ನಗರ ದೇವತೆ ಬರಗೇರಮ್ಮ ಜಾತ್ರೆಗೆ ದಿನಗಣನೆ ಶುರು ; ಭಕ್ತರಲ್ಲಿ ಮನೆ ಮಾಡಿದ ಸಂಭ್ರಮ
ಚಿತ್ರದುರ್ಗ: ನಗರದೇವತೆ ಬರಗೇರಮ್ಮ ಜಾತ್ರಾ ಮಹೋತ್ಸವ ಮಾ. 27ರಂದು ರಾತ್ರಿ 8ಕ್ಕೆ
ಕಂಕಣಧಾರಣೆ, ಮಧುವಣಗಿತ್ತಿ ಪೂಜಾ ಕೈಂಕರ್ಯದೊಂದಿಗೆ ಆರಂಭವಾಗಲಿದೆ.
ದೇವಿಯ ಜಾತ್ರೆಯೂ 15 ದಿನ ಜರುಗಲಿದೆ. 31ರಂದು ರಾತ್ರಿ 8ಕ್ಕೆ ದೇವಿಯ ಉತ್ಸವ ಮೂರ್ತಿಯನ್ನು ಬುರುಜನಹಟ್ಟಿಯ ದೇಗುಲದಿಂದ ಊರ ಹೊರಗಿನ ದೇಗುಲಕ್ಕೆ ಕರೆ
ತರುವುದು. ನಂತರ ಕರಿಯಟ್ಟಿಯಲ್ಲಿನ ಭಕ್ತರಿಂದ ಪೂಜೆ ಸ್ವೀಕಾರ.
ಏ.1ರಂದು ಬೆಳಗ್ಗೆ 9ಕ್ಕೆ ಚಂದ್ರವಳ್ಳಿಯಲ್ಲಿ ದೇವಿಗೆ ಗಂಗಾಪೂಜೆ, ಕುಂಭಾಭಿಷೇಕ
ನಂತರ ದೇಗುಲಕ್ಕೆ ಆಗಮನ. ಅನ್ನಸಂತರ್ಪಣೆ ನಂತರ ರಾತ್ರಿ ಈರಜ್ಜನಹಟ್ಟಿ ಹಾಗೂ ನಾಯಕರ
ಸೊಲ್ಲಾಪುರ, ಐಯುಡಿಪಿ ಲೇಔಟ್, ಸರಸ್ವತಿಪುರದಲ್ಲಿ ಭಕ್ತರಿಂದ ಪೂಜೆ ಸ್ವೀಕಾರ.
2ರಂದು ದೇವಿಯು ಕೆಳಗಿನ ಸೊಲ್ಲಾಪುರ, ಗೊಲ್ಲರಹಟ್ಟಿ, ಟಗರನಹಟ್ಟಿ, ದೇವರಹಟ್ಟಿ,
ಜಾಲಿಕಟ್ಟೆ ಮತ್ತು ಮಾಳಪ್ಪನಹಟ್ಟಿ ಭಕ್ತರ ಮನೆಗಳಲ್ಲಿ ಪೂಜೆ ಸ್ವೀಕರಿಸಿ ದೇಗುಲಕ್ಕೆ ಮರಳುವುದು. ಅಂದು ಬೆಳಗ್ಗೆ 7ಕ್ಕೆ ಪಿಳ್ಳೇಕೆರನಹಳ್ಳಿ, ಬಸವೇಶ್ವರ, ವಿದ್ಯಾ,
ಮಾರುತಿ, ನೆಹರು, ಚೌಡೇಶ್ವರಿ ನಗರ, ಮೆದೇಹಳ್ಳಿ ರಸ್ತೆ, ಬಿವಿಕೆಎಸ್ ಲೇ ಔಟ್,
ಲಕ್ಷ್ಮೀಬಜಾರ್, ಚೇಳುಗುಡ್ಡ, ಧವಳಗಿರಿ ಬಡಾವಣೆ ಭಕ್ತರ ಮನೆಗಳಲ್ಲಿ ಪೂಜೆ ಸ್ವೀಕಾರ.
3ರಂದು ದೇವಿಯನ್ನು ವಿಶೇಷವಾಗಿ ಅಲಂಕರಿಸಿದ ನಂತರ ಬೆಳಗ್ಗೆ 9.30ರಿಂದ ಸಂಜೆ 8ರವರೆಗೂ
ಸಕಲ ವಾದ್ಯಗಳೊಡನೆ ನಗರದ ರಾಜ ಬೀದಿಗಳಲ್ಲಿ ರಥೋತ್ಸವ ಮೆರವಣಿಗೆ, ಭಕ್ತರಿಂದ ಮೀಸಲು
ಸಮರ್ಪಣೆ, ಹರಕೆ ಸಲ್ಲಿಕೆಯಾಗಲಿದೆ.
