ಸಮರ್ಥ್ ಗೆ ಸಾದಿಕ್ ಪೈಲ್ವಾನ್ ಸವಾಲ್ ; ಅಖಾಡಕ್ಕೆ ಇಳಿಯೋದು ಖಚಿತ
ದಾವಣಗೆರೆ: ದಾವಣಗೆರೆಯಲ್ಲಿ ಶಾಮನೂರು ಮೊಮ್ಮಗನಿಗೆ ಟಿಕೆಟ್ ಘೋಷಣೆ ಆಗ್ತಿದ್ದಂತೆ ಜಿಲ್ಲೆಯಲ್ಲಿ ಕಾಂಗ್ರೆಸ್ ವಿರುದ್ಧ ಅಲ್ಪಸಂಖ್ಯಾತರು ಸಿಡಿದೆದ್ದಿದ್ದಾರೆ.
ದಾವಣಗೆರೆ ದಕ್ಷಿಣ ಉಪ ಚುನಾವಣೆಯಲ್ಲಿ ಅಲ್ಪಸಂಖ್ಯಾತರಿಗೆ ಟಿಕೆಟ್ ನೀಡಬೇಕು ಎಂದು ಮುಸ್ಲಿಂ ನಾಯಕರು ಪಟ್ಟು ಹಿಡಿದಿದ್ದರು. ಆದರೆ ಸಚಿವ ಎಸ್ಎಸ್ ಮಲ್ಲಿಕಾರ್ಜುನ ಅವರು ಮಗ ಸಮರ್ಥ್ಗೆ ಟಿಕೆಟ್ ಕೊಡಿಸುವಲ್ಲಿ ಗೆದ್ದಿದ್ದಾರೆ. ಇದೀಗ ಶಾಮನೂರು ಕುಟುಂಬದ ವಿರುದ್ದ ಮುಸ್ಲಿಂ ನಾಯಕರು ಸಿಡಿದೇಳು ಭೀತಿ ಎದುರಾಗಿದ್ದು, ಬಿ ಫಾರಂ ಸಿಗದ ಹಿನ್ನೆಲೆ ಮುಸ್ಲಿಂ ಮುಖಂಡ ಸಾದಿಕ್ ಪೈಲ್ವಾನ್ ಕಾಂಗ್ರೆಸ್ ವಿರುದ್ಧ ಕಿಡಿಕಾರಿದ್ದಾರೆ.
ಕಾಂಗ್ರೆಸ್ ಟಿಕೆಟ್ ಸಿಗುವ ನಿರೀಕ್ಷೆಯಾಗಿದ್ದ ಸಾದಿಕ್ ಪೈಲ್ವಾನ್ಗೆ ನಿರಾಸೆಯಾಗಿದ್ದು, ಸಮರ್ಥ್ ಶಾಮನೂರು ವಿರುದ್ಧ ಸ್ಪರ್ಧೆಗೆ ಮುಂದಾಗಿದ್ದಾರೆ. ದಾವಣಗೆರೆಯಲ್ಲಿ ಮಾತಾಡಿದ ಮುಸ್ಲಿಂ ಮುಖಂಡ ಸಾದಿಕ್ ಪೈಲ್ವಾನ್, ಶುಕ್ರವಾದ ವರೆಗೆ ಬಿ- ಫಾರಂ ಸಿಗುವ ಭರವಸೆ ಇತ್ತು. ಆದರೆ ಸಿಕ್ಕಿಲ್ಲ ಇದೀಗ ಶಾಮನೂರು ಫ್ಯಾಮಿಲಿ ವಿರುದ್ಧ ಅಖಾಡಕ್ಕೆ ಇಳಿಯಲು ನಾನು ಸಿದ್ಧ ಎಂದಿದ್ದಾರೆ.
ಅಲ್ಪಸಂಖ್ಯಾತರಿಗೆ ಟಿಕೆಟ್ ಸಿಗುವ ಭರವಸೆ ಇತ್ತು ಆದರೆ, ಬಿ ಫಾರಂ ಸಿಕ್ಕಿಲ್ಲ. 40 ವರ್ಷಗಳಿಂದ ಕಾಂಗ್ರೆಸ್ನಲ್ಲಿ ದುಡಿದ್ದೇನೆ. ಆದ್ರೆ ಈಗ ಕಾಂಗ್ರೆಸ್ ನಿಂದ ಅನ್ಯಾಯ ಆಗಿದೆ. ಕಾಂಗ್ರೆಸ್ಗೆ ಈ ಭಾರಿ ದಾವಣಗೆರೆಯಲ್ಲಿ ಪಾಠ ಕಲಿಸುತ್ತೇವೆ ಎಂದು ಮುಸ್ಲಿಂ ನಾಯಕ ಸವಾಲ್ ಹಾಕಿದ್ದಾರೆ.
ಶಾಮನೂರು ಕುಟುಂಬ ವಿರುದ್ಧ ಅಖಾಡಕ್ಕೆ ಇಳಿಯಲು ಸಿದ್ಧವಾಗಿದ್ದು, ನಾಳೆ ಸಾವಿರಾರು ಜನರ ಬೆಂಬಲದಿಂದ ಕಾಂಗ್ರೆಸ್ ಬಂಡಾಯ ಅಭ್ಯರ್ಥಿ ಆಗಿ ನಾಮಪತ್ರ ಸಲ್ಲಿಕೆಗೆ ನಿರ್ಧಾರ ಮಾಡಿರೋದಾಗಿ ದಾವಣಗೆರೆ ಮುಸ್ಲಿಂ ನಾಯಕ ಸಾದಿಕ್ ಹೇಳಿದ್ದಾರೆ.
