ನವದೆಹಲಿ: ಭಾರತ ವಿಶ್ವದ ನಾಲ್ಕನೇ ಅತಿದೊಡ್ಡ ಆರ್ಥಿಕತೆಯ ದೇಶ ಎನಿಸಿದೆ. ಆದರೆ, ಜಿಡಿಪಿ ತಲಾದಾಯದಲ್ಲಿಭಾರತ ಇನ್ನೂ ಬಹಳ ಹಿಂದಿದೆ. ಅಂದರೆ ಸರಾಸರಿ ಶ್ರೀಮಂತಿಕೆ ಕಡಿಮೆ ಇದೆ. 2024-25ರ ಆರ್ಥಿಕ ಸಮೀಕ್ಷೆಯ ವರದಿಯನ್ನು ಆಧರಿಸಿ ಭಾರತದೊಳಗೆ ವಿವಿಧ ನಗರ ಅಥವಾ ಜಿಲ್ಲೆಗಳ ಜಿಡಿಪಿ ತಲಾದಾಯ ಎಷ್ಟಿದೆ ಎನ್ನುವ ವರದಿಯನ್ನು ಇಂಡಿಯನ್ ಎಕ್ಸ್ಪ್ರೆಸ್ ಪ್ರಕಟಿಸಿತ್ತು. ಅದರಲ್ಲಿ ಕೆಲ ಅಚ್ಚರಿಯ ಅಂಶಗಳಿವೆ. ಈ ವರದಿ ಪ್ರಕಾರ ಭಾರತದಲ್ಲಿ ಅತಿಹೆಚ್ಚು ಜಿಡಿಪಿ ತಲಾದಾಯ ಹೊಂದಿರುವ ಜಿಲ್ಲೆ ಎಂದರೆ ಅದು ಬೆಂಗಳೂರಲ್ಲ, ಮುಂಬೈ ಅಲ್ಲ, ದಿಲ್ಲಿ ಅಲ್ಲ, ಹೈದರಾಬಾದ್ ಅಲ್ಲ, ಕೋಲ್ಕತಾ ಅಲ್ಲ, ಚೆನ್ನೈ ಕೂಡ ಅಲ್ಲ. ಅದು ರಂಗಾರೆಡ್ಡಿ ಜಿಲ್ಲೆ.ತೆಲಂಗಾಣದ ರಂಗಾರೆಡ್ಡಿ ಜಿಲ್ಲೆ 11.46 ಲಕ್ಷ ರೂನಷ್ಟು ಜಿಡಿಪಿ ತಲಾದಾಯ ಹೊಂದಿದೆ. ಭಾರತದಲ್ಲಿರುವ ಜಿಲ್ಲೆಗಳ ಪೈಕಿ ಇದು ಗರಿಷ್ಠ ಜಿಡಿಪಿ ತಲಾದಾಯ. ಭಾರತದ ಸಿಲಿಕಾನ್ ವ್ಯಾಲಿ ಎನ್ನಲಾದ ಬೆಂಗಳೂರು 3ನೇ ಸ್ಥಾನ ಪಡೆದಿದೆ. ವಾಣಿಜ್ಯ ನಗರಿ ಎನಿಸಿದ ಮುಂಬೈ 9ನೇ ಸ್ಥಾನದಲ್ಲಿರುವುದು ಅಚ್ಚರಿ ಮೂಡಿಸಿದೆ. ದಕ್ಷಿಣ ಕನ್ನಡ ಜಿಲ್ಲೆಯು ಟಾಪ್-10ನಲ್ಲಿ ಸ್ಥಾನ ಪಡೆದಿರುವುದು ಗಮನಾರ್ಹ.
ಭಾರತದ ಟಾಪ್-10 ಶ್ರೀಮಂತ ಜಿಲ್ಲೆಗಳು
- ರಂಗಾರೆಡ್ಡಿ ಜಿಲ್ಲೆ, ತೆಲಂಗಾಣ: 11.46 ಲಕ್ಷ ರೂ ತಲಾದಾಯ
- ಗುರುಗ್ರಾಮ್, ಹರ್ಯಾಣ: 9.05 ಲಕ್ಷ ರೂ ತಲಾದಾಯ
- ಬೆಂಗಳೂರು ನಗರ, ಕರ್ನಾಟಕ: 8.93 ಲಕ್ಷ ರೂ ತಲಾದಾಯ
- ಗೌತಮ್ ಬುದ್ಧ ನಗರ್, ಉತ್ತರಪ್ರದೇಶ: 8.48 ಲಕ್ಷ ರೂ ತಲಾದಾಯ
- ಸೋಲನ್ ಜಿಲ್ಲೆ, ಹಿಮಾಚಲಪ್ರದೇಶ: 8.10 ಲಕ್ಷ ರೂ ತಲಾದಾಯ
- ಗೋವಾ ಉತ್ತರ ಮತ್ತು ದಕ್ಷಿಣ: 7.63 ಲಕ್ಷ ರೂ ತಲಾದಾಯ
- ಗ್ಯಾಂಗ್ಟಾಕ್, ನಾಮ್ಚಿ, ಸಿಕ್ಕಿಂ: 7.46 ಲಕ್ಷ ರೂ ತಲಾದಾಯ
- ದಕ್ಷಿಣ ಕನ್ನಡ, ಕರ್ನಾಟಕ: 6.69 ಲಕ್ಷ ರೂ ತಲಾದಾಯ
- ಮುಂಬೈ, ಮಹಾರಾಷ್ಟ್ರ: 6.57 ಲಕ್ಷ ರೂ ತಲಾದಾಯ
- ಅಹ್ಮದಾಬಾದ್, ಗುಜರಾತ್: 6.54 ಲಕ್ಷ ರೂ ತಲಾದಾಯ
