ವಿನಾಯಕ ಚತುರ್ಥೀ ಹಿನ್ನೆಲೆಯಲ್ಲಿ ಇಲ್ಲಿ ಗಣಪತಿ ಪೂಜೆಯ ವಿಧಾನವನ್ನು ನೀಡಲಾಗುತ್ತಿದೆ. ನೆನಪಿನಲ್ಲಿಡಿ, ಪೂಜೆಗೆ ಸಂಬಂಧಿಸಿದ ಮಂತ್ರವನ್ನು ನೀಡುವುದಿಲ್ಲ. ಬದಲಿಗೆ ಪದ್ಧತಿಯನ್ನಷ್ಟೇ ತಿಳಿಸಲಾಗುತ್ತಿದೆ. ಒಂದೋ ಪುರೋಹಿತರನ್ನು ಕರೆಸಿ, ಅವರ ಮೂಲಕ ಮಂತ್ರ ಹೇಳಿಸಿ ಪೂಜೆ ಮಾಡಿಸಬಹುದು. ಅಥವಾ ಈಗೆಲ್ಲ ಆನ್ ಲೈನ್ ನಲ್ಲಿ ಲಭ್ಯವಿರುವ ಪೂಜಾ ಮಂತ್ರ ಹಾಗೂ ಕ್ರಮವನ್ನು ನೋಡಿಕೊಂಡು, ನೀವಾಗಿಯೇ ಪೂಜೆ ಮಾಡಬಹುದು. ಇದು ಯಾವುದು ಅನುಕೂಲವೋ ಅಥವಾ ಸಾಧ್ಯವೋ ನೋಡಿಕೊಂಡು, ನಿರ್ಧರಿಸಿಕೊಳ್ಳಿ.
ಭಾದ್ರಪದ ಮಾಸ ಶುಕ್ಲ ಪಕ್ಷದ ಚತುರ್ಥಿಯಂದು ಗಣಪತಿ ಹಬ್ಬವನ್ನು ಆಚರಿಸಲಾಗುತ್ತದೆ. ಅದಕ್ಕೂ ಮುನ್ನ ಗೌರಿ, ಅಂದರೆ ತದಿಗೆಯಂದು ವಿನಾಯಕನ ತಾಯಿಯ ಪೂಜೆಯನ್ನು ಮಾಡಲಾಗುತ್ತದೆ. ಕೆಲವು ಬಾರಿ ಗೌರಿ- ಗಣೇಶ ವ್ರತಗಳು ಒಂದೇ ದಿನದಂದು ಆಚರಿಸಬೇಕಾಗುತ್ತದೆ. ಇನ್ನೂ ಕೆಲ ಬಾರಿ ಮೊದಲಿಗೆ ಗೌರಿ ವ್ರತ ಹಾಗೂ ಆ ನಂತರದಲ್ಲಿ ವಿನಾಯಕ ವ್ರತವನ್ನು ಆಚರಿಸಲಾಗುತ್ತದೆ. ಈ ಬಾರಿ ಮೊದಲಿಗೆ ಗೌರಿ ಹಾಗೂ ನಂತರದಲ್ಲಿ ಗಣೇಶನ ವ್ರತ ಆಚರಣೆ ಬಂದಿದೆ.
ಗೌರಿ ಪೂಜೆಯನ್ನು ಕೆಲವರು ಪ್ರತ್ಯೇಕವಾಗಿ ಮಾಡುವ ಪದ್ಧತಿ ತಮ್ಮಲ್ಲಿ ಇಲ್ಲ ಎನ್ನುತ್ತಾರೆ. ಆ ಕಾರಣಕ್ಕೆ ಎಲ್ಲಿ ಪ್ರತ್ಯೇಕವಾಗಿ ಗೌರಿ ಪೂಜೆಯನ್ನು ಮಾಡುತ್ತಾರೋ ಅಲ್ಲಿಗೆ ತೆರಳಿ, ಅವರ ಜೊತೆಗೂಡಿ ಪೂಜೆ ಮಾಡುತ್ತಾರೆ. ಅಥವಾ ತಮ್ಮ ಮನೆಯಲ್ಲಿ ಗಣೇಶ ವ್ರತವನ್ನು ಮಾಡುವ ದಿನವೇ ಗೌರಿಯನ್ನು ಜೊತೆಗಿಟ್ಟು ಪೂಜೆ ಮಾಡಿಬಿಡ್ತಾರೆ. ಹೀಗೆ ಇದು ಕೂಡ ನಿಮ್ಮ ಮನೆಗಳಲ್ಲಿ ಯಾವುದು ಈ ತನಕ ಅನುಸರಿಸಿಕೊಂಡು ಬಂದಿರುವ ಪದ್ಧತಿಯೋ ಅಥವಾ ಪೂಜೆಯ ವ್ಯವಸ್ಥೆ ಆಗುವುದೋ ಅದನ್ನು ಶ್ರದ್ಧೆಯಿಂದ ಮಾಡಿಕೊಳ್ಳಿ.
ಈಗ ಪೂಜಾ ಪದ್ಧತಿ ಹಾಗೂ ಆಚರಣೆಯ ಪರಿಚಯ ಹೀಗಿದೆ:
- ಚತುರ್ಥಿ ದಿನದಂದು ಬೆಳಗ್ಗೆ ಬಿಳಿ ಎಳ್ಳನ್ನು ನೀರಿಗೆ ಹಾಕಿ, ಅದರಿಂದ ಸ್ನಾನ ಮಾಡಬೇಕು. ಆ ನಂತರದಲ್ಲಿ ದೈನಂದಿನವಾಗಿ ಮನೆಯಲ್ಲಿ ನಡೆದು ಬಂದಿರುವ ಪೂಜೆಯನ್ನು ಮಾಡಿ ಮುಗಿಸಬೇಕು. ಮಧ್ಯಾಹ್ನದ ಹೊತ್ತಿಗೆ ಗಣಪತಿ ಮೂರ್ತಿಗೆ ಪೂಜೆ ಆರಂಭಿಸಬೇಕು. ಜೇಡಿ ಮಣ್ಣಿನಿಂದ ಮಾಡಿದ ಹಾಗೂ ಸಹಜವಾದ ಸಸ್ಯಜನ್ಯ ಬಣ್ಣಗಳು, ಸಿಂಧೂರ ಹಾಗೂ ಕುಂಕುಮದಂಥ ನೈಸರ್ಗಿಕ ವಸ್ತುಗಳಿಂದ ತಯಾರಾದ ಗಣಪತಿ ಹಾಗೂ ಗೌರಿ ಮೂರ್ತಿಯನ್ನು ಪೂಜೆಗೆ ಇರಿಸಿಕೊಳ್ಳಬೇಕು. ಮೂರ್ತಿಗಳ ಎತ್ತರ ಗಾತ್ರ ಮತ್ತು ಸ್ವರೂಪ ಚಿಕ್ಕದಾಗಿ ಹಾಗೂ ಸಾಂಪ್ರದಾಯಿಕ ರೀತಿಯಲ್ಲಿಯೂ ಇರಬೇಕು. ಅಂದರೆ ಆ ಮೂರ್ತಿಗೆ ಮೂಷಿಕ ವಾಹನ, ಹೊಟ್ಟೆಗೆ ಹಾವು ಬಿಗಿದಂತೆ, ಹಣೆಯ ಮೇಲೆ ಅರ್ಧ ಚಂದ್ರ ಹೀಗೆ ಗಣಪತಿಯ ಸ್ವರೂಪ ಹೇಗೆ ವಿವರಿಸಿದೆಯೋ ಅದೇ ಇರಬೇಕು.
