ಡಿಸಿ ಸಹಿ ನಕಲಿ ಮಾಡಿ ₹15 ಲಕ್ಷ ವಂಚನೆ ಯತ್ನ: ಐವರು ಬಂಧನ
ಚಿತ್ರದುರ್ಗ, ಮಾ.13: ಜಿಲ್ಲಾಧಿಕಾರಿ ಹಾಗೂ ಅಪರ ಜಿಲ್ಲಾಧಿಕಾರಿಗಳ ಸಹಿಯನ್ನು ನಕಲಿ ಮಾಡಿ ₹15 ಲಕ್ಷ ಹಣ ವಂಚನೆ ಮಾಡಲು ಯತ್ನಿಸಿದ ಪ್ರಕರಣದಲ್ಲಿ ಐವರನ್ನು ಚಿತ್ರದುರ್ಗ ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಜಿಲ್ಲಾಧಿಕಾರಿ ಕಚೇರಿಯಲ್ಲೇ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿದ್ದ ಡಾಟಾ ಎಂಟ್ರಿ ಆಪರೇಟರ್ ಸೈಯ್ಯದ್ ಸಾಧಿಕ್ ಹಾಗೂ FDA ವೆಂಕಟೇಶ್ ನೇತೃತ್ವದ ತಂಡ ಈ ಕೃತ್ಯ ನಡೆಸಿರುವುದು ಬೆಳಕಿಗೆ ಬಂದಿದೆ. ಆರೋಪಿಗಳು ಜಿಲ್ಲಾ ನಗರಾಭಿವೃದ್ಧಿ ಕೋಶದ CLTC ವಿಭಾಗದ ಹೊರ ಗುತ್ತಿಗೆ ಸಿಬ್ಬಂದಿಗಳ ಗೌರವಧನ ಬಿಡುಗಡೆ ಮಾಡುವ ನೆಪದಲ್ಲಿ ನಕಲಿ ದಾಖಲೆಗಳನ್ನು ಸೃಷ್ಟಿಸಿ ಹಣ ಲೂಟಿ ಮಾಡಲು ಯತ್ನಿಸಿದ್ದರು.
ಮಾರ್ಚ್ 12ರಂದು ಬೆಳಗ್ಗೆ ಆರೋಪಿಗಳು ಜಿಲ್ಲಾಧಿಕಾರಿ ಕಚೇರಿಗೆ ಪ್ರವೇಶಿಸಿ ಸುಮಾರು ₹15 ಲಕ್ಷ ಬಾಕಿ ವೇತನದ ಬಿಲ್ ಡ್ರಾ ಮಾಡಲು ನಕಲಿ ದಾಖಲೆಗಳನ್ನು ಸಿದ್ಧಪಡಿಸಿದ್ದರು. ಎಡಿಸಿ ಕಚೇರಿಯ ಡಿಜಿಟಲ್ ಸಿಗ್ನೇಚರ್ ಅನ್ನು ಪೋರ್ಜರಿ ಮಾಡಿದ್ದಲ್ಲದೇ, ಜಿಲ್ಲಾಧಿಕಾರಿ ಟಿ. ವೆಂಕಟೇಶ್ ಅವರ ಸಹಿಯನ್ನೂ ನಕಲಿ ಮಾಡಿ ಆನ್‌ಲೈನ್‌ನಲ್ಲಿ ಅನುಮೋದನೆ ಪಡೆದಂತೆ ತೋರಿಸಿದ್ದರು. ಅಲ್ಲದೆ ₹15 ಲಕ್ಷ ಹಣವನ್ನು VMH ಎಂಟರ್‌ಪ್ರೈಸಸ್‌ಗೆ ಬಿಡುಗಡೆ ಮಾಡುವಂತೆ ಆದೇಶ ಪತ್ರವೂ ಸಿದ್ಧಪಡಿಸಲಾಗಿತ್ತು.
ಆದರೆ ಈ ಪೈಲ್ ಜಿಲ್ಲಾ ಖಜಾನೆ ಇಲಾಖೆಗೆ ಸಲ್ಲಿಕೆಯಾಗುತ್ತಿದ್ದಂತೆ ಅನುಮಾನಗೊಂಡ ಅಧಿಕಾರಿಗಳು ಕ್ರಾಸ್ ಚೆಕ್ ನಡೆಸಿ ವಂಚನೆ ಯತ್ನವನ್ನು ಪತ್ತೆಹಚ್ಚಿದರು.
ಈ ಕುರಿತು ಯೋಜನಾ ನಿರ್ದೇಶಕಿ ರೇಷ್ಮಾ ಹಾನಗಲ್ ಚಿತ್ರದುರ್ಗ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ಡಾಟಾ ಎಂಟ್ರಿ ಆಪರೇಟರ್ ಸೈಯ್ಯದ್ ಸಾಧಿಕ್, FDA ವೆಂಕಟೇಶ್, ಇಂಜಿನಿಯರ್ ವಿನಯ್ ಶರ್ಮ, ಬಸವರಾಜ್ ಹಾಗೂ ವಿಜಯ್ ಎಂಬವರನ್ನು ಬಂಧಿಸಿದ್ದಾರೆ.
ಪೊಲೀಸರು ಸ್ಥಳ ಮಹಜರ್ ನಡೆಸಿ ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ. ಜಿಲ್ಲಾಧಿಕಾರಿ ಕಚೇರಿಯಲ್ಲೇ ಕೆಲಸ ಮಾಡುತ್ತಿದ್ದ ಸಿಬ್ಬಂದಿಯೇ ಇಂತಹ ವಂಚನೆ ಯತ್ನ ನಡೆಸಿರುವುದು ಜಿಲ್ಲಾಡಳಿತದಲ್ಲಿ ಆತಂಕ ಮೂಡಿಸಿದೆ.
