ಚಿತ್ರದುರ್ಗ: ಚಳ್ಳಕೆರೆ ತಾಲ್ಲೂಕಿನ ಮೀರಾಸಾಬಿಹಳ್ಳಿಯ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಈಚೆಗೆ ವಿಶ್ವ ಸೊಳ್ಳೆ ದಿನ ಆಚರಿಸಲಾಯಿತು.ಈ ವೇಳೆ ಮಾತನಾಡಿದ ಆಡಳಿತ ವೈದ್ಯಾಧಿಕಾರಿ ಹೆಚ್.ಸಿ.ಗುರುಪ್ರಸಾದ್, 1897ರ ಆಗಸ್ಟ್ 20ರಂದು ಬ್ರಿಟಿಷ್ ಸೇನೆಯ ಸರ್ಜನ್ ಸರ್ ರೊನಾಲ್ಡ್ ರೋಲ್ಸ್ ಎನ್ನುವ ಜೀವ ವಿಜ್ಞಾನಿಯು ಜನರಿಗೆ ಮೃತ್ಯು ಕೂಪವೆನ್ನಿಸುವ ಮಲೇರಿಯಾ ರೋಗವು ಪ್ಯಾರಸೈಟ್ ಮೂಲಕ ಹರಡಲು ಅನಾಫೆಲಿಸ್ ಎನ್ನುವ ಹೆಣ್ಣು ಸೊಳ್ಳೆಯು ಕಾರಣವೆಂದು ಜಗತ್ತಿಗೆ ವಿವರಿಸಿದ ದಿನವಾಗಿದೆ. ಈ ಸೊಳ್ಳೆಯು ಇಷ್ಟೊಂದು ಭೀಕರ, ಆಘಾತಕಾರಿ ವ್ಯಾಧಿಯನ್ನು ಹರಡುತ್ತದೆ ಎಂಬ ಕಲ್ಪನೆಯು ಜನರಿಗೆ ಅದುವರೆಗೂ ಇರಲಿಲ್ಲ. ಹೀಗೆ ಅರಿವು ಮೂಡಿಸಿದ ಆ ವಿಜ್ಞಾನಿಯ ನೆನಪಿಗಾಗಿ ವಿಶ್ವ ಸೊಳ್ಳೆಗಳ ದಿವಸವೆಂದು ಆಚರಿಸಲಾಗುತ್ತದೆ ಎಂದು ತಿಳಿಸಿದರು.
ಸೊಳ್ಳೆಗಳು ನಿಂತ ನೀರಿನಲ್ಲಿ ಮಾತ್ರ ಮೊಟ್ಟೆಯನ್ನು ಇಡುತ್ತವೆ. ಮಳೆಗಾಲದಲ್ಲಿ ಹರಿದು ಹೋಗುವ ನೀರಿನಲ್ಲಿ ಇವು ಮೊಟ್ಟೆಯನ್ನು ಇಡುವುದಿಲ್ಲ. ಕೊಳ್ಳಗಳಲ್ಲಿ ತುಂಬಿಕೊಳ್ಳುವ ನೀರಿನಲ್ಲಿ ಮೊಟ್ಟೆಗಳನ್ನು ಇಟ್ಟು ಸಂತತಿ ಹೆಚ್ಚಿಸಿಕೊಳ್ಳುತ್ತವೆ. ಆದುದರಿಂದ ಸೊಳ್ಳೆಗಳ ಸಂತಾನೋತ್ಪತಿ ತಡೆಯಲು ಮನೆಯ ಸುತ್ತಮುತ್ತ ನೀರು ನಿಲ್ಲದಂತೆ ಎಚ್ಚರವಹಿಸಬೇಕು. ತೆಂಗಿನ ಚಿಪ್ಪು, ಬಳಸಲ್ಪಟ್ಟ ಟಯರ್ ವಿಲೇವಾರಿ ಮಾಡಬೇಕು. ಪ್ಲಾಸ್ಟಿಕ್ ಬಾಟಲಿಗಳನ್ನು ರಸ್ತೆಯ ಬದಿಯಲ್ಲಿ ಎಸೆಯಬಾರದು. ತಾರಸಿಯಲ್ಲಿ ನೀರಿನ ಕುಂಡದಲ್ಲಿ ನೀರು ನಿಲ್ಲದಂತೆ ಜಾಗೃತಿ ವಹಿಸಬೇಕು. ನೀರಿನ ಟ್ಯಾಂಕ್, ತೊಟ್ಟಿಗಳನ್ನು ಮುಚ್ಚಿಡಬೇಕು. ಪಾತ್ರೆಗಳಲ್ಲಿ ಇರುವ ನೀರನ್ನು ಪ್ರತಿ ದಿವಸವು ಬದಲಾಯಿಸಬೇಕು. ಎಲ್ಲ ಸೊಳ್ಳೆಗಳು ಕಚ್ಚುವುದಿಲ್ಲ. ಕೇವಲ ಹೆಣ್ಣು ಸೊಳ್ಳೆಗಳು ಮಾತ್ರ ಕಚ್ಚುತ್ತವೆ ಎಂದು ಹೇಳಿದರು.ಸೊಳ್ಳೆಗಳ ಕಡಿತ ತಪ್ಪಿಸಿಕೊಳ್ಳಲು ಸಂಪೂರ್ಣವಾಗಿ ಮೈಮುಚ್ಚುವ ಬಟ್ಟೆಗಳನ್ನು ಧರಿಸಬೇಕು. ರಾತ್ರಿ ಮಲಗುವಾಗ ಸೊಳ್ಳೆ ಪರದೆ ಬಳಸಬೇಕು. ಕಿಟಕಿ ಬಾಗಿಲುಗಳಿಗೆ ಮೆಶ್ ಅಳವಡಿಸಬೇಕು ಎಂದು ಹೇಳಿದರು.ಈ ಸಂದರ್ಭದಲ್ಲಿ ಅರೋಗ್ಯ ನಿರೀಕ್ಷಣಾಧಿಕಾರಿಗಳಾದ ಸಿ.ಎನ್.ನವೀನ್ ಕುಮಾರ್, ಪ್ರಾಥಮಿಕ ಸುರಕ್ಷತಾಧಿಕಾರಿಗಳಾದ, ಶಕುಂತಲಮ್ಮ, ಸಮುದಾಯ ಆರೋಗ್ಯ ಅಧಿಕಾರಿಗಳಾದ ಸ್ನೇಹ , ಶಬೀನ ಬಾನು, ಆರೋಗ್ಯ ಸಿಬ್ಬಂದಿಗಳ ಪೂರ್ಣಸಾಗರ, ಎಲ್ಲಾ ಆಶಾ ಕಾರ್ಯಕರ್ತರು ಹಾಗೂ ಗ್ರಾಮಸ್ಥರು ಭಾಗವಹಿಸಿದ್ದರು.
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ಹೌದು, ನಿಮ್ಮ ಊರಿನಲ್ಲಿ ಜಾತ್ರೆ, ಸಭೆ, ಸಮಾರಂಭಗಳು ನಡೆದರೆ ಅದನ್ನು ಬಯಲುಸೀಮೆಟೈಮ್ಸ್.ಕಾಂ ಮೂಲಕ ನಾಡಿಗೆ ತಿಳಿಸಿ. ಅಷ್ಟೇ ಅಲ್ಲ ನಿಮ್ಮೂರಿನ ರಸ್ತೆ, ಚರಂಡಿ, ಆಸ್ಪತ್ರೆ , ಶಾಲೆ ಯಾವುದೇ ಸಮಸ್ಯೆ ಇದ್ದರೂ ಅಧಿಕಾರಿಗಳ ಕಣ್ಣು ತೆರೆಯುವಂತೆ ಸುದ್ದಿ ಮಾಡಿ. ನೀವು ಜಸ್ಟ್ ನಮ್ಮ ವಾಟ್ಸ್ ಆಪ್ ಸಂಖ್ಯೆಗೆ ಸುದ್ದಿ ಕಳುಹಿಸಿ ಉಳಿದದ್ದನ್ನು ಬಯಲುಸೀಮೆಟೈಮ್ಸ್.ಕಾಂ ಮಾಡಲಿದೆ. ನಮ್ಮ ವಾಟ್ಸ್ ಆಪ್ ಸಂಖ್ಯೆ: +91 96201 39796
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.







