ಚಿತ್ರದುರ್ಗ :ಹಿರಿಯೂರು ತಾಲ್ಲೂಕಿನ ಧರ್ಮಪುರದಲ್ಲಿ ರೂ.3.5 ಕೋಟಿ ವೆಚ್ಚದಲ್ಲಿ ಸುಸಜ್ಜಿತ ಹೈಟೆಕ್ ಬಸ್ ನಿಲ್ದಾಣ ನಿರ್ಮಾಣಕ್ಕೆ ಶೀಘ್ರ ಮಂಜೂರಾತಿ ನೀಡುವುದಾಗಿ ಸಾರಿಗೆ ಹಾಗೂ ಮುಂಜರಾಯಿ ಸಚಿವ ರಾಮಲಿಂಗಾರೆಡ್ಡಿ ಘೋಷಿಸಿದರು.
ಶನಿವಾರ ಹಿರಿಯೂರು ನಗರದ ಹುಳಿಯಾರು ರಸ್ತೆಯಲ್ಲಿ ರೂ. 06 ಕೋಟಿ ವೆಚ್ಚದಲ್ಲಿ ನಿರ್ಮಿಸಿರುವ ನೂತನ ಹಿರಿಯೂರು ಬಸ್ ಘಟಕ ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು.ಕಳೆದ 2017 ರಲ್ಲಿ ಸಾರಿಗೆ ಸಚಿವನಾಗಿದ್ದಾಗ ದಾವಣಗೆರೆ ಹಾಗೂ ತುಮಕೂರು ವಿಭಾಗದಲ್ಲಿದ್ದ ಚಿತ್ರದುರ್ಗವನ್ನು ಪ್ರತ್ಯೇಕ ವಿಭಾಗವನ್ನಾಗಿ ಪ್ರಾರಂಭಿಸಲು ಅನುಮತಿ ನೀಡಿದ್ದೆ. ಅದರಂತೆ ಚಿತ್ರದುರ್ಗ ವಿಭಾಗವು 2018 ರಿಂದ ಕಾರ್ಯನಿರ್ವಹಿಸುತ್ತಿದೆ. ಜಿಲ್ಲೆಯ ಎಲ್ಲಾ ತಾಲ್ಲೂಕು ಕೇಂದ್ರಗಳಲ್ಲಿ ಬಸ್ ಘಟಕಗಳನ್ನು ನಿರ್ಮಿಸಲಾಗುತ್ತಿದೆ. ಮೊಳಕಾಲ್ಮೂರು ಹಾಗೂ ಹೊಳಲ್ಕೆರೆ ನೂತನ ಬಸ್ ಘಟಕಗಳ ನಿರ್ಮಾಣ ಕಾರ್ಯ ಅಂತಿಮ ಹಂತದಲ್ಲಿದೆ. ಈ ಘಟಕಗಳಲ್ಲಿ ಡೀಸೆಲ್ ಪಂಪ್ ನಿರ್ಮಿಸಲು ಜಿಲ್ಲಾಧಿಕಾರಿಗಳು ಅನುಮತಿ ನೀಡಿದ್ದಾರೆ. ಇನ್ನೂ ಎರಡು ತಿಂಗಳಲ್ಲಿ ಬಸ್ ಘಟಕ ನಿರ್ಮಾಣದ ಅಂತಿಮ ಕೆಲಸಗಳನ್ನು ಪೂರ್ಣಗೊಳಿಸಿ ಉದ್ಘಾಟಿಸುವುದಾಗಿ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದರು.ಹಿರಿಯೂರು ಬಸ್ ನಿಲ್ದಾಣ ಹಳೆಯದಾಗಿದ್ದು ಉನ್ನತೀಕರಿಸಲು ರೈತ ಮುಖಂಡರು ಮನವಿ ಮಾಡಿದ್ದಾರೆ. ಈ ಹಿನ್ನಲೆಯಲ್ಲಿ ಹಿರಿಯೂರು ಬಸ್ ನಿಲ್ದಾಣ ಉನ್ನತೀಕರಣಕ್ಕೂ ಮಂಜೂರಾತಿ ನೀಡಲಾಗುವುದು. ಸದ್ಯ ಉದ್ಘಾಟಿಸಿರುವ ಹಿರಿಯೂರು ನೂತನ ಬಸ್ ಘಟಕದಲ್ಲಿ ಆಡಳಿತ ಕಚೇರಿ, ಬಸ್ಗಳ ನಿರ್ವಹಣೆ ಮತ್ತು ಪರಿವೀಕ್ಷಣೆ ಅಂಕಣ, ಭದ್ರತಾ ಮತ್ತು ಸಂಚಾರ ಶಾಖೆ, ಮಹಿಳಾ ಮತ್ತು ಪುರುಷ ಸಿಬ್ಬಂದಿ ವಿಶ್ರಾಂತಿ ಗೃಹ, ಇಂಧನ ಪಂಪ್, ವಾಷಿಂಗ್ ರ್ಯಾಂಪ್, ಪಾರ್ಕಿಂಗ್ ವ್ಯವಸ್ಥೆ, ಜನರೇಟರ್ ಕೊಠಡಿ, ಶೌಚಾಲಯಗಳನ್ನು ನಿರ್ಮಿಸಲಾಗಿದೆ. ಚಿತ್ರದುರ್ಗ ವಿಭಾಗದಲ್ಲಿ 358 ಬಸ್ಗಳು ಇದ್ದು, 924 ಚಾಲನಾ, 225 ತಾಂತ್ರಿಕ ಹಾಗೂ 194 ಆಡಳಿತ ಸೇರಿ 1343 ನೌಕರರು ಕರ್ತವ್ಯ ನಿರ್ವಹಿಸುತ್ತಿದ್ದಾರೆ ಎಂದು ಸಚಿವ ರಾಮಲಿಂಗಾರೆಡ್ಡಿ ಹೇಳಿದರು.
ಶಕ್ತಿ ಯೋಜನೆ ಜಾರಿಯಿಂದ ಇಲ್ಲಿಯವರಗೆ ಚಿತ್ರದುರ್ಗ ವಿಭಾಗದ ಬಸ್ಗಳಲ್ಲಿ 5.48 ಕೋಟಿ ಮಹಿಳೆಯರು ಉಚಿತವಾಗಿ ಪ್ರಯಾಣಸಿದ್ದಾರೆ. ಪ್ರತಿ ದಿನ ರಾಜ್ಯ ಸಾರಿಗೆ ಬಸ್ಗಳಲ್ಲಿ 55 ರಿಂದ 60 ಲಕ್ಷ ಮಹಿಳೆಯರು ಉಚಿತವಾಗಿ ಪ್ರಯಾಣಿಸುತ್ತಿದ್ದು, ಇಲ್ಲಿಯವರೆಗೆ ಒಟ್ಟು 512 ಕೋಟಿ ಮಹಿಳಾ ಪ್ರಯಾಣಿಕರು ಉಚಿತ ಸಾರಿಗೆಯ ಲಾಭ ಪಡೆದಿದ್ದಾರೆ ಎಂದು ಸಚಿವ ರಾಮಲಿಂಗಾರೆಡ್ಡಿ ತಿಳಿಸಿದರು.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಯೋಜನೆ ಮತ್ತು ಸಾಂಖ್ಯಿಕ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಹಿರಿಯೂರು ತಾಲ್ಲೂಕಿನ ಜನರ ಬಹುದಿನದ ಕನಸು ಇಂದು ನನಸಾಗಿದೆ. ತಾಲ್ಲೂಕಿನ ಧರ್ಮಪುರ ಹೋಬಳಿ ಮುಂಬರುವ ದಿನದಲ್ಲಿ ತಾಲ್ಲೂಕು ಮಟ್ಟಕ್ಕೆ ಏರಲಿದೆ. ಈಗಾಗಲೇ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣಕ್ಕೆ ಜಾಗವನ್ನು ಗುರುತಿಸಿ ಸಾರಿಗೆ ಇಲಾಖೆಗೆ ಹಸ್ತಾಂತರಿಸಲಾಗಿದೆ. ರೂ.3.35 ಕೋಟಿ ವೆಚ್ಚದಲ್ಲಿ ಬಸ್ ನಿರ್ಮಾಣ ಯೋಜನೆ ರೂಪಿಸಲಾಗಿದೆ. ಇದಕ್ಕೆ ಸಾರಿಗೆ ಸಚಿವರು ತಕ್ಷಣವೇ ಮಂಜೂರಾತಿ ನೀಡುವಂತೆ ಕೋರಿದರು.
