ದಾವಣಗೆರೆ ದಕ್ಷಿಣದಲ್ಲಿ ‘ಶಿವ’ ನಡೆ ; ಯಾರಿಗೆ ಪ್ಲಸ್ ಯಾರಿಗೆ ಮೈನಸ್
ದಾವಣಗೆರೆ: ದಾವಣಗೆರೆ ದಕ್ಷಿಣ ವಿಧಾನ ಸಭಾ ಕ್ಷೇತ್ರದ ಚುನಾವಣೆ ಕಳೆದ 24 ಗಂಟೆಯಿಂದ ಅನಿರೀಕ್ಷಿತ ರೋಚಕ ತಿರುವು ಪಡೆಯುತ್ತಿದೆ. ಇದೀಗ ಶಿವಸೇನೆಯ ನಡೆ ಯಾರಿಗೆ ಪ್ಲಸ್ ಯಾರಿಗೆ ಮೈನಸ್ ಎಂಬ ಲೆಕ್ಕಚಾರ ಶುರುವಾಗಿದೆ. ಸದ್ಯಕ್ಕೆ
ಕೇಸರಿ ಪಾಳಯಕ್ಕೆ ಎದುರಾಗಿದ್ದ ಬಹುದೊಡ್ಡ ‘ಹಿಂದುತ್ವ’ದ ಕಂಟಕವೊಂದು ದಿಢೀರ್ ದೂರವಾಗಿದೆ.
ಉಪಚುನಾವಣೆಗೆ ಸ್ಪರ್ಧಿಸಲು ಸಜ್ಜಾಗಿದ್ದ ಶಿವಸೇನೆ (ಶಿಂಧೆ ಬಣ) ಕೊನೆಯ ಕ್ಷಣದಲ್ಲಿ ಚುನಾವಣಾ ಕಣದಿಂದ ಹಿಂದೆ ಸರಿಯುವ ನಿರ್ಧಾರ ಕೈಗೊಂಡಿದೆ. ಈ ನಿರ್ಧಾರ ರಾಜ್ಯ ರಾಜಕೀಯದಲ್ಲಿ ಚರ್ಚೆಗೆ ಕಾರಣವಾಗಿದೆ.
ಆರಂಭದಲ್ಲಿ ಶಿವಸೇನೆ ಈ ಕ್ಷೇತ್ರದಲ್ಲಿ ಸ್ಪರ್ಧಿಸುವುದಾಗಿ ಘೋಷಿಸಿತ್ತು. ಇಂದು ನಾಮಪತ್ರ ಸಲ್ಲಿಸಲು ಕೂಡ ಸಕಲ ಸಿದ್ಧತೆ ನಡೆಸಲಾಗಿತ್ತು. ಪಕ್ಷದ ಕಾರ್ಯಕರ್ತರು ಮತ್ತು ನಾಯಕರು ಚುನಾವಣಾ ಪ್ರಚಾರಕ್ಕೂ ಸಿದ್ಧರಾಗಿದ್ದರು.
ಶಿವಸೇನೆ ಸ್ಪರ್ಧಿಸುವ ನಿರ್ಧಾರ ಬಿಜೆಪಿ ವಲಯದಲ್ಲಿ ಜಾಸ್ತಿ ಅಲ್ಲದಿದ್ದರೂ ಸ್ವಲ್ಪರ ಮಟ್ಟಿಗೆ ಮತ ವಿಭಜನೆಯಾಗುವ ಸಾಧ್ಯತೆ ಇತ್ತು ಎನ್ನುವುದು ರಾಜಕೀಯ ವಲಯದಲ್ಲಿ ಕೇಳಿಬಂದಿದೆ. ಕಾರಣ, ಇಬ್ಬರೂ ಪಕ್ಷಗಳು ಹಿಂದುತ್ವದ ಮತಗಳನ್ನು ಗುರಿಯಾಗಿಸಿಕೊಂಡಿವೆ. ಶಿವಸೇನೆ ಕಣಕ್ಕಿಳಿದರೆ, ಹಿಂದುತ್ವ ಮತಗಳು ವಿಭಜನೆಯಾಗುವ ಸಾಧ್ಯತೆ ಇದೆ ಎಂಬುದನ್ನು ಬಿಜೆಪಿ ನಾಯಕರು ಅರಿತಿದ್ದರು. ಇದರಿಂದಾಗಿ ಚುನಾವಣಾ ಫಲಿತಾಂಶದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಸಹ ಇತ್ತು.
ಹಿಂದುತ್ವ ಮತಗಳ ವಿಭಜನೆಯ ಆತಂಕ ಕಡಿಮೆಯಾಗಿದ್ದು, ಬಿಜೆಪಿಗೆ ಲಾಭವಾಗಬಹುದು ಎಂಬ ರಾಜಕೀಯ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ. ಇನ್ನೊಂದೆಡೆ, ಇತರ ಪಕ್ಷಗಳು ಈ ಬೆಳವಣಿಗೆಯನ್ನು ತಮ್ಮ ಲಾಭಕ್ಕೆ ಬಳಸಿಕೊಳ್ಳಲು ಪ್ರಯತ್ನಿಸಬಹುದು ಎನ್ನುವ ಮಾತು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ.