- ಅದಾಗಲೇ ದೈನಂದಿನ ಮನೆಯಲ್ಲಿನ ಪೂಜೆ ಮಾಡಿದಾಗ ಬಳಸಿದ ಹೂವು, ತುಳಸಿ ಹಾಗೂ ಗರಿಕೆಯನ್ನು ಮತ್ತು ಬಳಕೆ ಮಾಡಿರದ ಹೂವು, ತುಳಸಿ, ಗರಿಕೆ- ಪತ್ರೆಗಳನ್ನು ಸಿದ್ಧ ಮಾಡಿಕೊಂಡಿರಬೇಕು. ಮನೆಯಲ್ಲಿನ ಹಿರಿಯರಿಗೆ ನಮಸ್ಕಾರವನ್ನು ಮಾಡಬೇಕು. ಮನೆ ದೇವರು, ಗುರುಗಳು ಇವರನ್ನೆಲ್ಲ ಒಮ್ಮೆ ಮನಸ್ಸಿನಲ್ಲಿ ಸ್ಮರಿಸಬೇಕು. ಮದುವೆ ಆಗಿರುವವರು ದಂಪತಿ ಸಮೇತ ಪೂಜೆಗೆ ಕೂರಬೇಕು. ಅವಿವಾಹಿತರಾಗಿದ್ದಲ್ಲಿ ಒಬ್ಬರೇ ಕೂತುಕೊಳ್ಳಬಹುದು. ಪುರೋಹಿತರ ಮಾರ್ಗದರ್ಶನದಲ್ಲಿ ಪೂಜೆ ಮಾಡುವುದು ಉತ್ತಮ. ಯಾರಿಗೆ ಪುರೋಹಿತರು ದೊರೆಯುವ ಸಾಧ್ಯತೆ ಇಲ್ಲವೋ ಅಂಥವರು ಲಭ್ಯವಿರುವ ಮಾಹಿತಿಯನ್ನು ಅನುಸರಿಸಿ, ಪೂಜೆಯನ್ನು ತಾವೇ ಮಾಡಬಹುದು.
- ಗಣಪತಿ ಪೂಜೆಯನ್ನು ಕಾಯಾ- ವಾಚಾ- ಮನಸಾ ಮಾಡಬೇಕು. ಗಣಪತಿಯನ್ನು ಯಾವ ಮಂಟಪದಲ್ಲಿ ಸ್ಥಾಪನೆ ಮಾಡಿರುತ್ತೀರೋ ಅದರ ಬಲ ಭಾಗದಲ್ಲಿ (ಮಂಟಪದ ಮುಖವಿರುವ ದಿಕ್ಕಿನಿಂದ, ವಿಗ್ರಹದ ಬಲಭಾಗಕ್ಕೆ) ಕೂರಬೇಕು, ಅದಕ್ಕೂ ಮುನ್ನ ಒಮ್ಮೆ ನಮಸ್ಕಾರ ಮಾಡಿಕೊಳ್ಳಬೇಕು. ದೊಡ್ಡ ಹರಿವಾಣದಲ್ಲಿ ಅಕ್ಕಿಯನ್ನು ಹಾಕಿ, ಅದರ ಮೇಲೆ ಗಣಪತಿಯ ಮೂರ್ತಿಯನ್ನು ಕೂರಿಸಿರಬೇಕು. ಒಂದು ವೇಳೆ ಬಲಭಾಗದಲ್ಲಿ ಕೂರುವುದಕ್ಕೆ ಸಾಧ್ಯವಿಲ್ಲ ಎಂದಾದಲ್ಲಿ ಎದುರು ಭಾಗಕ್ಕೆ ಕೂರಬಹುದು, ಅದು ಕೂಡ ಸಾಧ್ಯವಿಲ್ಲದೆ ಹೋದಲ್ಲಿ ಎಡ ಭಾಗದಲ್ಲಿ ಕೂರುವುದು ಕೊನೆ ಆಯ್ಕೆ ಆಗಿರುತ್ತದೆ. ಬಲ ಭಾಗಕ್ಕೆ ಕೂರುವುದು ಶ್ರೇಷ್ಠ.
