ಚಿತ್ರದುರ್ಗ: ಮಧ್ಯ ಕರ್ನಾಟಕದ ಬಯಲು ಸೀಮೆ ಪ್ರದೇಶಗಳಿಗೆ ನೀರುಣಿಸುವ ಮಹತ್ವದ ಭದ್ರಾ ಮೇಲ್ದಂಡೆ ಕಾಮಗಾರಿಗೆ ಎಸ್ಸಿಪಿ, ಟಿಎಸ್ಪಿ ಅನುದಾನ ಬಳಕೆ ಮಾಡಿಕೊಂಡು ತ್ವರಿತಗತಿಯಲ್ಲಿ ಪೂರ್ಣಗೊಳಿಸುವಂತೆ ಜಿಲ್ಲಾ ನೀರಾವರಿ ಹೋರಾಟ ಸಮಿತಿಯ ಸದಸ್ಯರು ರಾಜ್ಯ ಸರ್ಕಾರವನ್ನು ಆಗ್ರಹಿಸಿದರು.ಪತ್ರಿಕಾ ಭವನದಲ್ಲಿ ಜಿಲ್ಲಾ ನೀರಾವರಿ ಅನುಷ್ಠಾನ ಸಮಿತಿಯ ಕಾರ್ಯಾಧ್ಯಕ್ಷ ಬಿ.ಎ ಲಿಂಗಾರೆಡ್ಡಿ ಪತ್ರಿಕಾಗೋಷ್ಟಿ ನಡೆಸಿ ಮಾತನಾಡಿ, ಕೇಂದ್ರ ಹಾಗೂ ರಾಜ್ಯ ಸರ್ಕಾರದ ಉದಾಸೀನ ಮನೋಭಾವ ಹಾಗೂ ಅನುದಾನದ ಕೊರತೆಯಿಂದಾಗಿ ಕಾಮಗಾರಿ ಹೆಚ್ಚು ಕಡಿಮೆ ಸ್ಥಗಿತಗೊಂಡಿದೆ. ರೂ.5300 ಕೋಟಿ ಅನುದಾನ ನೀಡಲಿ ಎಂದು ರಾಜ್ಯ ಸರ್ಕಾರ ಕೇಂದ್ರದತ್ತ ಬೊಟ್ಟು ಮಾಡಿದ್ದರೆ, ಕೇಂದ್ರ ಸರ್ಕಾರ ಅನುದಾನ ಬಿಡುಗಡೆಗಾಗಿ ತಾಂತ್ರಿಕ ಮಾಹಿತಿಗಳ ಪೂರೈಕೆ ಮಾಡುವಂತೆ ರಾಜ್ಯ ಸರ್ಕಾರಕ್ಕೆ ಪತ್ರಗಳ ಮೇಲೆ ಪತ್ರ ಬರೆಯುತ್ತಿದೆ. ಎರಡೂ ಸರ್ಕಾರದ ನಡೆಗಳಿಂದಾಗಿ ಭದ್ರಾ ಮೇಲ್ದಂಡೆ ಸೊರಗಿದೆ.ಹಾಲಿ ಶರವೇಗದಲ್ಲಿ ನಡೆಯುತ್ತಿರುವ ತುಂಗ ಭದ್ರಾ ಹಿನ್ನೀರು ಕುಡಿವ ನೀರಿನ ಎರಡುವರೆ ಸಾವಿರ ಕೋಟಿ ರೂಪಾಯಿ ವೆಚ್ಚದ ಯೋಜನೆಗೆ ರಾಜ್ಯ ಸರ್ಕಾರ ಎಸ್ಸಿಪಿ, ಅನುದಾನ ಬಳಕೆ ಮಾಡಿದೆ. ವಿಜಯ ನಗರ ಜಿಲ್ಲೆಯ ಕೂಡ್ಲಿಗಿ, ದಾವಣಗೆರೆ ಜಿಲ್ಲೆಯ ಜಗಳೂರು, ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಲೂರು, ಚಳ್ಳಕೆರೆ ಹಾಗೂ ತುಮಕೂರು ಜಿಲ್ಲೆಯ ಪಾವಗಡ ವಿಧಾನಸಭೆ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಬರುವ ಗ್ರಾಮೀಣ ಪ್ರದೇಶಗಳಿಗೆ ತುಂಗ ಭದ್ರಾ ಜಲಾಶಯದ ಹಿನ್ನೀರಿನಿಂದ ಕುಡಿವ ನೀರು ಪೂರೈಕೆ ಮಾಡಲಾಗುತ್ತಿದೆ ಎಂದರು.
