ಚಿತ್ರದುರ್ಗ: ಸಮೀಕ್ಷೆಗೆ ಸಿದ್ಧಪಡಿಸಿರುವ ಪರಿಶಿಷ್ಟ ಜಾತಿಗಳ ಪಟ್ಟಿಯಲ್ಲಿರುವ ಎಸ್ಸಿ ಕ್ರೈಸ್ತ ಜಾತಿಗಳನ್ನು ಸರ್ಕಾರ ಕೂಡಲೇ ಕೈ ಬಿಡಬೇಕು. ಇಲ್ಲವಾದರೆ ಎಲ್ಲ ಜಿಲ್ಲೆಗಳಲ್ಲಿ ದಲಿತರು ಬೀದಿಗಿಳಿಯಬೇಕಾಗುತ್ತದೆ ಈ ಬಗ್ಗೆ ಆಯೋಗ ಈ ಕೂಡಲೇ ಸ್ಪಷ್ಟನೆ ಕೊಡಬೇಕು ಎಂದು ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಮೋಹನ್ ಕುಮಾರ್ ಆಗ್ರಹಿಸಿದ್ದಾರೆ.ಈ ಬಗ್ಗೆ ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಕಳೆದ ಆಗಸ್ಟ್ 23 ರಂದು ರಾಜ್ಯ ಹಿಂದುಳಿದ ವರ್ಗಗಳ ಆಯೋಗ 4 ಪುಟಗಳ ಜಾಹೀರಾತನ್ನು ಪತ್ರಿಕೆಗಳಿಗೆ ಕೊಟ್ಟು ಸಮೀಕ್ಷೆಗೆ ಸಿದ್ಧಪಡಿಸಿರುವ 1400 ಜಾತಿಗಳ ಪಟ್ಟಿ ಘೋಷಿಸಿತು . ಆ ಪಟ್ಟಿಯಲ್ಲಿ 48 ಹಿಂದೂ ಜಾತಿಗಳನ್ನು ಕ್ರಿಶ್ಚಿಯನ್ ಎಂದು ಗುರುತಿಸಲಾಗಿತ್ತು. ಈ 48 ಜಾತಿಗಳಲ್ಲಿ 15 SC ಜಾತಿಗಳು 1 ST (ವಾಲ್ಮೀಕಿ ಕ್ರಿಶ್ಚಿಯನ್ ) ಜಾತಿಗಳಿದ್ದವು . ರಾಜ್ಯದಾದ್ಯಂತ ತೀವ್ರ ಸ್ವರೂಪದ ಹೋರಾಟ ನೆಡೆದ ನಂತರ ನಿನ್ನೆ ಆಯೋಗದ ಅಧ್ಯಕ್ಷರು 33 ಹಿಂದೂ ಜಾತಿಗಳನ್ನು ಕ್ರೈಸ್ತ ಪಟ್ಟಿಯಿಂದ ಸಮೀಕ್ಷೆಗೆ ಬಳಸುವ App ನಲ್ಲಿ ‘ Hide ‘ ಮಾಡಿರುವುದಾಗಿ ಹೇಳಿದ್ದಾರೆ.
ಹೀಗೆ ಅಧಿಕೃತವಾಗಿ ತೆಗೆಯದೇ ಉಳಿದಿರುವ ಜಾತಿಗಳೆಲ್ಲವೂ ಪರಿಶಿಷ್ಟ ಜಾತಿಗಳೇ ಆಗಿರುವುದು ಆತಂಕದ ಬೆಳವಣಿಗೆಯಾಗಿದೆ ಎಂದು ಹೇಳಿದ್ದಾರೆ.
