ಮಂಡ್ಯ: ಕೆ ಆರ್ ಎಸ್ ಜಲಾಶಯಕ್ಕೆ ಟಿಪ್ಪು ಸುಲ್ತಾನ್ ಸಾಗರ ಎಂದು ಮರುನಾಮಕರಣ ಮಾಡಲು ಕಾಂಗ್ರೆಸ್ ಹುನ್ನಾರ ನಡೆಸುತ್ತಿದೆ ಎಂದು ಸಿದ್ದರಾಮಯ್ಯ ಸರ್ಕಾರದ ವಿರುದ್ಧ ವಿಪಕ್ಷ ನಾಯಕ ಆರ್ ಅಶೋಕ್ ಆಕ್ರೋಶ ವ್ಯಕ್ತಪಡಿಸಿದರು.ಟಿಪ್ಪು ಸುಲ್ತಾನ್ 1799ರಲ್ಲಿ ಮೃತಪಟ್ಟಿದ್ದು, ಕೆಆರ್‌ಎಸ್ ಜಲಾಶಯದ ನಿರ್ಮಾಣ 1911ರಲ್ಲಿ ಆರಂಭವಾಯಿತು. ಬರೋಬ್ಬರಿ 112 ವರ್ಷಗಳ ನಂತರ ಡ್ಯಾಂ ಕಟ್ಟಲಾಗಿದ್ದು, ಟಿಪ್ಪು ಶಂಕುಸ್ಥಾಪನೆ ಮಾಡಿದ್ದರೆ ಆಗಲೇ ಈ ಹೆಸರು ಇಡಬೇಕಿತ್ತಲ್ವ..? ಎಂದು ಪ್ರಶ್ನಿಸಿದರು. ಕೃಷ್ಣರಾಜ ಸಾಗರ ಡ್ಯಾಂಗೆ ಟಿಪ್ಪು ಹೆಸರು ತಳಕು ಹಾಕುತ್ತಿರುವುದು ನಾಲ್ವಡಿ ಕೃಷ್ಣರಾಜ ಒಡೆಯರ್‌ಗೆ ಮಾಡಿದ ಅಪಮಾನ ಎಂದು ಕಿಡಿಕಾರಿದ್ದಾರಲ್ಲದೇ ಟಿಪ್ಪು ಸುಲ್ತಾನನೊಬ್ಬ ನಾಡದ್ರೋಹಿ, ಪರ್ಶಿಯಾದವನು, ಮತಾಂಧ, ಸಾವಿರಾರು ಹಿಂದೂಗಳನ್ನು ಕೊಂದು ದೇವಾಲಯಗಳನ್ನು ಕೆಡವಿದವನು ಅಂತವನ ಹೆಸರು ಕೆಆರ್‌ಎಸ್ ಗೆ ಇಡಲು ಹೊರಟಿರುವುದು ಕಾಂಗ್ರೆಸ್ ಮನಸ್ಥಿತಿಯನ್ನ ತೋರಿಸಿದೆ ಎಂದು ಕಿಡಿಕಾರಿದರು.
