ಚಿತ್ರದುರ್ಗ : ಭಯೋತ್ಪಾದನೆಯನ್ನು ಸಂಹಾರ ಮಾಡಬೇಕಾಗಿರುವುದರಿಂದ ಪ್ರತಿ ಮನೆಯಿಂದಲೂ ಒಬ್ಬನನ್ನು ಸೈನ್ಯಕ್ಕೆ ಕಡ್ಡಾಯವಾಗಿ ಸೇರಿಸುವಂತೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಆದೇಶ ಹೊರಡಿಸಬೇಕೆಂದು ಬಂಜಾರ ಗುರುಪೀಠದ ಸರ್ದಾರ್ ಸೇವಾಲಾಲ್ ಸ್ವಾಮೀಜಿ ಒತ್ತಾಯಿಸಿದರು.
ಕಳೆದ ತಿಂಗಳು ಜಮ್ಮು-ಕಾಶ್ಮೀರದಲ್ಲಿ ಉಗ್ರಗಾಮಿಗಳು 26 ಮಂದಿ ಅಮಾಯಕರನ್ನು ಬಲಿತೆಗೆದುಕೊಂಡಿದ್ದಕ್ಕೆ ಪ್ರತೀಕಾರವಾಗಿ ನಮ್ಮ ಯೋಧರು ಆಪರೇಷನ್ ಸಿಂಧೂರ ಮೂಲಕ ಉಗ್ರರ ನೆಲೆಗಳನ್ನು ಧ್ವಂಸಗೊಳಿಸಿರುವುದರಿಂದ ನಾಗರೀಕರ ವೇದಿಕೆ ವತಿಯಿಂದ ಶನಿವಾರ ನಗರದಲ್ಲಿ ಹಮ್ಮಿಕೊಳ್ಳಲಾಗಿದ್ದ ಆಪರೇಷನ್ ಸಿಂಧೂರ ಬೃಹತ್ ತಿರಂಗಾ ಯಾತ್ರೆಯನ್ನುದ್ದೇಶಿಸಿ ಮಾತನಾಡಿದರು.
ಭಾರತ ಜಗತ್ತಿಗೆ ತಾಯಿ ಬೇರಿದ್ದಂತೆ. ಬೇರೆಯವರ ಮೇಲೆ ಎಂದಿಗೂ ದಬ್ಬಾಳಿಕೆ ಮಾಡಲ್ಲ. ಶರಣರು, ಸಂತರು, ಮಹಾತ್ಮರು, ವೀರಪುರುಷರು ನೆಲೆಸಿರುವ ದೇಶ ನಮ್ಮದು ಎಂದು ವಿಶ್ವಕ್ಕೆ ಗೊತ್ತು. ಶಿವಾಜಿಮಹಾರಾಜರು, ರಾಣಾ ಪ್ರತಾಪ್‍ಸಿಂಗ್, ಪೃಥ್ವಿರಾಜ್ ಚವ್ಹಾಣ್, ಬುದ್ದ, ಬಸವ ಹುಟ್ಟಿರುವ ನೆಲದಲ್ಲಿ ಭಯೋತ್ಪಾದನೆಗೆ ಅವಕಾಶವಿಲ್ಲ. ದೇಶದ್ರೋಹಿ, ಧರ್ಮದ್ರೋಹಿಗಳಿಗೆ ತಕ್ಕ ಶಿಕ್ಷೆಯಾಗುತ್ತದೆ. ಭಾರತವನ್ನು ಕೆಣಕಿ ಪಾಪಿ ಪಾಕಿಸ್ತಾನದವರು ತಿಣುಕುತ್ತಿದ್ದಾರೆ. ಭಾರತೀಯರೆಂದರೆ ತಾಯಿ ಹೃದಯದವರು. ಭಾರತವನ್ನು ಯಾರೆ ಮುಟ್ಟಿದರು ಸರ್ವನಾಶವಾಗುತ್ತಾರೆಂದು ಹೇಳಿದರು.
