ಒಳ ಮೀಸಲಾತಿಯ ಸರ್ಕಾರದ ಸೂತ್ರದಲ್ಲಿನ ಗೊಂದಲಗಳ ಬಗ್ಗೆ ಸಿಎಂ ಸಿದ್ದರಾಮಯ್ಯ ಸ್ಪಷ್ಟನೆ ನೀಡಬೇಕು ಎಂದು ಮಾದರ ಚೆನ್ನಯ್ಯ ಸ್ವಾಮೀಜಿ ಒತ್ತಾಯಿಸಿದರು.ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಆಗಸ್ಟ್ 19ರಂದು ತಡರಾತ್ರಿಯವರೆಗೆ ನಡೆದ ಸಚಿವ ಸಂಪುಟ ಸಭೆಯಲ್ಲಿ 6, 6, 5ರ ಒಳಮೀಸಲಾತಿ ಸೂತ್ರಕ್ಕೆ ಸರ್ಕಾರ ಒಪ್ಪಿಗೆ ಸೂಚಿಸಿದೆ. ಆಗಸ್ಟ್ 20 ರಂದು ಸಿಎಂ ಸಿದ್ದರಾಮಯ್ಯಸಚಿವ ಸಂಪುಟ ಸಭೆಯ ನಿರ್ಧಾರವನ್ನು ಹೇಳಿಕೆಯ ರೂಪದಲ್ಲಿ ಎರಡೂ ಸದನಗಳಲ್ಲಿ ಪ್ರಕಟಿಸಿದ್ದಾರೆ. ವಿರೋಧ ಪಕ್ಷದವರು ಕೇಳಿದ ಸ್ಪಷ್ಟನೆಗಳಿಗೆ ಮುಖ್ಯಮಂತ್ರಿಗಳಾಗಲಿ, ಅನ್ಯ ಸಚಿವರಾಗಲಿ ಉತ್ತರಿಸಲಿಲ್ಲ. ಈಗಿನ ಮಾಹಿತಿಗಳ ಪ್ರಕಾರ ಸಚಿವ ಸಂಪುಟದ ನಿರ್ಧಾರದ ಸ್ವರೂಪಗಳು ಇನ್ನೂ ಅಂತಿಮವಾಗಿಲ್ಲ. ಸಚಿವ ಸಂಪುಟದ ನಿರ್ಧಾರಕ್ಕೆ ಸರ್ಕಾರದ ಅಂಕಿತವೂ ಬಿದ್ದಿಲ್ಲ ಎಂದು ತಿಳಿದು ಬಂದಿದೆ.
ಇನ್ನೂ ಮಾದಿಗ ಸಮಾಜದ ಮಠಾಧೀಶರಾಗಿ ಈ ಇಡೀ ಬೆಳವಣಿಗೆಯ ಬಗ್ಗೆ, ಆನಂತರದ ಪರಿಣಾಮಗಳ ಬಗ್ಗೆ ನಮ್ಮ ನಿರಂತರ ಗಮನವಿದೆ. ಕಾಂಗ್ರೆಸ್ ಪಕ್ಷದಲ್ಲಿ ಮೊದಲಿನಿಂದಲೂ ಒಳಮೀಸಲಾತಿಯ ಬಗ್ಗೆ ಒಳ ವಿರೋಧಗಳಿತ್ತು. ಅದನ್ನು ನಿಭಾಯಿಸುವ ಸವಾಲು ಮುಖ್ಯಮಂತ್ರಿಗಳಿಗಿತ್ತು ಎಂದರು.ನ್ಯಾ. ನಾಗಮೋಹನ್ ದಾಸ್ ವರದಿಯ ಮೂಲ ಆಶಯಕ್ಕೆ ಹಾಗೂ ಸುಪ್ರೀಕೋರ್ಟ್ ತೀರ್ಪಿನ ಆಶಯಕ್ಕೆ ಸರ್ಕಾರ ಧಕ್ಕೆ ಮಾಡಿದಂತೆ ಕಾಣುತ್ತಿದೆ. ಮುಖ್ಯಮಂತ್ರಿಗಳು ಒಳ ಒತ್ತಡಕ್ಕೆ ಮಣಿದಿದ್ದಾರೆ. ಆದರೂ ಅವರು ಒಳಮೀಸಲಾತಿಯ ಸೂತ್ರಕ್ಕೆ ಸಂಪುಟದ ಸಮ್ಮತಿ ಸಿಗುವಂತೆ ಮಾಡಿದ್ದಾರೆ. ಮುಖ್ಯಮಂತ್ರಿಗಳು ವಹಿಸಿದ ಮುತುವರ್ಜಿಯನ್ನು ನಮ್ಮ ಮಠ ಅಭಿನಂದಿಸುತ್ತದೆ. ಒಳ ಮೀಸಲಾತಿಯ ಸರ್ಕಾರದ ಸೂತ್ರದಲ್ಲಿನ ಗೊಂದಲಗಳ ಬಗ್ಗೆಯೂ ಶ್ರೀ ಮಠ ಮುಖ್ಯಮಂತ್ರಿಗಳ ಸ್ಪಷ್ಟನೆಯನ್ನ ಬಯಸುತ್ತದೆ ಎಂದು ಹೇಳಿದರು.