ವ್ಯಾಪಾರ ವಹಿವಾಟು ಸ್ತಬ್ದ : ಬಿಕೋ ಎನ್ನುತ್ತಿರುವ ರಸ್ತೆ :
ಚಳ್ಳಕೆರೆ: ನಗರದ ಹೃದಯ ಭಾಗದಲ್ಲಿರುವ ನೆಹರೂ ವೃತ್ತದ ಇಂದಿರಾ ಶಾಪಿಂಗ್ ಕಾಂಪ್ಲೆಕ್ಸ್ ಮುಂಭಾಗದಲ್ಲಿ ಬೆಳಗಿನಿಂದ ಸಂಜೆವರೆಗೂ ಸಾವಿರಾರು ವಾಹನ, ಸುತ್ತಮುತ್ತ ಹತ್ತಾರು ಗ್ರಾಮಗಳ ಜನರ ಓಡಾಟದ ಜೊತೆಯಲ್ಲಿ ನೂರಾರು ಅಂಗಡಿಗಳಿದ್ದು ಸದಾ ಈ ರಸ್ತೆ ಜನಜಂಗುಳಿಯಿಂದ ತುಂಬಿರುತ್ತಿತ್ತು.ವ್ಯಾಪಾರ ವಹಿವಾಟಿನ ಚಟುವಟಿಕೆಯ ಕೇಂದ್ರವಾಗಿತ್ತು.
ಆದರೆ, ಇತ್ತೀಚೆಗೆ ನಗರಸಭೆ ಸದರಿ ಕಾಂಪ್ಲೆಕ್ಸ್ ಸೇರಿದಂತೆ ನಗರಸಭೆ ಒಡೆತನದ ಮಳಿಗೆಗಳನ್ನು ನೆಲಮಗೊಳಿಸಿದ್ದು ಪ್ರತಿನಿತ್ಯವೂ ದಾರಿಯಲ್ಲಿ ಹೋಗುವ ನೂರಾರು ಜನರು ವ್ಯಾಪಾರ, ವಹಿವಾಟಿನ ಕೇಂದ್ರ ಬಿಂದುವಾದ ಇಂದಿರಾ ಶಾಪಿಂಗ್ ಕಾಂಪ್ಲೆಕ್ಸ್ ಕರಗಿ ಮಣ್ಣಾಗಿರುವುದನ್ನು ಕಂಡು ಸಂತಸ ಪಡುತ್ತಿದ್ದಾರೆ.
ಬಹಳ ವರ್ಷಗಳ ನಂತರ ನಗರಸಭೆ ಆಡಳಿತ ಸದರಿ ಜಾಗದಲ್ಲಿ ಕೋಟ್ಯಾಂತರ ವೆಚ್ಚದ ಸುಮಾರು 150 ಕ್ಕೂ ಹೆಚ್ಚು ಮಳಿಗೆಯ ಮಲ್ಟಿ ಕಾಂಪ್ಲೆಕ್ಸ್ ನಿರ್ಮಿಸಿ ಚಳ್ಳಕೆರೆ ನಗರದ ವಾಣಿಜ್ಯ ಕ್ಷೇತ್ರದಲ್ಲಿ ತನ್ನದೇಯಾದ ದಾಖಲೆದಾಖಲಿಸಲು ಮುಂದಾಗಿದೆ. ಇದಕ್ಕೆ ಪೂರಕವೆಂಬಂತೆ ನಿಗದಿಯ ಸಮಯದವರೆಗೂ ಬಹುತೇಕ ಎಲ್ಲಾ ಮಳಿಗೆಗಳು ನೆಲಸಮಗೊಂಡಿದ್ದು, ಪಾವಗಡ ರಸ್ತೆಯಲ್ಲಿ ಬಾಕಿ ಉಳಿದ ಕೆಲಮಳಿಗೆಗಳನ್ನು ಸೋಮವಾರದಂದು ನೆಲಸಮಗೊಳಿಸಲಾಗುವುದು ಎಂದು ನಗರಸಭೆ ಆಡಳಿತ ಸ್ವಷ್ಟ ಪಡಿಸಿದೆ.