* ಆದಿ ಆಂಧ್ರ ಕ್ರಿಶಿಯನ್
* ಆದಿ ಕರ್ನಾಟಕ ಕ್ರಿಶ್ಚಿಯನ್
* ಆದಿದ್ರಾವಿಡ ಕ್ರಿಶ್ಚಿಯನ್
* ಬಂಜಾರ ಕ್ರಿಶ್ಚಿಯನ್
* ಬುಡುಗ ಜಂಗಮ ಕ್ರಿಶ್ಚಿಯನ್
* ಹೊಲೆಯ ಕ್ರಿಶ್ಚಿಯನ್
* ಲಮಾಣಿ ಕ್ರಿಶ್ಚಿಯನ್
* ಲಂಬಾಣಿ ಕ್ರಿಶ್ಚಿಯನ್
* ಮಾದಿಗ ಕ್ರಿಶ್ಚಿಯನ್
* ಮಹಾರ್ ಕ್ರಿಶ್ಚಿಯನ್
* ಮಾಲಾ ಕ್ರಿಶ್ಚಿಯನ್
* ಪರಯ ಕ್ರಿಶ್ಚಿಯನ್
* ವಡ್ಡ ಕ್ರಿಶ್ಚಿಯನ್
* ವಾಲ್ಮೀಕಿ ಕ್ರಿಶ್ಚಿಯನ್
ಈ ಜಾತಿಗಳ ಕ್ರಿಶ್ಚಿಯನ್ ಟ್ಯಾಗ್ ಅನ್ನು ಸಮೀಕ್ಷೆಯ ಆ್ಯಪ್ ನಲ್ಲಿ ಕಿತ್ತು ಹಾಕಿದ ಅಧಿಕೃತ ಪ್ರಕಟಣೆಯನ್ನು ಈಗಲೇ ಅಯೋಗ ಕೊಡಬೇಕು ಎಂದು ಆಗ್ರಹಿಸಿದ್ದಾರೆ.ಈ ವಿಷಯದಲ್ಲಿ ಅತ್ಯಂತ ಜವಾಬ್ದಾರಿಯುತ ಸಂಸ್ಥೆಯಾದ ಹಿಂದುಳಿದ ವರ್ಗಗಳ ಆಯೋಗ 33 ಕ್ರೈಸ್ತ ಜಾತಿಗಳ ಬಗ್ಗೆ ಸ್ಪಷ್ಟನೆ ಕೊಟ್ಟು , ಉಳಿದ 13 ದಲಿತ ಕ್ರೈಸ್ತ ಜಾತಿಗಳ ಬಗ್ಗೆ ಸ್ಪಷ್ಟನೆ ಕೊಡದೆ , ಕತ್ತಲಲ್ಲಿ ಇಟ್ಟಿರುವುದು ಸಮರ್ಥನೀಯವಲ್ಲ.ಇವತ್ತಿನಿಂದ ಸಮೀಕ್ಷೆ ಆರಂಭವಾಗಬೇಕಿದೆ. ಆದರೆ ಪರಿಶಿಷ್ಟ ಜಾತಿಗಳಲ್ಲಿ ಗೊಂದಲಗಳೂ ಹಾಗೆ ಉಳಿದಿವೆ ಅಂದರೆ ಈ ಜಾತಿ ಸಮೀಕ್ಷೆಗೆ ಗೌರವ ಎಲ್ಲಿಂದ ಬರುತ್ತದೆ ಎಂದು ಪ್ರಶ್ನಿಸಿದ್ದಾರೆ.ದಲಿತರ ನಡುವೆ ಕ್ರೈಸ್ತ ಜಾತಿಗಳನ್ನು ಸೇರಿಸಿಕೊಂಡು ಜಾತಿ ಸಮೀಕ್ಷೆ ಮಾಡುವುದು ಸಂವಿಧಾನ ವಿರೋಧಿಯಾದದ್ದು. ಸಂವಿಧಾನದ 341ನೇ ವಿಧಿಯ ಅನ್ವಯ ಇಲ್ಲದ ಜಾತಿಪಟ್ಟಿ ಹಿಡಿದು ಸಮೀಕ್ಷೆ ಮಾಡಲು ನಾವು ಬಿಡುವುದಿಲ್ಲ . ಕ್ರಮಬದ್ಧತೆಯೇ ಇಲ್ಲದ ಈ ಜಾತಿ ಸಮೀಕ್ಷೆಯ ಗೊಂದಲದ ಹಿಂದೆ ಕೊಳಕು ರಾಜಕಾರಣದ ಹುನ್ನಾರ ಇದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.