ಕಳೆದ ವರ್ಷ ಸುಪ್ರೀಂಕೋರ್ಟ್ ತನ್ನ ತೀರ್ಪಿನಲ್ಲಿ ಒಳ ಮೀಸಲಾತಿ ಜಾರಿ ಮಾಡುವ ಅಧಿಕಾರ ರಾಜ್ಯಗಳಿಗೆ ಇದೆ ಎಂದು ಸ್ಪಷ್ಟವಾಗಿ ಹೇಳಿತು. ನಿಖರ ದತ್ತಾಂಶಗಳು ಮತ್ತು ಹಿಂದುಳಿದಿರುವಿಕೆಯನ್ನು ಆಧರಿಸಿ, ಪರಿಶಿಷ್ಟ ಜಾತಿಗಳ ವರ್ಗೀಕರಣ ಆಗಬೇಕೆಂದು ನಿರ್ದೇಶಿಸಿತ್ತು. ಇದನ್ನು ಆಧರಿಸಿಯೇ ನ್ಯಾ.ನಾಗಮೋಹನ್ ದಾಸ್ ಐದು ಪ್ರವರ್ಗಗಳನ್ನು ರೂಪಿಸಿದ್ದರು. ಆದರೆ ಈಗ ಸರ್ಕಾರ ರೂಪಿಸಿರುವ ಸೂತ್ರದಲ್ಲಿ ಐದರ ಬದಲು ಮೂರು ಪ್ರವರ್ಗಗಳು ಮಾತ್ರ ಇದೆ. ಈ ಸೂತ್ರ ಸುಪ್ರೀಂಕೋರ್ಟ್ ನ ಆಶಯವನ್ನು ಪ್ರತಿನಿಧಿಸುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಹೊಸ ಸೂತ್ರದಲ್ಲಿ ಅತ್ಯಂತ ಹೆಚ್ಚು ಹಿಂದುಳಿದ ಅಲೆಮಾರಿ ಜಾತಿಗಳಿದ್ದ ‘A’ ಪ್ರವರ್ಗವನ್ನು ಕಡಿಮೆ ಹಿಂದುಳಿದ ‘D’ ಪ್ರವರ್ಗದ ಜೊತೆ ಏಕಪಕ್ಷೀಯವಾಗಿ ಸೇರಿಸಲಾಗಿದೆ. ಹೆಚ್ಚಿನ ಮೀಸಲಾತಿ ಕೇಳುತ್ತಿರುವ ಭೋವಿ, ಬಂಜಾರ ಸಮುದಾಯಗಳು ಕೂಡ ಈ ಸೇರ್ಪಡೆಯನ್ನು ಒಪ್ಪುತ್ತಿಲ್ಲ. ಅಲೆಮಾರಿ ಸಮುದಾಯಗಳೂ ಈ ಸೇರ್ಪಡೆಯ ಬಗ್ಗೆ ಪ್ರತಿಭಟನೆಗೆ ಇಳಿದಿವೆ. ಈ ಸೇರ್ಪಡೆಯಲ್ಲಿ’ ಸುಪ್ರೀಂಕೋರ್ಟ್ ಆಶಯ’ ಕಾಣೆಯಾಗಿದೆ ಎಂಬುದು ನಮ್ಮ ಭಾವನೆ ಎಂದರು.ಹಾಗೆಯೇ ನ್ಯಾ ನಾಗಮೋಹನದಾಸ್ ಮೂಲ ಜಾತಿಗಳನ್ನು ಗುರುತಿಸಿಕೊಳ್ಳದ ಆದಿಆಂಧ್ರ, ಆದಿದ್ರಾವಿಡ, ಆದಿಕರ್ನಾಟಕ ಮೂಲದ 4.74 ಲಕ್ಷ ಜನಸಂಖ್ಯೆಯ ಸಮೂಹವನ್ನು ‘E’ ಪ್ರವರ್ಗ ಎಂದು ಗುರುತಿಸಿತ್ತು. ಸಚಿವ ಸಂಪುಟದ ಸೂತ್ರದಲ್ಲಿ ‘E’ ಪ್ರವರ್ಗವನ್ನು ತೆಗೆಯಲಾಗಿದೆ. ‘E’ ಪ್ರವರ್ಗದಲ್ಲಿ ಮೂರು