ಮಕ್ಕಳನ್ನು ಇಂಜಿನಿಯರ್, ಡಾಕ್ಟರ್, ದೊಡ್ಡ ದೊಡ್ಡ ಹುದ್ದೆಯಲ್ಲಿರಬೇಕೆಂದು ಎಲ್ಲಾ ಪೋಷಕರುಗಳು ಬಯಸುತ್ತಾರೆ. ದೇಶ ಕಾಯಲು ಕಳಿಸಲು ಯಾರು ಸಿದ್ದರಿಲ್ಲ. ಗಡಿಯಲ್ಲಿ ಯೋಧರು ಕಾಯುತ್ತಿರುವುದರಿಂದ ನಾವು ನೀವುಗಳೆಲ್ಲಾ ಕ್ಷೇಮವಾಗಿದ್ದೇವೆ. ನಮ್ಮ ದೇಶದ ಸ್ವಾಭಿಮಾನಕ್ಕೆ ಧಕ್ಕೆ ಬಂದರೆ ಸುಮ್ಮನಿರಲ್ಲ ಪ್ರತಿಯೊಬ್ಬರಿಗೂ ರಕ್ತ ಕುದಿಯುತ್ತದೆ. ಅವಕಾಶ ನೀಡಿದರೆ ನಾನು ಕೂಡ ಗನ್ ಹಿಡಿದು ಗಡಿಯಲ್ಲಿ ದೇಶ ಕಾಯುತ್ತೇನೆಂದು ಹೇಳಿದ ಸ್ವಾಮೀಜಿ ಭಯೋತ್ಪಾದನೆ ಸಂಪೂರ್ಣವಾಗಿ ನಿಲ್ಲಬೇಕು ಎಂದರು.
ನಿವೃತ್ತ ಯೋಧ ಹವಾಲ್ದಾರ್ ಸೂರಯ್ಯ ಮಾತನಾಡಿ 1965, 1971, 1999, 2001, 2016 ರಲ್ಲಿಯೂ ಪಾಕಿಸ್ತಾನ ಭಾರತದ ಮೇಲೆ ದಾಳಿ ಮಾಡಿದಾಗ ನಮ್ಮ ಯೋಧರು ತಕ್ಕ ಉತ್ತರ ನೀಡಿದ್ದಾರೆ. ಪಾಕಿಸ್ತಾನಕ್ಕೆ ನುಗ್ಗಿ ಶತ್ರುಗಳನ್ನು ಸಂಹಾರ ಮಾಡಿದ ದೇಶ ನಮ್ಮದು. 2021 ರಲ್ಲಿ ಪುಲ್ವಾಮ ದಾಳಿ ನಡೆದಾಗಲು ಉಗ್ರರ ನೆಲೆಗಳನ್ನು ಸೈನಿಕರು ಧ್ವಂಸ ಮಾಡಿದ್ದರು. ಆಪರೇಷನ್ ಸಿಂಧೂರದಿಂದ ನಮ್ಮ ಸೇನೆಯ ಗೌರವ ಜಾಸ್ತಿಯಾಗಿದೆ. ಪ್ರತಿ ಪ್ರಜೆಯೂ ಸೈನಿಕರಾಗಿ ಹೊರ ಹೊಮ್ಮಬೇಕೆಂದು ಕರೆ ನೀಡಿದರು.
ಜ್ಯೋತಿ ಲಕ್ಷ್ಮಣ್ ಮಾತನಾಡುತ್ತ ಕಮಾಂಡರ್‍ಗಳಾದ ಸೋಫಿಯಾ ಖುರೇಷಿ, ವ್ಯೂಮಿಕ ಸಿಂಗ್ ಇವರುಗಳು ಆಪರೇಷನ್ ಸಿಂಧೂರದ ಮುಂದಾಳತ್ವ ವಹಿಸಿ ಪಾಕಿಸ್ತಾನದ ಭಯೋತ್ಪಾದಕರನ್ನು ಬಗ್ಗು ಬಡಿದಿದ್ದಾರೆ. ಅಹಲ್ಯಾಬಾಯಿ ವೋಳ್ಕರ್, ಕೆಳದಿ ಚನ್ನಮ್ಮ, ರಾಣಿ ಅಬ್ಬಕ್ಕ, ಒನಕೆ ಓಬವ್ವ ಇವರುಗಳ ದಿಟ್ಟತನ ಇಂದಿನ ಮಹಿಳೆಯರಲ್ಲಿರಬೇಕು. ಮಹಿಳೆಗೆ ಸಿಂಧೂರ ಪವಿತ್ರತೆ ಏನೆಂಬುದು ಇಡಿ ದೇಶಕ್ಕೆ ಗೊತ್ತಾಗಿದೆ. ಅದಕ್ಕಾಗಿ 26 ಮಂದಿಯನ್ನು ಬಲಿ ತೆಗೆದುಕೊಂಡ ಭಯೋತ್ಪಾದಕರಿಗೆ ನಮ್ಮ ಯೋಧರು ಆಪರೇಷನ್ ಸಿಂಧೂರ ಮೂಲಕ ಉತ್ತರ ನೀಡಿದ್ದಾರೆಂದು ಹರ್ಷ ವ್ಯಕ್ತಪಡಿಸಿದರು.
