‘ಕೈ’ ಟಿಕೆಟ್ ಕಗ್ಗಂಟು ಶಮನ! ; ಯಾರ ‘ಕೈ’ ಗೆ ಬಿಫಾರಂ
ಬೆಂಗಳೂರು: ರಾಜ್ಯದಲ್ಲಿ ಉಪಚುನಾವಣೆ ಕಾವು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಕಾಂಗ್ರೆಸ್ನಲ್ಲಿ ಟಿಕೆಟ್ ಕಗ್ಗಂಟು ದೊಡ್ಡ ತಲೆನೋವಾಗಿತ್ತು. ಅದರಲ್ಲೂ ದಾವಣಗೆರೆ ದಕ್ಷಿಣ ಕ್ಷೇತ್ರದ ಟಿಕೆಟ್ ವಿಚಾರದಲ್ಲಿ ದೊಡ್ಡ ಪೈಪೋಟಿ ನಡೆದು ಹೋಗಿತ್ತು. ಇದೀಗ ಈ ಎಲ್ಲಾ ಗೊಂದಲಗಳಿಗೂ ಕೊನೆಗೂ ಬ್ರೇಕ್ ಬಿದ್ದಿದೆ.
ಕಾಂಗ್ರೆಸ್ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ, ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಶನಿವಾರ ಸರಣಿ ಸಭೆಗಳನ್ನು ನಡೆಸುವ ಮೂಲಕ ದಾವಣಗೆರೆ ದಕ್ಷಿಣ ಹಾಗೂ ಬಾಗಲಕೋಟೆ ವಿಧಾನಸಭಾ ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಅಂತಿಮಗೊಳಿಸುವಲ್ಲಿ ಸಫಲರಾಗಿದ್ದಾರೆ.
ವಸತಿ ಸಚಿವ ಜಮೀರ್ ಅಹಮದ್ ಖಾನ್ ಸೇರಿದಂತೆ ಹಲವು ಮುಖಂಡರು ಈ ಬಾರಿ ಅಲ್ಪಸಂಖ್ಯಾತ ಸಮುದಾಯದ ಅಭ್ಯರ್ಥಿಗೆ ನೀಡಬೇಕು ಎಂದು ಬಿಗಿಪಟ್ಟು ಹಿಡಿದಿದ್ದರು. ಅಖಿಲ ಭಾರತ ವೀರಶೈವ ಮಹಾಸಭಾದ ಅಧ್ಯಕ್ಷರೂ ಆಗಿರುವ ಅರಣ್ಯ ಸಚಿವ ಈಶ್ವರ ಖಂಡ್ರೆ ಸೇರಿ ಹಲವರು, ಶಾಮನೂರು ಶಿವಶಂಕರಪ್ಪ ಪ್ರತಿನಿಧಿಸಿದ್ದ ಕ್ಷೇತ್ರದಲ್ಲಿ, ಅವರ ಮಗ ತೋಟಗಾರಿಕೆ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಪುತ್ರ ಸಮರ್ಥಗೆ ಟಿಕೆಟ್ ನೀಡುವಂತೆ ಬಿಗಿಪಟ್ಟು ಹಾಕಿದ್ದರು. ಹೀಗಾಗಿ, ದಾವಣಗೆರೆ ದಕ್ಷಿಣ ಕ್ಷೇತ್ರದ ಅಭ್ಯರ್ಥಿ ಆಯ್ಕೆ ಕಗ್ಗಂಟಾಗಿತ್ತು.
ಶಿವಕುಮಾರ್ ಹಾಗೂ ಸುರ್ಜೇವಾಲಾ ಅವರು ಮುಸ್ಲಿಂ ಸಮುದಾಯದ ಮುಖಂಡರ ಮನವೊಲಿಸು ವಲ್ಲಿ ಯಶಸ್ವಿಯಾಗಿದ್ದಾರೆ. ಕೊನೆಗೆ ದಾವಣಗೆರೆ ದಕ್ಷಿಣದಿಂದ
ಸಮರ್ಥ್ ಶಾಮನೂರು ಹಾಗೂ ಬಾಗಲಕೋಟೆಗೆ ಉಮೇಶ್ ಮೇಟಿ ಅವರನ್ನು ಹೆಸರನ್ನು ಅಂತಿಮಗೊಳಿಸಿದ್ದಾರೆ.
ಚುನಾವಣೆಗಳ ಅಭ್ಯರ್ಥಿ ಆಯ್ಕೆಯ ವೇಳೆ ಅಲ್ಪಸಂಖ್ಯಾತ ಸಮುದಾಯಕ್ಕೆ ಪ್ರಾತಿನಿಧ್ಯ ನೀಡಬೇಕು. ಜನ ಸಂಖ್ಯೆಗೆ ಅನುಗುಣವಾಗಿ ಭವಿಷ್ಯದ ಚುನಾವಣೆಗ-ಳಲ್ಲಿ ರಾಜಕೀಯ ಪ್ರಾತಿನಿಧ್ಯ ನೀಡಬೇಕು ಎಂದು ಮುಸ್ಲಿಂ ಸಮುದಾಯದ ಸಚಿವರು, ಶಾಸಕರ ತಮ್ಮ ಷರತ್ತು ಮುಂದಿಟ್ಟರು. ಸಚಿವ ಮಲ್ಲಿಕಾರ್ಜುನ್ ಸಮ್ಮುಖದಲ್ಲಿ ಪಕ್ಷದ ನಾಯಕರು ಸಮ್ಮತಿಸಿದ ನಂತರವೇ ದಾವಣಗೆರೆ ಕ್ಷೇತ್ರವನ್ನು ಶಾಮನೂರು ಕುಟುಂಬಕ್ಕೆ ಬಿಟ್ಟುಕೊಡಲು ಒಪ್ಪಿಗೆ ನೀಡಿದರು ಎಂದು ತಿಳಿದು ಬಂದಿದೆ.
ಮೇಟಿ ಅವರ ಕುಟುಂಬದ ಸದಸ್ಯರು ಚುನಾವಣೆಯಲ್ಲಿ ಸ್ಪರ್ಧಿಸಲು ಪೈಪೋಟಿ ನಡೆ-ಸುತ್ತಿದ್ದರು. ಸಿದ್ದರಾಮಯ್ಯ, ಶಿವಕುಮಾರ್ ಅವರು ಮೇಟಿ ಅವರ ಮಕ್ಕಳ ಜತೆ ಸತತವಾಗಿ ಚರ್ಚೆ ನಡೆಸಿದ ನಂತರ ಟಿಕೆಟ್ ಅಂತಿಮಗೊಳಿಸಿದ್ದಾರೆ ಎನ್ನಲಾಗಿದೆ. ಈ ಚುನಾವಣೆಯಲ್ಲಿ ತಮಗೆ ಟಿಕೆಟ್ ನೀಡಬೇಕು ಎಂದು ಮೇಟಿಯವರ ಮಗಳು ಬಾಯಕ್ಕ ಹಟ ಹಿಡಿದಿದ್ದರು.