ಈ ಮೇಲಿನ ಪಟ್ಟಿಯಲ್ಲಿ ಬಹಳ ಅಚ್ಚರಿ ಹೆಸರುಗಳು ಕಂಡಿದ್ದು ಹಿಮಾಚಲಪ್ರದೇಶದ ಸೋಲನ್ ಜಿಲ್ಲೆ ಮತ್ತು ತೆಲಂಗಾಣದ ರಂಗಾರೆಡ್ಡಿ ಜಿಲ್ಲೆಯದ್ದು. ಸೋಲನ್ ಜಿಲ್ಲೆಯಲ್ಲಿ ಆಹಾರ ಸಂಸ್ಕರಣೆ ಮತ್ತು ಫಾರ್ಮಾ ಉದ್ಯಮಗಳು ಸಾಕಷ್ಟು ನೆಲಸಿವೆ. ಹೀಗಾಗಿ, ದೇಶ ಅತಿ ಸಮೃದ್ಧ ನಗರಗಳ ಸಾಲಿಗೆ ಅದು ಸೇರುತ್ತದೆ. ನಂಬರ್ ಎನಿಸಿರುವ ರಂಗಾರೆಡ್ಡಿ ಜಿಲ್ಲೆ ಹೈದರಾಬಾದ್ ಬಗಲಿನಲ್ಲೇ ಇದೆ. ಇಲ್ಲಿ ಸಾಲುಸಾಲು ಐಟಿ ಕಂಪನಿಗಳು ನೆಲಸಿವೆ.ಇನ್ನು, ಗುರುಗ್ರಾಮ್ ಮತ್ತು ಗೌತಮ್ ಬುದ್ಧ ನಗರ್ ಜಿಲ್ಲೆಗಳು ಈ ಪಟ್ಟಿಯಲ್ಲಿರುವುದು ಕೆಲವರಿಗೆ ಅಚ್ಚರಿ ಎನಿಸಿರಬಹುದು. ಆದರೆ, ಇವೆರಡು ಜಿಲ್ಲೆಗಳ ಅನೇಕ ಭಾಗಗಳು ಗ್ರೇಟರ್ ನೋಯ್ಡಾ ಪ್ರದೇಶದ ವ್ಯಾಪ್ತಿಗೆ ಬರುತ್ತವೆ. ರಾಷ್ಟ್ರ ರಾಜಧಾನಿ ದೆಹಲಿಯ ಸುತ್ತಮುತ್ತಲಿರುವ ಪ್ರದೇಶಗಳಿವು. ನೋಯ್ಡಾ, ಘಾಜಿಯಾಬಾದ್, ಗುರುಗ್ರಾಮ್, ಗೌತಮ್ ಬುದ್ಧ ನಗರ್ ಇತ್ಯಾದಿ ಪ್ರದೇಶಗಳಲ್ಲಿ ಬಹಳಷ್ಟು ಕೈಗಾರಿಕೆ ಮತ್ತು ಉದ್ದಿಮೆಗಳು ನೆಲಸಿವೆ.ಈ ಮೇಲಿನ ಟಾಪ್-10 ಪಟ್ಟಿಯಲ್ಲಿ ಒಂದೇ ರಾಜ್ಯದ ಎರಡು ನಗರ ಅಥವಾ ಜಿಲ್ಲೆಗಳು ಕಂಡು ಬಂದಿದ್ದು ಕರ್ನಾಟಕದ್ದು ಮಾತ್ರವೇ. ಬೆಂಗಳೂರು ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಿವೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಂದರು ಚಟುವಟಿಕೆ ಮತ್ತು ಶಿಕ್ಷಣ ಕ್ಷೇತ್ರದ ಬೆಳವಣಿಗೆಯು ಅದಕ್ಕೆ ಪ್ರಮುಖ ಆದಾಯ ಮೂಲವೆನಿಸಿವೆ.
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ಹೌದು, ನಿಮ್ಮ ಊರಿನಲ್ಲಿ ಜಾತ್ರೆ, ಸಭೆ, ಸಮಾರಂಭಗಳು ನಡೆದರೆ ಅದನ್ನು ಬಯಲುಸೀಮೆಟೈಮ್ಸ್.ಕಾಂ ಮೂಲಕ ನಾಡಿಗೆ ತಿಳಿಸಿ. ಅಷ್ಟೇ ಅಲ್ಲ ನಿಮ್ಮೂರಿನ ರಸ್ತೆ, ಚರಂಡಿ, ಆಸ್ಪತ್ರೆ , ಶಾಲೆ ಯಾವುದೇ ಸಮಸ್ಯೆ ಇದ್ದರೂ ಅಧಿಕಾರಿಗಳ ಕಣ್ಣು ತೆರೆಯುವಂತೆ ಸುದ್ದಿ ಮಾಡಿ. ನೀವು ಜಸ್ಟ್ ನಮ್ಮ ವಾಟ್ಸ್ ಆಪ್ ಸಂಖ್ಯೆಗೆ ಸುದ್ದಿ ಕಳುಹಿಸಿ ಉಳಿದದ್ದನ್ನು ಬಯಲುಸೀಮೆಟೈಮ್ಸ್.ಕಾಂ ಮಾಡಲಿದೆ. ನಮ್ಮ ವಾಟ್ಸ್ ಆಪ್ ಸಂಖ್ಯೆ: +91 96201 39796
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.







