ಚಿತ್ರದುರ್ಗ:ಒತ್ತಡದ ನಡುವೆ ಕಾರ್ಯನಿರ್ವಹಿಸುವ ಪತ್ರಕರ್ತರಿಗೆ ತಾವಾಗಿಯೇ ಮುಂದೆ ಬಂದು ಉಚಿತ ಹೃದಯ ರೋಗ ತಪಾಸಣೆ ಕಾರ್ಡ್ ವಿತರಿಸುತ್ತಿರುವ ಇಂಡಿಯಾನಾ-ಎಸ್.ಜೆ.ಎಂ. ಹಾರ್ಟ್ ಸೆಂಟರ್ನ ಸಾಮಾಜಿಕ ಬದ್ದತೆ ಇತರರಿಗೆ ಮಾದರಿಯಾಗಿದೆ ಎಂದು ಹೊಳಲ್ಕೆರೆ ಶಾಸಕ ಡಾ.ಎಂ.ಚಂದ್ರಪ್ಪ ಹೇಳಿದರು. ನಗರದ ಪತ್ರಿಕಾ ಭವನದ ಡಾ.ಬಿ.ಆರ್.ಅಂಬೇಡ್ಕರ್ ಸಭಾಂಗಣದಲ್ಲಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಹಾಗೂ ಇಂಡಿಯಾನಾ ಎಸ್.ಜೆ.ಎಂ. ಹಾರ್ಟ್ ಸೆಂಟರ್ ಸಹಯೋಗದಲ್ಲಿ ಸೋಮವಾರ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಉಚಿತ ಹೃದಯ ರೋಗ ತಪಾಸಣೆ ಕಾರ್ಡ್ಗಳನ್ನು ವಿತರಿಸಿ ಅವರು ಮಾತನಾಡಿದರು. ರಾತ್ರಿ ಹಗಲು ಎನ್ನದೇ ಬದ್ದತೆಯಿಂದ ಕೆಲಸ ನಿರ್ವಹಿಸುವ ಪತ್ರಕರ್ತರು ತಮ್ಮ ಸ್ವತಃ ಆರೋಗ್ಯ ಕಾಳಜಿಯನ್ನು ಮರೆಯುತ್ತಾರೆ. ಇದನ್ನು ಅರಿತು ಇಂಡಿಯಾನ-ಎಸ್ಜೆಎಂ ಹಾರ್ಟ್ ಸೆಂಟರ್ ಪತ್ರಕರ್ತರು ಹಾಗೂ ಅವರ ಕುಟುಂಬದವರಿಗೆ ಉಚಿತ ಓಪಿಡಿ ಸೇವೆ ಹಾಗೂ ರಿಯಾಯಿತಿ ದರದಲ್ಲಿ ಹೃದ್ರೋಗ ಶಸ್ತ್ರಚಿಕಿತ್ಸೆ ನೀಡುವ ಯೋಜನೆ ಜಾರಿಗೊಳಿಸಿರುವುದು ಶ್ಲಾಘನೀಯ ಕಾರ್ಯವಾಗಿದೆ. ಇಂತಹ ಇವರ ಸೇವಾ ಮನೋಭಾವ ಮಾದರಿಯಾಗಿದೆ. ಆರೋಗ್ಯವೇ ಭಾಗ್ಯ ಇದನ್ನು ಕಾಪಾಡಿಕೊಳ್ಳಬೇಕು. ಆರೋಗ್ಯ ಒಂದು ಇದ್ದರೇ ಬೇಕಾದ ಸಾಧನೆ ಮಾಡಬಹುದು. ನಮ್ಮಲ್ಲೇ ಮೊದಲು ಎನ್ನುವ ಧಾವಂತಕ್ಕೆ ಬಿದ್ದು ಸುದ್ದಿಯನ್ನು ಬಿತ್ತಿರಿಸುವ ಒತ್ತಡದಲ್ಲಿ ಪತ್ರಕರ್ತರು ಇದ್ದಾರೆ. ಇದಕ್ಕೆ ಬದಲಾಗಿ ಸುದ್ದಿಯ ಸತ್ಯಾಸತ್ಯತೆ ಪರಾಮರ್ಶಿಸಿ ಸುದ್ದಿ ಬಿಡುಗಡೆ ಮಾಡಲು ಮುಂದಾಗಬೇಕು ಎಂದು ಶಾಸಕ ಡಾ.