ಕಿಚ್ಚ ಸುದೀಪ್ ಅವರ ಹುಟ್ಟುಹಬ್ಬಕ್ಕೆ ಇನ್ನು ಮೂರು ದಿನಗಳಷ್ಟೆ ಬಾಕಿ ಇದೆ. ಕೆಲ ದಿನಗಳ ಹಿಂದೆಯೇ ಈ ಬಗ್ಗೆ ಪೋಸ್ಟ್ ಹಂಚಿಕೊಂಡಿದ್ದ ಸುದೀಪ್, ಅಮ್ಮನಿಲ್ಲದ ಮೊದಲ ಹುಟ್ಟುಹಬ್ಬ ಆಚರಣೆ ಬಗ್ಗೆ ವಿಷಾಧದಿಂದಲೇ ಪೋಸ್ಟ್ ಹಂಚಿಕೊಂಡಿದ್ದರು. ತಮಗೆ ವೈಯಕ್ತಿಕವಾಗಿ ಮನಸ್ಸಿಲ್ಲದಿದ್ದರೂ ಸಹ ಅಭಿಮಾನಿಗಳನ್ನು ನಿರಾಸೆಪಡಿಸಬಾರದೆಂಬ ಕಾರಣಕ್ಕೆ ಒಂದು ದಿನ ಮುಂಚಿತವಾಗಿ ಅಂದರೆ ಸೆಪ್ಟೆಂಬರ್ 1 ರ ರಾತ್ರಿಯೇ ಅಭಿಮಾನಿಗಳನ್ನು ಭೇಟಿ ಮಾಡುವುದಾಗಿ ಸುದೀಪ್ ಹೇಳಿದ್ದಾರೆ. ಇದರ ಜೊತೆಗೆ ಸುದೀಪ್ ಹುಟ್ಟುಹಬ್ಬಕ್ಕೆ ಅಭಿಮಾನಿಗಳಿಗೆ ಉಡುಗೊರೆಯೊಂದು ದೊರೆತಿದೆ.ಸುದೀಪ್ ನಟನೆಯ ಸೂಪರ್ ಹಿಟ್ ಸಿನಿಮಾ ‘ವಿಷ್ಣುವರ್ಧನ’ ಕಿಚ್ಚನ ಹುಟ್ಟುಹಬ್ಬದ ಪ್ರಯುಕ್ತ ಮರು ಬಿಡುಗಡೆ ಆಗುತ್ತಿದೆ. 2011 ರಲ್ಲಿ ಬಿಡುಗಡೆ ಆಗಿದ್ದ ಸೂಪರ್ ಹಿಟ್ ಸಿನಿಮಾ ‘ವಿಷ್ಣುವರ್ಧನ’ ಇದೀಗ ಸುದೀಪ್ ಅವರ ಹುಟ್ಟುಹಬ್ಬದ ಪ್ರಯುಕ್ತ ಮರು ಬಿಡುಗಡೆ ಆಗುತ್ತಿದೆ. ಆಗಸ್ಟ್ 29ರಂದು ಬೆಂಗಳೂರು ಸೇರಿದಂತೆ ಇನ್ನೂ ಹಲವು ಕಡೆಗಳಲ್ಲಿ ಸೀಮಿತ ಚಿತ್ರಮಂದಿರಗಳಲ್ಲಿ ಸಿನಿಮಾ ಮರು ಬಿಡುಗಡೆ ಮಾಡಲಾಗುತ್ತಿದೆ.
2011ರ ಡಿಸೆಂಬರ್ ತಿಂಗಳಲ್ಲಿ ಬಿಡುಗಡೆ ಆಗಿದ್ದ ‘ವಿಷ್ಣುವರ್ಧನ’ ಆಕ್ಷನ್ ಕಾಮಿಡಿ ಸಿನಿಮಾ ಆಗಿತ್ತು. ಸಾಮಾನ್ಯ ಯುವಕನೊಬ್ಬ ತನ್ನ ಚಾಣಾಕ್ಷತನ ಧೈರ್ಯದಿಂದ ದೊಡ್ಡ ಮಾಫಿಯಾ ಡಾನ್ ಅನ್ನು ಎದುರಿಸುವುದು ಹಾಗೂ ಆತನನ್ನು ಮಟ್ಟ ಹಾಕುವ ಕತೆಯನ್ನು ಒಳಗೊಂಡಿತ್ತು. ಸಿನಿಮಾನಲ್ಲಿ ಭಾವನಾ ನಾಯಕಿ, ಸೋನು ಸೂದ್ ವಿಲನ್, ಪ್ರಿಯಾಮಣಿ ವಿಶೇಷ ಪಾತ್ರದಲ್ಲಿ ನಟಿಸಿದ್ದರು. ಅರುಣ್ ಸಾಗರ್, ಸುದೀಪ್ ಗೆಳೆಯನ ಪಾತ್ರದಲ್ಲಿ ಮಿಂಚಿದ್ದರು. ಸಿನಿಮಾದ ಹಾಸ್ಯ ದೃಶ್ಯಗಳು ಇಂದಿಗೂ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುತ್ತವೆ. ಸಿನಿಮಾದ ಹಾಡುಗಳು ಸಹ ಹಿಟ್ ಆಗಿದ್ದವು. ಆಗಿನ ಕಾಲಕ್ಕೆ ಸಿನಿಮಾ ದೊಡ್ಡ ಮೊತ್ತದ ಕಲೆಕ್ಷನ್ ಮಾಡಿತ್ತು. ದ್ವಾರಕೀಶ್ ಅವರು ಈ ಸಿನಿಮಾ ನಿರ್ಮಾಣ ಮಾಡಿದ್ದರೆ ಪೊನ್ ಕುಮಾರನ್ ನಿರ್ದೇಶನ ಮಾಡಿದ್ದರು.