ಅಧಿಕಾರಿಗಳು ಮಂತ್ರಿಗಳ ಹೆಸರನ್ನು ದುರ್ಬಳಕೆ ಮಾಡಿಕೊಂಡರೆ ಅದಕ್ಕೆ ಮಂತ್ರಿಗಳು ಹೇಗೆ ಹೊಣೆಗಾರರಾಗುತ್ತಾರೆ-ಆರ್.ಬಿ.ತಿಮ್ಮಾಪುರ
ಭ್ರಷ್ಟ ಅಧಿಕಾರಿಗಳು ತಾವು ಮಾಡುವ ಭ್ರಷ್ಟಾಚಾರದಲ್ಲಿ ಮಂತ್ರಿಗಳ ಹೆಸರನ್ನು ದುರುಪಯೋಗ ಮಾಡಿಕೊಂಡರೆ, ಅದರಲ್ಲಿ ಮಂತ್ರಿಗಳ ತಪ್ಪೇನಿದೆ. ಇಲ್ಲಸಲ್ಲದ ಆರೋಪಗಳಿಗೆ ನಾನು ರಾಜೀನಾಮೆ ನೀಡುವ ಪ್ರಶ್ನೆಯೇ ಉದ್ಭವಿಸುವುದಿಲ್ಲ ಎಂದು ಅಬಕಾರಿ ಸಚಿವರು ವಿಧಾನಸಭೆಯಲ್ಲಿ ಇಂದು ತಿಳಿಸಿದರು.
ಇಂದು ರಾತ್ರಿ ನಿಯಮ ೬೯ ಮೇರೆಗೆ ಸಾರ್ವಜನಿಕ ಮಹತ್ವದ ಅಲ್ಪಕಾಲಾವಧಿ ಚರ್ಚೆಯ ಮೇಲೆ ವಿರೋಧ ಪಕ್ಷದ ನಾಯಕರಾದ ಆರ್. ಅಶೋಕ, ಅರಗ ಜ್ಞಾನೇಂದ್ರ, ಬಿ.ವೈ ವಿಜಯೇಂದ್ರ , ಡಾ. ಅಶ್ವಥ್ ನಾಯಾರಣ, ಸಿ.ಎನ್.ಸುರೇಶ್ ಬಾಬು ಸಿ.ಬಿ ಹಾಗೂ ಮತ್ತಿತರು ಅಬಕಾರಿ ಇಲಾಖೆಯಲ್ಲಿ ನಡೆದಿದೆ ಎನ್ನಲಾದ ಭ್ರಷ್ಟಾಚಾದ ಹಿನ್ನೆಲೆಯಲ್ಲಿ ಅಬಕಾರಿ ಸಚಿವರು ರಾಜಿನಾಮೆ ನೀಡಬೇಕೆಂದು ಪಟ್ಟು ಹಿಡಿದಿರುವುದಕ್ಕೆ ಸದನಕ್ಕೆ ಉತ್ತರ ನೀಡಿದರು.
ಹಿಂದಿನ ಸರ್ಕಾರಗಳಲ್ಲಿ ಈ ಇಲಾಖೆಯಲ್ಲೇ ನಡೆದಿರುವ ಹಲವು ಹಗರಣಗಳಲ್ಲಿ ಯಾವುದೇ ಮಂತ್ರಿಗಳು ರಾಜೀನಾಮೆ ನೀಡದಿರುವುದನ್ನು ತಿಳಿಸಿದ ಅವರು, ನಾನು ಅಬಕಾರಿ ಇಲಾಖೆಯ ಜವಾಬ್ದಾರಿಯನ್ನು ವಹಿಸಿಕೊಂಡಾಗಿನಿಂದ ಕೈಗೊಂಡಿರುವ ಹಲವು ಸುಧಾರಣೆಗಳ ಬಗ್ಗೆ ಒಂದೂ ಮಾತನಾಡ ವಿರೋಧ ಪಕ್ಷದವರು ನನ್ನ ವಿರುದ್ಧ ಯಾವುದೇ ಸಾಕ್ಷಿಗಳಿಲ್ಲದಿದ್ದರೂ, ಒಬ್ಬ ಅಧಿಕಾರಿ ಹೇಳಿರುವ ಸುಳ್ಳು ಮಾತಿನ ಮೇಲೆ ನನ್ನ ರಾಜೀನಾಮೆ ಕೇಳುತ್ತಿರುವುದು ಎಷ್ಟು ಸರಿ ಎಂದರು.