- ಇನ್ನು ಪೂಜೆಗೆ ಕೂರುವಂಥವರು ಮಣೆಯ ಮೇಲೋ ದರ್ಭಾಸನದ ಮೇಲೋ ಅಥವಾ ಕೃಷ್ಣಾಜಿನದ ಮೇಲೋ ಕೂರಬೇಕು. ಯಾವುದೇ ಕಾರಣಕ್ಕೂ ಬರೀ ನೆಲದ ಮೇಲೆ ಕೂರಬಾರದು. ಆಚಮನ- ಪ್ರಾಣಾಯಾಮ ಹಾಗೂ ಸಂಕಲ್ಪವನ್ನು ಮಾಡಬೇಕು. ಮನಸ್ಸಿನಲ್ಲಿ ಅಪೇಕ್ಷೆ ಏನಿದೆಯೋ ಅದನ್ನು ಹೇಳಿಕೊಳ್ಳಬಹುದು. ಮಂತ್ರಾಕ್ಷತೆಯನ್ನು ಪತಿ ಹಿಡಿದುಕೊಂಡು, ಪತ್ನಿ ಅದರ ಮೇಲೆ ನೀರನ್ನು ಬಿಡಬೇಕು. ಒಬ್ಬರೇ ಪೂಜೆ ಮಾಡುತ್ತಿರುವವರು ಬಲಗೈಯಲ್ಲಿ ಅಕ್ಷತೆಯನ್ನು ಹಿಡಿದುಕೊಂಡು, ಎಡಗೈನಲ್ಲಿ ಉದ್ಧರಣೆಯಿಂದ ನೀರನ್ನು ಬಿಡಬೇಕು. ಅದಾದ ಮೇಲೆ ದೀಪವನ್ನು ಹಚ್ಚಬೇಕು. ಅದಕ್ಕಾಗಿ ಮೊದಲಿಗೆ ಬೆಂಕಿಯ ಕಡ್ಡಿಯಿಂದ ಮಂಗಳಾರತಿಯನ್ನು ಹಚ್ಚಿಕೊಳ್ಳಬೇಕು. ಅಥವಾ ತುಳಸಿ ಕಾಷ್ಠವನ್ನು ಹಚ್ಚಿಕೊಳ್ಳಬೇಕು. ಅದರಿಂದ ದೀಪವನ್ನು ಹಚ್ಚಬೇಕು. ಆ ನಂತರ ಬಲಗೈನಿಂದ ಗಂಟೆಯನ್ನು ತೆಗೆದುಕೊಂಡು, ಗಂಟಾ ವಾದನ ಮಾಡಬೇಕು. (ಯಾವಾಗಲೇ ಗಂಟೆಯನ್ನು ತೆಗೆದುಕೊಳ್ಳುವಾಗಲೂ ಬಲಗೈಯಲ್ಲೇ ತೆಗೆದುಕೊಳ್ಳಬೇಕು, ಆ ನಂತರ ಎಡಗೈಗೆ ಬದಲಿಸಿಕೊಳ್ಳಬೇಕು. ಮಂಗಳಾರತಿ, ಧೂಪಾರತಿ ಆದ ಮೇಲೆ ಎಡಗೈಯಿಂದ ಬಲಗೈಗೆ ಗಂಟೆಯನ್ನು ಬದಲಾಯಿಸಿಕೊಂಡು, ಮುಂಚೆ ಎಲ್ಲಿತ್ತೋ ಅಲ್ಲಿಡಬೇಕು).
- ನಿರ್ವಿಘ್ನ ಗಣಪತಿಯ ಪೂಜೆ ಮಾಡಬೇಕು. ಗಣಪತಿಯ ಪೂಜೆಯನ್ನೇ ಮಾಡುತ್ತಿದ್ದರೂ ಆ ಪೂಜೆಗೆ ಯಾವುದೇ ವಿಘ್ನ ಬರಬಾರದು ಎಂಬ ಕಾರಣಕ್ಕೆ ಮೊದಲಿಗೆ ಗಣಪತಿ ಪೂಜೆಯನ್ನು ಮಾಡಬೇಕು. ಯಾವುದೇ ಪೂಜೆ ಮಾಡುವಾಗಲೂ ಮೊದಲಿಗೆ ಗಣಪತಿ ಪೂಜೆ ಮಾಡಬೇಕು. ಈಗಲೂ ಅಷ್ಟೇ. ಮನೆಯಲ್ಲಿ ಇರುವಂಥ ಲೋಹದ ಗಣಪತಿಗೆ ಪೂಜೆ ಮಾಡಬೇಕು. ಒಂದು ವೇಳೆ ಆ ರೀತಿ ಲೋಹದ ಗಣಪತಿ ಇಲ್ಲ ಎಂದಾದಲ್ಲಿ ಅರಿಶಿಣದ ಕೊಂಬು ಹಾಗೂ ಅಡಿಕೆಯನ್ನು ಇಟ್ಟುಕೊಂಡು, ಅದನ್ನು ಗಣಪತಿ ಎಂದು ಮನಸ್ಸಿನಲ್ಲಿ ಅಂದುಕೊಂಡು ಪೂಜೆ ಮಾಡಬೇಕು. ಹೀಗೆ ಮಾಡುವಾಗ ಕೆಂಪು ಬಣ್ಣದ ವಸ್ತ್ರ ಧರಿಸಿದ, ನಾಲ್ಕು ಕೈಗಳಿರುವ, ಪ್ರಸನ್ನ ವದನನಾದ ಗಣಪತಿ ಅಲ್ಲಿ ಇದ್ದಾನೆ ಎಂದು ಮನಸ್ಸಿನಲ್ಲಿ ಅಂದುಕೊಳ್ಳಬೇಕು.
- ಆಚಮನ, ಅರ್ಘ್ಯ, ಪಾದ್ಯ, ಸ್ನಾನ, ಗಂಧ ಹೀಗೆ ದೇವರಿಗೆ ಅರ್ಪಣೆ ಮಾಡುತ್ತಿದ್ದೇವೆ ಎಂದು ಹೇಳುತ್ತಾ ಮಂತ್ರಾಕ್ಷತೆಯನ್ನು ಹದಿನಾರು ಬಾರಿ ಗಣಪತಿ ಮೇಲೆ ಹಾಕಬೇಕು. ಆ ನಂತರ ಎರಡು ಬಾಳೇಹಣ್ಣು, ಯಾವುದೇ ಹಣ್ಣನ್ನು ದೇವರಿಗೆ ನೈವೇದ್ಯ ಮಾಡಬೇಕು. ಹೂವು- ಮಂತ್ರಾಕ್ಷತೆಯನ್ನು ದೇವರ ಮೇಲೆ ಹಾಕಿ, ಮಂಗಳಾರತಿಯನ್ನು ಮಾಡಬೇಕು. ಕರ್ಪೂರ ಅಥವಾ ಹೂಬತ್ತಿಯ ಆರತಿಯನ್ನು ಮಾಡಬೇಕು. ಅದನ್ನು ಮೊದಲಿಗೆ ಮನೆಯ ಹಿರಿಯರಿಗೆ ಕೊಟ್ಟು, ಆ ನಂತರ ಉಳಿದವರು ತೆಗೆದುಕೊಳ್ಳಬೇಕು. ಅದಾದ ಮೇಲೆ ಕಮಂಡಲದ ನೀರಿನಿಂದ ಕೈ ತೊಳೆಯಬೇಕು. ಆ ನಂತರ ಕೈಯಲ್ಲಿ ಮಂತ್ರಾಕ್ಷತೆ- ಹೂವು ಹಿಡಿದು, ಪ್ರಾರ್ಥನೆ ಮಾಡಬೇಕು. ಎಲ್ಲ ಕಾರ್ಯಗಳು ನಿರ್ವಿಘ್ನವಾಗಿ ನೆರವೇರಲಿ ಅಂತ ಪ್ರಾರ್ಥಿಸಿ, ದೇವರ ಮೇಲೆ ಹಾಕಬೇಕು. ಮತ್ತೊಮ್ಮೆ ಆಚಮನ, ಪ್ರಾಣಾಯಾಮ ಮಾಡಬೇಕು.