ಹಿರಿಯೂರಿನ ಮುಖ್ಯ ರಸ್ತೆಯಿಂದ ಬಸ್ ಡಿಪೋ ಸಂಪರ್ಕಿಸುವ ರಸ್ತೆ ಕಿರಿದಾಗಿದ್ದು, ಇದನ್ನು ದ್ವಿಪಥ ರಸ್ತೆಯನ್ನಾಗಿ ಸ್ಥಳೀಯ ಆಡಳಿತದಿಂದ ಅಭಿವೃದ್ಧಿ ಪಡಿಸಲಾಗುವುದು ಎಂದು ಸಚಿವ ಡಿ.ಸುಧಾಕರ ಹೇಳಿದರು.ವಿಧಾನ ಪರಿಷತ್ ಸದಸ್ಯ ಡಿ.ಟಿ. ಶ್ರೀನಿವಾಸ ಮಾತನಾಡಿ, ಬಡತನ ರೇಖೆಗಿಂತ ಕೆಳಗಿರುವ ಜನರನ್ನೂ ಒಳಗೊಂಡು ಬಡವರನ್ನು ಆರ್ಥಿಕವಾಗಿ ಸಬಲರಾಗಿಸಲು ಸರ್ಕಾರ ಪಂಚ ಗ್ಯಾರೆಂಟಿ ಯೋಜನೆಗಳನ್ನು ಜಾರಿಗೆ ತಂದಿದೆ. ಬಸ್ ಘಟಕ ನಿರ್ಮಾಣವಾಗಿರುವುದರಿಂದ ಗ್ರಾಮೀಣ ಭಾಗದ ಜನರು ಹಾಗೂ ವಿದ್ಯಾರ್ಥಿಗಳಿಗೆ ಹೆಚ್ಚಿನ ಅನುಕೂಲವಾಗಿದೆ. ತಾಲ್ಲೂಕಿನ ಮೇಟಿಕುರ್ಕಿ ಬಳಿ ಟ್ರಕ್ ಟರ್ಮಿನಲ್ಗೆ ಜಾಗ ಗುರುತಿಸಲಾಗಿದೆ. ಸಾರಿಗೆ ಸಚಿವರು ಟ್ರಕ್ ಟ್ರರ್ಮಿನಲ್ ನಿರ್ಮಿಸಲು ಅನುಮತಿಸಿದರೆ ಅನುಕೂಲವಾಗುತ್ತದೆ ಎಂದು ಹೇಳಿದರು.ವಿಧಾನ ಪರಿಷತ್ ಸದಸ್ಯ ಕೆ.ಎಸ್. ನವೀನ್ ಮಾತನಾಡಿ, ಹಿರಿಯೂರು ಅತಿ ವೇಗವಾಗಿ ಬೆಳೆಯುತ್ತಿದೆ. ಎರಡು ರಾಷ್ಟ್ರೀಯ ಹೆದ್ದಾರಿಗಳು ಹಿರಿಯೂರು ನಗರದಲಿ ಹಾದು ಹೋಗಿವೆ. ತಾಲ್ಲೂಕಿನಲ್ಲಿ ಅತಿದೊಡ್ಡ ಕೈಗಾರಿಕಾ ಪ್ರದೇಶವಾಗಿ ಅಭಿವೃದ್ಧಿ ಪಡಿಸಲಾಗುತ್ತಿದ್ದು, ಮುಂಬರುವ ದಿನಗಳಲ್ಲಿ ಹೆಚ್ಚಿನ ಉದ್ದಿಮೆಗಳು ಸ್ಥಾಪನೆಯಾಗಲಿವೆ. ಬಸ್ ಡಿಪೋ ನಿರ್ಮಾಣದಿಂದ ಹಿರಿಯೂರಿನ ಗ್ರಾಮೀಣ ಭಾಗಕ್ಕೆ ಹೆಚ್ಚಿನ ಬಸ್ ಸೌಲಭ್ಯ ದೊರತಂತಾಗಿದೆ ಎಂದು ಹೇಳಿದರು.