ವರ್ಗಾವಣೆಯಲ್ಲಿ ದಂದೆ ನಡೆಯುತ್ತಿದೆ ಎಂಬ ಸುದ್ದಿಗಳು ಕೇಳಿಬರುತ್ತಿದ್ದರಿಂದ ಅಬಕಾರಿ ಇಲಾಖೆಯಲ್ಲಿ ವರ್ಗಾವಣೆ ನಿಯಮಗಳನ್ನು ಜಾರಿ ತಂದು ಸಿಬ್ಬಂದಿ ಮತ್ತು ಅಧಿಕಾರಿಗಳ ವರ್ಗಾವಣೆಯನ್ನು ಪಾರದರ್ಶಕ ಮೆರಿಟ್ ಆಧಾರದಲ್ಲಿ ಕೌನ್ಸಿಲಿಂಗ್ ಮೂಲಕ ವರ್ಗಾವಣೆ ಮಾಡಲಾಗುತ್ತಿದೆ. ಇದು ಇಲಾಖೆಯ ಐತಿಹಾಸಿಕ ಕಾರ್ಯವಾಗಿದೆ. ಹಾಗಾಗಿ ವರ್ಗಾವಣೆಯಲ್ಲಿ ಹೇಗೆ ದಂದೆ ನಡೆಯಲು ಸಾಧ್ಯವೆಂದರು.
ಇನ್ನು ಇಲಾಖೆಯನ್ನು ಮತ್ತಷ್ಟು ಸುಧಾರಣೆ ಮಾಡುವ ಸಲುವಾಗಿ ಹಿರಿಯ ಅಧಿಕಾರಿಗಳನ್ನು ಅವರ ಸ್ವಂತ ಜಿಲ್ಲೆಗೆ ಯಾವುದೇ ಕಾರಣಕ್ಕೂ ಕಾರ್ಯನಿರ್ವಾಹಕ ಹುದ್ದೆಗಳಿಗೆ ವರ್ಗಾಹಿಸುತ್ತಿಲ್ಲ. ಇನ್ನು ೫ ವರ್ಷಗಳಿಂದ ಬೆಂಗಳೂರು ನಗರದಲ್ಲಿ ಕಾರ್ಯನಿರ್ವಾಹಕ ಹುದ್ದೆಯಲ್ಲಿ ಸೇವೆ ಸಲ್ಲಿಸಿರುವ ಅಧಿಕಾರಿ ಮತ್ತು ಸಿಬ್ಬಂದಿಗಳನ್ನು ಹೊರ ಜಿಲ್ಲೆಗಳಿಗೆ ವರ್ಗಾವಣೆ ಮಾಡಲಾಗಿದೆ ಎಂದರು.
ಸನ್ನದು ನವೀಕರಣದಲ್ಲೂ ಭ್ರಷ್ಟಾಚಾರ ಕೇಳಿ ಬಂದ ಹಿನ್ನೆಲೆಯಲ್ಲಿ ನನ್ನ ಅವಧಿಯಲ್ಲಿ ಎಲ್ಲಾ ಸನ್ನದು ನವೀಕರಣವನ್ನು ಆನ್ ಲೈನ್ ಮುಖಾಂತರವೇ ನವೀಕರಿಸಲಾಗಿದೆ. ೨೦೨೫-೨೬ ನೇ ಸಾಲಿನಲ್ಲಿ ೪೮ ಗಂಟೆಗಳಲ್ಲಿ ೧೪೧೦೧ ಸನ್ನದುಗಳನ್ನು ಒಮ್ಮೆಲೆ ನವೀಕರಿಸಲಾಗಿದೆ. ಸನ್ನದು ಅವಧಿಯನ್ನು ಒಂದು ವರ್ಷದಿಂದ ಐದು ವರ್ಷಗಳಿಗೆ ಹೆಚ್ಚಿಸಲಾಗಿರುವುದರಿಂದ ಇದರಲ್ಲಿ ಭ್ರಷ್ಟಾಚಾರ ನಡೆಯಲು ಸಾಧ್ಯವಿಲ್ಲ.ಈ ರೀತಿಯ ಕೆಲಸ ತಮ್ಮ ಸರ್ಕಾರದ ಅವಧಿಯಲ್ಲಿ ಆಗಿತ್ತೇ ಎಂಬುದನ್ನು ವಿರೋಧ ಪಕ್ಷದವರು ಆತ್ಮಾವಲೋಕನ ಮಾಡಿಕೊಳ್ಳಬೇಕೆಂದರು.