ರಾಷ್ಟ್ರೀಯ ಸ್ವಯಂ ಸೇವಕ ಪ್ರಮುಖ ಯಾದವ ಕೃಷ್ಣ ಮಾತನಾಡಿ ಒಂದು ಕಿ.ಮೀ.ಉದ್ದದ ತಿರಂಗಾ ಧ್ವಜ ಯಾತ್ರೆ ನಡೆಸಿ ನಮ್ಮ ಯೋಧರಿಗೆ ಕೃತಜ್ಞತೆ ಸಮರ್ಪಿಸಿರುವುದು ನಿಜಕ್ಕೂ ದೇಶಭಕ್ತಿಯನ್ನು ಮೆರೆದಂತೆ. ನಮ್ಮ ದೇಶ ಪಾಕಿಸ್ತಾನವನ್ನು ಬಗ್ಗು ಬಡಿಯುವಲ್ಲಿ ನಿರ್ಣಾಯಕ ಹಂತಕ್ಕೆ ಬಂದು ನಿಂತಿದೆ. ನಮ್ಮ ಯೋಧರು ಪ್ರಪಂಚಕ್ಕೆ ಮಾದರಿ. ಆಪರೇಷನ್ ಸಿಂಧೂರದಂತ ಯುದ್ದವನ್ನು ಪ್ರಪಂಚದಲ್ಲಿಯೇ ಯಾರು ಮಾಡಿಲ್ಲ. ಭಾರತವನ್ನು ದ್ವೇಷಿಸುವುದೇ ಪಾಕಿಸ್ತಾನದ ಬಳಿಯಿರುವ ಅಸ್ತ್ರ ಎಂದು ಹೇಳಿದರು.
ಒಂಬತ್ತು ಉಗ್ರಗಾಮಿಗಳ ನೆಲೆ ಮೇಲೆ ನಮ್ಮ ಯೋಧರು ದಾಳಿ ನಡೆಸಿದ್ದಾರೆ. ಇದಕ್ಕೆ ದೇಶದ ವಿಜ್ಞಾನಿಗಳ ಕೊಡುಗೆಯೂ ಇದೆ. ಜಗತ್ತು ನಮ್ಮ ಸೈನ್ಯದ ತಾಕತ್ತು ನೋಡಿ ಕಕ್ಕಾಬಿಕ್ಕಿಯಾಗಿದೆ. ಆಧುನಿಕ ಯುದ್ದವನ್ನು ನಮ್ಮ ಯೋಧರು ಜಗತ್ತಿಗೆ ತೋರಿಸಿಕೊಟ್ಟಿದ್ದಾರೆ. ನೂರಾರು ಬಾರಿ ನಮ್ಮ ಸೈನಿಕರು ಪರಾಕ್ರಮ ತೋರಿಸಿದ್ದಾರೆ. ಅದಕ್ಕಾಗಿ ಅಬಾರಿಗಳಾಗಿರೋಣ. ಆರಪೇಷನ್ ಸಿಂಧೂರ ಇನ್ನು ನಿಂತಿಲ್ಲ. ಯಾವ ಕ್ಷಣದಲ್ಲಿ ಬೇಕಾದರು ದಾಳಿಗೆ ಸಿದ್ದವಾಗಿದೆ ಎಂದು ನುಡಿದರು.
