್ದರೂ ಅಧಿಕಾರಿಗಳ ಕಣ್ಣು ತೆರೆಯುವಂತೆ ಸುದ್ದಿ ಮಾಡಿ. ನೀವು ಜಸ್ಟ್ ನಮ್ಮ ವಾಟ್ಸ್ ಆಪ್ ಸಂಖ್ಯೆಗೆ ಸುದ್ದಿ ಕಳುಹಿಸಿ ಉಳಿದದ್ದನ್ನು ಬಯಲುಸೀಮೆಟೈಮ್ಸ್.ಕಾಂ ಮಾಡಲಿದೆ. ನಮ್ಮ ವಾಟ್ಸ್ ಆಪ್ ಸಂಖ್ಯೆ: +91 96201 39796
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.







