ಹೊಸದುರ್ಗ: ಪಟ್ಟಣದಲ್ಲಿ ಪ್ರತಿಷ್ಠಾಪಿಸಿದ್ದ 12ನೇ ವರ್ಷದ ವಿರಾಟ್ ಹಿಂದೂ ಮಹಾಸಾಗರ ಗಣಪತಿ ವಿಸರ್ಜನಾ ಶೋಭಾಯಾತ್ರೆ ಸಹಸ್ರಾರು ಜನರ ಸಮ್ಮುಖದಲ್ಲಿ ಅದ್ಧೂರಿಯಾಗಿ ನಡೆಯಿತು.ಐದು ಎಡೆ ನಾಗಶೇಷನ ಮೇಲೆ ವಿಷ್ಣುರೂಪಿಯಾಗಿ ಕುಳಿತಿರುವ ಅತ್ಯಾಕರ್ಷಕ ಗಣೇಶನ ಮೂರ್ತಿಗೆ ವಿವಿಧ ಬಗೆಯ ಹೂವಿನ ಹಾರಗಳಿಂದ ಸುಂದರವಾಗಿ ಅಲಂಕಾರ ಮಾಡಲಾಗಿತ್ತು. ಬಣ್ಣ, ಬಣ್ಣದ ಹೂಗಳಿಂದ ಅಲಂಕಾರಗೊಂಡಿದ್ದ ವಿಶೇಷ ವಾಹನದ ಮೇಲೆ ಮೂರ್ತಿಯನ್ನು ಕೂರಿಸಲಾಯಿತು. ಟಿ.ವಿ.ಸರ್ಕಲ್ ಮುಖ್ಯರಸ್ತೆಯಿಂದ ಹೊರಟ ಮೆರವಣಿಗೆ ಗಾಂಧಿ ಸರ್ಕಲ್, ಬಸವೇಶ್ವರ ಸರ್ಕಲ್, ರಾಜಕುಮಾರ್ ಸರ್ಕಲ್, ಮದಕರಿ ಸರ್ಕಲ್, ವೀರಭದ್ರೇಶ್ವರ ಸ್ವಾಮಿ ದೇವಾಲಯದ ಮುಂಭಾಗದ ಮುಖ್ಯ ರಸ್ತೆಯ ಮೂಲಕ ಸಂತೆ ಹೊಂಡದವರೆಗೂ ಮೆರವಣಿಗೆ ಸಾಗಿ ಬಂದಿತು. ಶೋಭಾಯಾತ್ರೆ ಹಾಗೂ ವಿಸರ್ಜನಾ ಮೆರವಣಿಗೆಯಲ್ಲಿ ವಿಶ್ವಹಿಂದೂ ಪರಿಷತ್, ಬಜರಂಗದಳ ಸೇರಿದಂತೆ ವಿವಿಧ ಹಿಂದೂ ಪರ ಸಂಘಟನೆಗಳ ಮುಖಂಡರು ಭಾಗವಹಿಸಿದ್ದರು.ಸಾವಿರಾರು ಸಂಖ್ಯೆಯಲ್ಲಿ ಸೇರಿದ್ದ ಯುವಕರು, ಯುವತಿಯರು, ಗಣಪತಿ ಸೇವಾ ಸಮಿತಿ ಕಾರ್ಯಕರ್ತರು ಶ್ವೇತ ವಸ್ತ್ರಧಾರಿಗಳಾಗಿ ಕೇಸರಿ ಬಣ್ಣದ ಶಾಲು, ರುಮಾಲು ಧರಿಸಿ ಮೆರವಣಿಗೆಯಲ್ಲಿ ಹೆಜ್ಜೆ ಹಾಕಿದರು.ತಮಟೆ ವಾದ್ಯ, ನಾದಸ್ವರ ಸೇರಿದಂತೆ ಇನ್ನಿತರ ಕಲಾ ತಂಡಗಳು ಮೆರವಣಿಗೆಗೆ ಮೆರಗು ನೀಡಿದವು. ಕೆಲ ಯುವಕರು ಆಂಜನೇಯ, ಶ್ರೀರಾಮ, ಚಲನಚಿತ್ರ ನಟರಾದ ದರ್ಶನ್, ಸುದೀಪ್, ಪುನೀತ್ ರಾಜಕುಮಾರ್, ಕ್ರಿಕೆಟಿಗ ವಿರಾಟ್ ಕೊಹ್ಲಿ ಮತ್ತು ಸ್ಥಳೀಯ ಮುಖಂಡರ ಭಾವಚಿತ್ರವನ್ನು ಒಳಗೊಂಡ ಬಾವುಟಗಳನ್ನ ಹಿಡಿದು ಮೆರವಣಿಗೆಯಲ್ಲಿ ಕುಣಿಯುತ್ತ ಹೆಜ್ಜೆ ಹಾಕಿದರು. ರಾತ್ರಿ 9 ಗಂಟೆ ಸುಮಾರಿಗೆ ಸಂತೆಹೊಂಡದ ಹತ್ತಿರ ಮೆರವಣಿಗೆ ಸಾಗಿ ಬಂದಿತು. ನಂತರ ಸ್ವಾಮಿಯವರ ಮೇಲಿದ್ದ ವಿವಿಧ ಬಗೆಯ ಹೂವಿನ ಹಾರಗಳು ಮತ್ತು ಬಾವುಟಗಳ ಹರಾಜು ಪ್ರಕ್ರಿಯೆ ನಡೆಯಿತು. ಬಳಿಕ ಸ್ವಾಮಿಗೆ ಧಾರ್ಮಿಕ ಸಾಂಪ್ರದಾಯದಂತೆ ಪೂಜೆ ಸಲ್ಲಿಸಿ, ಕ್ರೇನ್ ಮೂಲಕ ವಿಸರ್ಜನೆ ಮಾಡಲಾಯಿತು. ಇದೇ ಸಂದರ್ಭದಲ್ಲಿ ಸೇರಿದ್ದ ಸಾವಿರಾರು ಯುವಕ, ಯುವತಿಯರು ಮತ್ತು ಕಾರ್ಯಕರ್ತರು ವಿಘ್ನೇಶ್ವರನಿಗೆ ವಿವಿಧ ನಾಮಾವಳಿಗಳ ಜಯಘೋಷ ಹಾಕಿದರು.
ವಿವಿಧ ಸಂಘ ಸಂಸ್ಥೆಗಳಿಂದ ಅನ್ನಸಂತರ್ಪಣೆ
ಮೆರವಣಿಗೆ ಸಾಗಿ ಬಂದ ರಸ್ತೆಯಲ್ಲಿ ಆಟೋ ಚಾಲಕರು, ಕಾರ್ ಚಾಲಕರು, ಮೆಡಿಕಲ್ ಮಾಲೀಕರು, ಖಾಸಗಿ ಬಸ್ ಏಜೆಂಟರ ಸಂಘ, ವರ್ತಕರ ಸಂಘ ಮತ್ತು ಹೋಟೆಲ್ ಮಾಲೀಕರು ಸೇರಿದಂತೆ ವಿವಿಧ ಸಂಘ-ಸಂಸ್ಥೆಗಳ ವತಿಯಿಂದ ನೀರು, ಮಜ್ಜಿಗೆ ಮತ್ತು ಪ್ರಸಾದ ವಿತರಣೆ ನಡೆಯಿತು. ಪೊಲೀಸ್ ಇಲಾಖೆಯಿಂದ ಬಿಗಿ ಬಂದೋಬಸ್ತ್ ಮಾಡಲಾಗಿತ್ತು.
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ಹೌದು, ನಿಮ್ಮ ಊರಿನಲ್ಲಿ ಜಾತ್ರೆ, ಸಭೆ, ಸಮಾರಂಭಗಳು ನಡೆದರೆ ಅದನ್ನು ಬಯಲುಸೀಮೆಟೈಮ್ಸ್.ಕಾಂ ಮೂಲಕ ನಾಡಿಗೆ ತಿಳಿಸಿ. ಅಷ್ಟೇ ಅಲ್ಲ ನಿಮ್ಮೂರಿನ ರಸ್ತೆ, ಚರಂಡಿ, ಆಸ್ಪತ್ರೆ , ಶಾಲೆ ಯಾವುದೇ ಸಮಸ್ಯೆ ಇದ್ದರೂ ಅಧಿಕಾರಿಗಳ ಕಣ್ಣು ತೆರೆಯುವಂತೆ ಸುದ್ದಿ ಮಾಡಿ. ನೀವು ಜಸ್ಟ್ ನಮ್ಮ ವಾಟ್ಸ್ ಆಪ್ ಸಂಖ್ಯೆಗೆ ಸುದ್ದಿ ಕಳುಹಿಸಿ ಉಳಿದದ್ದನ್ನು ಬಯಲುಸೀಮೆಟೈಮ್ಸ್.ಕಾಂ ಮಾಡಲಿದೆ. ನಮ್ಮ ವಾಟ್ಸ್ ಆಪ್ ಸಂಖ್ಯೆ: +91 96201 39796
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.