ಜಾತಿಗಳು ಇದ್ದವು. ಆದಿಆಂಧ್ರ : 7114 ಜನಸಂಖ್ಯೆ,ಆದಿದ್ರಾವಿಡ:320641ಆದಿಕರ್ನಾಟಕ:147199ಮುಖ್ಯಮಂತ್ರಿಗಳ ಸದನದ ಹೇಳಿಕೆಯ ಪ್ರಕಾರ ‘E’ ಪ್ರವರ್ಗದ ಶೇ 1ರ ಮೀಸಲಾತಿಯನ್ನು ‘C’ ಪ್ರವರ್ಗಕ್ಕೆ ವರ್ಗಾಯಿಸಿಲಾಗಿದೆ. ಆದರೆ ಜನಸಂಖ್ಯೆಯನ್ನು ಸಮಾನವಾಗಿ ಅಂದರೆ ತಲಾ 2.37 ಲಕ್ಷವನ್ನು ‘B’ ಮತ್ತು ‘C’ ಪ್ರವರ್ಗಕ್ಕೆ ಹಂಚಲಾಗಿದೆ. ಇದೂ ಅವೈಜ್ಞಾನಿಕವಾದ ನಿರ್ಧಾರ. ಎರಡೂ ಪ್ರವರ್ಗಕ್ಕೆ ಜನಸಂಖ್ಯೆಯಂತೆ . ಮೀಸಲಾತಿಯನ್ನೂ ಹಂಚಬೇಕಿತ್ತಲ್ಲವೇ.. ? ಎಂದು ಪ್ರಶ್ನಿಸಿದರು. ಹಾಗೆಯೇ ಜಾತಿಗಳನ್ನು ಬಿಟ್ಟು ಕೇವಲ ಜನಸಂಖ್ಯೆಯನ್ನು ಎರಡು ಪವರ್ಗಗಳಿಗೆ ಹಂಚುವುದು ಅವಾಸ್ತವಿಕವಾದದು.6,6,5ರ ಸೂತ್ರ ರಾಜಕೀಯ ಪ್ರೇರಿತವಾಗಿದೆ, ಸುಪ್ರೀಂಕೋರ್ಟ್ ಆಶಯವನ್ನು ಪ್ರತಿಧ್ವನಿಸುತ್ತಿಲ್ಲ .ಈ ಎರಡು ಕಾರಣಗಳಿಗಾಗಿಯೇ ಸರ್ಕಾರ ಒತ್ತಡದಿಂದ ಹೊರಬಂದು ಹೆಚ್ಚಿನ ಮುರ್ತುವರ್ಜಿ ವಹಿಸಿ ತಾರ್ಕಿಕ ಅಂತ್ಯ ಸಿಗುವಂತೆ ಮಾಡಲಿ ಎಂದು ಆಗ್ರಹಿಸಿದರು.ಒಳ ಮೀಸಲಾತಿ ಯಾವ ಜಾತಿಗೂ ಅನ್ಯಾಯ ಮಾಡುವುದಿಲ್ಲ, ಮಾಡಲೂಬಾರದು. ಎಲ್ಲ 101 ಪರಿಶಿಷ್ಟ ಜಾತಿಗಳಿಗೆ ನ್ಯಾಯ ಸಿಗಬೇಕೆಂಬುದು ಶ್ರೀ ಮಠದ ಆಶಯ. ಅಲೆಮಾರಿ ಸಮುದಾಯಗಳೂ ಸೇರಿದಂತೆ ಎಲ್ಲ ತಬ್ಬಲಿ ಜಾತಿಗಳನ್ನು ಜೊತೆಗೆ ಒಯ್ಯಲು ಶ್ರೀ ಮಠ ಬದ್ಧವಾಗಿದೆ. ಅಲೆಮಾರಿ ಸಮುದಾಯಗಳಿಗೆ ನ್ಯಾಯ ಸಿಗದಿದ್ದರೆ ಒಳಮೀಸಲಾತಿಯ ಆಶಯ ಪೂರ್ಣವಾಗುವುದಿಲ್ಲ ಎಂಬುದು ಶ್ರೀ ಮಠದ ಸ್ಪಷ್ಟ ಅಭಿಪ್ರಾಯವಾಗಿದೆ.ಒಳ ಮೀಸಲಾತಿಯನ್ನು ಜಾರಿಗೆ ತರುವಲ್ಲಿ ನಮ್ಮ ಮಠದೊಂದಿಗೆ ಹಲವರು ಜೊತೆಯಾಗಿದ್ದಾರೆ. ನ್ಯಾ ಸದಾಶಿವ ಆಯೋಗ ರಚಿಸುವಲ್ಲಿ ಕಾಂಗ್ರೆಸ್ಸಿನ ಎಸ್ . ಎಮ್ ಕೃಷ್ಣ, ಧರ್ಮಸಿಂಗ್ ಸಹಕರಿಸಿದ್ದರು.