ನಾಲ್ವಡಿ ಕೃಷ್ಣರಾಜ ಒಡೆಯರ್‌ಗೆ ಮೈಸೂರಿನ ಮಹಾಶಿಲ್ಪಿ
ನಾಲ್ವಡಿ ಕೃಷ್ಣರಾಜ ಒಡೆಯರ್ ಆಡಳಿತದಲ್ಲಿ ಹಳೇ ಮೈಸೂರು ಸಾಕಷ್ಟು ಅಭಿವೃದ್ಧಿ ಕಂಡಿತ್ತು. ಕೆಆರ್‌ಎಸ್ ಜಲಾಶಯ ನಿರ್ಮಾಣಕ್ಕೆ ಯಾರ ಮೇಲೂ ತೆರಿಗೆ ಹಾಕಿರಲಿಲ್ಲ. ಆದರೆ ಸಿದ್ದರಾಮಯ್ಯ ಸರ್ಕಾರ ಎರಡು ವರ್ಷದಲ್ಲಿ 2 ಲಕ್ಷ ಕೋಟಿ ಸಾಲ ಮಾಡಿ, ಜನರ ಮೇಲೆ ತೆರಿಗೆಯ ಬರೆ ಎಳೆದಿದೆ. ಇಂಥ ಮುಖ್ಯಮಂತ್ರಿಯನ್ನ ನಾಲ್ವಡಿ ಹೋಲಿಕೆ ಮಾಡುವುದು ಕೂಡ ನಾಚಿಕೆಗೇಡು ಎಂದು ವಾಗ್ದಾಳಿ ನಡೆಸಿದರು. ರಾಜ್ಯದಲ್ಲಿ ಕಾಂಗ್ರೆಸ್ ಗೌರವ ಉಳಿಯಬೇಕಾದ್ರೆ ಕೂಡಲೇ ರಾಜ್ಯದ ಜನತೆ, ನಾಲ್ವಡಿ ಕುಟುಂಬಕ್ಕೆ ಕ್ಷಮಾಪಣೆ ಕೇಳಿ. ಹೀಗೆ ಮಾತನಾಡಿದ್ರೆ ಜನರು ನಿಮ್ಮ ಪಕ್ಷವನ್ನು ಧೂಳಿಪಟ ಮಾಡ್ತಾರೆ. ತಕ್ಷಣವೇ ರಾಜಮನೆತನಕ್ಕೆ ಕ್ಷಮೆಯಾಚಿಸಿ ಗೌರವ ಉಳಿಸಿಕೊಳ್ಳಿ, ಎಂದು ಆಗ್ರಹಿಸಿದರು.
ಎರಡು ವರ್ಷ ಎಲ್ಲಿದ್ಯಪ್ಪ ರಾಹುಲ್ ಗಾಂಧಿ..? ಅಶೋಕ್ ವ್ಯಂಗ್ಯ
ರಾಹುಲ್ ಗಾಂಧಿಯವರ ಬಗ್ಗೆಯೂ ಕಿಡಿಕಾರಿದ ಆರ್ ಅಶೋಕ್, ಎರಡು ವರ್ಷ ಎಲ್ಲೋ ಇದ್ದ ರಾಹುಲ್ ಗಾಂಧಿ, ಈಗ ಚುನಾವಣೆಗೋಸ್ಕರ ಕರ್ನಾಟಕಕ್ಕೆ ಬಂದಿದ್ದಾರೆ. ಕಳೆದ ಎರಡು ವರ್ಷದ 2,000 ರೈತ ಆತ್ಮಹತ್ಯೆ, ಗರ್ಭಿಣಿಯರ ಸಾವು, ಮೈಕ್ರೋ ಫೈನಾನ್ಸ್‌ನಿಂದ ಸಾವುಗಳಾದವು, ಐಪಿಎಲ್ ವಿಜಯೋತ್ಸವದಲ್ಲಿ 11 ಜನ ಅಮಯಾ ಯುವಕರು ಸತ್ತರಲ್ಲ ಆಗ ಯಾಕೆ ಬರಲಿಲ್ಲ? ಎಂದು ಪ್ರಶ್ನಿಸಿದರು.ಕಾಂಗ್ರೆಸ್‌ನ ಚುನಾವಣಾ ಅಕ್ರಮಗಳ ಹೋರಾಟವನ್ನು ಭೂತದ ಕೈಯಲ್ಲಿ ಭಗವದ್ಗೀತೆಗೆ ಹೋಲಿಸಿದರು. ರಾಹುಲ್ ಗಾಂಧಿ ಅದೇನು ಬಾಂಬ್ ಹಾಕ್ತಾರೋ ಹಾಕಲಿ ನೋಡೋಣ ಎಂದು ಸವಾಲು ಹಾಕಿದ ಆರ್ ಅಶೋಕ್ ಅವರು ಕನಕಪುರ ಚುನಾವಣೆಯಲ್ಲಿ ಅಕ್ರಮವಾಗಿದೆ ಎಂಬ ಕಾಂಗ್ರೆಸ್‌ನ ಆರೋಪಗಳನ್ನು ತಳ್ಳಿಹಾಕಿದರು. ಕಾಂಗ್ರೆಸ್ ನ ಒಳಜಗಳ ಮರೆಮಾಚಲು ರಾಹುಲ್ ಗಾಂಧಿ ಕರೆತರುತ್ತಿದ್ದಾರೆ. ನಾಳೆ ವಿಧಾನಸೌಧದ ಮುಂದೆ ಕಾಂಗ್ರೆಸ್ ವಿರುದ್ಧ ಹೋರಾಟ ಮಾಡುತ್ತೇವೆ ಎಂದು ಘೋಷಿಸಿದರು.