ಇನ್ನು ಸುದೀಪ್ ಅವರು ಇದೀಗ ಕೆಲವು ಸಿನಿಮಾಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಅನುಪ್ ಭಂಡಾರಿ ನಿರ್ದೇಶಿಸುತ್ತಿರುವ ‘ಬಿಲ್ಲಾ ರಂಗ ಭಾಷಾ’ ಸಿನಿಮಾನಲ್ಲಿ ನಟಿಸುತ್ತಿದ್ದಾರೆ. ಭಾರಿ ದೊಡ್ಡ ಸೆಟ್ ಹಾಕಿ ಸಿನಿಮಾದ ಚಿತ್ರೀಕರಣ ಮಾಡಲಾಗುತ್ತಿದೆ. ಅದರ ಜೊತೆಗೆ ಕೆಆರ್ಜಿ ನಿರ್ಮಾಣ ಸಂಸ್ಥೆಯ ಹೊಸ ಸಿನಿಮಾನಲ್ಲಿ ಸುದೀಪ್ ನಟಿಸಲಿದ್ದಾರೆ ಎನ್ನಲಾಗುತ್ತಿದೆ. ಇವುಗಳ ಹೊರತಾಗಿ ತಮಿಳು ನಿರ್ದೇಶಕ ಚೇರನ್ ಅವರು ನಿರ್ದೇಶಿಸಲಿರುವ ಹೊಸ ಸಿನಿಮಾನಲ್ಲಿ ಸುದೀಪ್ ನಟಿಸಲಿದ್ದಾರೆ ಎಂಬ ಬಗ್ಗೆಯೂ ಸುದ್ದಿಗಳು ಹರಿದಾಡಿದ್ದವು. ಬಾಲಿವುಡ್ ಸ್ಟಾರ್ ನಟ ಸಲ್ಮಾನ್ ಖಾನ್ ಅವರಿಗಾಗಿ ಸಿನಿಮಾ ನಿರ್ದೇಶಿಸಲು ಸಹ ಸುದೀಪ್ ಮುಂದಾಗಿದ್ದರು. ಆದರೆ ಅದು ಮಾತುಕತೆ ಹಂತವನ್ನು ಇನ್ನೂ ದಾಟಿದಂತಿಲ್ಲ. ಇವೆಲ್ಲವುದರ ನಡುವೆ ಸುದೀಪ್ 12ನೇ ಸೀಸನ್ ಬಿಗ್ಬಾಸ್ ಅನ್ನು ನಿರೂಪಣೆ ಮಾಡಲಿದ್ದಾರೆ.
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ಹೌದು, ನಿಮ್ಮ ಊರಿನಲ್ಲಿ ಜಾತ್ರೆ, ಸಭೆ, ಸಮಾರಂಭಗಳು ನಡೆದರೆ ಅದನ್ನು ಬಯಲುಸೀಮೆಟೈಮ್ಸ್.ಕಾಂ ಮೂಲಕ ನಾಡಿಗೆ ತಿಳಿಸಿ. ಅಷ್ಟೇ ಅಲ್ಲ ನಿಮ್ಮೂರಿನ ರಸ್ತೆ, ಚರಂಡಿ, ಆಸ್ಪತ್ರೆ , ಶಾಲೆ ಯಾವುದೇ ಸಮಸ್ಯೆ ಇದ್ದರೂ ಅಧಿಕಾರಿಗಳ ಕಣ್ಣು ತೆರೆಯುವಂತೆ ಸುದ್ದಿ ಮಾಡಿ. ನೀವು ಜಸ್ಟ್ ನಮ್ಮ ವಾಟ್ಸ್ ಆಪ್ ಸಂಖ್ಯೆಗೆ ಸುದ್ದಿ ಕಳುಹಿಸಿ ಉಳಿದದ್ದನ್ನು ಬಯಲುಸೀಮೆಟೈಮ್ಸ್.ಕಾಂ ಮಾಡಲಿದೆ. ನಮ್ಮ ವಾಟ್ಸ್ ಆಪ್ ಸಂಖ್ಯೆ: +91 96201 39796
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.







