ಮಂಗಳೂರು: ಧರ್ಮಸ್ಥಳ ಸಾಮೂಹಿಕ ಅಂತ್ಯಕ್ರಿಯೆ ಪ್ರಕರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ ಶುಕ್ರವಾರ 7 ಮತ್ತು 8 ನೇ ಸ್ಥಳದಲ್ಲಿ ಶೋಧ ನಡೆಸಿತು. ಆದರೆ ಯಾವುದೇ ಮಾನವ ಕಳೇಬರದ ಅವಶೇಷಗಳು ಪತ್ತೆಯಾಗಲಿಲ್ಲ.ಸಾಕ್ಷಿ-ದೂರುದಾರರನ್ನು ಬೆಳಗ್ಗೆ 11.30 ರ ಸುಮಾರಿಗೆ ಏಳನೇ ಸ್ಥಳಕ್ಕೆ ಕರೆದೊಯ್ದು ಎಸ್ ಐಟಿ ಅಧಿಕಾರಿಗಳು, ಹಿಟಾಚಿ ಯಂತ್ರದ ಸಹಾಯದಿಂದ ಪೊದೆಗಳನ್ನು ತೆರವುಗೊಳಿಸಲಾಯಿತು. ಬಳಿಕ ಮಣ್ಣು ತೆಗೆದು ಅಗೆಯುವ ಕಾರ್ಯ ಆರಂಭವಾಯ್ತು. ಮೊದಲಿಗೆ ಹಿಟಾಚಿ ಯಂತ್ರದ ಮೂಲಕ ಮಣ್ಣು ತೆಗೆದು, ನಂತರ ಕಾರ್ಮಿಕರನ್ನು ಬಳಸಿ ಉತ್ಖನನ ನಡೆ ಮಾಡಲಾಯ್ತು. ಆದರೆ ಮೃತದೇಹದ ಯಾವುದೇ ಕುರುಹುಗಳು ಪತ್ತೆಯಾಗಲಿಲ್ಲ.
ಶೋಧ ಕಾರ್ಯಾಚರಣೆ ವೇಳೆಯಲ್ಲಿ ಎಸ್ ಐಟಿ ಗೌಪ್ಯತೆ ಕಾಪಾಡಿಕೊಳ್ಳುತ್ತಿದ್ದು, ಕೆಲವು ಅಧಿಕಾರಿಗಳನ್ನು ಹೊರತುಪಡಿಸಿ ಸ್ಥಳದಲ್ಲಿ ಮೊಬೈಲ್ ಬಳಕೆಗೆ ಅವಕಾಶವಿರಲಿಲ್ಲ. ಸುಮಾರು ಎರಡು ಗಂಟೆಗಳ ಕಾಲ ಭೂಮಿ ಅಗೆದರೂ ಯಾವುದೇ ಮಾನವ ಅವಶೇಷಗಳು ಪತ್ತೆಯಾಗಲಿಲ್ಲ. ಆದರೆ ಕರವಸ್ತ್ರವೊಂದು ಪತ್ತೆಯಾಗಿದೆ ಎಂದು ವರದಿಯಾಗಿದೆ.ನಂತರ ಭೋಜನ ವಿರಾಮದ ನಂತರ, ನೇತ್ರಾವತಿ ನದಿ ಬಳಿಯ ರಸ್ತೆಬದಿಯಲ್ಲಿರುವ 8ನೇ ಸ್ಥಳಕ್ಕೆ ದೂರುದಾರನನ್ನು SIT ಅಧಿಕಾರಿಗಳು ಕರೆದೊಯ್ದರು. ಅಲ್ಲಿಯೂ ಯಾವುದೇ ಅಸ್ಥಿಪಂಜರದ ಅವಶೇಷಗಳು ಕಂಡುಬಂದಿಲ್ಲ. 8ನೇ ಜಾಗದಲ್ಲಿ ಸಂಜೆ 5-30 ರ ವೇಳೆಗೆ ಶೋಧ ಕಾರ್ಯ ಪೂರ್ಣಗೊಂಡಿತು.