ಇಂದಿರಾ ಶಾಪಿಂಗ್ ಕಾಂಪ್ಲೆಕ್ಸ್ ಕಟ್ಟಡ ನೆಲಸಮಗೊಂಡ ನಂತರ ಸುಮಾರು ನಾಲ್ಕು ದಿನಗಳಿಂದ ಹಗಲು, ರಾತ್ರಿ ಎನ್ನದೆ ನೂರಾರು ಜನರು ಕಟ್ಟಡದಲ್ಲಿದ್ದ ಕಬ್ಬಿಣವನ್ನು ಆರಿಸಿ ಸಂಗ್ರಹಿಸಿ, ಮಾರಾಟ ಮಾಡುವ ಕಾರ್ಯದಲ್ಲಿ ತೊಡಗಿದ್ದಾರೆ.
ವಿಶೇಷವೆಂದರೆ ಟಾಟಾ ಏಸ್ ಜೊತೆಗೆ ಕಬ್ಬಿಣದ ಕಟಾರ್ಗಳನ್ನು ತಂದು ಶಿಥಿಲಗೊಂಡ ಕಬ್ಬಿಣವನ್ನು ರಾಶಿ, ರಾಶಿಯ ಹೊತ್ತು ಹೋಗುತ್ತಿದ್ದಾರೆ. ನಗರಸಭೆ ಆಡಳಿತ ಮಾತ್ರ ಈ ಬಗ್ಗೆ ಯಾವುದೇ ಕ್ರಮಕೈಗೊಂಡಿಲ್ಲ.
ನಗರದ ಬೆಂಗಳೂರು ರಸ್ತೆ ಎರಡೂ ಬದಿ ನೂರಾರು ಬೀದಿಬದಿ ವ್ಯಾಪಾರಿಗಳು ಪ್ರತಿನಿತ್ಯ ತಮ್ಮ ವ್ಯಾಪಾರವನ್ನು ಮುಂದುವರೆಸಿ ತಮ್ಮ ಬದುಕಿನ ಬಂಡಿಯನ್ನು ಸಾಗಿಸುತ್ತಿದ್ದರು. ಆದರೆ, ಕಟ್ಟಡ ನೆಲಸಮ ಸಂದರ್ಭದಲ್ಲಿ ಬಹುತೇಕ ಎಲ್ಲಾ ವ್ಯಾಪಾರಿಗಳು ತಮ್ಮ ವ್ಯಾಪಾರವನ್ನು ಸ್ಥಗಿತಗೊಳಿಸಿದ್ದಾರೆ.
ನಗರಸಭೆ ಆಡಳಿತ ತ್ಯಾಜ್ಯಮಣ್ಣನ್ನು ಸಾಗಿಸಿ ಕಟ್ಟಡ ನಿರ್ಮಾಣ ಕಾರ್ಯಕ್ಕೆ ಮುಂದಾಗಬೇಕಿದೆ. ಚಳ್ಳಕೆರೆ ನಗರವನ್ನು ಅಭಿವೃದ್ದಿ ಪಥದತ್ತ ಹೊಯಲು ವ್ಯಾಪಾರ, ವ್ಯವಹಾರಗಳು ಹೆಚ್ಚು ಸಹಕಾರಿಯಾಗಲಿವೆ.
ನಗರದ ನಾಗರೀಕರು, ವಿವಿಧ ಸಂಘ ಸಂಸ್ಥೆಗಳ ಪ್ರತಿನಿಧಿಗಳು ನಗರಸಭೆಯ ತೆರವು ಕಾರ್ಯಚರಣೆಗೆ ಸಂತಸ ವ್ಯಕ್ತಪಡಿಸಿದ್ದಾರೆ.
ಚಳ್ಳಕೆರೆ ನಗರ ಅಭಿವೃದ್ದಿ ಪರ ಚಿಂತನೆಗಳಿಗೆ ಎಲ್ಲರೂ ಕೈಜೋಡಿಸಿದರೆ ಯಾವುದೇ ಸಮಸ್ಯೆ ಉದ್ಭವಾಗುವುದಿಲ್ಲ ಎನ್ನುತ್ತಾರೆ. ಮುಂದಿನ ದಿನಗಳಲ್ಲಿ ನಗರದ ಈ ಹಿಂದೆ ಮಿನಿಬಾಂಬೆ ಎಂದು ಹೆಸರು ಗಳಿಸಿದ್ದು, ಅದೇ ಹೆಸರು ಪುನರಾವರ್ತನೆಯಾಗುವುದೇ ಎಂಬುವುದನ್ನು ಕಾದುನೋಡಬೇಕಿದೆ.
