ಬೆಂಗಳೂರು: ಧರ್ಮಸ್ಥಳ ಬುರುಡೆ ಪ್ರಕರಣದಲ್ಲಿ ಎಸ್ಐಟಿ ತನಿಖೆ ಚುರುಕುಗೊಂಡಿದೆ. ಆರೋಪ ಕೇಳಿ ಬಂದ ಎಲ್ಲರನ್ನೂ ಕರೆದು ವಿಚಾರಣೆ ಮಾಡಲಾಗುತ್ತಿದೆ. ಅಗತ್ಯಬಿದ್ದರೆ ನೋಟಿಸ್ ಕೊಟ್ಟು ವಿಚಾರಣೆ ಕೂಡ ಮಾಡಲಾಗುತ್ತಿದೆ. ಆದರೆ, ಇದೀಗ ಮಹಜರು ವಿಚಾರದಲ್ಲಿ ಎಸ್ಐಟಿ ಎಚ್ಚರಿಕೆ ಹೆಜ್ಜೆ ಇಡುತ್ತಿದೆ. ಈ ಹಿಂದೆ ಆಗಿರುವ ತಪ್ಪು ಮತ್ತೆ ಮರುಳಿಸಬಾರದು ಎಂಬ ಯೋಚನೆಯನ್ನೂ ಮಾಡಿದೆ. ಆದರೆ, ಚಿನ್ನಯ್ಯ ತೋರಿಸಿ ರೀತಿಯೇ ವಿಠ್ಠಲ ಗೌಡ ತೋರಿಸಿದ ಜಾಗವನ್ನು ಮಹಜರು ಮಾಡಬೇಕಾ ಅಥವಾ ಬೇಡವಾ ಎಂಬ ವಿಚಾರ ಎಸ್ಐಟಿಯನ್ನು ಗೊಂದಲಕ್ಕೀಡು ಮಾಡಿದೆ.ಮಾಸ್ಕ್ಮ್ಯಾನ್ ಚಿನ್ನಯ್ಯ ಬುರುಡೆ ಬಿಟ್ಟಿದ್ದು ಜಗಜ್ಜಾಹೀರಾಗಿದೆ. ಎಲ್ಲವೂ ಸುಳ್ಳು ಎಂಬುದು ತನಿಖೆಯಲ್ಲಿ ಬಯಲಾಗಿದೆ. ಹೀಗಾಗಿ ಜೈಲು ಶಿಕ್ಷೆ ಅನುಭವಿಸುವಂತಾಗಿದೆ. ಇದೀಗ ಸೌಜನ್ಯ ಮಾವ ವಿಠ್ಠಲ ಗೌಡನ ಕಡೆ ಕೇಸ್ ತಿರುಗಿದೆ. ಮೊನ್ನೆ ಮೊನ್ನೆಯಷ್ಟೇ ಬಂಗ್ಲೆಗುಡ್ಡದಲ್ಲಿ ವಿಠ್ಠಲ ಗೌಡನ ಸಮ್ಮುಖದಲ್ಲೇ ಎಸ್ಐಟಿ ಸ್ಥಳಮಹಜರನ್ನೂ ಮಾಡಿತ್ತು. ಇದೇ ವೇಳೆ ವಿಡಿಯೋ ಮೂಲಕ, ಬಂಗ್ಲೆಗುಡ್ಡದಲ್ಲಿ ರಾಶಿ ರಾಶಿ ಕಳೇಬರ ಇದೆ, ಅಸ್ಥಿಪಂಜರ ಇದೆ. ನಾನೇ ತೋರಿಸುತ್ತೇನೆ, ಸ್ಥಳ ಮಹಜರು ನಡೆಸಿ ಎಂದು ವಿಠ್ಠಲ ಗೌಡ ಆಗ್ರಹ ಮಾಡಿರುವುದು ಇದೀಗ ಎಸ್ಐಟಿಗೆ ತಲೆನೋವು ತಂದಿಟ್ಟಿದೆ.ಆದರೆ, ವಿಠ್ಠಲಗೌಡ ಆರೋಪ ಮಾಡಿದಾಕ್ಷಣ ಏಕಾಏಕಿ ಬಂಗ್ಲೆಗುಡ್ಡದಲ್ಲಿ ಎಸ್ಐಟಿ ಅಗೆಯುವ ಕೆಲಸ ಮಾಡ್ತಿಲ್ಲ. ವಿಠ್ಠಲ ಗೌಡ ತೋರಿಸಿದ ಜಾಗವನ್ನ ತಕ್ಷಣವೇ ಮಹಜರು ಮಾಡಲು ಎಸ್ಐಟಿ ಹಿಂದೇಟು ಹಾಕುತ್ತಿದೆ. ಬಂಗ್ಲೆಗುಡ್ಡದ ಬಳಿ ಮಹಜರು ಪ್ರಕ್ರಿಯೆಯನ್ನು ಬಾಕಿ ಇರಿಸಿಕೊಳ್ಳಲಾಗಿದೆ. ಒಂದು ಸಣ್ಣ ಯಡವಟ್ಟಾದರೂ ಮುಂದೆ ಅವಾಂತರ ಆಗುತ್ತದೆ. ಹಾಗಾಗುವುದು ಬೇಡ ಎಂದು ಎಸ್ಐಟಿ ವಿಳಂಬದ ಹಾದಿ ಹಿಡಿದಿದೆ.
ಎಸ್ಐಟಿಗೆ ಅಡ್ಡಿ ಆಯ್ತಾ ಅರಣ್ಯ ಇಲಾಖೆ ಅನುಮತಿ?
ಬಂಗ್ಲೆಗುಡ್ಡದಲ್ಲಿ ಮಹಜರು ನಡೆಸಬೇಕಾ, ಬೇಡವಾ ಎಂಬುದು ಅರಣ್ಯ ಇಲಾಖೆ ಅಧಿಕಾರಿಗಳ ಅನುಮತಿ ಮೇಲೆ ನಿಂತಿದೆ. ಅವರು ಅನುಮತಿ ಕೊಟ್ಟರೆ ಇಂದೇ ಮಹಜರು ನಡೆಸಲು ತನಿಖಾಧಿಕಾರಿಗಳು ಸಿದ್ಧರಿದ್ದಾರೆ ಎನ್ನಲಾಗಿದೆ. ಈಗಾಗಲೇ ಅರಣ್ಯ ಸಚಿವ ಈಶ್ವರ್ ಖಂಡ್ರೆ ಗಮನಕ್ಕೂ ಈ ವಿಚಾರ ತರಲಾಗಿದೆ. ಅರಣ್ಯ ಇಲಾಖೆ ಅಧಿಕಾರಿಗಳ ಜೊತೆಯೂ ಎಸ್ಐಟಿ ಸಭೆ ಮಾಡಿದೆ.ಮತ್ತೊಂದೆಡೆ, ಅರಣ್ಯ ಇಲಾಖೆ ಸುಮ್ಮನೆ ಕುಳಿತಿಲ್ಲ. ಬಂಗ್ಲೆಗುಡ್ಡದ ದಾಖಲೆಯನ್ನು ಅರಣ್ಯ ಇಲಾಖೆ ಸಂಗ್ರಹ ಮಾಡಿದೆ. ದಾಖಲೆಗಳ ನಕಲು ಪ್ರತಿಯನ್ನು ಎಸ್ಐಟಿಗೆ ಕೊಡಲು ಅರಣ್ಯ ಇಲಾಖೆ ತಯಾರಿ ನಡೆಸಿದೆ.
ಮಹಜರು ನಡೆಸಲು ಕಾನೂನು ತಜ್ಞರ ಸಲಹೆ ಕೇಳಿರುವ ಎಸ್ಐಟಿ
ಮಹಜರು ನಡೆಸುವ ವಿಚಾರದಲ್ಲಿ ಎಸ್ಐಟಿ ಅಧಿಕಾರಿಗಳು, ಕಾನೂನು ತಜ್ಞರ ಮೊರೆ ಹೋಗಿದ್ದಾರೆ. ಕಾನೂನು ತಜ್ಞರ ಸಲಹೆ ಕೇಳಿರುವ ಎಸ್ಐಟಿ, ಹಲವು ಪ್ರಶ್ನೆಗಳನ್ನು ಮುಂದಿಟ್ಟಿದೆ. ವಿಠ್ಠಲ ಗೌಡ ತೋರಿಸುವ ಜಾಗದಲ್ಲಿ ಮಾತ್ರ ಮಹಜರು ನಡೆಸಬೇಕೋ? ಸಂಪೂರ್ಣ ಬಂಗ್ಲೆಗುಡ್ಡದಲ್ಲಿ ಮಹಜರು ನಡೆಸಬೇಕೋ ಎಂಬ ವಿಚಾರವನ್ನು ಪ್ರಸ್ತಾಪಿಸಿದ್ದಾರೆ.
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ಹೌದು, ನಿಮ್ಮ ಊರಿನಲ್ಲಿ ಜಾತ್ರೆ, ಸಭೆ, ಸಮಾರಂಭಗಳು ನಡೆದರೆ ಅದನ್ನು ಬಯಲುಸೀಮೆಟೈಮ್ಸ್.ಕಾಂ ಮೂಲಕ ನಾಡಿಗೆ ತಿಳಿಸಿ. ಅಷ್ಟೇ ಅಲ್ಲ ನಿಮ್ಮೂರಿನ ರಸ್ತೆ, ಚರಂಡಿ, ಆಸ್ಪತ್ರೆ , ಶಾಲೆ ಯಾವುದೇ ಸಮಸ್ಯೆ ಇದ್ದರೂ ಅಧಿಕಾರಿಗಳ ಕಣ್ಣು ತೆರೆಯುವಂತೆ ಸುದ್ದಿ ಮಾಡಿ. ನೀವು ಜಸ್ಟ್ ನಮ್ಮ ವಾಟ್ಸ್ ಆಪ್ ಸಂಖ್ಯೆಗೆ ಸುದ್ದಿ ಕಳುಹಿಸಿ ಉಳಿದದ್ದನ್ನು ಬಯಲುಸೀಮೆಟೈಮ್ಸ್.ಕಾಂ ಮಾಡಲಿದೆ. ನಮ್ಮ ವಾಟ್ಸ್ ಆಪ್ ಸಂಖ್ಯೆ: +91 96201 39796
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.







