ಚಿತ್ರದುರ್ಗ: ಸುದ್ದಿ ಮಾಧ್ಯಮದ ಆತ್ಮ ಆಗಿರುವ ವಾಕ್ ಸ್ವಾತಂತ್ರ್ಯ ಮತ್ತು ಜಾತ್ಯತೀತತೆ ಹಾಗೂ ಸಾಮಾಜಿಕ ನ್ಯಾಯವೇ ಅಂಬೇಡ್ಕರ್ ದೃಷ್ಟಿಕೋನದ ಆತ್ಮವೂ ಆಗಿದೆ. ಅಂಬೇಡ್ಕರ್ ಕೊಟ್ಟ ಸಂವಿಧಾನದ ಮೌಲ್ಯವೂ ಇದೇ ಆಗಿದೆ ಎಂದು ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಕೆ.ವಿ.ಪ್ರಭಾಕರ್ ಅವರು ಅಭಿಪ್ರಾಯಪಟ್ಟರು.ನಗರದ ಪತ್ರಿಕಾ ಭವನದ ಡಾ.ಬಿ.ಆರ್.ಅಂಬೇಡ್ಕರ್ ಸಭಾಂಗಣದಲ್ಲಿ ಕರ್ನಾಟಕ ಮಾಧ್ಯಮ ಅಕಾಡೆಮಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಕರ್ನಾಟಕ ಎಸ್.ಸಿ, ಎಸ್.ಟಿ. ಪತ್ರಿಕಾ ಸಂಪಾದಕರ ಸಂಘ ಹಾಗೂ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡಿದ್ದ “ಸುದ್ದಿ ಮಾಧ್ಯಮದಲ್ಲಿ ಅಂಬೇಡ್ಕರ್ ದೃಷ್ಟಿಕೋನ” ಒಂದು ದಿನದ ವಿಚಾರ ಸಂಕಿರಣ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ಜಾತಿ ಶ್ರೇಷ್ಠತೆಯ ವ್ಯಸನದ ಮನುಸ್ಮೃತಿ ಘರ್ ವಾಪ್ಸಿಗೆ ನಿರಂತರ ಷಡ್ಯಂತ್ರ ನಡೆಯುತ್ತಿದ್ದು ಇದು ಸಾಧ್ಯವಾಗದಂತೆ ತಡೆದು ನಿಲ್ಲಿಸಿರುವುದು ಡಾ.ಬಿ.ಆರ್.ಅಂಬೇಡ್ಕರ್ ಅವರ ಸಂವಿಧಾನ. ಈ ಕಾರಣಕ್ಕೇ ಸಂವಿಧಾನದ ಕುತ್ತಿಗಿಗೇ ಕೈ ಹಾಕಲಾಗುತ್ತಿದೆ. ಇದಕ್ಕೆ ಸುದ್ದಿ ಮಾಧ್ಯಮ ಮೂಕಸಾಕ್ಷಿಯಾಗಿರುವುದು ಅಪಾಯಕಾರಿ ಎಂದು ವಿಷಾದ ವ್ಯಕ್ತಪಡಿಸಿದರು.ಈ ಹೊತ್ತಿನ ಬಹಳ ಪತ್ರಕರ್ತರ ಕೈಯಲ್ಲಿ ವಿಚಾರ, ವಿಮರ್ಶೆಗಿಂತ ಹೆಚ್ಚಾಗಿ ಪೆಟ್ರೋಲ್, ಬೆಂಕಿಪಟ್ಟಣವೇ ಹೆಚ್ಚಾಗಿ ಕಂಡುಬರುತ್ತದೆ. ಕಡ್ಡಿ ಗೀರಿ ಬೆಂಕಿ ಹಚ್ಚುವ ಅವಕಾಶಕ್ಕಾಗಿ ಕಾಯುತ್ತಿರುವಂತೆ ಕಾಣುತ್ತಾರೆ. ಪ್ರಜಾಪ್ರಭುತ್ವದ ಪ್ರಾಣ ಪಕ್ಷಿ ಸುದ್ದಿ ಸಂಸ್ಥೆಗಳ ಕೈಯಲ್ಲಿದೆ. ಪ್ರಾಣ ಉಳಿಸುವುದು, ಬಿಡುವುದು ಇವರಿಗೇ ಬಿಟ್ಟಿದೆ ಎಂದು ತಿಳಿಸಿದ ಅವರು, ಇವತ್ತಿನ ಸುದ್ದಿ ಮಾಧ್ಯಮಗಳ ರಚನೆ ಮತ್ತು ಆಚರಣೆಯಲ್ಲಿ ಜಾತ್ಯತೀತತೆ ಆತ್ಮಹತ್ಯೆ ಮಾಡಿಕೊಂಡಿರುವುದರಿಂದ ಅಂಬೇಡ್ಕರ್ ದೃಷ್ಟಿಕೋನದ ಮರ್ಯಾದೆಗೇಡು ಹತ್ಯೆ ನಡೆಯುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.