- ಒಂದು ಅಥವಾ ಏಳು ಕಳಶಗಳಿಂದ ಪೂಜೆ ಮಾಡುವ ಕ್ರಮ ಇದೆ. ಅದರಲ್ಲಿ ಯಾವುದೇ ಆದರೂ ಆಯ್ಕೆ ಮಾಡಿಕೊಳ್ಳಬಹುದು. ಕಲಶ ಪೂಜೆಯನ್ನು ಮಾಡುವುದಾಗಿ ಸಂಕಲ್ಪ ಮಾಡಿ, ಮಂತ್ರಾಕ್ಷತೆಯನ್ನು ಕೈಲಿ ಹಿಡಿದು, ನೀರನ್ನು ಬಿಡಬೇಕು. ಒಂದು ಪೀಠ, ಅದರ ಮೇಲೆ ತಟ್ಟೆ ಹಾಗೂ ಅದರ ಮೇಲೆ ಒಂದು ಕಲಶವನ್ನು ಇಟ್ಟಿರಬೇಕು. ಅದರಲ್ಲಿ ಶುದ್ಧವಾದ ನೀರಿರಬೇಕು. ಆ ನೀರಿನೊಳಗೆ ದೇವರಿಗೆ ಸಮರ್ಪಣೆ ಮಾಡಿರದ ಹೂವನ್ನು ಹಾಕಬೇಕು. ಅರಿಶಿಣ- ಕುಂಕುಮವನ್ನು ಹಾಕಬೇಕು. ಆ ಕಲಶದ ಮೇಲೆ ಕೈಯಿಟ್ಟು ಕಲಶ ಪೂಜೆ ಮಾಡಬೇಕು. ಆ ನಂತರ ಆ ಕಲಶದ ನಾಲ್ಕೂ ದಿಕ್ಕಿನಲ್ಲಿ ಗಂಧಾಕ್ಷತೆಯನ್ನು ಹಚ್ಚಬೇಕು.
- ಮುಂದೆ, ಗಣಪತಿಯನ್ನು ಕೂರಿಸಿದಂಥ ಮಂಟಪದ ಪೀಠ ಪೂಜೆಯನ್ನು ಮಾಡಬೇಕು.ಕೈಯಲ್ಲಿ ಹೂವು- ಮಂತ್ರಾಕ್ಷತೆಯನ್ನು ಹಿಡಿದುಕೊಳ್ಳಬೇಕು. ಮನಸ್ಸಿನಲ್ಲಿ ಪೀಠ ಹಾಗೂ ಸಿಂಹಾಸನವನ್ನು ಸ್ಮರಿಸಿಕೊಳ್ಳಬೇಕು. ಗಣಪತಿಯ ಕಿಂಕರರು ಎಲ್ಲರನ್ನೂ ಆಹ್ವಾನಿಸಬೇಕು. ಕೈಯಲ್ಲಿರುವ ಹೂವು- ಮಂತ್ರಾಕ್ಷತೆಯನ್ನು ಮಂಟಪದ ಮೇಲ್ಭಾಗದಲ್ಲಿ ಇಡಬೇಕು.
- ಮಂಟಪದಲ್ಲಿ ಇಟ್ಟಿರುವಂಥ ಮಣ್ಣಿನ ಗಣಪತಿ ಮೂರ್ತಿಯ ಒಳಗೆ ಗಣಪತಿಯ ಆವಾಹನೆಯನ್ನು ಮಾಡಿ, ಪೂಜೆ ಮಾಡಬೇಕು. ನಮ್ಮ ಒಳಗೇ ಗಣಪತಿ ಇದ್ದಾನೆ ಅಂತ ಅಂದುಕೊಂಡು ಆವಾಹನೆ ಮಾಡಬೇಕು. ನಮ್ಮ ಕಾಲಿನ ಬೆರಳಿನಿಂದ ತಲೆ ಕೂದಲ ತುದಿಯ ತನಕದ ಚಲನೆ ಅವನಿಂದಲೇ ಆಗುತ್ತದೆ. ಗಣಪತಿ ಆಕಾಶದ ದೇವತೆ ಎಂದು ಸ್ಮರಿಸಿ, ಆ ದೇವರನ್ನು ಆವಾಹನೆ ಮಾಡಬೇಕು. ಇದು ನಾವೇ ಮಂತ್ರ ಹೇಳುತ್ತಾ ಮಾಡುವ ಕ್ರಮವಾಗಿರುತ್ತದೆ. ಬೇರೆಯವರ ಸಲುವಾಗಿ ಮಂತ್ರ ಹೇಳುತ್ತಾ ಪೂಜೆ ಮಾಡಿಸುವಾಗ ಸೂರ್ಯ ಮಂಡಲದಿಂದ ಆವಾಹನೆ ಮಾಡಬೇಕು. ಅದಕ್ಕೂ ಮೊದಲು ಗಣಪತಿಯನ್ನು ಕರೆಯಬೇಕು, ಅದಕ್ಕಾಗಿ ಧ್ಯಾನವನ್ನು ಮಾಡಿ, ಆಹ್ವಾನಿಸಬೇಕು.
- ಷೋಡಶೋಪಚಾರವನ್ನು ಗಣಪತಿಗೆ ಸಮರ್ಪಿಸುವುದೇ ಪೂಜೆ. ಹೀಗೆ ಮೂರು ಸಲ ಅರ್ಪಿಸಬೇಕು. ಧ್ಯಾನ ಮಾಡಬೇಕಾದರೆ ಮಾನಸಿಕವಾಗಿ ಹಾಗೂ ನಮ್ಮ ಕೈಯಲ್ಲಿ ಇಟ್ಟುಕೊಳ್ಳುವಂಥ ಹೂವಿನಲ್ಲಿ ಆ ಗಣಪತಿ ಬಂದು ನೆಲೆಸುತ್ತಾನೆ ಆಗ ಮಾತಿನಿಂದ, ಹೂವಿನಿಂದ ವಿಗ್ರಹಕ್ಕೆ ಅರ್ಪಿಸಿ ಹೀಗೆ ಮೂರು ಬಾರಿ ಹದಿನಾರು ಬಗೆಯ ಈ ಉಪಚಾರಗಳನ್ನು ದೇವರಿಗೆ ಅರ್ಪಿಸಬೇಕು.
