ಪೋಷಕರ ತುರ್ತು ಗಮನಕ್ಕೆ; ಕೇಂದ್ರೀಯ ವಿದ್ಯಾಲಯ ದಾಖಲಾತಿ ಪ್ರಾರಂಭ
ಚಿತ್ರದುರ್ಗ: ಬಹು ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಚಿತ್ರದುರ್ಗದ ಕೇಂದ್ರೀಯ ವಿದ್ಯಾಲಯ ಕೊನೆಗೂ ಕಾರ್ಯಾರಂಭಗೊಂಡಿದೆ ಎಂದು ಸಂಸದ ಗೋವಿಂದ ಎಂ.ಕಾರಜೋಳ ತಿಳಿಸಿದ್ದಾರೆ.
2026-27ನೇ ಶೈಕ್ಷಣಿಕ ಸಾಲಿಗೆ 1ನೇ ತರಗತಿಯಿಂದ 5ನೇ ತರಗತಿಯವರೆಗೆ ದಾಖಲಾತಿ ಪ್ರಕ್ರಿಯೆ ಆರಂಭವಾಗಿದ್ದು, ಇಂದಿನಿಂದಲೇ ಅರ್ಜಿಗಳನ್ನು ವಿತರಣೆ ಮಾಡಲಾಗುತ್ತಿದೆ. ಈ ಕುರಿತು ಕೇಂದ್ರೀಯ ವಿದ್ಯಾಲಯ ಸಂಘಟನೆಯ ಕೇಂದ್ರ ಕಚೇರಿಯಿಂದ ಅಧಿಕೃತ ಅಧಿಸೂಚನೆ ಹೊರಡಿಸಲಾಗಿದೆ.
ಚಿತ್ರದುರ್ಗ ನಗರದ ಸರ್ಕಾರಿ ವಿಜ್ಞಾನ ಕಾಲೇಜಿನ ಹೊಸ ವಿಭಾಗದಲ್ಲಿ ತಾತ್ಕಾಲಿಕವಾಗಿ ಶಾಲೆ ಕಾರ್ಯನಿರ್ವಹಿಸಲಿದ್ದು, ಇದು ವಸತಿ ರಹಿತ ಶಾಲೆಯಾಗಿರುತ್ತದೆ. ಹಾಸ್ಟೆಲ್ ವ್ಯವಸ್ಥೆ ಇರುವುದಿಲ್ಲ.
1ನೇ ತರಗತಿಗೆ ಮಕ್ಕಳ ಪ್ರವೇಶಕ್ಕಾಗಿ ಪೋಷಕರು ಮಾ.20 ರಿಂದ ಏ.2 ರವರೆಗೆ KVS Admission Portal (admission.kvs.gov.in) ಮೂಲಕ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು.
2ನೇ ತರಗತಿಯಿಂದ 5ನೇ ತರಗತಿವರೆಗೆ ದಾಖಲಾತಿ ಆಫ್‌ಲೈನ್ ಮೂಲಕ ನಡೆಯಲಿದ್ದು, ಪೋಷಕರು ಏ.2 ರ ಬೆಳಿಗ್ಗೆ 10 ಗಂಟೆಯಿಂದ ಏ.8ರ ಸಂಜೆ 4 ಗಂಟೆಯವರೆಗೆ ಸರ್ಕಾರಿ ವಿಜ್ಞಾನ ಕಾಲೇಜಿಗೆ ಭೇಟಿ ನೀಡಿ ಅರ್ಜಿಗಳನ್ನು ಪಡೆದು ಸಲ್ಲಿಸಬೇಕು. ಪ್ರತಿ ತರಗತಿಗೆ 40 ವಿದ್ಯಾರ್ಥಿಗಳಿಗೆ ಮಾತ್ರ ಪ್ರವೇಶ ಅವಕಾಶವಿದ್ದು, ಆಯ್ಕೆಯಾದ ವಿದ್ಯಾರ್ಥಿಗಳು ಜೂನ್ 30 ರೊಳಗೆ ದಾಖಲಾತಿ ಪ್ರಕ್ರಿಯೆ ಪೂರ್ಣಗೊಳಿಸಬೇಕು. ಕೇಂದ್ರೀಯ ವಿದ್ಯಾಲಯ ಆರಂಭದಿಂದ ಚಿತ್ರದುರ್ಗ ಜಿಲ್ಲೆಯ ಶಿಕ್ಷಣ ಕ್ಷೇತ್ರಕ್ಕೆ ಹೊಸ ಉತ್ತೇಜನ ಸಿಗಲಿದೆ ಎಂಬ ನಿರೀಕ್ಷೆ ವ್ಯಕ್ತವಾಗಿದೆ.