ಆಯೋಗ ಕಾರ್ಯನಿರ್ವಹಿಸಲು ಬೇಕಾದ 12 ಕೋಟಿ ರೂಗಳ ಹಣಕಾಸಿನ ನೆರವು ಕೊಟ್ಟಿದ್ದು ಬಿ ಎಸ್ ಯಡಿಯೂರಪ್ಪನವರು. ಕೋರ್ಟ್ ತೀರ್ಪಿನ ಕಾರಣಕ್ಕೆ ಒಳಮೀಸಲಾತಿಯ ವಿಷಯ ನೆನೆಗುದಿಯಲ್ಲಿದ್ದಾಗ ಆರೆಸ್ಸೆಸ್ ನ ಮುಖ್ಯಸ್ಥರು ನಮ್ಮ ನೆರವಿಗೆ ಬಂದರು. ಸ್ವತಃ ದೇಶದ ಪ್ರಧಾನಿ ಶ್ರೀ ನರೇಂದ್ರ ಮೋದಿ ಒಳಮೀಸಲಾತಿಯ ಹೋರಾಟದಲ್ಲಿ ನಮ್ಮ ಜೊತೆಗಿದ್ದರು. ಸುಪ್ರೀಂಕೋರ್ಟಿನಲ್ಲಿ ಕೇಂದ್ರ ಸರ್ಕಾರ ವಾದಿಸಿತು. ಅಫಿಡವಿಟ್ಟು ಸಲ್ಲಿಸಿತು. ಕಳೆದ ಅವಧಿಯಲ್ಲಿ ಮುಖ್ಯಮಂತ್ರಿಗಳಾಗಿದ್ದ ಬಸವರಾಜ್ ಬೊಮ್ಮಾಯಿ SC, ST ಮೀಸಲಾತಿಯನ್ನು ಜನಸಂಖ್ಯೆಗೆ ಅನುಗುಣವಾಗಿ ಹೆಚ್ಚಿಸುವ ಐತಿಹಾಸಿಕ ನಿರ್ಣಯ ಕೈಗೊಂಡರು. ಕಾನೂನು ಸಚಿವರಾಗಿದ್ದ ಮಾಧುಸ್ವಾಮಿಯವರು ಸಂಪುಟ ಉಪಸಮಿತಿಯ ಸಾರಥ್ಯವಹಿಸಿ ವರದಿ ರೂಪಿಸಿದರು. ಆ ವರದಿಯನ್ನು ಕೇಂದ್ರಕ್ಕೆ ಶಿಫಾರಸು ಮಾಡುವ ದಿಟ್ಟ ನಿರ್ಧಾರವನ್ನು ಬಿಜೆಪಿ ಕೈಗೊಂಡಿತು. ಈಗ ಮುಖ್ಯಮಂತ್ರಿ ಸಿದ್ದರಾಮಯ್ಯ ಒಳ ಒತ್ತಡಗಳ ನಡುವೆಯೂ ಒಳಮೀಸಲಾತಿ ಜಾರಿಗೆ ಶ್ರಮ ವಹಿಸಿದ್ದಾರೆ. ಈ ಎಲ್ಲ ಮಹನೀಯರಿಗೆ ಶ್ರೀ ಮಠ ಕೃತಜ್ಞತೆ ಸಲ್ಲಿಸುತ್ತದೆ ಎಂದರು.ಮೂರು ದಶಕಗಳಿಗೂ ಮೀರಿದ ಒಳಮೀಸಲಾತಿ ಹೋರಾಟ ನಮ್ಮದು. ಭಾರತದ ಇತಿಹಾಸದಲ್ಲಿ ಸ್ವಾತಂತ್ರ್ಯ ಹೋರಾಟ ಬಿಟ್ಟರೆ ಇಷ್ಟೊಂದು ಸುಧೀರ್ಘ ಹೋರಾಟ ಮತ್ತೊಂದು ಇರಲಾರದು. ಈ ಹೋರಾಟದಲ್ಲಿ ಅನೇಕರು ಪ್ರಾಣ ಕಳೆದುಕೊಂಡಿದ್ದಾರೆ . ತಮ್ಮ ಸ್ವಂತ ಬದುಕು, ಸಂಸಾರವನ್ನು ನಿರ್ಲಕ್ಷಿಸಿ ವರ್ಷಗಟ್ಟಲೇ ಹೋರಾಟದಲ್ಲಿ ಜೊತೆಯಾಗಿದ್ದಾರೆ. ಸುಪ್ರೀಂಕೋರ್ಟ್ ತೀರ್ಪು ಬಂದ ನಂತರವೂ ನಾವು ಹೋರಾಟ ಮಾಡಬೇಕಾಯಿತು. ಆಯೋಗದ ವರದಿಯ ಅಂಗೀಕಾರಕ್ಕೂ ರಾಜ್ಯದೆಲ್ಲೆಡೆ ಹೋರಾಟ ಮಾಡಬೇಕಾಯಿತು. ಜಿಲ್ಲಾಧಿಕಾರಿಗಳ ಕಚೇರಿಗಳಿಗೆ ಬೀಗ ಜಡಿಯಬೇಕಾಯಿತು. ಇಂತಹದೊಂದು ಐತಿಹಾಸಿಕವಾದ, ಸುಧೀರ್ಘವಾದ ಹೋರಾಟದೊಂದಿಗೆ ನಮ್ಮ ಪಾಲಿನ ಮೀಸಲಾತಿಯನ್ನು ದಕ್ಕಿಸಿಕೊಳ್ಳುವುದು ಸಾಧ್ಯವಾಗುತ್ತಿದೆ ಎಂದು ಹೇಳಿದರು.ನಮ್ಮ ಹೋರಾಟಕ್ಕೆ ಉಳಿದ ಸಮಾಜದವರೂ ಸಹಾನುಭೂತಿ ತೋರಿಸಿದ್ದಾರೆ. ಹೋರಾಟದ ಹಾದಿಯಲ್ಲಿ ಆಗಿರಬಹುದಾದ ಸಣ್ಣ ಪುಟ್ಟ ನೋವು, ತೊಂದರೆಗಳಿಗೆ ಸಮಾಜದ ಪರವಾಗಿ ನಮ್ಮ ಮಠ ಕ್ಷಮೆಯನ್ನೂ ಕೇಳುತ್ತದೆ. ಹಂಚಿ ಉಣ್ಣುವುದು ಈ ನೆಲದ ಗುಣ, ಒಳಮೀಸಲಾತಿ ಎಲ್ಲ ಶೋಷಿತರ ಭಾಗೋದಯವಾಗುವುದರಲ್ಲಿ ಸಂಶಯವಿಲ್ಲ ಎಂದು ಹೇಳಿದರು.
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ಹೌದು, ನಿಮ್ಮ ಊರಿನಲ್ಲಿ ಜಾತ್ರೆ, ಸಭೆ, ಸಮಾರಂಭಗಳು ನಡೆದರೆ ಅದನ್ನು ಬಯಲುಸೀಮೆಟೈಮ್ಸ್.ಕಾಂ ಮೂಲಕ ನಾಡಿಗೆ ತಿಳಿಸಿ. ಅಷ್ಟೇ ಅಲ್ಲ ನಿಮ್ಮೂರಿನ ರಸ್ತೆ, ಚರಂಡಿ, ಆಸ್ಪತ್ರೆ , ಶಾಲೆ ಯಾವುದೇ ಸಮಸ್ಯೆ ಇದ್ದರೂ ಅಧಿಕಾರಿಗಳ ಕಣ್ಣು ತೆರೆಯುವಂತೆ ಸುದ್ದಿ ಮಾಡಿ. ನೀವು ಜಸ್ಟ್ ನಮ್ಮ ವಾಟ್ಸ್ ಆಪ್ ಸಂಖ್ಯೆಗೆ ಸುದ್ದಿ ಕಳುಹಿಸಿ ಉಳಿದದ್ದನ್ನು ಬಯಲುಸೀಮೆಟೈಮ್ಸ್.ಕಾಂ ಮಾಡಲಿದೆ. ನಮ್ಮ ವಾಟ್ಸ್ ಆಪ್ ಸಂಖ್ಯೆ: +91 96201 39796
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.