ಕಬೀರಾನಂದಾಶ್ರಮದ ಶಿವಲಿಂಗಾನಂದಸ್ವಾಮಿ, ಸಂಸದ ಗೋವಿಂದ ಕಾರಜೋಳ, ಹೊಳಲ್ಕೆರೆ ಶಾಸಕ ಡಾ.ಎಂ.ಚಂದ್ರಪ್ಪ, ಮಾಜಿ ಶಾಸಕರುಗಳಾದ ಜಿ.ಹೆಚ್.ತಿಪ್ಪಾರೆಡ್ಡಿ, ಎಸ್.ಕೆ.ಬಸವರಾಜನ್, ವಿಧಾನಪರಿಷತ್ ಸದಸ್ಯ ಕೆ.ಎಸ್.ನವೀನ್, ಎನ್.ಆರ್.ಲಕ್ಷ್ಮಿಕಾಂತ್, ಮಧುಗಿರಿ ಜಿಲ್ಲೆ ಬಿಜೆಪಿ. ಅಧ್ಯಕ್ಷ ಹನುಮಂತೆಗೌಡ, ಬಿಜೆಪಿ.ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಜಿ.ಟಿ.ಸುರೇಶ್‍ಸಿದ್ದಾಪುರ, ಸಂಪತ್, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷೆ ಸೌಭಾಗ್ಯ ಬಸವರಾಜನ್, ಚಿತ್ರದುರ್ಗ ನಗರಾಭಿವೃದ್ದಿ ಪ್ರಾಧಿಕಾರದ ಮಾಜಿ ಅಧ್ಯಕ್ಷರುಗಳಾದ ತಿಪ್ಪೇಸ್ವಾಮಿ, ಬದ್ರಿನಾಥ್, ವಾಸವಿ ವಿದ್ಯಾಸಂಸ್ಥೆ ಅಧ್ಯಕ್ಷರಾದ ಸತ್ಯನಾರಾಯಣಶೆಟ್ಟಿ, ಬಿಜೆಪಿ.ವಕ್ತಾರ ನಾಗರಾಜ್‍ಬೇದ್ರೆ, ಮಾಧ್ಯಮ ವಕ್ತಾರ ದಗ್ಗೆಶಿವಪ್ರಕಾಶ್, ನಗರಸಭೆ ಸದಸ್ಯರುಗಳಾದ ಶ್ರೀನಿವಾಸ್, ಹರೀಶ್, ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷೆ ಶೈಲಜಾರೆಡ್ಡಿ, ನವೀನ್ ಚಾಲುಕ್ಯ, ಕೋಟೆ ವಾಯುವಿಹಾರಿಗಳ ಸಂಘದ ಅಧ್ಯಕ್ಷ ಆರ್.ಸತ್ಯಣ್ಣ ಸೇರಿದಂತೆ ವಿವಿಧ ಶಾಲಾ-ಕಾಲೇಜುಗಳ ನೂರಾರು ವಿದ್ಯಾರ್ಥಿ-ವಿದ್ಯಾರ್ಥಿನಿಯರು ತಿರಂಗಾ ಯಾತ್ರೆಯಲ್ಲಿ ಪಾಲ್ಗೊಂಡಿದ್ದರು.
ಮೊಳಕಾಲ್ಮುರುವಿನ ಹರೀಶ್ ಮತ್ತು ತಂಡದವರು ಎಂಟು ಅಡಿ ಅಗಲ, ಒಂದು ಕಿ.ಮೀ.ಉದ್ದದ ತಿರಂಗಾ ಧ್ವಜವನ್ನು ಸಿದ್ದಪಡಿಸಿದ್ದರು.
ನಾಗರಾಜ್‍ಬೇದ್ರೆ ಮತ್ತು ತಂಡದವರು ತ್ರಿವರ್ಣ ಧ್ವಜದ ಚಿತ್ರವನ್ನು ವಿದ್ಯಾರ್ಥಿಗಳ ಕೈ ಹಾಗೂ ಕೆನ್ನೆಯಲ್ಲಿ ಚಿತ್ರಿಸಿ ದೇಶಭಕ್ತಿ ಮೂಡಿಸಿದರು.
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ಹೌದು, ನಿಮ್ಮ ಊರಿನಲ್ಲಿ ಜಾತ್ರೆ, ಸಭೆ, ಸಮಾರಂಭಗಳು ನಡೆದರೆ ಅದನ್ನು ಬಯಲುಸೀಮೆಟೈಮ್ಸ್.ಕಾಂ ಮೂಲಕ ನಾಡಿಗೆ ತಿಳಿಸಿ. ಅಷ್ಟೇ ಅಲ್ಲ ನಿಮ್ಮೂರಿನ ರಸ್ತೆ, ಚರಂಡಿ, ಆಸ್ಪತ್ರೆ , ಶಾಲೆ ಯಾವುದೇ ಸಮಸ್ಯೆ ಇದ್ದರೂ ಅಧಿಕಾರಿಗಳ ಕಣ್ಣು ತೆರೆಯುವಂತೆ ಸುದ್ದಿ ಮಾಡಿ. ನೀವು ಜಸ್ಟ್ ನಮ್ಮ ವಾಟ್ಸ್ ಆಪ್ ಸಂಖ್ಯೆಗೆ ಸುದ್ದಿ ಕಳುಹಿಸಿ ಉಳಿದದ್ದನ್ನು ಬಯಲುಸೀಮೆಟೈಮ್ಸ್.ಕಾಂ ಮಾಡಲಿದೆ. ನಮ್ಮ ವಾಟ್ಸ್ ಆಪ್ ಸಂಖ್ಯೆ: +91 96201 39796
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.



