ಚಿತ್ರದುರ್ಗ: ಮನುಷ್ಯರಿಗೆ ದೀರ್ಘಾಯಸ್ಸು ಎನ್ನುವುದು ಈಗಿನ ಕಾಲಘಟ್ಟದಲ್ಲಿ ಒಂದು ವರವಿದ್ದಂತೆ,ನೂರು ವರ್ಷ ಬದುಕಿ ಬಾಳಿ ಎಂದು ಹಾರೈಸುವ ಈ ಹಾರೈಕೆಯೂ ಕೂಡ ಮನುಷ್ಯರನ್ನು ನೂರು ವರ್ಷಗಳ ಕಾಲ ಬದುಕಿಸಬಲ್ಲದು ಎನ್ನುವ ನಂಬಿಕೆ ನಮ್ಮ ಹಿರಿಯರದ್ದು.
ವಯಸ್ಸಲ್ಲದ ವಯಸ್ಸಿಗೆ ಹಠಾತ್ ಸಾವು ಮತ್ತು ವಿವಿಧ ಮಾರಣಾಂತಿಕ ಕಾಯಿಲೆಗಳಿಂದ ಬಳಲುತ್ತಾ ಸಾವಿಗೀಡಾಗುವವರ ಸಂಖ್ಯೆ ಇಂದಿನ ದಿನಗಳಲ್ಲಿ ಹೆಚ್ಚಾಗುತ್ತಿದೆ,ಆದರೆ ಇಲ್ಲೊಬ್ಬ ಅಜ್ಜಿ ನೂರರ ಗಡಿ ದಾಟಿ ತನ್ನ ಮಕ್ಕಳು ಮತ್ತು ನೂರಾರು ಮೊಮ್ಮಕ್ಕಳು, ಮರಿ ಮೊಮ್ಮಕ್ಕಳೊಂದಿಗೆ ಅದ್ದೂರಿಯಾಗಿ ಹುಟ್ಟು ಹಬ್ಬವನ್ನು ಆಚರಣೆ ಮಾಡಿಕೊಂಡಿದ್ದಾಳೆ.
ಭಾರತದಲ್ಲಿ ಮನುಷ್ಯನ ಸರಾಸರಿ ಆಯಸ್ಸು ಇಳಿಕೆಯಾಗುತ್ತಿದೆ, ಇಂದಿನ ಆಧುನಿಕ ಯುಗದಲ್ಲಿ ನೂರು ವರ್ಷಗಳ ಗಡಿದಾಟಿರುವ ವೃದ್ಧರು ಕಾಣಸಿಗುವುದೇ ಅಪರೂಪ.ಅದರಲ್ಲಿಯೂ ತಂದೆ ತಾಯಿಗಳ ಆಸ್ತಿಯನ್ನು ಕಬಳಿಸಿ 60 ವರ್ಷ ದಾಟಿದ ವಯೋವೃದ್ಧರನ್ನು ಮನೆಯಿಂದ ಹಾಕಿ ವೃದ್ಧಾಶ್ರಮಗಳಿಗೆ ಸೇರಿಸುವ ಎದೆ ಭಾರವಾಗುವಂತಹ ಸುದ್ದಿಗಳು ಕೇಳಿದ್ದೇ ಹೆಚ್ಚು,ಆದರೆ ಇದಕ್ಕೆ ವಿಭಿನ್ನ ಎನ್ನುವಂತೆ ಮಕ್ಕಳು, ಮೊಮ್ಮಕ್ಕಳು,ಮರಿ ಮೊಮ್ಮಕ್ಕಳಿಗೆ ಒಂದು ಕುಟುಂಬದ ವೃಕ್ಷದಂತೆ ಇರುವ ಶತಾಯುಷಿ ಅಜ್ಜಿಗೆ ಕೂಡು ಕುಟುಂಬವೆಲ್ಲ ಸೇರಿ ಅದ್ದೂರಿಯಾಗಿ ಹುಟ್ಟು ಹಬ್ಬವನ್ನು ಆಚರಣೆ ಮಾಡಿದೆ. ಸಾಮಾನ್ಯವಾಗಿ ಮದುವೆ, ನಿಶ್ಚಿತಾರ್ಥ ಸೇರಿದಂತೆ ಇನ್ನಿತರ ಸಮಾರಂಭಗಳಿಗಾಗಿ ಕಲ್ಯಾಣ ಮಂಟಪದಲ್ಲಿ ಸಮಾರಂಭ ಮಾಡುತ್ತಾರೆ, ಆದರೆ ಇಂದು ಮಾತ್ರ ವಿಶೇಷವಾಗಿ ಚಿತ್ರದುರ್ಗದ ಕೆಇಬಿ ಕಲ್ಯಾಣ ಮಂಟಪದಲ್ಲಿ ಕಂಡುಬಂದಿದ್ದು ಶತಾಯುಷಿ ಅಜ್ಜಿ ಹುಟ್ಟುಹಬ್ಬದ ಆಚರಣೆ.