ಚಿತ್ರದುರ್ಗ: ಮಧ್ಯ ಕರ್ನಾಟಕ ಭಾಗದ ಜನರ ದಶಕಗಳ ಕನಸಿನ ಕೂಸಾಗಿರುವ ದಾವಣಗೆರೆ, ಚಿತ್ರದುರ್ಗ, ತುಮಕೂರು ನೂತನ ನೇರ ರೈಲು ಮಾರ್ಗ ಸದ್ಯ ನನಸಾಗುವ ಕಾಲ ಕೂಡಿ ಬಂದಿದೆ. ದಾವಣಗೆರೆ, ಚಿತ್ರದುರ್ಗ ಜಿಲ್ಲೆ ವ್ಯಾಪ್ತಿಯಲ್ಲಿ ಭೂ ಸ್ವಾಧೀನ ಕಾರ್ಯ ಮುಕ್ತಾಯವಾಗಿದ್ದು, ತುಮಕೂರು ಜಿಲ್ಲೆಯಲ್ಲಿ ಒಂದಷ್ಟು ಮಾತ್ರ ಭೂಸ್ವಾಧೀನದ ಕೆಲಸ ಬಾಕಿ ಇದೆ. ಈಗಾಗಲೇ ದಾವಣಗೆರೆ, ಚಿತ್ರದುರ್ಗ ಭಾಗದಲ್ಲಿ ಸ್ಟೇಷನ್ಗಳ ನಿರ್ಮಾಣ ಹಾಗೂ ಹಳಿ ಹಾಕುವ ಕಾಮಗಾರಿ ಶುರುವಾಗಿ ವೇಗ ಗತಿಯಲ್ಲಿ ಸಾಗುತ್ತಿದೆ. ಎಲ್ಲಾ ಅಂದುಕೊಂಡರೆ ಆದರೆ ಇನ್ನೆರಡು ವರ್ಷದಲ್ಲಿ ಈ ಮಾರ್ಗದಲ್ಲಿ ರೈಲು ಓಡಾಡುತ್ತವೆ.ಈ ಯೋಜನೆ ಮೂರು ಜಿಲ್ಲೆಗಳ ಜನರ ಬಹುದಿನಗಳ ಕನಸಾಗಿತ್ತು. ಈ ಒಂದು ಯೋಜನೆಗಾಗಿ ಹಲವು ಮಂದಿ ರೈಲ್ವೆ ಹೋರಾಟ ಸಮಿತಿ ರೂಪಿಸಿಕೊಂಡು ಹೋರಾಟ ಮಾಡಿದರು. ಮೂರು ಜಿಲ್ಲೆಯ ಜನರ ಕೂಗಿಗೆ ಸ್ಪಂದಿಸಿ ಮೊದಲು ಏಕಮುಖ ಹಳಿಗೆ ಕೇಂದ್ರ ರೈಲ್ವೆ ಇಲಾಖೆ ಅನುಮೋದನೆ ನೀಡಿತ್ತು. ನಂತರ 2023ರ ಬಜೆಟ್ನಲ್ಲಿ ಜೋಡಿ ಹಳಿಗೆ ಅನುಮೋದನೆ ನೀಡಿದ್ದರಿಂದ ಮತ್ತೆ ಅಗತ್ಯ ಬಿದ್ದ ಭೂಮಿಯ ಸ್ವಾಧೀನ ಕಾರ್ಯ ಆರಂಭ ಆಗಿತ್ತು. ಈಗ ದಾವಣಗೆರೆ, ಚಿತ್ರದುರ್ಗ ಜಿಲ್ಲೆಯ ವ್ಯಾಪ್ತಿಯಲ್ಲಿ ಅಗತ್ಯವಿರುವ ಎಲ್ಲ ಭೂಮಿ ಸ್ವಾಧೀನಪಡಿಸಿಕೊಂಡು ಜಿಲ್ಲಾಡಳಿತ ರೈಲ್ವೆ ಇಲಾಖೆಗೆ ಹಸ್ತಾಂತರ ಮಾಡಿರುವುದರಿಂದ ಕಾಮಗಾರಿ ಆರಂಭವಾಗಿ ಮುಗಿಯುವ ಹಂತಕ್ಕೆ ಬಂದಿದೆ.