ಗ್ರಾಮ ಪಂಚಾಯಿತಿಯಿಂದ ಯುಡಿಆರ್ ದಾಖಲೆ ಸಂಗ್ರಹ
ಈ ಮಧ್ಯೆ ವಿಶೇಷ ತನಿಖಾ ತಂಡ ಧರ್ಮಸ್ಥಳ ಗ್ರಾಮ ಪಂಚಾಯಿತಿಗೆ ಭೇಟಿ ನೀಡಿದ್ದು, 1995ರಿಂದ 2014ರವರೆಗೆ ಸತತ 19 ವರ್ಷಗಳ ಯುಡಿಆರ್ ದಾಖಲೆಗಳನ್ನು ವಶಕ್ಕೆ ಪಡೆದಿದೆ. ಈ ದಾಖಲಾತಿಗಳನ್ನು ಎಸ್‌ಐಟಿ ತಂಡ ಪರಿಶೀಲಿಸುತ್ತಿದ್ದು, ಈ ಪ್ರಕರಣದ ಹಿನ್ನೆಲೆ, ಸಂಭಾವ್ಯ ಆರೋಪಿಗಳು ಹಾಗೂ ಹೂತು ಹಾಕಲಾಗಿರುವ ಶವಗಳ ಬಗ್ಗೆ ಹೆಚ್ಚಿನ ಮಾಹಿತಿ ಸಂಗ್ರಹಿಸುವ ನಿಟ್ಟಿನಲ್ಲಿ ಮುಂದಿನ ಕ್ರಮಗಳನ್ನು ಕೈಗೊಳ್ಳಲಿದೆ. ಈ ತನಿಖೆಯು ಗಂಭೀರ ತಿರುವು ಪಡೆದುಕೊಂಡಿದ್ದು, ಸಾರ್ವಜನಿಕರಲ್ಲಿ ಈ ಬಗ್ಗೆ ಕುತೂಹಲ ಹೆಚ್ಚಾಗಿದೆ.
ಅಸ್ಥಿಪಂಜರ ಹಸ್ತಾಂತರ
ಗುರುವಾರ 6ನೇ ಸ್ಥಳದಲ್ಲಿ ಪತ್ತೆಯಾದ ಮಾನವ ಅವಶೇಷಗಳನ್ನು ಹೆಚ್ಚಿನ ವಿಶ್ಲೇಷಣೆಗಾಗಿ ಮಣಿಪಾಲದ ಖಾಸಗಿ ಆಸ್ಪತ್ರೆಯಿಂದ ವಿಧಿ ವಿಜ್ಞಾನ ಪ್ರಯೋಗಾಲಯ ತಜ್ಞರಿಗೆ ಹಸ್ತಾಂತರಿಸಲಾಗಿದೆ.
ಏನಿದು ಪ್ರಕರಣ
ಧರ್ಮಸ್ಥಳ ಗ್ರಾಮದಲ್ಲಿ ದಶಕದ ಹಿಂದೆ ನಡೆದ ಸರಣಿ ಕೊಲೆ, ಅತ್ಯಾಚಾರ ಪ್ರಕರಣದ ಶವಗಳನ್ನು ಹೂತು ಹಾಕಲು ನನಗೆ ವಹಿಸಲಾಗಿತ್ತು ಎಂದು ಪ್ರಕರಣದ ಸಾಕ್ಷಿ-ದೂರುದಾರ ಮತ್ತು ಮಾಜಿ ಪೌರ ಕಾರ್ಮಿಕ ಆರೋಪಿಸಿದ್ದಾನೆ. ಈ ಸಂಬಂಧ ಜುಲೈ 4 ರಂದು ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಜುಲೈ 19 ರಂದು ಪ್ರಕರಣದ ತನಿಖೆಗಾಗಿ ಎಸ್‌ಐಟಿ ರಚಿಸಲಾಗಿತ್ತು.
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ಹೌದು, ನಿಮ್ಮ ಊರಿನಲ್ಲಿ ಜಾತ್ರೆ, ಸಭೆ, ಸಮಾರಂಭಗಳು ನಡೆದರೆ ಅದನ್ನು ಬಯಲುಸೀಮೆಟೈಮ್ಸ್.ಕಾಂ ಮೂಲಕ ನಾಡಿಗೆ ತಿಳಿಸಿ. ಅಷ್ಟೇ ಅಲ್ಲ ನಿಮ್ಮೂರಿನ ರಸ್ತೆ, ಚರಂಡಿ, ಆಸ್ಪತ್ರೆ , ಶಾಲೆ ಯಾವುದೇ ಸಮಸ್ಯೆ ಇದ್ದರೂ ಅಧಿಕಾರಿಗಳ ಕಣ್ಣು ತೆರೆಯುವಂತೆ ಸುದ್ದಿ ಮಾಡಿ. ನೀವು ಜಸ್ಟ್ ನಮ್ಮ ವಾಟ್ಸ್ ಆಪ್ ಸಂಖ್ಯೆಗೆ ಸುದ್ದಿ ಕಳುಹಿಸಿ ಉಳಿದದ್ದನ್ನು ಬಯಲುಸೀಮೆಟೈಮ್ಸ್.ಕಾಂ ಮಾಡಲಿದೆ. ನಮ್ಮ ವಾಟ್ಸ್ ಆಪ್ ಸಂಖ್ಯೆ: +91 96201 39796
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.