ಕುಟುಂಬದ ಎಲ್ಲ ಸದಸ್ಯರು ಸೇರಿ ಕಲ್ಯಾಣ ಮಂಟಪದಲ್ಲಿ ಸಂಭ್ರಮದಿಂದ ಅಜ್ಜಿಯ ಸಮ್ಮುಖದಲ್ಲಿ ಕೇಕ್ ಕತ್ತರಿಸಿ ಸಿಹಿ ಹಂಚಿ ಅಜ್ಜಿಯ 100 ವರ್ಷಗಳ ಹುಟ್ಟುಹಬ್ಬವನ್ನು ಸಂಭ್ರಮಿಸಿದ್ದಾರೆ. ಚಿತ್ರದುರ್ಗ ನಗರದ ದೊಡ್ಡಪೇಟೆಯ ಗೌಡ್ರು ವಂಶದ ಶತಾಯುಷಿ ಗೌರಮ್ಮ ಅಜ್ಜಿಗೆ ಮೂರು ಜನ ಗಂಡು ಮಕ್ಕಳು, ನಾಲ್ವರು ಹೆಣ್ಣು ಮಕ್ಕಳಿದ್ದು ಇವರ ಜೊತೆಯಲ್ಲಿ ಮಕ್ಕಳು,ಮೊಮ್ಮಕ್ಕಳು,ಮರಿ ಮೊಮ್ಮಕ್ಕಳ ಸಂಖ್ಯೆ ನೂರರ ಗಡಿ ದಾಟಿದೆ. ಹಾಗಾಗಿ ಎಲ್ಲರೂ ಒಟ್ಟುಗೂಡಿ ಹುಟ್ಟುಹಬ್ಬ ಆಚರಣೆ ಮಾಡಿ ಹಾರೈಸಿದ್ದಾರೆ.
ಅಜ್ಜಿಯು ಇಂದಿಗೂ ಸರಳ ವ್ಯಾಯಾಮಗಳನ್ನು ಮಾಡುತ್ತಾ ಯಾವ ರೋಗ ರೋಜನೆಗಳಿಲ್ಲದೇ ಕ್ರಮಬದ್ಧವಾದ ಆಹಾರ ಪದ್ಧತಿಯನ್ನು ಅನುಸರಿಸಿಕೊಂಡು ಆರೋಗ್ಯವಂತ ಜೀವನ ನಡೆಸುತ್ತಾ ಇಂದಿನ ಪೀಳಿಗೆಗೆ ಮಾದರಿಯಾಗಿದ್ದಾರೆ
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ಹೌದು, ನಿಮ್ಮ ಊರಿನಲ್ಲಿ ಜಾತ್ರೆ, ಸಭೆ, ಸಮಾರಂಭಗಳು ನಡೆದರೆ ಅದನ್ನು ಬಯಲುಸೀಮೆಟೈಮ್ಸ್.ಕಾಂ ಮೂಲಕ ನಾಡಿಗೆ ತಿಳಿಸಿ. ಅಷ್ಟೇ ಅಲ್ಲ ನಿಮ್ಮೂರಿನ ರಸ್ತೆ, ಚರಂಡಿ, ಆಸ್ಪತ್ರೆ , ಶಾಲೆ ಯಾವುದೇ ಸಮಸ್ಯೆ ಇದ್ದರೂ ಅಧಿಕಾರಿಗಳ ಕಣ್ಣು ತೆರೆಯುವಂತೆ ಸುದ್ದಿ ಮಾಡಿ. ನೀವು ಜಸ್ಟ್ ನಮ್ಮ ವಾಟ್ಸ್ ಆಪ್ ಸಂಖ್ಯೆಗೆ ಸುದ್ದಿ ಕಳುಹಿಸಿ ಉಳಿದದ್ದನ್ನು ಬಯಲುಸೀಮೆಟೈಮ್ಸ್.ಕಾಂ ಮಾಡಲಿದೆ. ನಮ್ಮ ವಾಟ್ಸ್ ಆಪ್ ಸಂಖ್ಯೆ: +91 96201 39796
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.



