ಭದ್ರಾದಲ್ಲಿ ಬ್ಲ್ಯಾಕ್ ಪ್ಯಾಂಥರ್; ಜತೆಯಾದ ಚುಕ್ಕಿ ಚಿರತೆ
ಚಿಕ್ಕಮಗಳೂರು: ಇಲ್ಲಿನ ಭದ್ರಾ ಅಭಯಾರಣ್ಯದಲ್ಲಿ ಎರಡು ದಶಕಗಳ ಬಳಿಕ ಬ್ಲ್ಯಾಕ್ ಪ್ಯಾಂಥರ್ ಕಾಣಿಸಿಕೊಳ್ಳುತ್ತಿದ್ದು, ಈ ಅಪರೂಪದ ಪ್ರಾಣಿಯನ್ನು ನೋಡಲು ಪ್ರವಾಸಿಗರು ಇಲ್ಲಿಗೆ ದಾಂಗುಡಿ ಇಡುತ್ತಿದ್ದಾರೆ. ಕಪ್ಪು ಚಿರತೆಗೆ ಜೊತೆಯಾಗಿರುವ ಚುಕ್ಕಿ ಚಿರತೆ ಕೂಡ ಪ್ರಾಣಿ ಪ್ರಿಯರ ಗಮನ ಸೆಳೆಯುತ್ತಿದೆ.
ಕರ್ನಾಟಕದ ಪಶ್ಚಿಮ ಘಟ್ಟದ ಹೃದಯ ಭಾಗದಲ್ಲಿರುವ ಅಭಯಾರಣ್ಯವು ಈ ಹಿಂದೆ ಹುಲಿ ಸಫಾರಿಗೆ ಪ್ರಸಿದ್ದಿ ಪಡೆದಿತ್ತು. ಆದರೆ, ಈಗ ಕಪ್ಪು ಚಿರತೆ – ಚುಕ್ಕಿ ಚಿರತೆ ನಿರಂತರವಾಗಿ ಕಳೆದೊಂದು ವಾರದಿಂದ ಗೋಚರಿಸುತ್ತಿರುವುದರಿಂದ ಸಹಜವಾಗಿಯೇ ಸಫಾರಿ ಪ್ರಿಯರ ಸಂಖ್ಯೆ ದುಪ್ಪಟ್ಟಾಗುತ್ತಿದೆ.
ಸಾಮಾನ್ಯವಾಗಿ ಕಪ್ಪು ಚಿರತೆಗಳು ಒಂಟಿಯಾಗಿಯೇ ಜೀವನ ನಡೆಸುವುದು ಹೆಚ್ಚು. ಆದರೆ, ಈ ಕಪ್ಪು ಚಿರತೆ ತನ್ನ ಕುಟುಂಬದೊಂದಿಗೆ ಸಿಗುತ್ತಿರುವುದು ಅಪರೂಪವಾಗಿದೆ. ತಾಯಿ ಚಿರತೆ ಮತ್ತು ಎರಡು ಮರಿಗಳು ಒಟ್ಟಿಗೇ ಕಾಣಿಸುತ್ತಿವೆ.
ಈ ಭಾಗದಲ್ಲಿ ಒಟ್ಟು ನಾಲ್ಕು ಚಿರತೆಗಳಿದ್ದು, ನಾಲ್ಕೂ ಒಟ್ಟೊಟ್ಟಿಗೆ ಇರುತ್ತವೆ. ಈ ಬ್ಲ್ಯಾಕ್ ಪ್ಯಾಂಥರ್ ಹುಟ್ಟಿ ಒಂದು ವರ್ಷವಾಗಿದೆ. ಇದರ ಜೊತೆ ಇನ್ನೂ ಮೂರು ಮರಿಗಳಿದ್ದು, ಒಂದು ತಾಯಿ, ಮತ್ತೆರಡು ಗಂಡು ಮರಿಗಳಿವೆ. ಈ ಬ್ಲ್ಯಾಕ್ ಪ್ಯಾಂಥರ್ ಬ್ಯಾಕ್ ವಾಟರ್ ಅರಣ್ಯ ಪ್ರದೇಶ ವ್ಯಾಪ್ತಿಯಲ್ಲಿಯೇ ಹುಟ್ಟಿರುವ ಕಾರಣ, ಇನ್ನೂ ಎರಡು ವರ್ಷಗಳ ಕಾಲ ಅಲ್ಲಿಯೇ ಇರುತ್ತದೆ. ತನ್ನ ಟೆರಿಟೋರಿ ಗುರುತು ಮಾಡಿಕೊಳ್ಳುವವರೆಗೂ ತನ್ನ ಅಣ್ಣ-ತಮ್ಮಂದಿರ ಜೊತೆಯೇ ಇರುತ್ತದೆ. ಬ್ಲ್ಯಾಕ್ ಪ್ಯಾಂಥರ್ ಸೇರಿದಂತೆ ಅದರ ಜೊತೆಗಿರುವ ಮೂರು ಚಿರತೆಗಳ ಬೆಳವಣಿಗೆ ತುಂಬಾ ಚೆನ್ನಾಗಿದೆ ಎನ್ನುತ್ತಾರೆ ಅರಣ್ಯ ಅಧಿಕಾರಿ.