ಈ ಕೆಳಗೆ ಹೇಳಿರುವುದನ್ನು ಮೊದಲಿಗೆ ಮಾನಸಿಕವಾಗಿ ಮಾಡಬೇಕು:
ಮಣ್ಣಿನ ಮೂರ್ತಿಗೆ ಗಣಪತಿಯನ್ನು ಆವಾಹನೆ ಮಾಡಬೇಕು. ಯಥಾಶಕ್ತಿಯಿಂದ ಭಕ್ತಿಪೂರ್ವಕವಾಗಿ ಷೋಡಶೋಪಚಾರ ಮಾಡುತ್ತೇವೆ ಎಂದು ಪ್ರಾರ್ಥಿಸಬೇಕು. ಅರ್ಘ್ಯ ಸಮರ್ಪಿಸಬೇಕು, ಪಾದಪೂಜೆ ಮಾಡಬೇಕು, ತಲೆ ಮೇಲೆ ಆ ನೀರು ಪ್ರೋಕ್ಷಣೆ ಮಾಡಿಕೊಂಡು, ಇತರರಿಗೆ ಪ್ರೋಕ್ಷಣೆ ಮಾಡಬೇಕು, ಆಮೇಲೆ ಆಚಮನ ಮಾಡಬೇಕು. ಮಧುಪರ್ಕ ನೀಡಬೇಕು. ಮತ್ತೆ ಆಚಮನ. ಕೈ ಜೋಡಿಸಿ ಪ್ರಾರ್ಥಿಸಿ, ಅಭಿಷೇಕ ಆರಂಭಿಸಬೇಕು. ಎಲ್ಲ ನದಿಗಳ ನೀರು ಕಲಶದಲ್ಲಿ ಇದೆ ಎಂದು ಚಿಂತನೆ ಮಾಡಿ, ನೀರಿನ ಅಭಿಷೇಕ ಮಾಡಬೇಕು. ಕೆಂಪನೆಯ ಎರಡು ರೇಷ್ಮೆ ವಸ್ತ್ರವನ್ನು ಅರ್ಪಣೆ ಮಾಡಬೇಕು (ಅನುಕೂಲವಿದ್ದಲ್ಲಿ ಸಣ್ಣ ಅಳತೆಯ ರೇಷ್ಮೆ ಬಟ್ಟೆಯನ್ನು ತನ್ನಿ). ಇಲ್ಲದಿದ್ದಲ್ಲಿ ಸಮರ್ಪಣೆ ಮಾಡುತ್ತಿದ್ದೇವೆ ಎಂದು ಭಾವಿಸಿ, ಮಂತ್ರಾಕ್ಷತೆಯನ್ನು ಹಾಕಿ. ಯಜ್ಞೋಪವೀತವನ್ನು ಅರ್ಪಿಸಬೇಕು. ಗಂಧವನ್ನು ಅರ್ಪಿಸಬೇಕು. ಮೂರ್ತಿಯ ಹಣೆಗೆ ಕುಂಕುಮ ಇಡಬೇಕು. ಪುಷ್ಪಾರ್ಚನೆಯನ್ನು ಮಾಡಬೇಕು. ಗರಿಕೆಯನ್ನು ಅರ್ಪಿಸಬೇಕು (ಎಳೆ ಗರಿಕೆಯಾಗಿದ್ದು, ಬೆಸ ಸಂಖ್ಯೆಯಲ್ಲಿ ಇರಬೇಕು). ಧೂಪವನ್ನು ಅರ್ಪಿಸಬೇಕು. ದೀಪವನ್ನು ಅರ್ಪಿಸುತ್ತಿದ್ದೇವೆ. ಗಣಪತಿಯ ಬಲ ಭಾಗಕ್ಕೆ ಮಂಡಲವನ್ನು ಮಾಡಿ, ಬಾಳೆ ಎಲೆಯನ್ನು ಹಾಸಿ, ತುಪ್ಪ ಹಾಕಿ, ಆ ದಿನ ಮಾಡಿದ ಎಲ್ಲ ಅಡುಗೆಯನ್ನು ಬಡಿಸಿ, ವಿವಿಧ ಭಕ್ಷ್ಯಗಳನ್ನು, ಮೋದಕ- ಕಡುಬುಗಳನ್ನು (ಇಪ್ಪತ್ತೊಂದರ ಸಂಖ್ಯೆಯಲ್ಲಿ), ಹಣ್ಣುಗಳನ್ನು, ತಾಂಬೂಲವನ್ನು ಇಟ್ಟು, ಪ್ರಾರ್ಥನೆ ಮಾಡುತ್ತಾ ನೈವೇದ್ಯವನ್ನು ಮಾಡಬೇಕು. ವಾದ್ಯ ಘೋಷ, ನೀರಾಜನ ಮಾಡುತ್ತಿದ್ದೇವೆ ಅಂದುಕೊಳ್ಳಬೇಕು. ಪಾದ- ಹೊಟ್ಟೆ- ಮುಖ ಹಾಗೂ ಇಡೀ ದೇಹಕ್ಕೆ ಆರತಿ, ಮಂಗಳ ನೀರಾಜನ ಮಾಡಬೇಕು. ನಮ್ಮನ್ನು ರಕ್ಷಣೆ ಮಾಡು ಎಂದು ಪ್ರಾರ್ಥಿಸಿ, ಹೂವು- ಮಂತ್ರಾಕ್ಷತೆಯನ್ನು ಹಾಕಿ, ಪ್ರದಕ್ಷಿಣೆ ನಮಸ್ಕಾರವನ್ನು ಮಾಡಬೇಕು.
ಈಗ ಮಾತಿನಿಂದ, ಮಂತ್ರ ಹೇಳಿಕೊಳ್ಳುತ್ತಾ ಷೋಡಶೋಪಚಾರ ಮಾಡಬೇಕು. ಶ್ರೀ ಮಹಾಗಣಪತೆಯೇ ನಮಃ ಅಂತ ಹನ್ನೊಂದು ಬಾರಿ ಹೇಳಿಕೊಳ್ಳಬೇಕು. ಹೂವನ್ನು ಕೈಲಿ ಹಿಡಿದು, ದೇವರ ಮೂರ್ತಿಯನ್ನು ಸ್ಪರ್ಶ ಮಾಡಿ, ಅಲ್ಲಿಯೇ ಬಿಡಬೇಕು.
ಇದೀಗ ಕಳಶದ ನೀರನ್ನು ತೆಗೆದುಕೊಂಡು ಕ್ರಿಯೆಯ ಮೂಲಕ ಇವೆಲ್ಲವನ್ನೂ ಮಾಡಬೇಕು. ಅದಕ್ಕಾಗಿ ಒಂದು ಪಾತ್ರೆಯನ್ನು ಮಂಟಪದ ಮುಂದೆ ಇಟ್ಟುಕೊಂಡು, ಕ್ರಿಯೆಯಾಗಿ ಮಾಡಬೇಕು. ಅರ್ಘ್ಯ, ಆಚಮನ ಎಲ್ಲಕ್ಕೂ ಪಾತ್ರೆಯಲ್ಲಿ ನೀರನ್ನು ಹಾಕಬೇಕು. ಅರ್ಘ್ಯ, ಆಚಮನ (ಹೀಗೆ ಅಂದರೆ ಮೂರು ಬಾರಿ ನೀರನ್ನು ಪಾತ್ರೆಯೊಳಗೆ ಬಿಡುವುದು), ಪಾದ್ಯ, ಆಚಮನ, ಮಧುಪರ್ಕ (ಮೊಸರು, ತುಪ್ಪ, ಜೇನುತುಪ್ಪ), ಆಚಮನ, ಲೋಹದ ಗಣಪತಿಯನ್ನು ಒಂದು ತಟ್ಟೆಯಲ್ಲಿ ಇಟ್ಟುಕೊಂಡು, ಪಂಚಾಮೃತ ಅಭಿಷೇಕವನ್ನು ಮಾಡಬೇಕು. ಲೋಹದ ಗಣಪತಿ ಇಲ್ಲ ಅಂದಲ್ಲಿ ಅಡಿಕೆ- ಅರಿಶಿಣ ಕೊಂಬಿಗೆ ಮಾಡಬೇಕು. ಹಾಲು, ಮಜ್ಜಿಗೆ (ಮೊಸರಿನಿಂದ ಬೆಣ್ಣೆಯನ್ನು ತೆಗೆದ ಮಜ್ಜಿಗೆ ಆಗಬೇಕು), ತುಪ್ಪ, ಜೇನುತುಪ್ಪ, ಸಕ್ಕರೆ, ನೀರಿನಿಂದ (ಉದ್ಧರಣೆಯಿಂದ ನೀರು ತೆಗೆದುಕೊಳ್ಳಿ) ಅಭಿಷೇಕ ಮಾಡಿ. ಪುಷ್ಪದಿಂದ ನೀರು ಚಿಮುಕಿಸಿ, ಗಣಪತಿ ಮೂರ್ತಿಗೆ ಸ್ನಾನ ಮಾಡಿಸಿ. ಎರಡು ರೇಷ್ಮೆ ವಸ್ತ್ರ ಅರ್ಪಿಸಿ, ಇಲ್ಲದಿದ್ದಲ್ಲಿ ಪುಷ್ಪವನ್ನು ಅರ್ಪಿಸಿ. ಇಪ್ಪತ್ತೊಂದು ಎಳೆಗಳ ಗೆಜ್ಜೆವಸ್ತ್ರ, ಆಭರಣ (ಮನಸ್ಸಲ್ಲಿ ಸ್ಮರಿಸಿ). ಅರ್ಪಿಸಿ. ಎರಡು ಜನಿವಾರವನ್ನು ಗಣಪತಿ ಮೂರ್ತಿಗೆ ಹಾಕಬೇಕು. ಮಂಟಪ- ಪೀಠವನ್ನು ಅರ್ಪಿಸಬೇಕು. ಗಂಧವನ್ನು ಸಮರ್ಪಿಸಬೇಕು. ಮಂತ್ರಾಕ್ಷತೆ ಗಣಪತಿ ಮೂರ್ತಿಗೆ ಹಾಕಬೇಕು. ಪುಷ್ಪದಿಂದ ಅರ್ಚನೆ ಮಾಡಿ. ಮನಸ್ಸಿನಲ್ಲಿ ಎಲ್ಲ ಥರದ ಹೂವನ್ನು ಸ್ಮರಣೆ ಮಾಡುತ್ತಾ ಅರ್ಪಿಸಿ. ಅಷ್ಟು ಪ್ರಮಾಣದಲ್ಲಿ ಹೂವಿಲ್ಲದಿದ್ದರೆ ಮಂತ್ರಾಕ್ಷತೆಯನ್ನು ಅರ್ಪಿಸಬಹುದು. ಗಣಪತಿಯ ವಿವಿಧ ಅಂಗಗಳನ್ನು ಹೂವಿನಿಂದ ಪೂಜೆ ಮಾಡಬೇಕು. ಪತ್ರಗಳು (ವಿವಿಧ ಎಲೆಗಳು) ಪೂಜೆ ಮಾಡಬೇಕು. ವಿವಿಧ ಪುಷ್ಪ ಪೂಜೆ ಮಾಡಬೇಕು.ಧೂಪಾರತಿ (ಕೆಂಡವನ್ನು ಹಾಕಿ ಹಾಗೂ ಅದರ ಮೇಲೆ ದಶಾಂಗ ಮತ್ತು ಅದರ ಮೇಲೆ ತುಪ್ಪವನ್ನು ಹಾಕಿ) ಮಾಡಬೇಕು. ಆನಂತರ ಹಲಗಾರತಿಯಲ್ಲಿ ಮೂರು ಬತ್ತಿಯನ್ನು ಇಟ್ಟುಕೊಂಡು, ಆರತಿ ಮಾಡಬೇಕು. ಗಣಪತಿಗೆ ಒಂದು ಬಾರಿ ಕಾಲಿನಿಂದ ತಲೆಯವರೆಗೆ, ತಲೆಯಿಂದ ಕಾಲಿನವರೆಗೆ ಪೂರ್ಣವಾಗಿ, ಎರಡನೇ ಬಾರಿಯೂ ಅದೇ ರೀತಿ ಪೂರ್ಣವಾಗಿ, ಮೂರನೇ ಬಾರಿಗೆ ಕಾಲಿನಿಂದ ತಲೆಯವರೆಗೆ ಮಂಗಳಾರತಿ ಮಾಡಿ, ಹಾಗೇ ಮಧ್ಯಕ್ಕೆ ಇಳಿಸಬೇಕು. ಇದು ಎರಡೂವರೆ ಬಾರಿ ಆಗುತ್ತದೆ. ನೈವೇದ್ಯಕ್ಕೆ ಮುಂಚೆ ಮಾಡುವ ಮಂಗಳಾರತಿಯನ್ನು ಹೀಗೇ ಮಾಡಬೇಕು. ಈ ಮಂಗಳಾರತಿಯನ್ನು ತೆಗೆದುಕೊಳ್ಳಬಾರದು. ಆ ಅಗ್ನಿಯನ್ನು ಪೂಜೆ ಮಾಡುವವರು ಶಾಂತಗೊಳಿಸಿ ಬಿಡಬೇಕು.