ಆಸ್ತಿಯಲ್ಲಿ ಭಾಗ ಕೇಳಿದ ತಂಗಿಯನ್ನೇ ಕುಡುಗೋಲಿಂದ ಕೊಚ್ಚಿ ಕೊಂದ ಅಣ್ಣ
ಧಾರವಾಡ: ತಂದೆಯ ಆಸ್ತಿಯಲ್ಲಿ ನನಗೂ ಭಾಗ ನೀಡಬೇಕೆಂದು ಹಠ ಹಿಡಿದಿದ್ದ ತಂಗಿಯನ್ನು ಅಣ್ಣನೇ ಕುಡುಗೋಲಿನಿಂದ ಕೊಚ್ಚಿಬರ್ಬರವಾಗಿ ಕೊಲೆಮಾಡಿರುವ ದುರ್ಘಟನೆ ಧಾರವಾಡ ಜಿಲ್ಲೆ ಅಮ್ಮಿನಬಾವಿಯಲ್ಲಿ ಯುಗಾದಿ ದಿನದಂದು ನಡೆದಿದೆ. ಹನುಮಂತ ಯಲಿವಾಳ (35) ಕೊಲೆ ಆರೋಪಿ. ಈತನ ತಂಗಿ ಶಿವಲೀಲಾ ಸಂಗೊಳ್ಳಿ (32) ಕೊಲೆಯಾದ ದುರ್ದೈವಿ. ಶಿವಲೀಲಾ ಅವರನ್ನು ಸಮೀಪದ ತಡಕೋಡ ಗ್ರಾಮಕ್ಕೆ ಮದುವೆ ಮಾಡಿಕೊಡಲಾಗಿತ್ತು. ಇವರಿಗೆ ಇಬ್ಬರು ಮಕ್ಕಳಿದ್ದಾರೆ. ತಾಯಿ ಸಾವಿನ ಬಳಿಕ ಅಣ್ಣ-ತಂಗಿ ಮಧ್ಯೆ ಆಸ್ತಿ ವಿಚಾರವಾಗಿ ಗಲಾಟೆ ಆಗಿತ್ತು. ಯುಗಾದಿ ದಿನ (ಗುರುವಾರ) ‘ತಂದೆಯ 4 ಎಕರೆ ಹೊಲದಲ್ಲಿ ನನಗೆ 2 ಎಕರೆ ನೀಡಬೇಕು’ ಎಂದು ಹೇಳಿ ಹೊಲದ ಪೂಜೆಗೆ ಹೋಗಿದ್ದಳು. ಈ ವೇಳೆ ಹನುಮಂತ ಹೊಲಕ್ಕೆ ತೆರಳಿ ಕುಡುಗೋಲಿನಿಂದ ಆಕೆಯನ್ನು ಕೊಚ್ಚಿ ಕೊಲೆ ಮಾಡಿದ್ದಾನೆ. ಪೊಲೀಸರು ಆರೋಪಿಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಕಳುಹಿಸಿದ್ದಾರೆ.
