ಅಹಿಂಸಾ ತತ್ವದಿಂದ ಮಾತ್ರ ಜಗತ್ತಿನಲ್ಲಿ ಶಾಂತಿ ಸಾಧ್ಯ; ಭಗವಾನ್ ಮಹಾವೀರ ಜಯಂತಿ
ಟಿಒಬಿ ನ್ಯೂಸ್ ಚಿತ್ರದುರ್ಗ
ಭಗವಾನ್ ಮಹಾವೀರರು ಸಾರಿದ ಅಹಿಂಸೆ ಮತ್ತು ಶಾಂತಿಯ ತತ್ವಗಳನ್ನು ಪಾಲಿಸುವುದರಿಂದ ಮಾತ್ರ ಇಂದಿನ ಯುದ್ಧದ ಭೀತಿಯ ನಡುವೆ ಜಗತ್ತಿನಲ್ಲಿ ನೆಮ್ಮದಿ ಕಾಣಲು ಸಾಧ್ಯ ಎಂದು ಅಪರ ಜಿಲ್ಲಾಧಿಕಾರಿ ಬಿ.ಟಿ. ಕುಮಾರಸ್ವಾಮಿ ಹೇಳಿದರು.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸೋಮವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಹಾಗೂ ನಗರಸಭೆ ವತಿಯಿಂದ ಹಮ್ಮಿಕೊಂಡಿದ್ದ ಭಗವಾನ್ ಮಹಾವೀರ ಜಯಂತಿ ಕಾರ್ಯಕ್ರಮದಲ್ಲಿ ಭಗವಾನ್ ಮಹಾವೀರರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದರು.
ಪ್ರಸ್ತುತ ದಿನಗಳಲ್ಲಿ ಜಗತ್ತಿನಾದ್ಯಂತ ಯುದ್ಧದ ವಾತಾವರಣ ಮತ್ತು ಅದರ ಭೀಕರ ಪರಿಣಾಮಗಳನ್ನು ನಾವು ಕಾಣುತ್ತಿದ್ದೇವೆ. ಇಂತಹ ಸಂದರ್ಭದಲ್ಲಿ ಮಹಾವೀರರು ಬೋಧಿಸಿದ ನೀನು ಬದುಕು, ಇತರರನ್ನೂ ಬದುಕಲು ಬಿಡು ಎಂಬ ತತ್ವ ಜಗತ್ತಿಗೆ ಅತ್ಯಗತ್ಯವಾಗಿದೆ ಎಂದು ತಿಳಿಸಿದ ಅವರು, ಸ್ವಾರ್ಥಕ್ಕಾಗಿ ಪರಸ್ಪರ ಹಿಂಸೆಯಲ್ಲಿ ತೊಡಗಿರುವ ಇಂದಿನ ಕಾಲಘಟ್ಟದಲ್ಲಿ ಸಹಬಾಳ್ವೆಯ ಅಗತ್ಯವಿದೆ ಎಂದರು.
ಮಹಾವೀರರ ತತ್ವಗಳು ಮಹಾತ್ಮ ಗಾಂಧೀಜಿ ಹಾಗೂ ಡಾ. ಬಿ.ಆರ್. ಅಂಬೇಡ್ಕರ್ ಅವರ ಮೇಲೆ ಅಪಾರ ಪ್ರಭಾವ ಬೀರಿದ್ದವು. ಭಾರತದ ಸ್ವಾತಂತ್ರ್ಯವು ಸತ್ಯ ಮತ್ತು ಅಹಿಂಸೆಯ ಹೋರಾಟದ ಫಲವಾಗಿದೆ ಎಂಬುದು ಸ್ಮರಣೀಯ ಎಂದು ತಿಳಿಸಿದರು.
ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ಪಂಪ, ಪೊನ್ನ, ರನ್ನ, ನಾಗಚಂದ್ರ ಮತ್ತು ನಾಗವರ್ಮರಂತಹ ಜೈನ ಕವಿಗಳ ಪರಂಪರೆ ಅತ್ಯಂತ ದೊಡ್ಡದು. ಅವರು ತಮ್ಮ ಕಾವ್ಯಗಳ ಮೂಲಕ ಧರ್ಮ ಮತ್ತು ಲೌಕಿಕ ಬದುಕಿನ ಸಾರವನ್ನು ಜನರಿಗೆ ತಲುಪಿಸಿದ್ದಾರೆ. ಜೈನ ಸಮಾಜವು ಶಾಂತಿ ಮತ್ತು ಅಹಿಂಸೆಗೆ ಹೆಸರಾಗಿದೆ. ಲೌಕಿಕ ಬದುಕನ್ನು ತ್ಯಜಿಸಿ ಜ್ಞಾನದ ಹಾದಿಯಲ್ಲಿ ಸಾಗಿದ ಮಹಾವೀರರು ವಿಶ್ವಕ್ಕೆ ಶಾಂತಿ ಮಂತ್ರ ನೀಡಿದ್ದಾರೆ ಎಂದರು.
ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಂ.ಕೆ.ತಾಜ್‍ಪೀರ್ ಮಾತನಾಡಿ, ಜಗತ್ತಿನ ಎಲ್ಲಾ ಶಸ್ತ್ರಾಸ್ತ್ರಗಳಿಗಿಂತ ಭಗವಾನ್ ಮಹಾವೀರರು ಬೋಧಿಸಿದ ಅಹಿಂಸಾ ತತ್ವವೇ ಅತ್ಯಂತ ಪ್ರಬಲವಾದುದು. ಇಂದಿನ ಯುದ್ಧೋನ್ಮಾದದ ಜಗತ್ತಿಗೆ ಶಾಂತಿ ನೆಲೆಸಲು ಮಹಾವೀರರ ಮಾರ್ಗವೊಂದೇ ಪರಿಹಾರ. ಪ್ರತಿಯೊಬ್ಬರೂ ಮಹಾವೀರರ ತತ್ವಗಳನ್ನು ಬದುಕಿನಲ್ಲಿ ಅಳವಡಿಸಿಕೊಂಡರೆ ಮಾತ್ರ ಜಗತ್ತು ಶಾಂತಿಯ ತೋಟವಾಗಿರಲು ಸಾಧ್ಯ ಎಂದು ಹೇಳಿದರು.
ಭಗವಾನ್ ಮಹಾವೀರರ ಕುರಿತು ಚಿತ್ರದುರ್ಗ ಆಕಾಶವಾಣಿಯ ಡಾ.ನವೀನ್ ಮಸ್ಕಲ್ ಉಪನ್ಯಾಸ ನೀಡಿ, ಜಗತ್ತಿನ ಶ್ರೇಷ್ಠ ಮಾನವೀಯ ಮೌಲ್ಯಗಳನ್ನು ಸಾರುವ ಜೈನ ಧರ್ಮದ ತತ್ವಗಳು ಮತ್ತು ಭಗವಾನ್ ಮಹಾವೀರರ ಅಹಿಂಸೆಯ ಸಂದೇಶಗಳು ಇಂದಿನ ಸಂಘರ್ಷಮಯ ಜಗತ್ತಿಗೆ ಅತ್ಯಂತ ಪ್ರಸ್ತುತವಾಗಿವೆ ಎಂದರು.
ಆದಿಕವಿ ಪಂಪ ಹೇಳಿದಂತೆ ಮನುಷ್ಯ ಕುಲಂ ತಾನೊಂದೇ ವಲಂ ಎಂಬುದು ಜೈನ ಧರ್ಮದ ಮೂಲ ಆಶಯ. ಮಹಾವೀರರು ಅಂದಿನ ಕಾಲದ ಸಾಮಾಜಿಕ ಅಸಮಾನತೆ, ಶೋಷಣೆ ಹಾಗೂ ಮಹಿಳೆಯರ ಮತ್ತು ಮಕ್ಕಳ ಮೇಲಿನ ತಾರತಮ್ಯದ ವಿರುದ್ಧ ಧ್ವನಿ ಎತ್ತಿದ್ದರು. ಸಕಲ ಜೀವರಾಶಿಗಳಿಗೂ ಲೇಸನ್ನು ಬಯಸುವ ಈ ಧರ್ಮವು ವಿಶ್ವಮಾನವ ಪರಿಕಲ್ಪನೆಯನ್ನು ಅಂದೇ ಸಾರಿತ್ತು ಎಂದು ಹೇಳಿದರು.
ಧಾರವಾಡ ಜಿಲ್ಲೆಯ ಅಣ್ಣಿಗೇರಿಯಲ್ಲಿ ಪಂಪ ಅಭಿವೃದ್ಧಿ ಪ್ರಾಧಿಕಾರ ಸ್ಥಾಪಿಸುವ ಮೂಲಕ ರಾಜ್ಯ ಸರ್ಕಾರವು ಜೈನ ಧರ್ಮ ಮತ್ತು ಪಂಪನ ಕೊಡುಗೆಯನ್ನು ಗೌರವಿಸಿದೆ ಎಂದು ಸ್ಮರಿಸಿದರು.
ನಗರಸಭೆ ಪೌರಾಯುಕ್ತೆ ಎಸ್.ಲಕ್ಷ್ಮೀ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಡಾ.ಬಿ.ಎಂ.ಗುರುನಾಥ, ಜಿಲ್ಲಾ ಜೈನ್ ಸಂಘದ ಟ್ರಸ್ಟಿಗಳಾದ ಪೃಥ್ವಿರಾಜ್, ಪಿ.ರಮೇಶ್ ಕುಮಾರ್, ಶಾಂತಿಲಾಲ್‍ಜೀ, ಪ್ರೇಮಚಂದ್ ಜೈನ್ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಇದ್ದರು. ಹೊಸದುರ್ಗದ ಬಿ.ಸರಸ್ವತಿ ಮತ್ತು ತಂಡದವರು ಗೀತಗಾಯನ ನಡೆಸಿಕೊಟ್ಟರು.