ದೇವರಿಗೆ ನೈವೇದ್ಯ ಸಮರ್ಪಣೆ ಮಾಡಬೇಕು. ಮಂಡಲವನ್ನು ಮಾಡಿ, ಅದರ ಮೇಲೆ ಶ್ರೀಕಾರವನ್ನು ಬರೆದು, ಮನೆಯಲ್ಲಿ ಮಾಡಿದ ಎಲ್ಲ ಪದಾರ್ಥಗಳನ್ನು ಒಂದು ತಟ್ಟೆ ಹಾಗೂ ಅದರ ಮೇಲೆ ಬಾಳೆಎಲೆಯನ್ನು ಇಟ್ಟು ಬಡಿಸಬೇಕು. ಮತ್ತೊಂದು ತಟ್ಟೆಯಲ್ಲಿ ಇಪ್ಪತ್ತೊಂದು ಮೋದಕ, ಇನ್ನೊಂದು ಮಂಡಲ ಅದೇ ರೀತಿ ಬರೆದು, ಹಣ್ಣು- ಹಾಲು, ನೀರು ಇವಿಷ್ಟನ್ನೂ ನೈವೇದ್ಯಕ್ಕೆ ಇಡಬೇಕು. ನೆನಪಿನಲ್ಲಿ ಇಡಿ, ಗಣಪತಿಯ ಬಲಭಾಗಕ್ಕೆ ಮಂಡಲ ಬರುವಂತೆ ಮಾಡಿ, ಇಡುವುದು ಶ್ರೇಷ್ಠ. ಯಾವುದೆಲ್ಲ ಪದಾರ್ಥಗಳು ಇವೆಯೋ ಅವೆಲ್ಲದರ ಮೇಲೆ ಚಿಮುಕಿಸುತ್ತಾ ಗಣಪತಿಗೆ ಅರ್ಪಣೆ ಮಾಡಬೇಕು. ಪಂಚ ಪ್ರಾಣಾಹುತಿ ನೀರಿನಲ್ಲಿ ಅರ್ಪಿಸಬೇಕು. ಮೋದಕ ಮೊದಲಾದವುಗಳನ್ನು ಸ್ವೀಕರಿಸು ಎಂದು ಪ್ರಾರ್ಥಿಸಬೇಕು. ಕೆಲ ಕ್ಷಣಗಳ ಕಾಲ ಕಣ್ಣು ಮುಚ್ಚಿಕೊಂಡು, ಇವೆಲ್ಲವನ್ನೂ ಸಾಕ್ಷಾತ್ ಗಣಪತಿ ಸ್ವೀಕರಿಸುತ್ತಿದ್ದಾನೆ ಎಂದು ಚಿಂತನೆ ಮಾಡಬೇಕು. ಮಂಟಪದ ಎಡಗಡೆ ಪಾತ್ರೆಯನ್ನು ಇಟ್ಟು, ಕೈ ತೊಳೆಯಲು, ಮುಖ ತೊಳೆಯಲು ಒಮ್ಮೊಮ್ಮೆ, ಬಾಯಿ ಮುಕ್ಕಳಿಸಲು ಹನ್ನೆರಡು ಬಾರಿ ನೀರನ್ನು ಬಿಡಬೇಕು. ಆಚಮನಕ್ಕೆ ನೀರು ಬಿಡಬೇಕು. ಹಣ್ಣುಗಳನ್ನು ನೈವೇದ್ಯ ಮಾಡಬೇಕು. ತಾಂಬೂಲವನ್ನು ತಟ್ಟೆಯಲ್ಲಿ ಇಟ್ಟು ಅರ್ಪಿಸಬೇಕು. ಎಲೆ- ಅಡಿಕೆ- ದಕ್ಷಿಣೆ ಸಹಿತ ಅರ್ಪಿಸಬೇಕು. ಮಂಗಳಾರತಿಯನ್ನು ಮಾಡಬೇಕು. ಗಣಪತಿ ಸ್ತೋತ್ರ ಹೇಳುತ್ತಾ, ಅನೇಕ ನೀರಾಜನ ಹತ್ತಿಸಿ, ಗಂಟೆ- ಜಾಗಟೆಗಳನ್ನು ಬಾರಿಸುತ್ತಾ ಆರತಿ ಮಾಡಬೇಕು. ಎರಡು ಗರಿಕೆಯಂತೆ ತೆಗೆದುಕೊಂಡು, ಇಪ್ಪತ್ತೊಂದು ಕನಿಷ್ಠ ಮತ್ತು ಗರಿಷ್ಠ ಎಷ್ಟು ಗರಿಕೆಯಾದರೂ ಬಳಸಿ ದೇವರಿಗೆ ಅರ್ಪಣೆ ಮಾಡಬೇಕು.
- ಎರಡೂ ಕೈಗಳಲ್ಲಿ ಹೂವು ತೆಗೆದುಕೊಂಡು ದೇವರಿಗೆ ಅರ್ಪಿಸಬೇಕು. ಮನಸ್ಸಿನಲ್ಲಿ ಪ್ರಾರ್ಥನೆ ಹೇಳಿಕೊಂಡು, ಅರ್ಪಿಸಬೇಕು.
- ಛತ್ರ, ಚಾಮರಾದಿ, ದರ್ಪಣ, ಗೀತಾ, ವಾದ್ಯ, ಪಲ್ಲಕ್ಕಿ ಮೊದಲಾದವನ್ನು ಅರ್ಪಿಸುತ್ತಿದ್ದೇವೆ ಎಂದು ಮಂತ್ರಾಕ್ಷತೆಯನ್ನು ಹಾಕಬೇಕು.
- ಮಂಟಪದ ಸುತ್ತ ಪ್ರದಕ್ಷಿಣೆ ಬರುವುದಕ್ಕೆ ಸಾಧ್ಯವಿದ್ದಲ್ಲಿ ಪ್ರದಕ್ಷಿಣೆ ಮಾಡಿ, ನಮಸ್ಕರಿಸಿ. ಅಂಥದ್ದೊಂದು ಸಾಧ್ಯತೆ ಇಲ್ಲದಿದ್ದಲ್ಲಿ ನಿಂತಲ್ಲಿಂದಲೇ ಸಾಷ್ಟಾಂಗ ನಮಸ್ಕಾರವನ್ನು (ಪುರುಷರು) ಮಾಡಿ. ಯಾವುದೇ ಕಾರಣಕ್ಕೂ ನಿಂತಲ್ಲಿಯೇ ಪ್ರದಕ್ಷಿಣೆಯನ್ನು ಮಾಡಬೇಡಿ.