ದೇಶದಲ್ಲಿ ಎರಡು ತದ್ವಿರುದ್ದವಾದ ಬೆಳವಣಿಗೆಗಳು ಅತೀ ವೇಗವಾಗಿ ನಡೆಯುತ್ತಿವೆ. ಒಂದು ಅಂಬೇಡ್ಕರ್ ಅವರ ವಿಗ್ರಹಗಳನ್ನು ಅತೀ ಹೆಚ್ಚು ನಿರ್ಮಿಸುತ್ತಲೇ ಅಂಬೇಡ್ಕರ್ ಅವರ ವಿಚಾರಗಳನ್ನು ಕೊಲ್ಲುವ ಪ್ರಕ್ರಿಯೆ ಕೂಡ ಹೆಚ್ಚು ವೇಗ ಪಡೆದುಕೊಂಡಿದೆ.ವಿಗ್ರಹಗಳನ್ನುಸ್ಥಾಪಿಸಿ,ವಿಚಾರಗಳನ್ನುಕೊಲ್ಲುವಈವಿದ್ಯಮಾನಕ್ಕೆಸುದ್ದಿಮಾಧ್ಯಮ“ಮೂಕಸಾಕ್ಷಿ”ಯಾಗಿದೆ ಎಂದು ಹೇಳಿದರು.ಸಂವಿಧಾನದಿಂದ “ಜಾತ್ಯತೀತ ಮತ್ತು ಸಮಾಜವಾದ” ಎನ್ನುವ ಮೌಲ್ಯವನ್ನು ಕೀಳಬೇಕು ಎನ್ನುವ ಕೂಗಿನ ಹಿಂದೆ ಇರುವುದೂ ಕೂಡ ಅಂಬೇಡ್ಕರ್ ಪ್ರತಿಮೆಯನ್ನು ವಿರೂಪಗೊಳಿಸುವ ವಿಕೃತ ಮನಸ್ಥಿತಿಯೇ ಆಗಿದೆ ಎಂದು ವಿಶ್ಲೇಷಿಸಿದರು.ಒಂದು ಕಡೆ ಮಾಧ್ಯಮಗಳಲ್ಲಿ ದಲಿತ ಸಮುದಾಯದ ಪ್ರತಿನಿಧ್ಯವೇ ಇಲ್ಲ ಎನ್ನುವ ಅಧ್ಯಯನ ವರದಿಗಳು ಬಂದಿವೆ. ನಿರ್ಣಾಯಕ ಸ್ಥಾನಗಳಲ್ಲಿ ಮಹಿಳೆಯರಿಗೆ, ದಲಿತರಿಗೆ ಸುದ್ದಿ ಸಂಸ್ಥೆಗಳು ನಿಷೇಧ ಹೇರಿವೆ ಎನ್ನುವ ವರದಿಗಳೂ ಕೂಡ ಇವೆ. ಈ ತಾರತಮ್ಯ ಸುದ್ದಿಗಳ, ಸಂಗತಿಗಳ ಆಯ್ಕೆಯ ಮೇಲೆ ಪರಿಣಾಮ ಬೀರುತ್ತವೆ. ಮಾತ್ರವಲ್ಲದೆ ಪತ್ರಿಕೆಗಳನ್ನು ರೂಪಿಸುವ ಮತ್ತು ಸುದ್ದಿಗಳನ್ನು ಗ್ರಹಿಸುವುದರಲ್ಲಿ ಮತ್ತು ಮಂಡಿಸುವುದರಲ್ಲೂ ಅಂಬೇಡ್ಕರ್ ದೃಷ್ಟಿಕೋನ ಕಾಣೆಯಾಗಿದೆ. ಆದ್ದರಿಂದ ಅಂಬೇಡ್ಕರ್ ಅವರ ದೃಷ್ಟಿಕೋನದ ಮರುಸ್ಥಾಪನೆ ಮತ್ತು ಸುದ್ದಿ ಮಾಧ್ಯಮಗಳಲ್ಲಿ ನಾಪತ್ತೆಯಾಗಿರುವ ಕಾಳಜಿಗಳ ಮರು ಶೋಧನೆ ಆಗುವ ಅಗತ್ಯವಿದೆ ಎಂದು ಹೇಳಿದರು.