ಸನ್ನದು ಮಂಜೂರಾತಿಯಲ್ಲಿ ಕೂಡ ಸಾಕಷ್ಟು ಆರೋಪಗಳು ಕೇಳಿ ಬಂದ ಹಿನ್ನೆಲೆಯಲ್ಲಿ ಮಂಜೂರಾತಿಗೆ ಇದ್ದ ೧೬ ಹಂತಗಳ ಲಾಗಿನ್ ಕ್ರಮವನ್ನು ೭ ಹಂತಗಳ ಲಾಗಿನ್ ಗಳಾಗಿ ಇಳಿಕೆ ಮಾಡುವ ಮೂಲಕ ಮಂಜೂರಾತಿಯನ್ನು ಬಹಳ ಸುಲಭಗೊಳಿಸಲಾಗಿದೆ. ಸನ್ನದು ಮಂಜೂರಾತಿಗೆ ಮಂತ್ರಿಗಳ ಅನುಮೋದನೆಗಾಗಿ ಕಡತ ಬರುವುದಿಲ್ಲ. ಮಂಜೂರಾತಿಗೆ ಅಧಿಕಾರಿಗಳ ಲಾಗಿನ್ ಗಳಿಗೆ ಕಾಲಮಿತಿಯನ್ನು ಅಳವಡಿಸಿರುವುದರಿಂದ ತಡ ಮಾಡುವ ಅಧಿಕಾರಿ ಯಾರು ಎಂಬುದು ತಿಳಿದು ಬರಲಿದೆ ಎಂದರು.
೨೦೨೫-೨೬ ರ ಆಯವ್ಯಯದಲ್ಲಿ ಉಲ್ಲೇಖಿಸಿದಂತೆ ೫೭೯ ಸನ್ನದುಗಳನ್ನು ಪಾರದರ್ಶಕವಾಗಿ ಇ-ಹರಾಜು ಮಾಡಲು ಕೇಂದ್ರ ಸರ್ಕಾರದಡಿ ಬರುವ ಎಂ.ಎಸ್.ಟಿ.ಸಿ ಸಂಸ್ಥೆಗೆ ನೀಡಲಾಗಿದೆ. ಹಾಗಾದರೆ ವಿರೋಧ ಪಕ್ಷದವರು ಯಾರೋ ಆಂಧ್ರದವರಿಗೆ ಇ-ಹರಾಜು ನೀಡಿದೆ ಎಂದು ಹೇಳುತ್ತಿರುವುದು, ಕೇಂದ್ರ ಸರ್ಕಾರದ ಮೇಲೆಯೇ ಆರೋಪ ಮಾಡಿದಂತೆ ಎಂದರು.
ಲಕ್ಷ್ಮೀನಾರಾಯಣ ಸಿ, ಅವರು ನೀಡಿರುವ ದೂರಿನ ಮೇಲೆ ಅಬಕಾರಿ ಉಪ ಆಯುಕ್ತರು ಮತ್ತು ಅಬಕಾರಿ ಅಧೀಕ್ಷರುಗಳನ್ನು ಲೋಕಾಯುಕ್ತ ಸಂಸ್ಥೆಯವರು ದಾಳಿ ನಡೆಸಿ ಆಪಾದಿತ ಅಧಿಕಾರಿಗಳನ್ನು ವಶಕ್ಕೆ ಪಡೆದು ತನಿಖೆ ನಡೆಸುತ್ತಿದ್ದಾರೆ. ಅದೇ ರೀತಿ ರಾಮಪ್ರಕಾಶ್ ಎಂಬಾತರ ಅರ್ಜಿದಾರರ ವಿರುದ್ಧ ಹಾಗೂ ಸಿ.ಎಲ್-೭ ಸನ್ನದು ನಡೆಸಬೇಕೆಂಬ ಜಾಗದ ವಿರುದ್ಧ ಆರೋಪಗಳನ್ನು ಮಾಡಿ ಅಬಕಾರಿ ಉಪ ಆಯುಕ್ತರಿಗೆ ದೂರು ಸಲ್ಲಿಸಿದ್ದು, ಜಿಲ್ಲಾಧಿಕಾರಿಯವರು ಸದರಿ ಸ್ಥಳವು ವಾಸ ಉದ್ದೇಶಕ್ಕಾಗಿ ಭೂ ಪರಿವರ್ತನೆಗೊಂಡಿದ್ದು, ಹಾಗೂ ಸದರಿ ಸ್ಥಳದ ಕರಾಬಿನ ಬಗ್ಗೆ ವಿವರವಾದ ವರದಿಯನ್ನು ನೀಡಲು ಮೂಲ ದಾಖಲಾತಿಗಳನ್ನು ಪರಿಶೀಲಿಸಲಾಗುತ್ತಿದೆ ಎಂಬ ಮಾಹಿತಿ ನೀಡಿದ್ದಾರೆ ಎಂದು ಸದನಕ್ಕೆ ತಿಳಿಸಿದರು.