ಎಂ.ಚಂದ್ರಪ್ಪ ಪತ್ರಕರ್ತರಿಗೆ ಸಲಹೆ ನೀಡಿದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ನವದೆಹಲಿಯ ಭಾರತೀಯ ಕಾರ್ಯನಿರತ ಪತ್ರಕರ್ತರ ಒಕ್ಕೂಟದ ರಾಷ್ಟ್ರೀಯ ಅಧ್ಯಕ ಬಿ.ವಿ.ಮಲ್ಲಿಕಾರ್ಜುನಯ್ಯ, ಪತ್ರಕರ್ತರು ಕೆಲಸದ ನಡುವೆ ತಮ್ಮನ್ನು ಹಾಗೂ ಕುಟುಂಬವನ್ನು ಮರೆತು ಬಿಡುತ್ತಾರೆ. ಇತ್ತೀಚಿಗೆ 40 ರಿಂದ 45 ವರ್ಷದವರು ಹೃದಯಾಘಾತಕ್ಕೆ ತುತ್ತಾಗುತ್ತಿರುವುದು ದುರ್ದೈವದ ಸಂಗತಿಯಾಗಿದೆ. ಹಾಸನ ಜಿಲ್ಲೆಯಲ್ಲಿ ಸರಣಿ ಹೃದಯಾಘಾತದ ಪ್ರಕರಣ ರಾಜ್ಯದಾದ್ಯಂತ ಚರ್ಚೆಯಲ್ಲಿತ್ತು. ಪತ್ರಕರ್ತರು ಸಹ ತಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು ಎಂದರು.ಜಿಲ್ಲೆಯ ಪತ್ರಕರ್ತರು ಜನಸಾಮಾನ್ಯರ ಸಮಸ್ಯೆಗಳಿಗೆ ಸ್ಪಂದಿಸಿ ವರದಿ ಮಾಡುತ್ತೀರಿ. ಇದರ ಜೊತೆಗೆ ಇಂದಿನ ಪರಿಸ್ಥಿತಿಗಳಿಗೆ ಅನುಗುಣವಾಗಿ ಆರೋಗ್ಯದ ಕಾಳಜಿ ಕುರಿತಾದ ಲೇಖನ ಹಾಗೂ ಸುದ್ದಿಗಳನ್ನು ಸಹ ಪ್ರಕಟಿಸುವ ಮೂಲಕ ಜನರನ್ನು ಎಚ್ಚರಿಸುವ ಕೆಲಸ ಮಾಡಬೇಕು. ಆರೋಗ್ಯವನ್ನು ದುಡ್ಡು ಕೊಟ್ಟು ಖರೀದಿಸಲು ಸಾಧ್ಯವಿಲ್ಲ. ಉತ್ತಮ ಆಹಾರ ಹಾಗೂ ದೈಹಿಕ ಅಭ್ಯಾಸಗಳನ್ನು ರೂಢಿಸಿಕೊಳ್ಳುವ ಮೂಲಕ ಆರೋಗ್ಯ ಕಾಪಾಡಿಕೊಳ್ಳಬಹುದು. ಇಂದಿನ ವಾತಾರಣ ಕಲುಷಿತವಾಗಿದೆ. ಆಹಾರ ಬೆಳೆಗಳಲ್ಲಿ ಸಹ ರಾಸಾಯನಿಕ ಪದಾರ್ಥಗಳನ್ನು ಬಳಸಲಾಗುತ್ತದೆ ಎಂದು ಬಿ.ವಿ.ಮಲ್ಲಿಕಾರ್ಜುನಯ್ಯ ವಿಷಾದ ವ್ಯಕ್ತಪಡಿಸಿದರು.