ವಿಧಾನ ಪರಿಷತ್ ಸದಸ್ಯ ಕೆ.ಎಸ್.ನವೀನ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಬಾಬಾ ಸಾಹೇಬ್ ಅಂಬೇಡ್ಕರ್ ಕೇವಲ ಪುಸ್ತಕದ ವಿಷಯವಾಗದೇ, ಬದುಕಿನ ವಿಷಯವಾಗಬೇಕು. ಬದುಕಿನ ಪ್ರತಿ ಹೆಜ್ಜೆಯಲ್ಲಿಯೂ ಡಾ.ಬಿ.ಆರ್.ಅಂಬೇಡ್ಕರ್ ಅವರ ವಿಚಾರಧಾರೆ ಪಾಲಿಸೋಣ ಎಂದು ಹೇಳಿದರು.ದೇಶಕ್ಕೆ ಭದ್ರವಾದ ಅಡಿಪಾಯ ಭಾರತ ಸಂವಿಧಾನ. ಇಡೀ ವಿಶ್ವದ ಎರಡನೇ ದೊಡ್ಡ ಆರ್ಥಿಕ ಶಕ್ತಿಯಾಗಿ 2038ಕ್ಕೆ ಭಾರತ ಹೊರಹೊಮ್ಮಲಿದೆ ಎಂಬುದಾಗಿ ಬ್ರಿಟೀಷ್ ಸಂಸ್ಥೆ ಹೇಳಿದ್ದು, ಇದಕ್ಕೆ ಕಾರಣ ಡಾ.ಬಿ.ಆರ್.ಅಂಬೇಡ್ಕರ್ ನೀಡಿರುವ ಸಂವಿಧಾನ ಸಮಾನತೆ ಎಂದು ಹೇಳಿದರು.ಮಾಧ್ಯಮ ಸರ್ವಸ್ಪರ್ಶಿ, ಸರ್ವ ವ್ಯಾಪ್ತಿಯಾಗಿರುವ ಒಂದು ಕಾಯಕ. ಮಾಧ್ಯಮದಲ್ಲಿ ಬರುವ ವಿಷಯಗಳನ್ನು ಎಲ್ಲರೂ ಸಮಾನ ರೀತಿಯಲ್ಲಿ ಓದುವ ಹಾಗೂ ಅರ್ಥೈಸಿಕೊಳ್ಳುವ ಕೆಲಸ ಮಾಡಲಿದ್ದಾರೆ. ಹಾಗಾಗಿ ಪತ್ರಿಕೋದ್ಯಮದಲ್ಲಿ ಸೇವೆ ಸಲ್ಲಿಸುವ ಇಚ್ಛೆ ಇರುವ ಯುವ ಪತ್ರಕರ್ತರು “ಸುದ್ದಿ ಮಾಧ್ಯಮದಲ್ಲಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ದೃಷ್ಠಿಕೋನ, ವಿಚಾರಧಾರೆಗಳನ್ನು ಸಾರ್ವಜನಿಕರಿಗೆ ಪ್ರಸ್ತುತ ಪಡಿಸುತ್ತಿದ್ದರು ಎಂಬ ಘಟನಾವಳಿಗಳ ಮಾಹಿತಿಯನ್ನು ಸಂಪನ್ಮೂಲ ವ್ಯಕ್ತಿಗಳಿಂದ ಪಡೆದು, ಜಿಲ್ಲೆಯ ಪತ್ರಕರ್ತರು ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಉತ್ತಮ ಹೆಸರು ಗಳಿಸಿ, ಕೀರ್ತಿ ತರಬೇಕು ಎಂದು ಆಶಯ ವ್ಯಕ್ತಪಡಿಸಿದರು.
