ಹೊಸದುರ್ಗ: ಕೋಟೆ ನಾಡಿನ ರೈತರ ಈರುಳ್ಳಿ ಬೆಳೆ ಈಗ ಅನ್ನದಾತರ ಕಣ್ಣಲ್ಲಿ ಕಣ್ಣೀರು ತರಿಸಿದೆ. ರೈತರು ಬೆಳೆದ ಈರುಳ್ಳಿ ಬೆಳೆಗೆ ಮಾರುಕಟ್ಟೆಯಲ್ಲಿ ಸರಿಯಾದ ಬೆಲೆ ಸಿಗದೆ ನಷ್ಟ ಅನುಭವಿಸುವ ಪರಿಸ್ಥಿತಿ ನಿರ್ಮಾಣ ಆಗಿದೆ. ಬೆಳೆ ಬೆಳೆಯಲು ಮಾಡಿದ ಖರ್ಚು ಸಹ ಕೈಗೆ ಸಿಗುತ್ತಿಲ್ಲ ಎಂದು ಬೇಸತ್ತು ಕೆಲ ರೈತರು ಕಟಾವಿಗೆ ಬಂದಿರುವ ಈರುಳ್ಳಿಯನ್ನು ಟ್ರ್ಯಾಕ್ಟರ್ ಸಹಾಯದಿಂದ ಹೊಲದಲ್ಲಿ ಗೊಬ್ಬರ ಆಗಲಿ ಬಿಡಿ ಎಂದು ನಾಶ ಪಡಿಸುತ್ತಿದ್ದಾರೆ.ಮೇ ತಿಂಗಳಲ್ಲಿ ಬಂದಿದ್ದ ಈ ವರ್ಷದ ಪೂರ್ವ ಮುಂಗಾರು ಮಳೆಗೆ ಜಮೀನನ್ನು ಟ್ರ್ಯಾಕ್ಟರ್ ಸಹಾಯದಿಂದ ಉಳುಮೆ ಮಾಡಿಸಿದ್ದು, ಬಿತ್ತನೆ ಬೀಜ, ಗೊಬ್ಬರ, ಬೇಸಾಯ, ಮೂರು ಸಲ ಕಳೆ ತೆಗೆಸಿದ್ದು, ಮೇಲುಗೊಬ್ಬರ ಹಾಕಿದ್ದು ಸೇರಿ ಒಂದು ಎಕರೆಯಲ್ಲಿ ಈರುಳ್ಳಿ ಬೆಳೆಯಲು ರೈತರು ಸುಮಾರು 30 ಸಾವಿರ ರೂ ಖರ್ಚು ಮಾಡಿದ್ದಾರೆ. ಆಗೊಮ್ಮೆ, ಈಗೊಮ್ಮೆ ಬೇಕೋ, ಬೇಡವೋ ಎಂಬಂತೆ ಬಂದ ಮಳೆಗೆ ಹರಸಾಹಸಪಟ್ಟು ಉತ್ತಮ ಬೆಲೆ ನಿರೀಕ್ಷೆಯಲ್ಲಿ ಬೆಳೆದಿದ್ದ ಈರುಳ್ಳಿ ಕಟಾವಿಗೆ ಬಂದಿದೆ. ಈಗ ಕೂಲಿಕಾರರಿಂದ ಈರುಳ್ಳಿ ಕೀಳಿಸಿ, ಕೊಯ್ಲು ಮಾಡಿಸಿ, ಕ್ವಾಲಿಟಿ ಮಾಡಿಸುವುದು, ನಂತರ ಮಾರಾಟ ಮಾಡಲು ಬೆಂಗಳೂರಿನ ಮಾರುಕಟ್ಟೆಗೆ ಸಾಗಿಸಲು ಲಾರಿ ಬಾಡಿಗೆ ಸೇರಿ ಮತ್ತೆ ಸುಮಾರು 30 ಸಾವಿರ ರೂ ಬರುತ್ತಿದೆ. ಒಂದು ಎಕರೆ ಜಮೀನಿಗೆ ಈರುಳ್ಳಿ ಬೀಜ ಬಿತ್ತನೆ ಮಾಡಿದಾಗಿನಿಂದ ಮಾರಾಟ ಮಾಡುವ ವರೆಗೂ ಸರಿಸುಮಾರು 60 ಸಾವಿರ ರೂ ಖರ್ಚು ಬರುತ್ತದೆ ಎನ್ನುತ್ತಾರೆ ರೈತರೊಬ್ಬರು ತಮ್ಮ ಅಳಲು ತೋಡಿಕೊಂಡಿದ್ದಾರೆ.ಇಷ್ಟೊಂದು ಹಣ ಖರ್ಚು ಮಾಡಿ ರೈತರು ಬೆಳೆದಿರುವ ಈರುಳ್ಳಿಯನ್ನು ಮಾರುಕಟ್ಟೆಯಲ್ಲಿ ಖರೀದಿಸುವವರು ಇಲ್ಲವಾಗಿದ್ದಾರೆ. ಖರೀದಿಸಲು ಬರುವವರು ಗುಣಮಟ್ಟದ ಪ್ರತಿ 50 ಕೆ.ಜಿ ಈರುಳ್ಳಿ ಪಾಕೆಟ್ ಅನ್ನು ಕೇವಲ 500ರಿಂದ 600 ರೂಗೆ ದರ ನಿಗದಿ ಮಾಡುತ್ತಿದ್ದಾರೆ. ಈ ಬಾರಿ ಮಳೆ ಅಭಾವದಿಂದ ಈರುಳ್ಳಿಯು ಒಂದು ಎಕರೆಗೆ 80ರಿಂದ 90 ಕ್ವಿಂಟಲ್ ಮಾತ್ರ ಇಳುವರಿ ಬಂದಿದೆ. ಮಾರುಕಟ್ಟೆಯಲ್ಲಿ ಹೀಗಿರುವ ದರ ನೋಡಿದರೆ ಬೆಳೆ ಬೆಳೆಯಲು ಖರ್ಚು ಮಾಡಿರುವ ಹಣವೂ ರೈತರ ಕೈಸೇರದಂತಾಗಿರುವುದು ತೀವ್ರ ನೋವಿನ ಸಂಗತಿ. ಕಳೆದ ವರ್ಷ ಇದೇ ಸಂದರ್ಭದಲ್ಲಿ ಪ್ರತಿ 50 ಕೆ.ಜಿ ಈರುಳ್ಳಿಗೆ ಮಾರುಕಟ್ಟೆಯಲ್ಲಿ 1300ರಿಂದ 1800 ರೂ. ದರ ರೈತರಿಗೆ ಸಿಗುತ್ತಿತ್ತು. ಇದೇ ದರ ಈ ಬಾರಿಯೂ ಸಿಗಬಹುದು ಎಂಬ ನಿರೀಕ್ಷೆಯಲ್ಲಿದ್ದ ರೈತರಿಗೆ ಈ ಬಾರಿ ತೀವ್ರ ನಿರಾಸೆಯನ್ನುಂಟು ಮಾಡಿದೆ.ಬೆಳೆ ಬೆಳೆಯಲು ಮಾಡಿರುವ ಖರ್ಚಿನ ಹಣವೂ ರೈತರಿಗೆ ಸಿಗದ ಮೇಲೆ ಮತ್ತೆ ಯಾಕೆ ಬೆಳೆ ಬೆಳೆಯಬೇಕು. ಮಾರುಕಟ್ಟೆಯಲ್ಲಿ ಬೆಲೆ ಏರಿಳಿತ ಈ ರೀತಿ ಆದರೆ ರೈತರು ಹೇಗೆ ಜೀವನ ಮಾಡಬೇಕು. ಬೆಳೆ ಬೆಳೆಯಲಿಕ್ಕೆ ಮಾಡಿರುವ ಸಾಲವನ್ನು ರೈತರು ಹೇಗೆ ತೀರಿಸಬೇಕು. ಇನ್ನಾದರೂ ಕೂಡಲೇ ಈರುಳ್ಳಿ ಬೆಳೆಗಾರರ ಹಿತ ಕಾಪಾಡಲು ನಿಗದಿತ ಸ್ಥಿರದರ ನಿಗದಿ ಮಾಡಲು ಕೇಂದ್ರ ಹಾಗೂ ರಾಜ್ಯ ಸರಕಾರ ಮುಂದಾಗಬೇಕು ಎಂದು ಹೊಸದುರ್ಗ ತಾಲೂಕಿನ ಈರುಳ್ಳಿ ಬೆಳೆಗಾರರು ಮನವಿ ಮಾಡಿದ್ದಾರೆ.
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ಹೌದು, ನಿಮ್ಮ ಊರಿನಲ್ಲಿ ಜಾತ್ರೆ, ಸಭೆ, ಸಮಾರಂಭಗಳು ನಡೆದರೆ ಅದನ್ನು ಬಯಲುಸೀಮೆಟೈಮ್ಸ್.ಕಾಂ ಮೂಲಕ ನಾಡಿಗೆ ತಿಳಿಸಿ. ಅಷ್ಟೇ ಅಲ್ಲ ನಿಮ್ಮೂರಿನ ರಸ್ತೆ, ಚರಂಡಿ, ಆಸ್ಪತ್ರೆ , ಶಾಲೆ ಯಾವುದೇ ಸಮಸ್ಯೆ ಇದ್ದರೂ ಅಧಿಕಾರಿಗಳ ಕಣ್ಣು ತೆರೆಯುವಂತೆ ಸುದ್ದಿ ಮಾಡಿ. ನೀವು ಜಸ್ಟ್ ನಮ್ಮ ವಾಟ್ಸ್ ಆಪ್ ಸಂಖ್ಯೆಗೆ ಸುದ್ದಿ ಕಳುಹಿಸಿ ಉಳಿದದ್ದನ್ನು ಬಯಲುಸೀಮೆಟೈಮ್ಸ್.ಕಾಂ ಮಾಡಲಿದೆ. ನಮ್ಮ ವಾಟ್ಸ್ ಆಪ್ ಸಂಖ್ಯೆ: +91 96201 39796
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.