ಮೊಬೈಲ್ ಬಂದಾಗಿನಿಂದ ಪತ್ರಿಕೆಗಳನ್ನು ಓದುವವರ ಸಂಖ್ಯೆ ಕುಸಿಯುತ್ತಿದೆ. ಎಲ್ಲಾ ಸುದ್ದಿಗಳು ಸಹ ಮೊಬೈಲ್ನಲ್ಲಿ ಸಿಗುತ್ತಿವೆ. ಪತ್ರಿಕೆಗಳ ಪ್ರಸಾರ ಸಂಖ್ಯೆ ಕಡಿಮೆಯಾಗಿದೆ. ಇದರ ನಡುವೆಯೂ ಓದುಗರನ್ನು ಉಳಿಸಿಕೊಂಡು ಪತ್ರಿಕೋದ್ಯಮವನ್ನು ಸಹ ಉಳಿಸಿಕೊಳ್ಳುವ ಜವಾಬ್ದಾರಿ ವರದಿಗಾರರ ಮೇಲಿದೆ. ಇದರ ನಡುವೆ ಪತ್ರಕರ್ತರ ಸಂಕಷ್ಟಗಳಿಗೆ ಸ್ಪಂದಿಸಿ ಇಂಡಿಯಾನಾ-ಎಸ್.ಜೆ.ಎಂ. ಹಾರ್ಟ್ ಸೆಂಟರ್ ಉಚಿತ ಹೃದಯ ರೋಗ ತಪಾಸಣೆ ಕಾರ್ಡ್ ವಿತರಿಸುವುದು ಅಭಿನಂದನಾರ್ಹವಾಗಿದೆ. ಇದರ ಸದುಪಯೋಗ ಪಡೆದುಕೊಂಡು, ನಿರ್ಲಕ್ಷ್ಯ ವಹಿಸದೆ ವರ್ಷಕ್ಕೆ ಎರಡು ಬಾರಿ ಹೃದಯ ತಪಾಸಣೆಯನ್ನು ಪತ್ರಕರ್ತರು ಮಾಡಿಸಿಕೊಳ್ಳಬೇಕು ಎಂದು ಬಿ.ವಿ.ಮಲ್ಲಿಕಾರ್ಜುನಯ್ಯ ಸಲಹೆ ನೀಡಿದರು. ಪತ್ರಕರ್ತರ ಜೊತೆಗೆ ಪತ್ರಿಕಾ ವಿತರಕರು ಸಹ ಹಗಲಿರಲು ದುಡಿಯುತ್ತಾರೆ. ಇಂಡಿಯಾ-ಎಸ್.ಜೆ.ಎಂ ಹಾರ್ಟ್ ವಿತರಕರಿಗೂ ಉಚಿತ ತಪಾಸಣೆ ಕಾರ್ಡ್ಗಳನ್ನು ವಿತರಿಸುವಂತೆ ಬಿ.ವಿ.ಮಲ್ಲಿಕಾರ್ಜುನಯ್ಯ ಕೋರಿದರು. ಜಿಲ್ಲಾ ಪೆÇಲೀಸ್ ಅಧೀಕ್ಷಕ ರಂಜಿತ್ ಕುಮಾರ್ ಬಂಡಾರು ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಜೀವನ ಶೈಲಿ ಬದಲಾವಣೆ ಹಾಗೂ ಕೆಲಸದ ಒತ್ತಡದಿಂದ 30 ರಿಂದ 40 ವರ್ಷದೊಳಗಿನ ಬಹಳಷ್ಟು ಜನರು ಹೃದಯ ಸಂಬಂಧಿತ ಕಾಯಿಲೆಗಳಿಗೆ ತುತ್ತಾಗುತ್ತಿದ್ದಾರೆ. ನಮ್ಮ ದೇಹದಲ್ಲಿ ಹೃದಯ ಬಹಳ ಮುಖ್ಯವಾಗಿದ್ದು, ಹಾಗಾಗಿ ಕಾಲಕಾಲಕ್ಕೆ ತಪಾಸಣೆ, ಉತ್ತಮ ಜೀವನ ಶೈಲಿ ನಿರ್ವಹಣೆ ಹಾಗೂ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಅನುಸರಿಸುವ ಮೂಲಕ ಹೃದಯದ ಆರೋಗ್ಯ ಕಾಪಾಡಿಕೊಳ್ಳಬೇಕಿದೆ ಎಂದು ಹೇಳಿದರು. ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಹಾಯಕ ನಿರ್ದೇಶಕ ಬಿ.ವಿ.ತುಕಾರಾಂರಾವ್ ಮಾತನಾಡಿ, ಪತ್ರಕರ್ತರಿಗೆ ಮಾತ್ರವಲ್ಲದೆ ಪತ್ರಿಕೆಗಳ ನರನಾಡಿಗಳಾಗಿರುವ ಪತ್ರಿಕಾ ವಿತರಿಕರಿಗೂ ಸಹ ಇಂಡಿಯಾನ-ಎಸ್ಜೆಎಂ ಹಾರ್ಟ್ ಸೆಂಟರ್ ವತಿಯಿಂದ ಉಚಿತ ಹೃದಯ ರೋಗ ತಪಾಸಣಾ ಕಾರ್ಡ್ ಸೌಲಭ್ಯ ಘೋಷಣೆ ಮಾಡಿರುವುದು ಉತ್ತಮ ಬೆಳವಣಿಗೆ ಹಾಗೂ ತುಂಬಾ ಅವಶ್ಯಕವೂ ಹೌದು ಎಂದು ಅಭಿಪ್ರಾಯಪಟ್ಟರು. ಪತ್ರಕರ್ತರು ನಿತ್ಯವೂ ಒತ್ತಡದ ನಡುವೆ ಕಾರ್ಯನಿರ್ವಹಿಸುತ್ತಿರುತ್ತಾರೆ. ಕಳೆದ ಆರೇಳು ತಿಂಗಳ ಈಚೆಗೆ ಶಿವಮೊಗ್ಗದ ಇಬ್ಬರು ಪತ್ರಕರ್ತರು ಹಾಗೂ ಬಳ್ಳಾರಿಯಲ್ಲಿ ಒರ್ವ ಪತ್ರಕರ್ತರು ಹೃದಯಘಾತಕ್ಕೆ ಒಳಗಾಗಿ ಸಾವಿಗೀಡಾಗಿದ್ದಾರೆ. ನಿಯಮಿತವಾಗಿ ಹೃದ್ರೋಗ ತಪಾಸಣೆ ತಪಾಸಣೆ ಮಾಡಿಸಿಕೊಂಡಿದ್ದರೆ ಬಹುಶಃ ಅಂತಹ ಅವಘಡಗಳು ಸಂಭವಿಸುತ್ತಿರಲಿಲ್ಲ. ಹಾಗಾಗಿ ಎಲ್ಲ ಮಾಧ್ಯಮ ಮಿತ್ರರು ನಿಯಮಿತವಾಗಿ ಹೃದ್ರೋಗ ತಪಾಸಣೆ ಮಾಡಿಸಿಕೊಳ್ಳುವ ಮೂಲಕ ಸೌಲಭ್ಯವನ್ನು ಸದುಪಯೋಗ ಪಡೆಸಿಕೊಂಡು ಹೃದಯದ ಆರೋಗ್ಯ ಕಾಪಾಡಿಕೊಳ್ಳಿ ಎಂದು ಸಲಹೆ ನೀಡಿದರು.ಹಿರಿಯ ಪತ್ರಕರ್ತರು ಹಾಗೂ ಕರ್ನಾಟಕ ಮಾಧ್ಯಮ ಅಕಾಡೆಮಿ ಸದಸ್ಯ ಎಂ.ಎನ್.ಅಹೋಬಳಪತಿ ಮಾತನಾಡಿ, ಪತ್ರಕರ್ತರು ಸುದ್ದಿಗಳಿಗೆ ತೆರಳಿದಾಗ ಅಪಘಾತಗಳಿಗೆ ಒಳಗಾದ ಸಂದರ್ಭಗಳನ್ನು ಗಮನಿಸಲಾಗುತ್ತಿದ್ದು, ಈ ಹಿನ್ನಲೆಯಲ್ಲಿ ಜಿಲ್ಲಾ ಕಾರ್ಯನಿರತ ಪತ್ರರ್ಕರ ಸಂಘದಿಂದ ಮೊದಲ ಬಾರಿಗೆ ಪತ್ರಕರ್ತರಿಗೆ ಅಪಘಾತ ವಿಮೆ ಮಾಡಿಸಲು ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದ್ದು, ಮುಂದಿನ ದಿನಗಳಲ್ಲಿ ಸಂಘದ ನಿಧಿಯ ಲಭ್ಯತೆ ನೋಡಿಕೊಂಡು ಸಂಘದಿಂದಲೇ ಅಪಘಾತ ವಿಮೆ ಭರಿಸಲು ಉದ್ದೇಶಿಸಲಾಗಿದೆ ಎಂದು ತಿಳಿಸಿದರು.