ಹಿರಿಯ ಪತ್ರಕರ್ತ ಡಿ.ಉಮಾಪತಿ ಅವರು ದಿಕ್ಸೂಚಿ ಭಾಷಣ ಮಾಡಿ, ಬಾಬಾ ಸಾಹೇಬರು ಕೇವಲ ದಲಿತ ಸಮುದಾಯ ಮಾತ್ರವಲ್ಲ. ಎಲ್ಲ ವರ್ಗದ ಮಹಿಳೆಯರ ಸಾಮಾಜಿಕ ನ್ಯಾಯಕ್ಕಾಗಿ ಶ್ರಮಿಸಿದ ಚೇತನ. ದುಃಖಿತರ ಸ್ವಾತಂತ್ರ್ಯಕ್ಕಾಗಿ ಹೋರಾಡಿದರು. ಹೊಸ ದೇಶ, ಕನಸಿನ ಭಾರತ ದೂರದಲ್ಲೂ ಕಾಣದ ಪರಿಸ್ಥಿತಿ ಇದೆ. ಆರ್ಥಿಕ, ಸಾಮಾಜಿಕ ಸಮಾನತೆ ಇಲ್ಲದ ರಾಜಕೀಯ ಸಮಾನತೆ ಉಪಯೋಗವಿಲ್ಲ ಎಂದರು.ಮಾಧ್ಯಮದಲ್ಲೂ ಮೇಲ್ಮಟ್ಟದಲ್ಲಿ ಸವರ್ಣೀಯರ ಸಂಖ್ಯೆ ಹೆಚ್ಚಿದೆ. ಪ್ರಮುಖ ಮಾಧ್ಯಮಗಳಲ್ಲಿ ದಲಿತ ಸಂಪಾದಕರು ಇದ್ದಾರಾ ಎಂಬುದನ್ನು ಹುಡುಕಬೇಕಿದೆ. ಜಾಹೀರಾತು ಇಲ್ಲದೆ ಪತ್ರಿಕೆ ನಡೆಯುವುದಿಲ್ಲ ಎಂಬುದು ಈಗಿನ ವಾದ. ಆದರೆ, ಅಂಬೇಡ್ಕರ್ ಸಮಾಜಮುಖಿ ಹೊರತುಪಡಿಸಿ ಉಳಿದವನ್ನು ಜಾಹೀರಾತಲ್ಲೂ ಪ್ರಕಟಿಸುತ್ತಿರಲಿಲ್ಲ. ಆಗಿನ ಸಂದರ್ಭದಲ್ಲಿ ಭೀಮಾಸುರ, ದೇಶದ್ರೋಹಿ ಇತ್ಯಾದಿಯಾಗಿ ಸವರ್ಣೀಯ ಪತ್ರಿಕೆಗಳು ಅವಮಾನಿಸಿದವು. ಈಗಲೂ ದಾಸ್ಯದಿಂದ ಹೊರ ಬರಲು ಸಾಧ್ಯವಾಗಿಲ್ಲ ಎಂದರು.ದಲಿತರಿಗೆ ಪ್ರತ್ಯೇಕ ಮತಕ್ಷೇತ್ರಗಳು ಸಿಗಬೇಕು. ಇಲ್ಲದಿದ್ದರೆ ದಲಿತರಿಗೆ ಪಾತಿನಿಧ್ಯಕ್ಕೆ ಅರ್ಥ ಇರುವುದಿಲ್ಲ. ದಲಿತ ಹಿತಾಸಕ್ತಿ ಕಾಪಾಡಲು ಸಾಧ್ಯವಿಲ್ಲ ಎಂದು ತಿಳಿಸಿದ ಅವರು ಡಾ.ಬಿ.ಆರ್.ಅಂಬೇಡ್ಕರ್ ಅವರ ವಿಚಾರಧಾರೆಗಳನ್ನು ಪತ್ರಿಕೋದ್ಯಮದಲ್ಲಿ ಪ್ರತಿಪಾದಿಸಬೇಕು ಎಂದು ಅಭಿಪ್ರಾಯಪಟ್ಟರು.ಕರ್ನಾಟಕ ಮಾಧ್ಯಮ ಅಕಾಡೆಮಿ ಅಧ್ಯಕ್ಷೆ ಆಯೇಶಾ ಖಾನಂ ಪ್ರಾಸ್ತಾವಿಕವಾಗಿ ಮಾತನಾಡಿ, ಸಾಮಾಜಿಕ ನ್ಯಾಯದ ಕುರಿತು ಮಾತನಾಡುತ್ತೇವೆ. ಆದರೆ, ಅನುಷ್ಠಾನ ಪರಿಣಾಮವಾಗಿ ಆಗುತ್ತಿಲ್ಲ. ಅಂಬೇಡ್ಕರ್ ಚಿಂತನೆಯೊಂದಿಗೆ ಯುವ ಪತ್ರಕರ್ತರನ್ನು ಮತ್ತಷ್ಟು ಸಮಾಜಮುಖಿಯಾಗಿ ತೊಡಗುವಂತೆ ಮಾಡುವ ನಿಟ್ಟಿನಲ್ಲಿ ಅಕಾಡೆಮಿ ಕಾರ್ಯ ನಿರ್ವಹಿಸಲಿದೆ. ಈ ಬಾರಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಕಾಡೆಮಿಗೆ ಉತ್ತಮ ಅನುದಾನ ನೀಡಿದ್ದಾರೆ. ಹೀಗಾಗಿ ಅಕಾಡೆಮಿ ವತಿಯಿಂದ ಪತ್ರಕರ್ತರಿಗಾಗಿ, ಯುವ ಪೀಳಿಗೆಗೆ ಅತ್ಯುತ್ತಮ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಸಾಧ್ಯವಾಗುತ್ತಿದೆ. ಪತ್ರಕರ್ತರು ಪ್ರಶ್ನಿಸುವ, ಸಮಾಜ ತಿದ್ದುವ ಕಾರ್ಯದಲ್ಲಿ ತೊಡಗಿದ್ದಾರೆ. ಆದರೆ, ಯುವ ಪತ್ರಕರ್ತರಿಗೆ ಸುದ್ದಿ ಮನೆಯ ಒಳಗೂ, ಹೊರಗೂ ಕಾರ್ಯನಿರ್ವಹಣೆ ಕುರಿತು ಹಿರಿಯರ ಮಾರ್ಗದರ್ಶನ ಅಗತ್ಯವಿದೆ ಎಂದರು.ಕಾರ್ಯಕ್ರಮದಲ್ಲಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಂ.ಕೆ.ತಾಜ್ಪೀರ್, ಕರ್ನಾಟಕ ಎಸ್.ಸಿ, ಎಸ್.ಟಿ ಸಂಪಾದಕರ ಸಂಘದ ಅಧ್ಯಕ್ಷ ಚೆಲುವರಾಜ್, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಬಿ.ದಿನೇಶ್ ಗೌಡಗೆರೆ, ಜಿಲ್ಲಾ ವಾರ್ತಾಧಿಕಾರಿ ಬಿ.ವಿ.ತುಕಾರಾಂರಾವ್, ಕರ್ನಾಟಕ ಮಾಧ್ಯಮ ಅಕಾಡೆಮಿ ಕಾರ್ಯದರ್ಶಿ ಎಂ.ಸಹನಾ, ಸದಸ್ಯರಾದ ಎಂ.ಎನ್.ಅಹೋಬಳಪತಿ, ಕೆ.ನಿಂಗಜ್ಜ, ಮಂಜುನಾಥ್, ಡಾ.ಶಿವಕುಮಾರ್ ಕಣಸೋಗಿ, ಜಿಲ್ಲಾ ಗ್ಯಾರಂಟಿ ಯೋಜನಾ ಪ್ರಾಧಿಕಾರದ ಉಪಾಧ್ಯಕ್ಷ ಡಿ.ಎನ್.ಮೈಲಾರಪ್ಪ, ಸೇರಿದಂತೆ ಪತ್ರಕರ್ತರು ಇದ್ದರು.
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ಹೌದು, ನಿಮ್ಮ ಊರಿನಲ್ಲಿ ಜಾತ್ರೆ, ಸಭೆ, ಸಮಾರಂಭಗಳು ನಡೆದರೆ ಅದನ್ನು ಬಯಲುಸೀಮೆಟೈಮ್ಸ್.ಕಾಂ ಮೂಲಕ ನಾಡಿಗೆ ತಿಳಿಸಿ. ಅಷ್ಟೇ ಅಲ್ಲ ನಿಮ್ಮೂರಿನ ರಸ್ತೆ, ಚರಂಡಿ, ಆಸ್ಪತ್ರೆ , ಶಾಲೆ ಯಾವುದೇ ಸಮಸ್ಯೆ ಇದ್ದರೂ ಅಧಿಕಾರಿಗಳ ಕಣ್ಣು ತೆರೆಯುವಂತೆ ಸುದ್ದಿ ಮಾಡಿ. ನೀವು ಜಸ್ಟ್ ನಮ್ಮ ವಾಟ್ಸ್ ಆಪ್ ಸಂಖ್ಯೆಗೆ ಸುದ್ದಿ ಕಳುಹಿಸಿ ಉಳಿದದ್ದನ್ನು ಬಯಲುಸೀಮೆಟೈಮ್ಸ್.ಕಾಂ ಮಾಡಲಿದೆ. ನಮ್ಮ ವಾಟ್ಸ್ ಆಪ್ ಸಂಖ್ಯೆ: +91 96201 39796
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.