ಈ ಯೋಜನೆಗೆ ಎಸ್ಪಿಪಿ, ಟಿಎಸ್ಪಿ ಅನುದಾನ ಬಳಕೆ ಮಾಡಿಕೊಂಡಿರುವುದರ ಬಗ್ಗೆ ರಾಜ್ಯ ಸರ್ಕಾರ ತನ್ನ ನೈತಿಕ ಆಯಾಮದಲ್ಲಿ ಸಮಜಾಯಿಷಿ ನೀಡಿದೆ. ಕೂಡ್ಲಿಗಿ, ಜಗಳೂರು, ಮೊಳಕಾಲ್ಕೂರು, ಚಳ್ಳಕೆರೆ ವಿಧಾನಸಭೆ ಕ್ಷೇತ್ರಗಳು ಪರಿಶ್ಚಿ ಪಂಗಡ( ಎಸ್ಟಿ)ಕ್ಕೆ ಹಾಗೂ ಪಾವಗಡ ಪರಿಷ್ಠ ಜಾತಿ(ಎಸ್ಸಿ) ಗೆ ಮೀಸಲಾಗಿದೆ. ಹಾಗಾಗಿ ಈ ಸಮುದಾಯಗಳಿಗೆ ಕಾಯ್ದಿಟ್ಟ ಅನುದಾನ ಬಳಕೆ ಮಾಡಿಕೊಳ್ಳಲಾಗಿದೆ.ತುಂಗಭದ್ರಾ ಹಿನ್ನೀರು ಕಾಮಗಾರಿಗೆ ಎಸಿಪಿ, ಟಿಎಸ್ಪಿ ಅನುದಾನ ಬಳಕೆ ಮಾಡಲು ರಾಜ್ಯ ಸರ್ಕಾರ ಹರಿಯ ಬಿಟ್ಟ ಆಲೋಚನಾ ಕ್ರಮಗಳನ್ನು ಭದ್ರಾ ಮೇಲ್ದಂಡೆಗೂ ಪರಿಗಣಿಸಬೇಕೆಂದು ನೀರಾವರಿ ಅನೂನ ಹೋರಾಟ ಸಮಿತಿ ಆಗ್ರಹಿಸುತ್ತದೆ. ಭದ್ರಾ ಮೇಲ್ದಂಡ ಸೇರಿ ಐದು ಮೀಸಲು ವ್ಯಾಪ್ತಿಗೆ ಹೊಳಲ್ಕೆರೆ, ಪಾವಗಡ ಮೊಳಕಾಲ್ಕುರು, ಚಳ್ಳಕೆರೆ, ಜಗಳೂರು ಕ್ಷೇತ್ರಗಳು ಬರುತ್ತವೆ. ಸಾಲದೆಂಬಂತೆ ಚಿತ್ರದುರ್ಗ ಲೋಕಸಭೆ ಕ್ಷೇತ್ರ ಪರಿಕ್ಷೆ ಜಾತಿಗೆ ಮೀಸಲಾಗಿದೆ. ಎಸ್ಸಿ ಎಸ್ಟಿಗೆ ಸೇರಿದ 8.5 ಲಕ್ಷದಷ್ಟು ಮತದಾರರು ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿದ್ದಾರೆ. ಹಾಗಾಗಿ ತುಂಗ ಭದ್ರಾ ಹಿನ್ನೀರು ಯೋಜನೆಗೆ ಎಸ್ಸಿಪಿ, ಟಿಎಸ್ಪಿ ಅನುದಾನ ಬಳಕೆ ಮಾಡಿದ ರೀತಿ ಭದ್ರಾ ಮೇಲ್ದಂಡೆಗೂ ವಿನಿಯೋಗಿಸಬಹುದಾಗಿದೆ ಎಂದರು.ತನ್ನ ಮಹತ್ವಾಕಾಂಕ್ಷಿ ಗ್ಯಾರಂಟಿ ಯೋಜನೆಗಳಿಗೆ ಕಳೆದ ಎರಡು ವರ್ಷದ ಅವಧಿಯಲ್ಲಿ 32 ಸಾವಿರ ಕೋಟಿ ರೂ. ಎಸ್ಸಿಪಿ, ಟಿಎಸ್ಪಿ ಅನುದಾನ ಬಳಕೆ ಮಾಡಿಕೊಂಡಿರುವುದರ ಬಗ್ಗೆ ಶಾಸನ ಸಭೆಯಲ್ಲಿಯೇ ಸಿಎಂ ಹೇಳಿಕೆ ನೀಡಿದ್ದಾರೆ. ಗ್ಯಾರಂಟಿಗಳಿಗೆ ಎಸ್ಪಿಪಿ, ಟಿಎಸ್ಪಿ ಅನುದಾನ ಬಳಕೆ ಮಾಡಿಕೊಳ್ಳುವುದಾದರೆ ಭದ್ರಾ ಮೇಲ್ದಂಡೆಗೆ ಏಕಿಲ್ಲವೆಂದು ಪ್ರಶ್ನೆ ಮಾಡಿದರು.ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಉದಾಸೀನ ಮನೋಭಾವ ಗಮನಿಸಿದರೆ ಭದ್ರಾ ಮೇಲ್ದಂಡೆ ಕಾಮಗಾರಿ ಪೂರ್ಣಗೊಳಿಸಲು ಇನ್ನೊಂದು ದಶಕ ಬೇಕೆನಿಸುತ್ತದೆ. ಅಲ್ಲದೇ ಯೋಜನಾ ವೆಚ್ಚವು ಜಾಸ್ತಿಯಾಗುತ್ತದೆ. ಯೋಜನಾ ವ್ಯಾಪ್ತಿಯಲ್ಲಿ ಬರುವ ಶಾಸಕರು ತಕ್ಷಣವೇ ಸಿಎಂ ಸಿದ್ದರಾಮಯ್ಯ ಹಾಗೂ ಜಲ ಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಮೇಲೆ ಒತ್ತಡ ಹೇರಿ ಎಸ್ಸಿಪಿ, ಟಿಎಸ್ಪಿಯಿಂದ ಕನ್ನ ಹದಿನೈದು ಸಾವಿರ ಕೋಟಿ ರೂ ಅನುದಾನ ಪಡೆದು ಕಾಮಗಾರಿ ಪೂರ್ಣಗೊಳಿಸುವ ನಿಟ್ಟಿನಲ್ಲಿ ಮುಂದಾಗಬೇಕೆಂದು ಸಮಿತಿ ಆಗ್ರಹಿಸುತ್ತದೆ.ಕೃಷ್ಣ ಜಲ ಭಾಗ್ಯದ ರೀತಿ ಭದ್ರಾ ಮೇಲ್ದಂಡೆಗೂ ನೀರಾವರಿ ಬಾಂಡ್ ಬಿಡುಗಡೆ ಮಾಡಿ ಸಂಪನ್ಮೂಲ ಕ್ರೋಡೀಕರಣ ಮಾಡುವಂತೆ ಹಿಂದೊಮ್ಮೆ ನೀರಾವರಿ ಅನ್ಮಾನ ಹೋರಾಟ ಸಮಿತಿ ರಾಜ್ಯ ಸರ್ಕಾರವ ಆಗ್ರಹಿಸಿತ್ತು. ಈಗಲೂ ಕಾಲ ಮಿಂಚಿಲ್ಲ, ಬಾಂಡ್ ಬಿಡುಗಡೆ ಮಾಡಿದರೆ ಕೊಂಡುಕೊಳ್ಳುವವರು ಇದ್ದಾರೆ. ಸರ್ಕಾರ ಈ ಬಗ್ಗೆಯೂ ಚಿಂತಿಸಲಿ ಎಂದು ನೀರಾವರಿ ಹೋರಾಟ ಸಮಿತಿ ಒತ್ತಾಯಿಸುತ್ತದೆ.
ಸುದ್ದಿಗೋಷ್ಠಿಯಲ್ಲಿ ರೈತ ಸಂಘದ ಜಿಲ್ಲಾಧ್ಯಕ್ಷ ಧನಂಜಯ್ ಸೇರಿದಂತೆ ಇತರರು ಉಪಸ್ಥಿತರಿದ್ದರು.
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ಹೌದು, ನಿಮ್ಮ ಊರಿನಲ್ಲಿ ಜಾತ್ರೆ, ಸಭೆ, ಸಮಾರಂಭಗಳು ನಡೆದರೆ ಅದನ್ನು ಬಯಲುಸೀಮೆಟೈಮ್ಸ್.ಕಾಂ ಮೂಲಕ ನಾಡಿಗೆ ತಿಳಿಸಿ. ಅಷ್ಟೇ ಅಲ್ಲ ನಿಮ್ಮೂರಿನ ರಸ್ತೆ, ಚರಂಡಿ, ಆಸ್ಪತ್ರೆ , ಶಾಲೆ ಯಾವುದೇ ಸಮಸ್ಯೆ ಇದ್ದರೂ ಅಧಿಕಾರಿಗಳ ಕಣ್ಣು ತೆರೆಯುವಂತೆ ಸುದ್ದಿ ಮಾಡಿ. ನೀವು ಜಸ್ಟ್ ನಮ್ಮ ವಾಟ್ಸ್ ಆಪ್ ಸಂಖ್ಯೆಗೆ ಸುದ್ದಿ ಕಳುಹಿಸಿ ಉಳಿದದ್ದನ್ನು ಬಯಲುಸೀಮೆಟೈಮ್ಸ್.ಕಾಂ ಮಾಡಲಿದೆ. ನಮ್ಮ ವಾಟ್ಸ್ ಆಪ್ ಸಂಖ್ಯೆ: +91 96201 39796
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.