ಅಂದು ಸಂಜೆ 5.30ಕ್ಕೆ ಬಾರ್ಲೈನ್, ತಿಪ್ಪಜ್ಜಿ ಸರ್ಕಲ್, ಮುನ್ಸಿಪಲ್ ಕಾಲನಿ, ಚರ್ಚ್ ಬಡಾವಣೆ, ಕೆಳಗೋಟೆ ಪ್ರದೇಶದ ಭಕ್ತರಿಂದ ಪೂಜೆ ಸ್ವೀಕರಿಸಿದ ನಂತರ ದೇಗುಲಕ್ಕೆ ಮರಳುವುದು.
4ರಂದು ಬೆಳಗ್ಗೆ 8ಕ್ಕೆ ದೇಗುಲದಿಂದ ಹೊರಟು ದರ್ಜಿ ಕಾಲಾನಿ, ಗೋಪಾಲಪುರ, ಜೆಸಿಆರ್
ಹಾಗೂ ವಿ.ಪಿ. ಬಡಾವಣೆ ಭಕ್ತರ ಮನೆಗಳಲ್ಲಿ ಪೂಜೆ ಸ್ವೀಕರಿಸಿ, ಸಂಜೆ 6.30ಕ್ಕೆ ದೇಗುಲ ಮುಂಭಾಗ ಸಾವಿರಾರು ಭಕ್ತರ ಸಮ್ಮುಖದಲ್ಲಿ ದೇವಿಯ ಸಿಡಿ ಮಹೋತ್ಸವ ಜರುಗಲಿದೆ. 5ರಂದು
ಅಗಸನಕಲ್ಲು, ರೈಲ್ವೆ ನಿಲ್ದಾಣ, ಗಾರೆಹಟ್ಟಿ, ಕವಾಡಿಗರಹಟ್ಟಿ, ಮಠದ ಕುರುಬರಹಟ್ಟಿ,
ಕೋಡನಹಟ್ಟಿ, ಹನುಮಂತ ನಗರ, ಕರ್ಲ್ಲಹಟ್ಟಿಯ ಭಕ್ತರ ಮನೆಗಳಲ್ಲಿ ಪೂಜೆ ಸ್ವೀಕಾರ.
6ರಂದು ದೇವಿಗೆ ಬೆಳಗ್ಗೆ 8ಕ್ಕೆ ವಿಶೇಷ ಭಂಡಾರದ ಪೂಜೆ, ರಾತ್ರಿ 8ಕ್ಕೆ ಓಕಳಿ ಸೇವೆ, ಬುರುಜನಹಟ್ಟಿ ಪ್ರವೇಶದ ನಂತರ ಅಲ್ಲಿನ ಭಕ್ತರ ಮನೆಗಳಲ್ಲಿ ಪೂಜೆ ಸ್ವೀಕಾರ.
8ರಂದು ಸುಣ್ಣಗಾರಹಟ್ಟಿ, ಅಗಳೇರಿ, ಕೋಳಿ ಬುರುಜನಹಟ್ಟಿ, ಕಾಮನಬಾವಿ ಬಡಾವಣೆ,
ಜೋಗಿಮಟ್ಟಿ ರಸ್ತೆ, ಪ್ರಶಾಂತ ನಗರ, ಜಿಲ್ಲಾ ಕ್ರೀಡಾಂಗಣ ರಸ್ತೆ, ಜಟ್ಪಟ್ ನಗರ, ವಿವೇಕಾನಂದ ನಗರ, ಟೀಚರ್ಸ್ ಕಾಲನಿ ಸೇರಿ ಸುತ್ತಮುತ್ತ ಭಕ್ತರ ಮನೆಯಲ್ಲಿ ಪೂಜೆ ಸ್ವೀಕಾರ. 9ರಂದು ಬ್ರಾಹ್ಮೀ ಮುಹೂರ್ತದ ವೇಳೆ ಸಿಹಿನೀರು ಹೊಂಡದಲ್ಲಿ ಗಂಗಾಪೂಜೆಯ
ನಂತರ ಗುಡಿತುಂಬುವ ಕಾರ್ಯಕ್ರಮದ ಮೂಲಕ ದೇವಿಯನ್ನು ಸ್ವಸ್ಥಾನಕ್ಕೆ ಕರೆತರಲಾಗುವುದು.
10ರಂದು ಕಂಕಣ ವಿಸರ್ಜನೆ, ಜೋಗೂಟದೊಂದಿಗೆ ಜಾತ್ರೆ ಮುಕ್ತಾಯವಾಗಲಿದೆ ಎಂದು ದೇಗುಲದ ಪ್ರಧಾನ ಅರ್ಚಕ ಪೂಜಾರ್ ಕಸ್ತೂರಪ್ಪ ತಿಳಿಸಿದ್ದಾರೆ.