ಸದರಿ ವ್ಯಕ್ತಿಯು ನನ್ನನು ಎಲ್ಲಿಯೂ ಭೇಟಿ ಮಾಡದೇ, ನನಗೆ ಸಂಬಂಧಪಟ್ಟ ಯಾವ ವ್ಯಕ್ತಿಯೊಡನೆಯೂ ಸಹ ಮಾತನಾಡದೇ ಅಬಕಾರಿ ಅಧಿಕಾರಿಗಳೊಡನೆ ಆಗಿರುವಂತಹ ಸಂಭಾಷಣೆಯ ಮೇಲೆ ಮಾಧ್ಯಮಗಳ ಮುಂದೆ ನನ್ನ ವಿರುದ್ಧ ಸುಳ್ಳು ಹೇಳಿಕೆ ನೀಡುತ್ತಿರುವುದು ರಾಜಕೀಯ ಪ್ರೇರೇಪಿತದಂತೆ ಮೇಲು ನೋಟಕ್ಕೆ ಕಂಡುಬರುತ್ತಿದೆ. ಜಂಟಿ ಆಯುಕ್ತರಾದ ನಾಗರಜಪ್ಪನವರು ಮಾತನಾಡಿದ್ದಾರೆ ಎಂಬ ಆಡಿಯೋ ತನಿಖೆಯಲ್ಲಿದೆ. ಆ ಆಡಿಯೋದಲ್ಲಿ ನಾನು ಮಾತನಾಡಿರುವುದಿಲ್ಲ. ಆ ಅಧಿಕಾರಿ ನನ್ನ ಹೆಸರನ್ನು ತೆಗೆದುಕೊಂಡಿದ್ದರೆ ಅದರಲ್ಲಿ ನನ್ನ ತಪ್ಪೇನಿದೆ. ತನಿಖೆ ನಂತರ ನಿಮಗೆ ಸತ್ಯಾಂಶ ಗೊತ್ತಾಗಲಿದೆ ಎಂದರು.
ಇನ್ನು ಹೆಚ್.ಟಿ ಮಂಜು ಅವರು ಮಾತನಾಡಿರುವ ಪ್ರಕರಣದಲ್ಲಿ ಉಚ್ಛನ್ಯಾಯಲದ ಆದೇಶದಂತೆ ಅಬಕಾರಿ ಆಯುಕ್ತರು ಸನ್ನದು ನೀಡಬಾರದೆಂದು ತೀರ್ಮಾನ ತೆಗೆದುಕೊಂಡಿದ್ದು, ಪ್ರಸ್ತುತ ಪ್ರಕರಣ ಕೆ.ಎ.ಟಿಯಲ್ಲಿ ಇರುತ್ತದೆ. ಅಬಕಾರಿ ಕಾಯಿದೆ ಕಾಲಂ ೩೨ ಮತ್ತು ೩೪ ರ ಪ್ರಕಾರ ಬಿಜೆಪಿ ಸರ್ಕಾರದಲ್ಲಿ ೨೦೭೧೭ ಪ್ರಕರಣಗಳು ದಾಖಲಾಗಿದ್ದರೆ ನಮ್ಮ ಸರ್ಕಾರದ ಎರಡೂವರೆ ವರ್ಷಗಳ ಅವಧಿಯಲ್ಲಿ ೯೯೨೮ ಪ್ರಕರಣಗಳು ದಾಖಲಾಗಿದೆ ಎಂಬುದನ್ನು ಹೇಳುವ ಮೂಲಕ ತಮ್ಮ ಸರ್ಕಾರದ ಅವಧಿಯಲ್ಲಿ ಹೆಚ್ಚು ಪ್ರಕರಣಗಳು ದಾಖಲಾಗಿರುವುದಿಲ್ಲ ಎಂಬುದನ್ನು ತಿಳಿಸಿದರು.
ಗುರುಸ್ವಾಮಿ ಎಂಬಾತನು ಯಾರಿಗೆ ಹಣ ಕೊಟ್ಟಿದ್ದಾನೆ ಎಂಬ ಮಾಹಿತಿಯನ್ನು ನೀಡಿದರೆ ಸೂಕ್ತ ಕಾನೂನು ತನಿಖೆಯನ್ನು ಕೈಗೊಳ್ಳುವುದು, ಹಾಗೂ ನಮ್ಮ ವಿರೋಧ ಪಕ್ಷದ ಸಂಬಂಧಿಕರ ಹೆಸರುಗಳಲ್ಲಿ ೫೦೦ ಕ್ಕೂ ಹೆಚ್ದು ಅಬಕಾರಿ ಸನ್ನದುಗಳು ಇವೆ ಎಂಬ ಮಾಹಿತಿ ಇದ್ದು, ತಾವುಗಳು ಯಾರಿಗಾದರು ಹಣ ನೀಡಿರುತ್ತೀರಿ ಎಂಬ ಮಾಹಿತಿಯನ್ನು ಕೊಟ್ಟರೆ ಈ ಕೂಡಲೇ ಆ ಅಧಿಕಾರಿಗಳ ಮೇಲೆ ಕಾನೂನು ಕ್ರಮ ಜರುಗಿಸಲಾಗುವುದೆಂದು ಅವರು ಭರವಸೆ ನೀಡಿದರು.