- ಕೈಯಲ್ಲಿ ಮಂತ್ರಾಕ್ಷತೆ- ಪುಷ್ಪವನ್ನು ಹಿಡಿದು, ಪತ್ನಿಯ ಕೈಯಲ್ಲಿ ನೀರನ್ನು ಹಾಕಿಸಿಕೊಂಡು, ದೇವರಿಗೆ ಸಮರ್ಪಣೆ ಮಾಡಬೇಕು. ಆರಂಭದಲ್ಲಿಯೇ ಹೇಳಿದಂತೆ ಒಬ್ಬರೇ ಪೂಜೆ ಮಾಡುತ್ತಾ ಇದ್ದಲ್ಲಿ ಎಡಗೈಯಿಂದು ಉದ್ಧರಣೆಯಿಂದ ಕೈಯಿಂದ ನೀರು ಹಾಕಿಕೊಂಡು ಬಲಗೈಯಿಂದ ಹೂವು- ಮಂತ್ರಾಕ್ಷತೆ ಬಿಡಬೇಕು.
- ಈ ಪೂಜೆಯ ವೇಳೆ ಮಂತ್ರ, ಕ್ರಮ, ಪದ್ಧತಿ, ಶ್ರದ್ಧೆ ಇವುಗಳಲ್ಲಿ ದೋಷವೇನಾದರೂ ಸಂಭವಿಸಿದಲ್ಲಿ ಕ್ಷಮೆ ಇರಲಿ ಎಂದು ಪ್ರಾರ್ಥಿಸಬೇಕು. ಈ ಎಲ್ಲ ಪೂಜೆಯನ್ನು ಕೃಷ್ಣನಿಗೆ ಅರ್ಪಿಸಬೇಕು. ಹೂವು- ಮಂತ್ರಾಕ್ಷತೆಯನ್ನು ಕೈಲಿ ಹಿಡಿದು, ಗಣಪತಿಯು ಮತ್ತೆ ನಮ್ಮ ದೇಹದೊಳಗೆ ಪ್ರವೇಶಿಸಲಿ ಎಂದು ಪ್ರಾರ್ಥಿಸಿ, ತಲೆಯ ಮೇಲೆ ಹೂವಿಟ್ಟುಕೊಂಡು, ಮಂತ್ರಾಕ್ಷತೆ ನೀರನ್ನು ಬಿಡಬೇಕು.
- ವಾಯನ ದಾನ ಅಂತ ಸಿದ್ಧ ಮಾಡಿಕೊಳ್ಳಬೇಕು. ಅದಕ್ಕಾಗಿ ಸಂಕಲ್ಪ ಮಾಡಬೇಕು. ಅದನ್ನು ಜ್ಞಾನಿಗಳಾದವರಿಗೆ ದಾನ ಮಾಡಬೇಕು. ತಾಂಬೂಲ- ದಕ್ಷಿಣೆ ಸಹಿತ ಕೊಡಬೇಕು. ಒಂದು ವೇಳೆ ಪುರೋಹಿತರು ಇದ್ದಲ್ಲಿ ದಾನ- ದಕ್ಷಿಣೆ ನೀಡಬೇಕು. ಅದಾದ ಮೇಲೆ ತೀರ್ಥ, ಪಂಚಾಮೃತ ತೆಗೆದುಕೊಂಡು, ಊಟವನ್ನು ಮಾಡಬೇಕು.
- ಸಾಯಂಕಾಲ ಪೂಜೆ ಮಾಡಿ, ಗಣಪತಿ ಕಥೆಯನ್ನು ಹೇಳಬೇಕು, ಮಂಗಳಾರತಿ, ನೈವೇದ್ಯ, ಉದ್ವಾಸನೆ ಮಾಡಿ, ಆ ನಂತರ ಗೌರಿ- ಗಣೇಶ ಮೂರ್ತಿಯನ್ನು ಯಾವುದೇ ರೀತಿ ಭಂಗವಾಗದಂತೆ ಶುದ್ಧವಾದ ನೀರಿನಲ್ಲಿ ವಿಸರ್ಜನೆ ಮಾಡಬೇಕು.
- ಗಣಪತಿಗೆ ಕೆಂಪು ಬಣ್ಣದ ರೇಷ್ಮೆವಸ್ತ್ರವನ್ನು ಅರ್ಪಿಸಿದ್ದಲ್ಲಿ ಆ ನಂತರದಲ್ಲಿ ಅದನ್ನು ಶೇಷ ವಸ್ತ್ರ ಎನ್ನಲಾಗುತ್ತದೆ. ಪೂಜೆಯ ನಂತರದಲ್ಲಿ ಅದನ್ನು ದೇವರ ಮನೆಯಲ್ಲೋ ಅಥವಾ ಶುದ್ಧವಾದ ಸ್ಥಳವೊಂದರಲ್ಲಿ ಇಟ್ಟುಕೊಳ್ಳಬೇಕು. ಅನಾರೋಗ್ಯವೋ ಸಂದಿಗ್ಧವೋ ಸಮಸ್ಯೆಯೋ ಎದುರಾದಾಗ ಅದಕ್ಕೆ ನಮಸ್ಕರಿಸಿ, ಪ್ರಾರ್ಥಿಸುವುದರಿಂದ ಅನುಕೂಲ ಆಗುತ್ತದೆ.
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ಹೌದು, ನಿಮ್ಮ ಊರಿನಲ್ಲಿ ಜಾತ್ರೆ, ಸಭೆ, ಸಮಾರಂಭಗಳು ನಡೆದರೆ ಅದನ್ನು ಬಯಲುಸೀಮೆಟೈಮ್ಸ್.ಕಾಂ ಮೂಲಕ ನಾಡಿಗೆ ತಿಳಿಸಿ. ಅಷ್ಟೇ ಅಲ್ಲ ನಿಮ್ಮೂರಿನ ರಸ್ತೆ, ಚರಂಡಿ, ಆಸ್ಪತ್ರೆ , ಶಾಲೆ ಯಾವುದೇ ಸಮಸ್ಯೆ ಇದ್ದರೂ ಅಧಿಕಾರಿಗಳ ಕಣ್ಣು ತೆರೆಯುವಂತೆ ಸುದ್ದಿ ಮಾಡಿ. ನೀವು ಜಸ್ಟ್ ನಮ್ಮ ವಾಟ್ಸ್ ಆಪ್ ಸಂಖ್ಯೆಗೆ ಸುದ್ದಿ ಕಳುಹಿಸಿ ಉಳಿದದ್ದನ್ನು ಬಯಲುಸೀಮೆಟೈಮ್ಸ್.ಕಾಂ ಮಾಡಲಿದೆ. ನಮ್ಮ ವಾಟ್ಸ್ ಆಪ್ ಸಂಖ್ಯೆ: +91 96201 39796
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.