ಸಾರಿಗೆ ನೌಕರರ ಪ್ರತಿಭಟನೆಗೆ ಬೆಂಬಲ
ಸಾರಿಗೆ ನೌಕರರ ಪ್ರತಿಭಟನೆ ವಿಚಾರದಲ್ಲಿ ಸರ್ಕಾರವನ್ನು ಟೀಕಿಸಿದ ಆರ್ ಅಶೊಕ್, ನಾನು ಸಾರಿಗೆ ಸಚಿವನಾಗಿದ್ದಾಗ ಅವರ ಬೇಡಿಕೆ ಈಡೇರಿಸಿದ್ದೆ. ಆದರೆ ಕಾಂಗ್ರೆಸ್ ಸರ್ಕಾರ 4 ವರ್ಷದ ಹಿಂಬಾಕಿ ಕೊಡದೆ, ಸಾರಿಗೆ ಸಿಬ್ಬಂದಿಗೆ, ಸಾರ್ವಜನಿಕರಿಗೆ ತೊಂದರೆ ಉಂಟುಮಾಡುತ್ತಿದೆ. ಸಿಎಂ ಸಿದ್ದರಾಮಯ್ಯ ತಕ್ಷಣ ಬೇಡಿಕೆ ಈಡೇರಿಸಲಿ ಎಂದು ಒತ್ತಾಯಿಸಿದ್ದಾರೆ. ‘ಸರ್ಕಾರದ ಖಜಾನೆ ಖಾಲಿಯಾಗಿದೆ, ಜನರನ್ನು ಕೊಳ್ಳೆಹೊಡೆಯಲಾಗುತ್ತಿದೆ. ಸರ್ಕಾರಿ ನೌಕರರಿಗೆ ಸಂಬಳವೂ ಸರಿಯಾಗಿ ಸಿಗುತ್ತಿಲ್ಲ’ ಎಂದು ಆರೋಪಿಸಿದರು.ಸುದ್ದಿಗೋಷ್ಠಿಯಲ್ಲಿ ಮಾಜಿ ಶಾಸಕ ಎಲ್.ನಾಗೇಂದ್ರ, ಬಿಜೆಪಿ ಜಿಲ್ಲಾಧ್ಯಕ್ಷ ಡಾ.ಇಂದ್ರೇಶ್, ಮುಖಂಡರಾದ ಇಂಡವಾಳು ಸಚ್ಚಿದಾನಂದ, ಅಶೋಕ್ ಜಯರಾಂ ಉಪಸ್ಥಿತರಿದ್ದರು.
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ಹೌದು, ನಿಮ್ಮ ಊರಿನಲ್ಲಿ ಜಾತ್ರೆ, ಸಭೆ, ಸಮಾರಂಭಗಳು ನಡೆದರೆ ಅದನ್ನು ಬಯಲುಸೀಮೆಟೈಮ್ಸ್.ಕಾಂ ಮೂಲಕ ನಾಡಿಗೆ ತಿಳಿಸಿ. ಅಷ್ಟೇ ಅಲ್ಲ ನಿಮ್ಮೂರಿನ ರಸ್ತೆ, ಚರಂಡಿ, ಆಸ್ಪತ್ರೆ , ಶಾಲೆ ಯಾವುದೇ ಸಮಸ್ಯೆ ಇದ್ದರೂ ಅಧಿಕಾರಿಗಳ ಕಣ್ಣು ತೆರೆಯುವಂತೆ ಸುದ್ದಿ ಮಾಡಿ. ನೀವು ಜಸ್ಟ್ ನಮ್ಮ ವಾಟ್ಸ್ ಆಪ್ ಸಂಖ್ಯೆಗೆ ಸುದ್ದಿ ಕಳುಹಿಸಿ ಉಳಿದದ್ದನ್ನು ಬಯಲುಸೀಮೆಟೈಮ್ಸ್.ಕಾಂ ಮಾಡಲಿದೆ. ನಮ್ಮ ವಾಟ್ಸ್ ಆಪ್ ಸಂಖ್ಯೆ: +91 96201 39796
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.