ಕಾರ್ಯಕ್ರಮದ ಸಂದರ್ಭದಲ್ಲಿ ಸಚಿವ ರಾಮಲಿಂಗಾರೆಡ್ಡಿ, ಹಿರಿಯೂರು-ಧರ್ಮಸ್ಥಳ, ಹಿರಿಯೂರು-ಚಳ್ಳಕೆರೆ, ಹಿರಿಯೂರು-ಹೊಸದುರ್ಗ, ಹಿರಿಯೂರು-ಹಾಸನ, ಹಿರಿಯೂರು-ಧರ್ಮಪುರ ಮಾರ್ಗದ ನೂತನ ಬಸ್ ಸಂಚಾರಕ್ಕೆ ಹಸಿರು ನಿಶಾನೆ ತೋರಿದರು.ಕರ್ನಾಟಕ ದ್ರಾಕ್ಷರಸ ಮಂಡಳಿ ಅಧ್ಯಕ್ಷ ಡಾ.ಯೋಗಿಶ್ ಬಾಬು, ಆದಿ ಜಾಂಬವ ನಿಗಮದ ಅಧ್ಯಕ್ಷ ಮಂಜುನಾಥ, ನಗರಸಭೆ ಅಧ್ಯಕ್ಷ ಬಾಲಕೃಷ್ಣ.ಆರ್, ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಆರ್.ಶಿವಣ್ಣ, ಉಪಾಧ್ಯಕ್ಷ ಖಾದಿ ರಮೇಶ್, ಜಿಲ್ಲಾಧಿಕಾರಿ ಟಿ.ವೆಂಕಟೇಶ್, ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ನಿರ್ದೇಶಕ ಇಬ್ರಾಹಿಂ ಮೈಗೂರ, ಜಿ.ಪಂ.ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಆಕಾಶ್ ಸೇರಿದಂತೆ ಮತ್ತಿರರು ಉಪಸ್ಥಿತರಿದ್ದರು. ವಿಭಾಗೀಯ ನಿಯಂತ್ರಣಾಧಿಕಾರಿ ಕೆ.ವೆಂಕಟೇಶ ಸ್ವಾಗತಿಸಿದರು.
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ಹೌದು, ನಿಮ್ಮ ಊರಿನಲ್ಲಿ ಜಾತ್ರೆ, ಸಭೆ, ಸಮಾರಂಭಗಳು ನಡೆದರೆ ಅದನ್ನು ಬಯಲುಸೀಮೆಟೈಮ್ಸ್.ಕಾಂ ಮೂಲಕ ನಾಡಿಗೆ ತಿಳಿಸಿ. ಅಷ್ಟೇ ಅಲ್ಲ ನಿಮ್ಮೂರಿನ ರಸ್ತೆ, ಚರಂಡಿ, ಆಸ್ಪತ್ರೆ , ಶಾಲೆ ಯಾವುದೇ ಸಮಸ್ಯೆ ಇದ್ದರೂ ಅಧಿಕಾರಿಗಳ ಕಣ್ಣು ತೆರೆಯುವಂತೆ ಸುದ್ದಿ ಮಾಡಿ. ನೀವು ಜಸ್ಟ್ ನಮ್ಮ ವಾಟ್ಸ್ ಆಪ್ ಸಂಖ್ಯೆಗೆ ಸುದ್ದಿ ಕಳುಹಿಸಿ ಉಳಿದದ್ದನ್ನು ಬಯಲುಸೀಮೆಟೈಮ್ಸ್.ಕಾಂ ಮಾಡಲಿದೆ. ನಮ್ಮ ವಾಟ್ಸ್ ಆಪ್ ಸಂಖ್ಯೆ: +91 96201 39796
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.