ಹಲವೆಡೆ ತಲೆ ಎತ್ತಿವೆ ರೈಲ್ವೆ ನಿಲ್ದಾಣಗಳು
ದಾವಣಗೆರೆ ತಾಲೂಕಿನ ಹೆಬ್ಬಾಳು ಬಳಿ ಈಗಾಗಲೇ ರೈಲ್ವೆ ಸ್ಟೇಷನ್ ಕಾಮಗಾರಿ ಮುಗಿಯುತ್ತಾ ಬಂದಿದ್ದು, ಸ್ಟೇಷನ್ ಸಿದ್ಧವಾಗಿದೆ. ಚಿತ್ರದುರ್ಗ ಜಿಲ್ಲೆಯ ಭರಮಸಾಗರದವರೆಗೂ ಎಲ್ಲೆಲ್ಲಿ ಅಗತ್ಯವಿದೆಯೋ ಅಲ್ಲೆಲ್ಲಾ ಬ್ರಿಡ್ಜ್ ನಿರ್ಮಾಣ ಕಾಮಗಾರಿಯೂ ಪೂರ್ಣಗೊಂಡಿದೆ. ಈಗ ಹಳಿ ಹಾಕುವ ಕಾಮಗಾರಿ ಆರಂಭ ಆಗುತ್ತಿದೆ. ಕ್ರೇನ್ನಲ್ಲಿ ಹಳಿ ಜೋಡಣೆ ಸೇರಿ ಎಲ್ಲವೂ ಯಂತ್ರದ ಮೂಲಕ ನಡೆಯುವುದರಿಂದ ದಾವಣಗೆರೆ ಜಿಲ್ಲೆ ವ್ಯಾಪ್ತಿಯ ಹಳಿ ಹಾಕುವ ಕಾಮಗಾರಿ ಇನ್ನಾರು ತಿಂಗಳಲ್ಲಿ ಮುಗಿಯಬಹುದು ಎಂದು ಅಂದಾಜಿಸಲಾಗಿದೆ.ಇನ್ನು ಚಿತ್ರದುರ್ಗದ ಗಡಿಗೆ ಹೊಂದಿಕೊಂಡಂತೆ ಭರಮಸಾಗರ, ಚಿತ್ರದುರ್ಗ- ಹಿರಿಯೂರು ನಡುವೆ ಮತ್ತು ಹಿರಿಯೂರು – ಶಿರಾ ಹಾಗೂ ತುಮಕೂರು ನಡುವೆ ಅಲ್ಲಲ್ಲಿ ಭೂಮಿ ವಶಕ್ಕೆ ಪಡೆದುಕೊಳ್ಳಲಾಗಿದೆ. ಈ ಕೆಲಸವು ವೇಗ ಪಡೆದುಕೊಂಡರೆ ಕಾಮಗಾರಿಯೂ ಬೇಗ ಮುಗಿಯಲಿದೆ. ಇನ್ನೆರಡು ವರ್ಷದಲ್ಲಿ ಎಲ್ಲ ಕಾಮಗಾರಿ ಮುಗಿದು ರೈಲಿನ ಸದ್ದು ಜನರ ಕಿವಿಗೆ ಬೀಳುವ ಮೂಲಕ ಮೂರು ಜಿಲ್ಲೆಯ ಜನರ ಮೊಗದಲ್ಲಿ ಸಂತಸ ತರುತ್ತದೆ.
2010 ರಲ್ಲಿ ಅನುಮೋದನೆ
ರಾಜ್ಯ ಸರಕಾರ ಈ ಯೋಜನೆ ಸೇರಿ ರಾಜ್ಯದ 4 ರೈಲ್ವೆ ಯೋಜನೆಗಳಿಗೆ ಶೇ.50 ಅನುದಾನ ಭರಿಸುವುದಾಗಿ ಹೇಳಿದಾಗ 2009-20ನೇ ಸಾಲಿನ ಕೇಂದ್ರದ ರೈಲ್ವೆ ಬಜೆಟ್ನಲ್ಲಿಈ ಯೋಜನೆ ಸೇರಿ ಒಟ್ಟು ರಾಜ್ಯದ ನಾಲ್ಕು ಯೋಜನೆಗಳಿಗೆ ಅನುಮೋದನೆ ನೀಡಲಾಯಿತು. ಆ ನಂತರ ಬಹಳ ವರ್ಷಗಳ ಕಾಲ ಈ ಯೋಜನೆ ಕ್ರಾಸಿಂಗ್ನಲ್ಲಿ ನಿಂತು, ನಿಂತು ಚಲಿಸುತ್ತಿದ್ದರಿಂದ ತಡವಾಯಿತು.
ದಾವಣಗೆರೆ ಚುರುಕು
ಮೂರು ಜಿಲ್ಲೆ ವ್ಯಾಪ್ತಿಯಲ್ಲಿ ಭೂ ಸ್ವಾಧೀನ ಕಾರ್ಯ ಶುರುವಾದರೂ ದಾವಣಗೆರೆ ಜಿಲ್ಲೆ ವ್ಯಾಪ್ತಿಯ ಜಿಲ್ಲಾಡಳಿತ ಭೂ ಸ್ವಾಧೀನ ಪ್ರಕ್ರಿಯೆ ಚುರುಕುಗೊಳಿಸಿ, ಶೇ.100ರಷ್ಟು ಭೂಮಿಯನ್ನು ವಶಪಡಿಸಿಕೊಂಡು ರೈಲ್ವೆ ಇಲಾಖೆಗೆ ಹಸ್ತಾಂತರಿಸಿತ್ತು. ಪರಿಣಾಮ ಈ ಯೋಜನೆ ಕಾಮಗಾರಿ ಶುರುವಾಗಿ ಇನ್ನಾರು ತಿಂಗಳ ಒಳಗೆ ದಾವಣಗೆರೆ ಜಿಲ್ಲೆ ವ್ಯಾಪ್ತಿಯ ಕಾಮಗಾರಿಯೇ ಮುಗಿಯಬಹುದು ಎಂದು ಅಂದಾಜಿಸಲಾಗಿದೆ. 2024-25 ನೇ ಸಾಲಿನ ರೈಲ್ವೆ ಬಜೆಟ್ನಲ್ಲಿ ನೇರ ರೈಲು ಮಾರ್ಗಕ್ಕೆ 150 ಕೋಟಿ ರೂ. ಅನುದಾನ ಒದಗಿಸಲಾಗಿದೆ, ಈ ಕಾಮಗಾರಿ ಕೂಡ ಈಗ ನಡೆಯುತ್ತಿದೆ.
ರೈಲ್ವೆ ಮಾರ್ಗದಿಂದ ಏನೆಲ್ಲ ಅನುಕೂಲ..?
ಇದುವರೆಗೂ ರೈಲ್ವೆ ಮಾರ್ಗವನ್ನೇ ಕಾಣದ ಹಿರಿಯೂರು, ಶಿರಾ ನಗರಗಳು ಸೇರಿ ಮೂರು ಜಿಲ್ಲೆಯ ನೂರಾರು ಹಳ್ಳಿಗಳು ಚುಕುಬುಕು ರೈಲಿನ ಸದ್ದು ಕೇಳುವ ಭಾಗ್ಯ ದೊರೆಯುತ್ತದೆ.ಚಿತ್ರದುರ್ಗ ಕೋಟೆ, ಹಿರಿಯೂರು ವಿವಿ ಸಾಗರ, ಶಿರಾ ಕೋಟೆ ಪ್ರವಾಸಿ ತಾಣವಾಗಿ ಬೆಳೆಸಲು ಸಹಕಾರಿ ರಾಜಧಾನಿಗೆ 324 ಕಿಮೀ ಪ್ರಯಾಣಿಸಬೇಕು, ಈ ಮಾರ್ಗವಾದರೆ 265 ಕಿಮೀ ಆಗಲಿದೆ.ಸಮಯ, ಇಂಧನ ಉಳಿತಾಯ, ಬೃಹತ್ ಗಾತ್ರದ ಸರಕು ಸಾಗಾಣಿಕೆಗೆ ಅನುಕೂಲ ಆಗುತ್ತದೆ
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ಹೌದು, ನಿಮ್ಮ ಊರಿನಲ್ಲಿ ಜಾತ್ರೆ, ಸಭೆ, ಸಮಾರಂಭಗಳು ನಡೆದರೆ ಅದನ್ನು ಬಯಲುಸೀಮೆಟೈಮ್ಸ್.ಕಾಂ ಮೂಲಕ ನಾಡಿಗೆ ತಿಳಿಸಿ. ಅಷ್ಟೇ ಅಲ್ಲ ನಿಮ್ಮೂರಿನ ರಸ್ತೆ, ಚರಂಡಿ, ಆಸ್ಪತ್ರೆ , ಶಾಲೆ ಯಾವುದೇ ಸಮಸ್ಯೆ ಇದ್ದರೂ ಅಧಿಕಾರಿಗಳ ಕಣ್ಣು ತೆರೆಯುವಂತೆ ಸುದ್ದಿ ಮಾಡಿ. ನೀವು ಜಸ್ಟ್ ನಮ್ಮ ವಾಟ್ಸ್ ಆಪ್ ಸಂಖ್ಯೆಗೆ ಸುದ್ದಿ ಕಳುಹಿಸಿ ಉಳಿದದ್ದನ್ನು ಬಯಲುಸೀಮೆಟೈಮ್ಸ್.ಕಾಂ ಮಾಡಲಿದೆ. ನಮ್ಮ ವಾಟ್ಸ್ ಆಪ್ ಸಂಖ್ಯೆ: +91 96201 39796
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.