ಎರಡು ತಿಂಗಳ ಹಿಂದೆಯಷ್ಟೆ ನ್ಯಾ ನಾಗ ಮೋಹನ್ ದಾಸ್ ಆಯೋಗ ಪರಿಶಿಷ್ಟ ಜಾತಿಗಳ ಸಮಗ್ರ ಸಮೀಕ್ಷೆ ಮಾಡಿದೆ. ಅದಕ್ಕೆ ದಲಿತರ ಮೀಸಲು ನಿಧಿಯಿಂದ 150 ಕೋಟಿ ರೂ ವ್ಯಯಿಸಲಾಗಿದೆ . ಈಗ ಮತ್ತೆ ದಲಿತರ ಸಮೀಕ್ಷೆ ಮಾಡುವ ಅಗತ್ಯ ಏನಿದೆ..? ಎರಡು ತಿಂಗಳಲ್ಲಿ ದಲಿತರ ಸಾಮಾಜಿಕ , ಶೈಕ್ಷಣಿಕ ಸ್ಥಿತಿಯಲ್ಲಿ ಯಾವ ಬದಲಾವಣೆ ಆಗಿರುತ್ತದೆ ? ಪರಿಶಿಷ್ಟ ಜಾತಿಗಳ ಪಟ್ಟಿಯಲ್ಲಿ ಕ್ರೈಸ್ತರ ಸೇರ್ಪಡೆಯಿಂದ ಸಮೀಕ್ಷೆ ನಗೆಪಾಟಲಿಗೆ ಗುರಿಯಾಗಿದೆ . ಸರ್ಕಾರ ಇಡೀ ಪ್ರಕ್ರಿಯೆಯನ್ನು ಗಂಭೀರವಾಗಿ ಪರಿಗಣಿಸಿಲ್ಲ . ಹೈಕಮಾಂಡ್ ಅನ್ನು ಓಲೈಸಲು ಸಾಮಾಜಿಕ ನ್ಯಾಯದ ಹಿತವನ್ನು ಬಲಿಕೊಡಲಾಗಿದೆ.ಒಳ ಮೀಸಲಾತಿಯ ವರ್ಗೀಕರಣದ ವಿಷಯ ಇನ್ನೂ ಬಗೆಹರಿದಿಲ್ಲ . ಸರ್ಕಾರ 59 ಅಲೆಮಾರಿ ಜಾತಿಗಳನ್ನು ಬೀದಿ ಪಾಲು ಮಾಡಿದೆ . AK , AD , AA ಜಾತಿಗಳ ಸಮಸ್ಯೆಯೂ ಬಗೆಹರಿದಿಲ್ಲ . ಹೀಗಿರುವಾಗ ಈ ಸಮೀಕ್ಷೆಯಲ್ಲಿ ಆದಿ ದ್ರಾವಿಡ ಕ್ರೈಸ್ತ , ಆದಿ ಕರ್ನಾಟಕ ಕ್ರೈಸ್ತ , ಆದಿ ಆಂಧ್ರ ಕ್ರೈಸ್ತ , ಮಾದಿಗ ಕ್ರೈಸ್ತ , ಹೊಲೆಯ ಕ್ರೈಸ್ತ , ಪರೆಯ ಕ್ರೈಸ್ತ , ಬಂಜಾರ ಕ್ರೈಸ್ತ , ವಡ್ಡ ಕ್ರೈಸ್ತ ಜಾತಿಗಳನ್ನು ಸೇರಿಸಿಕೊಂಡು ಸಮೀಕ್ಷೆ ನೆಡಸಿದರೆ ಫಲಿತಾಂಶ ಏನಾದೀತು..? ಸರ್ಕಾರದ ಉದ್ದೇಶವಾದರೂ ಏನು ? ಎರಡು ತಿಂಗಳ ಹಿಂದೆ ಇಲ್ಲದ ಜಾತಿಗಳು ಈಗ ಹೇಗೆ ಬಂದವು..? ಎಸ್ಸಿ ಪಟ್ಟಿಯಲ್ಲಿ ಕ್ರೈಸ್ತ ಜಾತಿಗಳು ನುಸುಳಿವೆ ಎಂದರೆ ಈ ಬೇಜವಾಬ್ದಾರಿಗೆ ಯಾರು ಹೊಣೆ..? ಎಂದು ಸರಣಿ ಪ್ರಶ್ನೆಗಳು ಕೇಳಿದ್ದಾರೆ.