ಇಂಡಿಯಾನ-ಎಸ್ಜೆಎಂ ಹಾರ್ಟ್ ಸೆಂಟರ್ ಕಾರ್ಯನಿರ್ವಾಹಕ ಅಧಿಕಾರಿ ರೂಪೇಶ್ ಕುಮಾರ್ ಶೆಟ್ಟಿ ಮಾತನಾಡಿ, ನನ್ನ ಅಧಿಕಾರದ ವ್ಯಾಪ್ತಿಯಲ್ಲಿ ಸಾರ್ವಜನಿಕರಿಗೆ ಅನುಕೂಲವಾಗುವಂತಹ ಕೆಲಸ ಮಾಡಿದ ತೃಪ್ತಿ ಇದೆ. ಪತ್ರಕರ್ತರಿಗೆ ಉಚಿತ ಆರೋಗ್ಯ ಹೃದಯ ರೋಗ ತಪಾಸಣಾ ಕಾರ್ಡ್ ವಿತರಿಸಲಾಗಿದ್ದು, ಈ ಕಾರ್ಡ್ದಾರರಿಗೆ ಒಪಿಡಿ ಸಂಪೂರ್ಣವಾಗಿ ಉಚಿತವಾಗಿದ್ದು, ವರ್ಷದಲ್ಲಿ ಎಷ್ಟು ಬಾರಿಯಾದರೂ ಈ ಸೇವೆ ಪಡೆಯಬಹುದಾಗಿದೆ. ಒಳರೋಗಿಯಾಗಿ ಚಿಕಿತ್ಸೆ ಪಡೆದಲ್ಲಿ ಶೇ.20ರಷ್ಟು ರಿಯಾಯಿತಿ ಸೌಲಭ್ಯ ದೊರೆಯಲಿದೆ ಎಂದು ತಿಳಿಸಿದ ಅವರು, ಪತ್ರಕರ್ತರಿಗೆ ನೀಡಿರುವಂತೆ ಪತ್ರಿಕಾ ವಿತರಿಕರಿಗೂ ಸಹ ಉಚಿತ ಹೃದಯ ರೋಗ ತಪಾಸಣಾ ಕಾರ್ಡ್ ವಿತರಣೆ ಮಾಡಲಾಗುವುದು ಎಂದು ಘೋಷಿಸಿದರು.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಬಿ.ದಿನೇಶ್ ಗೌಡಗೆರೆ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಪತ್ರಕರ್ತರ ಕ್ಷೇಮಕ್ಕಾಗಿ ಅನೇಕ ಆರೋಗ್ಯ ಶಿಬಿರಗಳನ್ನು ನಡೆಸಲಾಗಿದೆ. ಸಂಕಷ್ಟದಲ್ಲಿರುವ ಪತ್ರಕರ್ತರಿಗೆ ಮುಖ್ಯಮಂತ್ರಿಗಳ ಹಾಗೂ ಜಿಲ್ಲಾ ಸಂಘದ ವತಿಯಿಂದಲೂ ಪರಿಹಾರ ನೀಡಲಾಗಿದೆ. ಇತ್ತೀಚೆಗೆ ಪಾಶ್ರ್ವವಾಯುಗೆ ತುತ್ತಾಗಿದ್ದ ಪತ್ರಕರ್ತ ಎನ್.ಎಸ್.