ಭಕ್ತಿಯ ತೈಲದ ಕೊರತೆ ಎಂದೂ ಆಗದು : ಡಾ. ಶಿವಮೂರ್ತಿ ಸ್ವಾಮೀಜಿ
ದಾವಣಗೆರೆ: ಸುಕ್ಷೇತ್ರ ಆನಗೋಡಿನಲ್ಲಿ ಮರುಳಸಿದ್ಧರ ರಥೋತ್ಸವ ತರಳಬಾಳು ಜಗದ್ಗುರು ಡಾ. ಶಿವಮೂರ್ತಿ ಶಿವಾಚಾರ್ಯರ ಸಾನ್ನಿಧ್ಯದಲ್ಲಿ ನಡೆಯಿತು.
ರಥೋತ್ಸವ ನಂತರ ಆಶೀರ್ವಚನ ದಯಪಾಲಿಸಿದ ಶ್ರೀ ಜಗದ್ಗುರುಗಳವರು ‘ಅಮೆರಿಕ, ಇಸ್ರೇಲ್ ಹಾಗೂ ಇರಾನ್ ಯುದ್ಧದಿಂದ ಜಾಗತಿಕ ಆರ್ಥಿಕ ಅವ್ಯವಸ್ಥೆ ಉಂಟಾಗಿದೆ. ಪೆಟ್ರೋಲ್, ಎಲ್‌ಪಿಜಿ ಸಿಗದಂತಾಗಿದೆ. ಆದರೆ ಭಕ್ತಿಯ ತೈಲದಿಂದ ಪ್ರತಿ ವರ್ಷ ರಥ ಚಲಿಸುತ್ತಿದೆ’ ಎಂದು ಹೇಳಿದರು.
ಎಲ್ಲರೂ ಹಣದ ವ್ಯಾಮೋಹಕ್ಕೆ ಬಿದ್ದಿದ್ದಾರೆ. ಪಿತ್ರಾರ್ಜಿತ ಆಸ್ತಿಯಲ್ಲಿ ಹೆಣ್ಣು ಮಕ್ಕಳು ಭಾಗ ಕೇಳುವ ಹಕ್ಕನ್ನು ನ್ಯಾಯಾಲಯ ನೀಡಿದೆ. ಆದರೆ ಧರ್ಮ ಏನು ಹೇಳುತ್ತದೆ ಎಂದು ತಿಳಿಯಬೇಕು. ಮಕ್ಕಳನ್ನು ಬೆಳೆಸಲು ಪಾಲಕರು ಪಟ್ಟ ಶ್ರಮಕ್ಕೆ ಬೆಲೆ ಕಟ್ಟಲಾಗದು. ಆದ್ದರಿಂದ ಇಂತಹ ಆಸ್ತಿ ಪ್ರಕರಣ ದಾಖಲಿಸಿದ್ದರೆ ಇಂದೇ ತೀರ್ಮಾನಿಸಿ ವಾಪಸ್ ಪಡೆಯಿರಿ’ ಎಂದು ಸೂಚ್ಯವಾಗಿ ತಿಳಿಸಿದರು.
ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಯುದ್ಧದಲ್ಲಿ ಮೃತಪಟ್ಟವರಿಗೆ ಒಂದು ನಿಮಿಷ ಮೌನಾಚರಣೆ ಮಾಡಿ ನಮನ ಸಲ್ಲಿಸಲಾಯಿತು.
ಸಾಧು ವೀರಶೈವ ಸಮಾಜದ ಅಧ್ಯಕ್ಷ ಎಚ್.ಆರ್. ಬಸವರಾಜಪ್ಪ ಮಾತನಾಡಿದರು.
ವಿಶ್ವಬಂಧುವಿನ ರಥ ಸಾಗುವಾಗ ಹುಣ್ಣಿಮೆಯ ಚಂದ್ರನ ಉಪಸ್ಥಿತಿಯು ಹುಣ್ಣಿಮೆಗೂ ತರಳಬಾಳು ಮಠಕ್ಕೂ ದೈವೀ ಸಂಬಂಧದ ದಿವ್ಯ ಸಾಕ್ಷಾತ್ಕಾರವನ್ನು ಪುನಾರಾವರ್ತಿಸಿತು.
ಅಪಾರ ಭಕ್ತರ ಜಯಘೋಷಗಳೊಂದಿಗೆ ರಥದ ಅಂಗಳ ಪ್ರವೇಶಿಸಿ ರಥ ಪ್ರದಕ್ಷಿಣೆಗೈದು ರಥದ ಗಾಲಿಗೆ ಕಾಯಿ ಸಮರ್ಪಿಸಿದರು. ನಂತರ ರಥವನೇರಿದ ಶ್ರೀ ಜಗದ್ಗುರುಗಳವರು ಮರುಳಸಿದ್ದರ ಉತ್ಸವ ಮೂರ್ತಿಗೆ
ಪೂಜಾ ಕೈಂಕರ್ಯಗಳೊಂದಿಗೆ ಭಕ್ತಿ ಸಮರ್ಪಿಸಿ. ಪತ್ರೆ ಪುಷ್ಪಗಳನ್ನು ಭಕ್ತರಿಗೆ ಪ್ರೋಕ್ಷಿಸಿ ಆಶೀರ್ವಾದಿಸಿದರು.
ಅಪಾರ ಭಕ್ತರಿಂದ ಶ್ರೀ ತರಳಬಾಳು ಗುರುಪರಂಪರೆಗೆ ಜಯವಾಗಲಿ, ವಿಶ್ವಬಂಧು ಮರುಳಸಿದ್ದೇಶ್ವರರಿಗೆ ಜಯವಾಗಲಿ, ಶ್ರೀ ತರಳಬಾಳು ಜಗದ್ಗುರುಗಳವರಿಗೆ ಜಯವಾಗಲೆಂದು ಭಕ್ತಿ ಪೂರ್ಣ ಘೋಷಣೆಗಳು ಮುಗಿಲು ಮುಟ್ಟಿದವು.