ಅನಧಿಕೃತವಾಗಿದ್ದ ಕುರುಬ ಕ್ರೈಸ್ತ , ಒಕ್ಕಲಿಗ ಕ್ರೈಸ್ತ , ಲಿಂಗಾಯತ ಕ್ರೈಸ್ತ ಇತ್ಯಾದಿ ಪ್ರಬಲ ಜಾತಿಗಳನ್ನು ಪಟ್ಟಿಯಿಂದ ತೆಗೆದ ಸರ್ಕಾರ ಹೊಲೆಯ ಕ್ರೈಸ್ತ , ಮಾದಿಗ ಕ್ರೈಸ್ತ , ಬಂಜಾರ ಕ್ರೈಸ್ತ ಜಾತಿಗಳನ್ನು ಉಳಿಸಿರುವುದರ ಹಿಂದೆ ಷಡ್ಯಂತ್ರವಿದೆ . ಇಡೀ ಒಳಮೀಸಲಾತಿಯ ಹಂಚಿಕೆಯನ್ನು ದಿಕ್ಕು ತಪ್ಪಿಸಲು ಸರ್ಕಾರ ಹೊರಟಿದೆ.ಸಮೀಕ್ಷೆಗೆ ಸಿದ್ಧಪಡಿಸಿರುವ ಪರಿಶಿಷ್ಟ ಜಾತಿಗಳ ಪಟ್ಟಿಯಲ್ಲಿರುವ ಎಸ್ಸಿ ಕ್ರೈಸ್ತ ಜಾತಿಗಳನ್ನು ಸರ್ಕಾರ ಕೂಡಲೇ ಕೈ ಬಿಡಬೇಕು . ಇಲ್ಲವಾದರೆ ಎಲ್ಲ ಜಿಲ್ಲೆಗಳಲ್ಲಿ ದಲಿತರು ಬೀದಿಗಿಳಿಯಬೇಕಾಗುತ್ತದೆ ಎಂದು ಎಚ್ಚರಿಕೆಯನ್ನು ಕೊಡುತ್ತಿದ್ದೇವೆ.ಆಯೋಗ ಈ ಕೂಡಲೇ ಸ್ಪಷ್ಟನೆ ಕೊಡಬೇಕು. ಅಧಿಕೃತ ಪ್ರಕಟಣೆಯಲ್ಲಿ ಪರಿಶಿಷ್ಟ ಜಾತಿಗಳ ಕ್ರೈಸ್ತ ಟ್ಯಾಗ್ ತೆಗೆಯಬೇಕು ಎಂದು ಮೂಲಕ ರಾಜ್ಯ ಸರ್ಕಾರಕ್ಕೆ ಆಗ್ರಹ ಪಡಿಸುತ್ತಿದ್ದೇವೆ ಎಂದು ತಿಳಿಸಿದ್ದಾರೆ.
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ಹೌದು, ನಿಮ್ಮ ಊರಿನಲ್ಲಿ ಜಾತ್ರೆ, ಸಭೆ, ಸಮಾರಂಭಗಳು ನಡೆದರೆ ಅದನ್ನು ಬಯಲುಸೀಮೆಟೈಮ್ಸ್.ಕಾಂ ಮೂಲಕ ನಾಡಿಗೆ ತಿಳಿಸಿ. ಅಷ್ಟೇ ಅಲ್ಲ ನಿಮ್ಮೂರಿನ ರಸ್ತೆ, ಚರಂಡಿ, ಆಸ್ಪತ್ರೆ , ಶಾಲೆ ಯಾವುದೇ ಸಮಸ್ಯೆ ಇದ್ದರೂ ಅಧಿಕಾರಿಗಳ ಕಣ್ಣು ತೆರೆಯುವಂತೆ ಸುದ್ದಿ ಮಾಡಿ. ನೀವು ಜಸ್ಟ್ ನಮ್ಮ ವಾಟ್ಸ್ ಆಪ್ ಸಂಖ್ಯೆಗೆ ಸುದ್ದಿ ಕಳುಹಿಸಿ ಉಳಿದದ್ದನ್ನು ಬಯಲುಸೀಮೆಟೈಮ್ಸ್.ಕಾಂ ಮಾಡಲಿದೆ. ನಮ್ಮ ವಾಟ್ಸ್ ಆಪ್ ಸಂಖ್ಯೆ: +91 96201 39796
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.