ಸುನೀಲ್ ರೆಡ್ಡಿ ಅವರಿಗೆ ಮುಖ್ಯಮಂತ್ರಿಗಳ ಪರಿಹಾರದಿಂದ ರೂ.4 ಲಕ್ಷ ಹಾಗೂ ನಿವೃತ್ತ ಪತ್ರಕರ್ತ ಬಸವರಾಜ್ ಅವರಿಗೆ ರೂ.55 ಸಾವಿರ ಮಂಜೂರು ಮಾಡಿಸಲಾಗಿದೆ. ಸಂಘದ ಕಟ್ಟಡದ ಅಭಿವೃದ್ಧಿ ಹಾಗೂ ನಿರ್ವಹಣೆಗೆ ಕ್ರಮವಹಿಸಲಾಗಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಕಾರ್ಯನಿರತ ಪತ್ರಕರ್ತ ಸಂಘದ ಉಪಾಧ್ಯಕ್ಷ ಸಿ.ಪಿ.ಮಾರುತಿ, ಕಾರ್ಯದರ್ಶಿ ವಿರೇಶ್ ವಿ ಅಪ್ಪು, ಖಜಾಂಚಿ ಡಿ. ಕುಮಾರಸ್ವಾಮಿ, ಕಾರ್ಯಕಾರಿ ಸಮಿತಿ ಸದಸ್ಯರಾದ ನಾಗೇಶ್, ಹೆಚ್.ತಿಪ್ಪೇಸ್ವಾಮಿ, ಪರಶುರಾಂಪುರ ಮಂಜುನಾಥ್, ರವಿ ಉಗ್ರಾಣ, ಸಿ. ರಾಜಶೇಖರ್, ನವೀನ್ ಕುಮಾರ್, ಹಿರಿಯ ಪತ್ರರ್ಕರಾದ ಹರಿಯಬ್ಬೆ ಸಿ ಹೆಂಜಾರಪ್ಪ, ಶ.ಮಂಜುನಾಥ್ ಸೇರಿದಂತೆ ಮತ್ತಿತರರು ಇದ್ದರು.
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ಹೌದು, ನಿಮ್ಮ ಊರಿನಲ್ಲಿ ಜಾತ್ರೆ, ಸಭೆ, ಸಮಾರಂಭಗಳು ನಡೆದರೆ ಅದನ್ನು ಬಯಲುಸೀಮೆಟೈಮ್ಸ್.ಕಾಂ ಮೂಲಕ ನಾಡಿಗೆ ತಿಳಿಸಿ. ಅಷ್ಟೇ ಅಲ್ಲ ನಿಮ್ಮೂರಿನ ರಸ್ತೆ, ಚರಂಡಿ, ಆಸ್ಪತ್ರೆ , ಶಾಲೆ ಯಾವುದೇ ಸಮಸ್ಯೆ ಇದ್ದರೂ ಅಧಿಕಾರಿಗಳ ಕಣ್ಣು ತೆರೆಯುವಂತೆ ಸುದ್ದಿ ಮಾಡಿ. ನೀವು ಜಸ್ಟ್ ನಮ್ಮ ವಾಟ್ಸ್ ಆಪ್ ಸಂಖ್ಯೆಗೆ ಸುದ್ದಿ ಕಳುಹಿಸಿ ಉಳಿದದ್ದನ್ನು ಬಯಲುಸೀಮೆಟೈಮ್ಸ್.ಕಾಂ ಮಾಡಲಿದೆ. ನಮ್ಮ ವಾಟ್ಸ್ ಆಪ್ ಸಂಖ್ಯೆ: +91 96201 39796
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.







