ಚಿತ್ರದುರ್ಗ: ಜನಿಸಿದ ಮಗುವಿಗೆ ತಾಯಿಯ ಎದೆಹಾಲು ಮೊದಲ ಲಸಿಕೆಯಾಗಿದ್ದು ಜೀವನಪರ್ಯಂತ ಮಗುವಿಗೆ ರೋಗನಿರೋಧಕ ಶಕ್ತಿಯನ್ನು ನೀಡುತ್ತದೆ ಎಂದು ತಾಲ್ಲೂಕು ವೈದ್ಯಾಧಿಕಾರಿ ಬಿ.ವಿ.ಗಿರೀಶ್ ಹೇಳಿದರು.
ಚಿತ್ರದುರ್ಗ ಸಾಧಿಕ್ ನಗರ ಅಂಗನವಾಡಿ ಕೇಂದ್ರದಲ್ಲಿ ಆರೋಗ್ಯ ಇಲಾಖೆ ಮತ್ತು ಶಿಶು ಅಭಿವೃದ್ಧಿ ಇಲಾಖೆ ವತಿಯಿಂದ ಆಯೋಜಿಸಿದ ವಿಶ್ವ ಸ್ತನ್ಯಪಾನ ಸಪ್ತಾಹ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ಈ ವರ್ಷದ ಧ್ಯೇಯ ವಾಕ್ಯ “ತಾಯಿಯ ಹಾಲು ನೀಡುವುದರಲ್ಲಿ ಹೂಡಿಕೆ ಮಾಡಿದರೆ ಮಕ್ಕಳ ಆರೋಗ್ಯಕರ ಭವಿಷ್ಯಕ್ಕಾಗಿ ಹೂಡಿಕೆ ಮಾಡಿದಂತೆ” ಜನಿಸಿದ ಮಗುವಿಗೆ ಎರಡು ವರ್ಷದ ತನಕ ತಪ್ಪದೇ ತಾಯಿ ಎದೆ ಹಾಲು ನೀಡಬೇಕು. ಆರು ತಿಂಗಳ ತನಕ ತಾಯಿಯ ಎದೆಹಾಲು ಬಿಟ್ಟು ಬೇರೆ ಏನನ್ನು ಮಗುವಿಗೆ ಕೊಡಬಾರದು. ಎದೆಹಾಲು ಉಣಿಸುವ ತಾಯಿ ಪೋಷಕಾಂಶ ಇರುವ ಎಲ್ಲಾ ಆಹಾರ ಪದಾರ್ಥಗಳ ಸೇವನೆ ಮಾಡಬೇಕು ಎಂದರು.
ಉಪಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಗೌರಮ್ಮ ಮಾತನಾಡಿ ಗರ್ಭಿಣಿಯಾಗಿದ್ದಾಗಿನಿಂದ ತಾಯಿಯು ತನ್ನ ಎದೆ ತೊಟ್ಟಿನ ಹಾರೈಕೆ ಮಾಡಿಕೊಳ್ಳಬೇಕು. ಮಗು ಜನಿಸಿದ ಒಂದು ಗಂಟೆಯ ಒಳಗಡೆ ತಾಯಿ ಎದೆ ಹಾಲು ಮಗುವಿಗೆ ಉಣಿಸಬೇಕು, ಮಗುವಿಗೆ ಇರುಳುಗಣ್ಣು ಇತರೆ ಸೋಂಕು ರೋಗಗಳು ತಡೆಯಲು ತಾಯಿ ಮಗುವಿನ ಬಾಂಧವ್ಯ ಹೆಚ್ಚಿಸಲು ಸ್ತನ್ಯಪಾನ ಬಹುಮುಖ್ಯ ಎಂದರು.ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಬಿ.ಮೂಗಪ್ಪ. ಮಾತನಾಡಿ ತಾಯಂದಿರು ಮತ್ತು ಶಿಶುಗಳ ಆರೋಗ್ಯವನ್ನು ಉತ್ತೇಜಿಸಲು ಮತ್ತು ಜಾಗೃತಿ ಮೂಡಿಸಲು ಪ್ರತಿ ವರ್ಷ ಆಗಸ್ಟ್ ಒಂದರಿಂದ ಆಗಸ್ಟ್ ಏಳರವರೆಗೆ ವಿಶ್ವ ಸ್ತನ್ಯಪಾನ ಸಪ್ತಾಹ ಕಾರ್ಯಕ್ರಮ ಆಯೋಜಿಸುತ್ತಿದ್ದು, ಆರೋಗ್ಯವಂತ ಮಗು ಆರೋಗ್ಯವಂತ ತಾಯಿ ಆರೋಗ್ಯವಂತ ರಾಷ್ಟ್ರ ನಿರ್ಮಾಣ ಮಾಡಲು, ಆರೋಗ್ಯವಂತ ಮಗು ಜನಿಸಬೇಕಾದರೆ ಬಾಲ್ಯ ವಿವಾಹಕ್ಕೆ ಕಡಿವಾಣ ಹಾಕಬೇಕು 18 ವರ್ಷದ ಒಳಗಡೆ ಹೆಣ್ಣು ಮಕ್ಕಳಿಗೆ ಮದುವೆ ಮಾಡಬಾರದು ಗರ್ಭಿಣಿ ತಾಯಂದಿರು ಸಕಾಲಕ್ಕೆ ವೈದ್ಯರಲ್ಲಿ ಪರೀಕ್ಷೆ ಮತ್ತು ಚಿಕಿತ್ಸೆ ಪಡೆಯಬೇಕು. ಹೆರಿಗೆಯ ನಂತರ 2.5 ಕೆಜಿ ಗಿಂತ ಕಡಿಮೆ ತೂಕದ ಮಗು ಜನಿಸಿದರೆ 48 ಗಂಟೆ ಸ್ನಾನ ಮಾಡಿಸದೆ, ಸ್ವಚ್ಛತೆಗೆ ಆದ್ಯತೆ ನೀಡಿ ತಾಯಿಯ ಪಕ್ಕದಲ್ಲಿ ಮಗುವನ್ನ ಮಲಗಿಸುವುದರಿಂದ ತಾಯಿ ಮಗುವಿನ ಬಾಂಧವ್ಯ ಬೆಳೆಯುವುದಲ್ಲದೆ ಎದೆ ಹಾಲು ಉತ್ಪತ್ತಿ ಹೆಚ್ಚಾಗುತ್ತದೆ, ಪ್ರಶಾಂತವಾದ ವಾತಾವರಣದಲ್ಲಿ ಸಮಾಧಾನವಾಗಿ ಕುಳಿತು ತಾಯಿ ಮಗುವಿಗೆ ಎದೆ ಹಾಲು ಉಣಿಸಬೇಕು ಎಂದರು.
ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಬಿ.ಜಾನಕಿ ಮಾಹಿತಿ ನೀಡುತ್ತಾ ಮಗು ಅತ್ತಾಗಲೆಲ್ಲಾ ತಾಯಿ ಮಗುವಿಗೆ ಎದೆ ಹಾಲುಣಿಸಬೇಕು, ಉಚಿತವಾಗಿ ದೊರೆಯುವ ಅಮ್ಮನ ಎದೆ ಹಾಲು ನೀಡುವುದು ತಾಯಿಯ ಜವಾಬ್ದಾರಿ, ತಾಯಿ ಎದೆ ಹಾಲು ಉಣಿಸುವಾಗ ಅನುಸರಿಸುವ ಬಂಗಿ ಮತ್ತು ಹೊಂದಾಣಿಕೆಯ ಬಗ್ಗೆ ಮಾಹಿತಿ ನೀಡಿದರು. ಕಾರ್ಯಕ್ರಮದಲ್ಲಿ ಪ್ರಾಥಮಿಕ ಆರೋಗ್ಯ ಸುರಕ್ಷತಾಧಿಕಾರಿ ನಾಗರತ್ನ ಅಂಗನವಾಡಿ ಕಾರ್ಯಕರ್ತೆ ಮುನಿಯಮ್ಮ ಆಶಾ ಕಾರ್ಯಕರ್ತೆ ರೇಣುಕಾ ಹಾಗೂ ಎದೆ ಹಾಲುಣಿಸುವ ತಾಯಂದಿರು ಸಾರ್ವಜನಿಕ ತಾಯಂದಿರು ಹಾಜರಿದ್ದರು.
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ಹೌದು, ನಿಮ್ಮ ಊರಿನಲ್ಲಿ ಜಾತ್ರೆ, ಸಭೆ, ಸಮಾರಂಭಗಳು ನಡೆದರೆ ಅದನ್ನು ಬಯಲುಸೀಮೆಟೈಮ್ಸ್.ಕಾಂ ಮೂಲಕ ನಾಡಿಗೆ ತಿಳಿಸಿ. ಅಷ್ಟೇ ಅಲ್ಲ ನಿಮ್ಮೂರಿನ ರಸ್ತೆ, ಚರಂಡಿ, ಆಸ್ಪತ್ರೆ , ಶಾಲೆ ಯಾವುದೇ ಸಮಸ್ಯೆ ಇದ್ದರೂ ಅಧಿಕಾರಿಗಳ ಕಣ್ಣು ತೆರೆಯುವಂತೆ ಸುದ್ದಿ ಮಾಡಿ. ನೀವು ಜಸ್ಟ್ ನಮ್ಮ ವಾಟ್ಸ್ ಆಪ್ ಸಂಖ್ಯೆಗೆ ಸುದ್ದಿ ಕಳುಹಿಸಿ ಉಳಿದದ್ದನ್ನು ಬಯಲುಸೀಮೆಟೈಮ್ಸ್.ಕಾಂ ಮಾಡಲಿದೆ. ನಮ್ಮ ವಾಟ್ಸ್ ಆಪ್ ಸಂಖ್ಯೆ: +91 96201 39796
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.



